Ashish Saradka pray for his wife Apoorva K Bhat: ಮುದ್ದಿನ ಪತ್ನಿ ಕಳೆದ 68 ದಿನಗಳಿಂದ ಕೋಮಾದಲ್ಲಿದ್ದು, ಆದಷ್ಟು ಬೇಗ ಹುಷಾರಾಗಲಿ ಎಂದು ಪತಿ ಆಶೀಶ್‌ ಪ್ರಾರ್ಥಿಸುತ್ತಿದ್ದಾರೆ.  

ಫೈನಾನ್ಸ್‌, ಕ್ರೆಡಿಟ್‌ ಕಾರ್ಡ್‌ ವಿಚಾರವಾಗಿ ಸೋಶಿಯಲ್‌ ಮೀಡಿಯಾದಲ್ಲಿ ಜನರಿಗೆ ಉಪಯುಕ್ತ ಮಾಹಿತಿಗಳನ್ನು ಹಂಚಿಕೊಳ್ತಿದ್ದ ಆಶಿಶ್‌ ಸರಡ್ಕ ಅವರು ಕಳೆದ 68 ದಿನಗಳಿಂದ ಪತ್ನಿ ಅಪೂರ್ವ ಕಣ್ಣು ಬಿಟ್ಟು ಮಾತಾಡಲಿ ಎಂದು ಪರಿತಪಿಸುತ್ತಿದ್ದಾರೆ.

ಮೇ 27 ರಂದು ನಡೆದ ಬಸ್‌ ಅಪಘಾತದಲ್ಲಿ 32 ವರ್ಷದ ಅಪೂರ್ವ ಕೆ ಭಟ್‌ ಹಾಗೂ ಅವರ ಮಗಳು, ಮಾವ ಗಾಯಗೊಂಡಿದ್ದರು. ಮಗಳು ಆರೋಗ್ಯವಾಗಿದ್ದಾರೆ. ಆದರೆ ಅಪೂರ್ವ ಮಾತ್ರ ಕಳೆದ 68 ದಿನಗಳಿಂದ ಕೋಮಾದಲ್ಲಿದ್ದಾರೆ. ಪತ್ನಿ ಕಣ್ಣುಬಿಟ್ಟು ಮಾತನಾಡಲಿ ಎಂದು ಆಶೀಶ್, ಅಮ್ಮ ಮಾತಾಡಲಿ ಎಂದು‌ ಮಗಳು ಆಪ್ತ ಸೇರಿದಂತೆ ಇಡೀ ಕುಟುಂಬ ನಿತ್ಯವೂ, ಕ್ಷಣ ಕ್ಷಣವೂ ಪ್ರಾರ್ಥನೆ ಮಾಡ್ತಿದೆ. ಅಂದಹಾಗೆ ಅಪೂರ್ವ ಆರೋಗ್ಯದ ಬಗ್ಗೆ ಪತಿ ಆಶೀಶ್‌ ಅವರು ಆಗಾಗ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡು ಅಪ್‌ಡೇಟ್‌ ಕೊಡುತ್ತಿದ್ದಾರೆ.

ಆಶೀಶ್‌ ಅವರ ಪತ್ನಿಗೋಸ್ಕರ ಸಾಕಷ್ಟು ಜನರು ಜಪ ಮಾಡಿದ್ದಾರೆ, ದೇವರ ಬಳಿ ಪ್ರಾರ್ಥಿಸಿದ್ದಾರೆ. 

ಆಶೀಶ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದು ಹೀಗೆ…

ನನಗ್ಯಾಕೆ ಹೀಗಾಯ್ತು ಅನ್ನುವ ಪ್ರಶ್ನೆಯಲ್ಲಿ ನಾವು ಎಷ್ಟು ದಿನ ಸಿಲುಕಿಕೊಂಡು ನಲುಗುತ್ತೇವೋ ಅಷ್ಟು ದಿನ ನಾವೀಗ ಏನು ಮಾಡಬೇಕು ಅನ್ನುವ ಪ್ರಶ್ನೆ ತಲೆಗೆ ಬರೋದೇ ಇಲ್ಲ.. ನಾವೀಗ ಏನು ಮಾಡಬೇಕು ಅನ್ನುವ ಪ್ರಶ್ನೆ ತಲೆಗೆ ಬಂದ ಕೂಡಲೇ ಯಾವುದೇ ಸಮಸ್ಯೆಯನ್ನು ಹೇಗೆ ಹ್ಯಾಂಡಲ್ ಮಾಡಬೇಕು ಅನ್ನುವ ಕ್ಲಾರಿಟಿ ಬರುತ್ತೆ!

ಕಳೆದ 65 ದಿನದಲ್ಲಿ ಜೀವನದ ಅತೀ ದೊಡ್ಡ ಕ್ರ್ಯಾಶ್ ಕೋರ್ಸ್ ಕಲಿಸಿದ ಪಾಠ ಇದು..

ಇದೊಂದು ಯುದ್ಧ .. ಇಲ್ಲಿ ನಾವು ಯುದ್ಧದ ರೀತಿಯ ಆಲೋಚನೆಗಳನ್ನೇ ಮಾಡಬೇಕು.. ನಮ್ಮ ವರ್ಸ್ಟ್ ಕೇಸ್ scenairo ಏನು ಅನ್ನುವ ಆಲೋಚನೆ ನಮಗೆ ಬಂದು ಅದನ್ನು ನಾವು ಹೇಗೆ ಹ್ಯಾಂಡಲ್ ಮಾಡಬಲ್ಲೆವು ಅನ್ನುವ ಪ್ರಶ್ನೆಗಳು ನಮ್ಮಲ್ಲಿ ಬಂದು.. ಅದಕ್ಕೆ ನಾವು ಉತ್ತರ ಹುಡುಕ ಹೊರಟರೆ ಅಲ್ಲಿಂದ ಬ್ಯಾಕ್ಟ್ರಾಕ್ ಮಾಡಿ best ಕೇಸ್ scenario ಕಡೆಗೆ ಹೋಗಬಹುದು.. ಆದರೆ funnily ನಮ್ಮ ವರ್ಸ್ಟ್ ಕೇಸ್ scenario ಹ್ಯಾಂಡಲ್ ಮಾಡೋದು ಹೇಗೆ ಅನ್ನುವ ಪ್ರಶ್ನೆಗೆ ನಮ್ಮಲ್ಲಿ ಯಾರಲ್ಲೂ ಉತ್ತರ ಇಲ್ಲದ ಕಾರಣ, ಅದಾದ ಬಗ್ಗೆ ಯೋಚಿಸುವ ಗೋಜಿಗೇ ನಾವು ಹೋಗಲಿಲ್ಲ..

ಅದನ್ನು ಬಿಟ್ಟು ನಾವು ಆಲೋಚನೆ ಮಾಡೋಕೆ ಇದ್ದದ್ದು, ಇರುವುದು ಇಷ್ಟು ವಿಚಾರಗಳ ಬಗ್ಗೆ

1.) ದುಡ್ಡು : ಆಸ್ಪತ್ರೆ ಅಂದ ಮೇಲೆ ಖರ್ಚುಗಳು ಬಂದೇ ಬರ್ತವೆ! ಅದನ್ನು ನಾವು ಹ್ಯಾಂಡಲ್ ಮಾಡಲೇಬೇಕು... ಮಾಡಿಲ್ಲ ಅಂದ್ರೆ ನಾವು ವರ್ಸ್ಟ್ ಕೇಸ್ scenario ದ ಬಳಿಗೆ ಹೋಗ್ತೇವೆ.

2.) ಟ್ರೀಟ್ಮೆಂಟ್: ನಿಮಗೆ ಬಂದಿರುವ ಸಮಸ್ಯೆ ಏನು, ಅದಕ್ಕೆ ಇಲ್ಲಿ ಕೊಡ್ತಾ ಇರುವ ಚಿಕಿತ್ಸೆ ಏನು? ಇದಕ್ಕಿಂತ ಒಳ್ಳೆಯ ಟ್ರೀಟ್ಮೆಂಟ್ ಎಲ್ಲಿಯಾದರೂ ಸಿಗುತ್ತಾ? ಸಿಕ್ಕಿದರೆ ಅಲ್ಲಿಗೆ ಹೋಗೋದು ಹೇಗೆ?

ಇಲ್ವಾ? ಇದೇ ಇರುವುದರಲ್ಲಿ ಬೆಸ್ಟ್ ಟ್ರೀಟ್ಮೆಂಟ್ ಅಂತಾ ಆಯ್ತಾ? ಹಾಗಿದ್ದರೆ ಅದನ್ನು ಎಷ್ಟು ಸಾಧ್ಯವೋ ಅಷ್ಟು ಬೆಟರ್ ಮಾಡೋದು ಹೇಗೆ?

3.) ಜನ: ನಮ್ಮಲ್ಲಿ ತುಂಬಾ ಜನರಿಗೆ ಭಯಂಕರ ಬೇಜಾರು, ವಿಪರೀತ ಕಾಳಜಿ, ತುಂಬಾ ಪ್ರೀತಿ ಇದೆ.... ಆದರೆ ಈಗಿನ ಸಂದರ್ಭದಲ್ಲಿ ಆ ಪ್ರೀತಿ ಕಾಳಜಿ ಬೇಜಾರಿಗಿಂತ ಮುಖ್ಯ ಅಪೂರ್ವ ಹುಷಾರಾಗಿ ಮನೆಗೆ ವಾಪಸ್ ಬರುವುದು.. ಅದಕ್ಕಾಗಿ ಚೆನ್ನಾಗಿ/ ಸ್ವಲ್ಪ ಜೋರಾಗಿ/ ಖಂಡ ತುಂಡವಾಗಿ ಅವಳನ್ನು ನೋಡೋಕೆ ಬರುವುದು ಈಗ ಬೇಡ.. infection ರಿಸ್ಕ್ ಇರುತ್ತೆ.. ನಾವು ಮಾಡಿದ ಎಲ್ಲಾ efforts ಕೈ ಹಿಡಿಯಬೇಕು ಅಂದರೆ, we can't afford another infection ಅಂತಾ ಹೇಳಲೇಬೇಕಾಗುತ್ತೆ.. ಇದನ್ನು ನಾವು ಹೇಳ್ತಾ ಇದ್ದೇವೆ.. ತುಂಬಾ ಜನ ಅರ್ಥ ಮಾಡಿಕೊಂಡಿದ್ದಾರೆ ಕೂಡಾ.. ಹಾಗಂತ ಥೆರಪಿ ಬೇಕಾದಾಗ ಅದನ್ನೂ, ವೈದ್ಯರ ಭೇಟಿ ಬೇಕು ಅಂದಾಗ ಅದನ್ನೂ ಜಾಗ್ರತೆಯಿಂದ ಮಾಡಲೇಬೇಕಾಗುತ್ತದೆ..

4.) ಪ್ರಾರ್ಥನೆ: ಇದೊಂದು ವಿಚಾರದಲ್ಲಿ ನಮಗೆ ಲಿಮಿಟ್ ಇಲ್ಲ... ಅದು ಬೇಡ , ಇದು ಬೇಡ ಅನ್ನುವ ಬೌಂಡರಿ ಇಲ್ಲಾ.. ಬೇಕಾದದ್ದೆಲ್ಲಾ ಮಾಡುವ, ಬೇಕಾದಾಗ ಮಾಡುವ ಎಲ್ಲಾ ಅವಕಾಶಗಳೂ ಇರುವ ಜಾಗ ಇದು.. ಇದನ್ನು ಮಾಡ್ತಾ ಇದ್ದೇವೆ.. ಮಾಡ್ತಾ ಇರಿ... Because only God can help sometimes !

5.) ಆಶಾಭಾವ: aura, ಸೂಕ್ಷ ಶರೀರ, intent, power of staying positive ಅನ್ನುವ ವಿಚಾರಗಳು ನನಗೆ ತೀರಾ ಪ್ರಾಕ್ಟಿಕಲ್ ಆಗಿ ಅನುಭವಕ್ಕೆ ಬಂದದ್ದು ಇಲ್ಲಿಯೇ... ಈಗಲೇ... ಇದೆಲ್ಲವೂ ನಿಜವೇ.. ಜನ್ಮ ಜನ್ಮಾಂತರದ ಬದುಕು ನಮ್ಮದು ಅನ್ನುವ ಅರಿವು, ಉತ್ತರ ಇಲ್ಲದ ಪ್ರಶ್ನೆಗಳಿಗೆ ಇದೇ ಉತ್ತರ ಅನ್ನುವ understanding ನನಗೆ ಬಂದಿದೆ..ದೇವರು, ದೈವ, ನಾಗ ಮತ್ತು ಪಿತೃಗಳು ನಮಗೆ ಯಾಕೆ ಅಗತ್ಯ ಅನ್ನುವ ವಿಚಾರಗಳು ಕೂಡಾ ಗೊತ್ತಾಗಿದೆ .. There is a lot that science can't explain, But belief can! ಅರ್ಥ ಮಾಡಿಕೊಳ್ಳುವುದು ಬಿಡುವುದು, ಅದನ್ನು ನಂಬುವುದು ಬಿಡುವುದು ನಮಗೆ ಬಿಟ್ಟ ವಿಚಾರ.. There is no right and wrong here.. ಇದ್ಯಾವುದೂ ಇಲ್ಲ.. ಇದೆಲ್ಲಾ ಬರೀ ನಮ್ಮ ಮೂಡನಂಬಿಕೆ ಅನ್ನುವ ಭಾವನೆ ನಿಮ್ಮಲ್ಲಿದ್ದರೆ I respect that . .. ಇದೆಲ್ಲಾ ಇವೆ ಅನ್ನುವ ನಂಬಿಕೆ ನಿಮ್ಮದು ಅಂದರೆ I respect and believe that..

ನನ್ನ ಲೇಖನಗಳಲ್ಲಿ ನನಗೆ ಬರೆಯುವಾಗ ಒಂದು ಫ್ಲೋ ಇರುತ್ತೆ... ಇದರಲ್ಲಿ ಅದಿಲ್ಲ ಅನ್ನುವ ಭಾವ ನನಗಿದೆ... ಮನಸ್ಸಿಗೆ ತೋಚಿದ್ದನ್ನು ಗೀಚಿದ್ದು ಈಗ... ಅದಕ್ಕೆ ಕ್ಷಮೆ ಇರಲಿ!

ನಾವು ನೋಡೋದು ಬರೀ ಪಾಸಿಟಿವ್ ಮಾತ್ರ.. ನೆಗೆಟಿವ್ ನೋಡಿದ್ರೆ ಬೇಕಾದಷ್ಟು ಇರುತ್ತೆ...

ನನ್ನ ಅಪ್ಪುವಿನ ಟ್ರೀಟ್ಮೆಂಟ್ ಕೊಡುವ ವೈದ್ಯರು ಮೊದಲ ವಾರದಲ್ಲಿ ಹೇಳಿದ ಮಾತು ಇದು...

ಇವತ್ತಿಗೆ 2 ತಿಂಗಳು... ತುಂಬಾ ಜನ ಮೆಸೇಜ್ ಮಾಡಿ, ಕಾಲ್ ಮಾಡಿ ಹೇಳಿದ್ರು... ನಾವು ಫೇಸ್ಬುಕ್ ನೋಡೋದೇ ಬಿಟ್ಟಿದ್ವಿ... ಈಗ ನೋಡೋದು ನಿನ್ನ ಅಪ್ಡೇಟ್ ಬರುತ್ತೆ ಅನ್ನುವ ಕಾರಣಕ್ಕೆ... ಒಂದು ದಿನ ನೀನು ಒಂದು ಒಳ್ಳೆಯ ಸುದ್ದಿ ಕೊಡ್ತೀ ಅನ್ನುವ ಕಾರಣಕ್ಕೆ ಅಂತಾ..

ಮೊನ್ನೆ ನನ್ನ ಚಿಕ್ಕಪ್ಪ ಅಪೂರ್ವನ ಹೆಸರಲ್ಲಿ ಪೂಜೆ ಮಾಡಿಸೋಕೆ ಹೋಗಿದ್ದ... ಅಲ್ಲಿ ಸಂಕಲ್ಪ ಮಾಡಿದ ಭಟ್ರು, ಈ ಹುಡುಗಿ ನಿನಗೆ ಹೇಗೆ ಪರಿಚಯ ಅಂದ್ರಂತೆ.. ನನ್ನ ಅಣ್ಣನ ಮಗನ ಹೆಂಡತಿ, ನನ್ನ ಸೊಸೆ ಅವಳು ಅಂದ.. ಅದಕ್ಕೆ ಆ ಭಟ್ರು, ಓಹ್ ಹೌದಾ.. ಅವಳ ಕುರಿತಾಗಿ ಅಪಘಾತ ಆದಾಗಿಂದ ನನ್ನ ಹೆಂಡತಿ ವಿಷ್ಣು ಸಹಸ್ರನಾಮ ಓದುತ್ತಾ ಇದ್ದಾಳೆ ಮಾರಾಯ ಅಂದ್ರಂತೆ..

ಎಷ್ಟೋ ಜನ ಏನೇನೋ ಪೂಜೆಗಳನ್ನು, ಪ್ರಾರ್ಥನೆಗಳನ್ನು, ಜಪಗಳನ್ನು ಅಪೂರ್ವನ ಕುರಿತಾಗಿ ಮಾಡ್ತಾ ಇದ್ದಾರೆ.. ಈ ಪ್ರೀತಿಯನ್ನು ಪಡೆಯೋಕೆ ಅವಳು ಯಾವ ಜನ್ಮದಲ್ಲಿ ಏನು ಪುಣ್ಯ ಮಾಡಿದ್ಲೋ ಗೊತ್ತಿಲ್ಲಾ... ಅದು ಒಂದು ಕಡೆಯಲ್ಲಿ ನಡೆಯುತ್ತಾ ಇದೆ..

ಗುರುಗಳು , ಪುರಾಣ ಪುರುಷರು, ನಮ್ಮ ಜೀವಿತ ಕಾಲದಲ್ಲಿ, ನಮ್ಮ ಪೂರ್ವದಲ್ಲಿ ನಾವು ನೋಡಿದ ಅವತಾರಿ ಪುರುಷರು / ಅವರ ಆಶೀರ್ವಾದ ಆಕೆಗೆ ಸಿಕ್ಕಿದೆ..

ಇಷ್ಟೆಲ್ಲಾ ಆಗಬೇಕಾದರೆ ಕೆಲವು ಕಡೆಗಳಲ್ಲಿ ಪ್ರಶ್ನೆ/ ಜಾತಕ/ ಜೋತಿಷ್ಯ ಅಂತಾ ನೋಡಿದಾಗ ಅವರಿಗೆ ಕಾಣುವುದನ್ನು ಅವರು, ಯಾರದ್ದೋ ಮೂಲಕ, ನೇರವಾಗಿ, ಹೇಳಿದ್ದೆಲ್ಲಾ ಇದೆ.. ನಾನು ಎಲ್ಲಾ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡಿದ್ದೇನೆ..

ತುಂಬಾ ಜನ ಆಕೆಯ ರಿಕವರಿಯ ಬಗ್ಗೆ ಹೇಳಿದ್ದಾರೆ..

ಕೆಲವರು ಆಕೆ ರಿಕವರ್ ಆಗಲ್ಲ ಅಂತಲೂ ಹೇಳಿದ್ದಾರೆ..

ಕೆಲವರು, ಮನುಷ್ಯರು, ಜ್ಯೋತಿಷಿಗಳು, ಗ್ರಹಗಳು, ಗ್ರಹಗತಿಗಳು, ಕರ್ಮಗಳು ಮಾತ್ರವೇ ಎಲ್ಲವನ್ನೂ ನಿರ್ಧಾರ ಮಾಡಿದ್ರೆ ದೇವರಿಗೆ, ಭಕ್ತಿಗೆ, ಚಮತ್ಕಾರಗಳಿಗೆ ಜಾಗ ಎಲ್ಲಿದೆ ಮತ್ತೆ ಅಂತಾ ಹೇಳಿದ್ದಾರೆ..

ಯೋಚನೆ ಮಾಡದೆ ಇದ್ದ ಜಾಗಗಳಿಂದ ಸಹಾಯ ಬಂದಿದೆ.. ನಮ್ಮ ಪ್ರಯತ್ನ ಜಾರಿಯಲ್ಲಿದೆ.

ನೀವು ಯಾವಾಗಲೂ ಪಾಸಿಟಿವ್ ಆಗಿರಬೇಕು.. ಒಂದೇ ಒಂದು ನೆಗೆಟಿವ್ ಆಲೋಚನೆ ಮನಸ್ಸಲ್ಲಿ ಬರಬಾರದು ನಿಮ್ಮಲ್ಲಿ ಅನ್ನುವವರು ಇದ್ದಾರೆ.. ನಾನೂ ಅದೇ ಮನಸ್ಥಿತಿಯಲ್ಲಿ ಇರುವ ವ್ಯಕ್ತಿ.. ಆದರೆ ಬಿಟ್ಟರೂ ಬಿಡದೇ ಬರುವ ನೆಗೆಟಿವ್ ಆಲೋಚನೆಗಳನ್ನು ಹಿಂದೆ ತಳ್ಳಿ ಇಲ್ಲಿಯವರೆಗೆ ಬರೋಕೆ ಪ್ರಾರ್ಥನೆ, ಹಾರೈಕೆ, ಆಶೀರ್ವಾದಗಳೇ ಕಾರಣ...

ಜ್ಯೋತಿಷಿಗಳು ಸಾಧನೆ ಮಾಡಿದವರು , ಜಾತಕ ನೋಡುವವರು ಇಂತಹ ಸಂದರ್ಭಗಳಲ್ಲಿ ಸಾವನ್ನು predict ಮಾಡೋದು ಸುಲಭ... ಆದರೆ ಏನೂ ಆಗಲ್ಲ, ಹುಶಾರಾಗ್ತಾಳೆ .. ನೀನು ನಿನ್ನ ಕರ್ತವ್ಯ ಮಾಡು.. ಶುದ್ಧ ಮನಸ್ಸಿನಿಂದ ಪ್ರಾರ್ಥನೆ ಮಾಡು.. ನಿನ್ನ ಕೈಯಲ್ಲಿ ಸಾಧ್ಯ ಆದದ್ದು ಎಲ್ಲವೂ ಮಾಡಿಸು ಅಂತಾ ಹೇಳಿದವರು ಕೆಲವರು ಇದ್ದಾರೆ.. ಅವರಿಗೆ ನಾನು ಚಿರಋಣಿ.. ಅಪೂರ್ವ ನಮಗಾಗಿ ಹೋರಾಡ್ತಾ ಇದ್ದಾಳೆ.. ಅವಳಿಗಾಗಿ ಹೋರಾಡುವ ಕರ್ತವ್ಯ, ಹೊಣೆ, ಆಕೆಗೆ ಬೇಕಾದ ಸಪೋರ್ಟ್ ಕೊಡಬೇಕು ಅನ್ನುವ ಪ್ರೀತಿ ನನ್ನಲ್ಲಿ, ನನ್ನ ಕುಟುಂಬಕ್ಕೆ ಇದೆ..

ಎಲ್ಲೇ ದೇವರ ಗಂಟೆಯ ಶಬ್ದ ಕೇಳಿದರೂ " ಅಮ್ಮನನ್ನು ಹುಷಾರು ಮಾಡು " ಅನ್ನುವ ಮುದ್ದು ಮಗಳು ಇದ್ದಾಳೆ.. ಮೊನ್ನೆ ಮನೆಗೆ ಹೋಗಿದ್ದಾಗ, " ನಿನಗೆ ಅಮ್ಮ ಬೇಕಲ್ಲ... ಚಾಮಿ ನಿನಗೆ ಅದರ ವಾಪಸ್ ಕೊಡ್ತಾ " ಅಂತಾ ಅವಳು ಹೇಳಿದಾಗ ನನ್ನ ಕಣ್ಣು ತುಂಬಿ ಬಂದಿತ್ತು. ದೇವರಿದ್ದಾರೆ.. ಭಕ್ತಿಯಿದೆ.. ಹೋರಾಟ ಇದೆ. ಸಣ್ಣ ಸಣ್ಣ ಡೆವೆಲಪ್ಮೆಂಟ್ ಕೂಡಾ ಇದೆ.. ಕಾಯೋಣ ಅಲ್ವೇ.. ( ನೀವು ಬೇಡ ಅಂದ್ರೂ ನಾನು ಕಾಯ್ತೀನಿ.. ಅದು ಬೇರೆ ಮಾತು..)

I was was, I am and I will be the last person to give up on love!