ಗಾಯಗೊಂಡ ಮಹಿಳೆಯನ್ನು ಆ್ಯಂಬುಲೆನ್ಸ್ ಮೂಲಕ ವೇಗವಾಗಿ ಸಾಗಿಸುವ ನಡುವೆ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದೆ. ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಡಲು ಸಾಧ್ಯಾಗದಷ್ಟು ಟ್ರಾಫಿಕ್. ಇತ್ತ ಗಾಯಗೊಂಡ ಮಹಿಳೆ ಕಿರುಚಾಡುತ್ತಲೇ ಆ್ಯಂಬುಲೆನ್ಸ್‌ನಲ್ಲೇ ಪ್ರಾಣಬಿಟ್ಟ ಘಟನೆ ನಡೆದಿದೆ.

ಮುಂಬೈ (ಆ.10) ಗಾಯಗೊಂಡವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಮೃತಪಡುವವರ ಸಂಖ್ಯೆ ಹೆಚ್ಚು. ಟ್ರಾಫಿಕ್, ಹತ್ತಿರದಲ್ಲಿ ಸೂಕ್ತ ಆಸ್ಪತ್ರೆ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ತಕ್ಕ ಸಮಯದಲ್ಲಿ ಚಿಕಿತ್ಸೆ ಸಿಗದೇ ಹಲವರು ಪ್ರಾಣ ಬಿಟ್ಟಿದ್ದಾರೆ. ಇದೀಗ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡು ಟ್ರಾಫಿಕ್‌ನಲ್ಲಿ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ. ಮರ ರೆಂಬಿ ಬಿದ್ದು ಗಾಯಗೊಂಡ ಮಹಿಳೆಯನ್ನು ಉತ್ತಮ ಆಸ್ಪತ್ರೆ ದಾಖಳಿಸಲು ಆ್ಯಂಬುಲೆನ್ಸ್ ಮೂಲಕ ಸಾಗಿಸಲಾಗಿತ್ತು.ಆದರೆ ಆ್ಯಂಬುಲೆನ್ಸ್ ಟ್ರಾಫಿಕ್‌ನಲ್ಲಿ ಸಿಲುಕಿ ಮಹಿಳೆ ಆಸ್ಪತ್ರೆ ದಾಖಲಾಗುವ ಮೊದಲೇ ಮೃತಪಟ್ಟ ಘಟನೆ ಮುಂಬೈನಲ್ಲಿ ನಡೆದಿದೆ.

ಮರದ ರೆಂಬೆ ಬಿದ್ದು ಗಾಯಗೊಂಡಿದ್ದ ಮಹಿಳೆ

ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ 49 ವರ್ಷದ ಚಾಯಾ ಪುರವ್ ಮೇಲೆ ಮರದ ರೆಂಬಿ ಬಿದ್ದು ಗಾಯಗೊಂಡಿದ್ದರು. ಪಕ್ಕೆಲುಬು, ಭುಜ ಹಾಗೂ ತಲೆಗೆ ಗಾಯವಾಗಿದ್ದ ಕಾರಣ ಪಾಲ್ಗರ್ ಜಿಲ್ಲೆಯ ಪ್ರಾಥಮಿಕ ಆಸ್ಪತ್ರೆ, ಸಣ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಅಸಾಧ್ಯವಾಗಿತ್ತು. ಪಾಲ್ಗಾರ್‌ನಲ್ಲಿ ಟ್ರೌಮಾ ಸೆಂಟರ್ ಇಲ್ಲದ ಕಾರಣ ಮುಂಬೈನ ಹಿಂದುಜಾ ಆಸ್ಪತ್ರೆ ದಾಖಲಿಸುವಂತೆ ಪಾಲ್ಗಾರ್ ಆರೋಗ್ಯ ಕೇಂದ್ರದಲ್ಲಿ ಸೂಚಿಸಿದ್ದರು. ಪಾಲ್ಗಾರ್‌ನಿಂದ ಮುಂಬೈನ ಹಿಂದೂಜಾ ಆಸ್ಪತ್ರೆ 100 ಕಿಲೋಮೀಟರ್ ದೂರ. ಸಾಮಾನ್ಯವಾಗಿ 2.5 ಗಂಟೆ ಸಮಯ ತೆಗೆದುಕೊಳ್ಳಲಿದೆ. ಆದರೆ ಟ್ರಾಫಿಕ್‌ನಿಂದ ದುರಂತ ಸಂಭವಿಸಿದೆ.

ಎಂದಿಗಿಂತ ಹೆಚ್ಚು ಟ್ರಾಫಿಕ್

ಪಾಲ್ಗರ್ ಆರೋಗ್ಯ ಕೇಂದ್ರದಲ್ಲಿ ನೋವಿಗೆ ಅನಸ್ತೇಶಿಯಾ ನೀಡಿ, ಪ್ರಥಮ ಚಿಕಿತ್ಸೆ ಮಾಡಿ ಮಧ್ಯಾಹ್ನ 3 ಗಂಟೆಗೆ ಆ್ಯಂಬುಲೆನ್ಸ್ ಮುಂಬೈನ ಹಿಂದೂಜ ಆಸ್ಪತ್ರೆಯಲ್ಲಿ ಪ್ರಯಾಣ ಬೆಳೆಸಿತ್ತು. ಚಾಯಾ ಪುರವ್ ಪಕ್ಕದಲ್ಲೇ ಆ್ಯಂಬುಲೆನ್ಸ್‌ನಲ್ಲಿ ಪತಿ ಕುಳಿದ್ದಾರೆ. ಆದರೆ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭಾರಿ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಇತ್ತೀಚಿನ ದಿನಗಳಲ್ಲಿ ಹೆದ್ದಾರಿ 48ರಲ್ಲಿ ಟ್ರಾಫಿಕ್ ಸಮಸ್ಯೆಯಾಗುವುದಾಗಿ ವರದಿಯಾಗಿತ್ತು. ಆದರೆ ತುರ್ತು ಸಂದರ್ಭದಲ್ಲೇ ಈ ಸಮಸ್ಯೆ ತೀವ್ರಗೊಂಡಿತ್ತು.

6 ಗಂಟೆಯಾದರೂ ಅರ್ಧ ದಾರಿಯೂ ಸಾಗದ ಆ್ಯಂಬುಲೆನ್ಸ್

3 ಗಂಟೆ ಪಾಲ್ಗಾರ್‌ನಿಂದ ಹೊರಟ ಆ್ಯಂಬುಲೆನ್ಸ್ ಸಂಜೆ 6 ಗಂಟೆಯಾದರೂ ಅರ್ಧ ದಾರಿ ಸಾಗಿಲ್ಲ. ಭಾರಿ ಟ್ರಾಫಿಕ್‌ನಿಂದ ಸೈರನ್ ಮೊಳಗಿಸುತ್ತಿದ್ದರೂ ಯಾರೂ ಏನೂ ಮಾಡಲಾಗದ ಪರಿಸ್ಥಿತಿ. ಇತ್ತ ಚಾಯಾ ಪುರವ್ ನೋವು ತೀವ್ರಗೊಳ್ಳರು ಆರಂಭಿಸಿತ್ತು. ಇಷ್ಟೇ ಅಲ್ಲ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ನೋವಿನಿಂದ ಚೀರಾಡಲು ಆರಂಭಿಸಿದ್ದರು.

ಪರಿಸ್ಥಿತಿ ಕೈಮೀರುತ್ತಿದ್ದಂತೆ ಆರ್ಬಿಟ್ ಆಸ್ಪತ್ರೆ ತಿರುಗಿದ ಆ್ಯಂಬುಲೆನ್ಸ್

6 ಗಂಟೆಯಾದರೂ ಆಸ್ಪತ್ರೆ ದಾಖಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಹಿಂದೂಜಾ ಆಸ್ಪತ್ರೆ ಬದಲು 30 ಕಿಲೋಮೀಟರ್ ಹತ್ತಿರದಲ್ಲಿರುವ ಆರ್ಬಿಟ್ ಆಸ್ಪತ್ರೆಗೆ ಆ್ಯಂಬುಲೆನ್ಸ್ ತಿರುಗಿಸಲಾಗಿತ್ತು. ಇತ್ತ ಚಾಯಾ ಪುರವ್ ಕಿರುಚಾಡುತ್ತಿದ್ದರೂ ಟ್ರಾಫಿಕ್‌ನಿಂದ ಆಸ್ಪತ್ರೆ ದಾಖಲಿಸಲು ಸಾಧ್ಯವಾಗಲಿಲ್ಲ. ಕೆಲ ಹೊತ್ತಲ್ಲಿ ಸಂಪೂರ್ಣ ಅಸ್ವಸ್ಥಗೊಂಡ ಚಾಯ ಆ್ಯಂಬುಲೆನ್ಸ್ ಬೆಡ್‌ನಲ್ಲಿ ಮಲಗಿದ್ದರು. 7 ಗಂಟೆ ಹೊತ್ತಿಗೆ ಆರ್ಬಿಟ್ ಆಸ್ಪತ್ರೆಗೆ ಆ್ಯಂಬುಲೆನ್ಸ್ ತಲುಪಿತ್ತು.

ಮಿಂಚಿ ಹೋಗಿತ್ತು ಕಾಲ

ತಡ ಅಲ್ಲ ವಿಪರೀತ ವಿಳಂಬವಾಗಿ ಆಸ್ಪತ್ರೆಗೆ ಆ್ಯಂಬುಲೆನ್ಸ್ ತಲುಪಿತ್ತು. ತಕ್ಷಣವೇ ಆಸ್ಪತ್ರೆ ಸಿಬ್ಬಂದಿಗಳು ತೀವ್ರ ನಿಘಾ ಘಟಕದಲ್ಲಿ ದಾಖಲಿಸಿದ್ದಾರೆ. ಆದರೆ ಕಾಲ ಮಿಂಚಿ ಹೋಗಿತ್ತು. ವೈದ್ಯರ ಪರೀಕ್ಷಿಸಿ ಮಹಿಳೆ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಅರ್ಧ ಗಂಟೆ ಮುಂಚೆ ದಾಖಲಿಸಿದರೂ ಪ್ರಾಣ ಉಳಿಯುತ್ತಿತ್ತು ಎಂದು ವೈದ್ಯರು ಹೇಳಿದ್ದಾರೆ.

ಬಿಕ್ಕಿ ಬಿಕ್ಕಿ ಅತ್ತ ಪತಿ

ಟ್ರಾಫಿಕ್‌ನಿಂದ ಆಸ್ಪತ್ರೆ ದಾಖಲಿಸಲು ಸಾಧ್ಯವಾಗಿಲ್ಲ. ಗಂಟೆಗಳ ಕಾಲ ಆಕೆ ನೋವು ಅನುಭವಿಸುತ್ತಿದ್ದಳು. ಆದರೆ ಏನೂ ಮಾಡಲಾಗಲಿಲ್ಲ. ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು. ಗುಂಡಿ ಬಿದ್ದ ರಸ್ತೆ, ವಿಪರೀತ ಟ್ರಾಫಿಕ್ ಜಾಮ್‌ನಿಂದ ಪತ್ನಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಪತಿ ಕೌಶಿಕ್ ಕಣ್ಣೀರಿಟ್ಟಿದ್ದಾರೆ.