ಚಿಕ್ಕಮಗಳೂರಿನಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ತೆಯನ್ನು ಕೊಲೆಗೈದ ಸೊಸೆ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಅತ್ತೆ ಸಾಯಿಸಿ ಸಹಜ ಸಾವು ಎಂದು ಎಲ್ಲರನ್ನೂ ನಂಬಿಸಿ ಅಂತ್ಯಕ್ರಿಯೆಯನ್ನೂ ನಡೆಸಿದ್ದಾರೆ. ಆದರೆ, ಅತ್ತೆ ಸತ್ತು 10 ದಿನಗಳಾದ ಬಳಿಕ ಸೊಸೆಯ ಕೊಲೆಯ ಸಣ್ಣ ಸುಳಿವು ಸಿಕ್ಕಿದೆ.
ಚಿಕ್ಕಮಗಳೂರು (ಆ.26): ಊಟ ಮಾಡುವ ಮುದ್ದೆಯಲ್ಲಿ ನಿದ್ದೆ ಮಾತ್ರೆ ಹಾಕಿ ಅತ್ತೆ ಕೊಂದ ಅಶ್ವಿನಿ, ಕುಟುಂಬಸ್ಥರಿಗೆ ಅನಾರೋಗ್ಯದಿಂದ ಸಹಜ ಸಾವಾಗಿದೆ ಎಂದು ನಂಬಿಸಿ ಅಂತ್ಯಕ್ರಿಯೆಯನ್ನೂ ನಡೆಸಿದ್ದಳು. ಆದರೆ, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕದ್ದು ತನ್ನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡವನಿಗೆ ಕೊಟ್ಟಿದ್ದಾಳೆ. ಅತ್ತೆ ಸತ್ತು 10 ದಿನಗಳಾದ ನಂತರ ಮನೆಯವರಿಗೆ ಚಿನ್ನಾಭರಣ ಕಾಣದಿದ್ದಾಗ, ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದಾಗ ಸೊಸೆಯೇ ಕೊಲೆ ಮಾಡಿರುವ ಪ್ರಕರಣ ಬಯಲಿದೆ ಬಂದಿದೆ. ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿ ಮೂರು ದಿನಗಳು ಕಳೆದ ನಂತರ ಮಾತ್ರೆ ತಂದುಕೊಟ್ಟ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಅಜ್ಜಂಪುರ ತಾಲೂಕಿನ ತಡಗ ಗ್ರಾಮದಲ್ಲಿ ಅತ್ತೆಯ ಸಾವಿನ ರಹಸ್ಯ ಕೊನೆಗೂ ಬಯಲಾಗಿದೆ. ಮುದ್ದೆಯಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ತೆಯನ್ನು ಕೊಲೆ ಮಾಡಿದ್ದ ಸೊಸೆ ಅಶ್ವಿನಿ ಮತ್ತು ಆಕೆಯ ಪ್ರಿಯಕರ ಆಂಜನೇಯನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ದಿನಗಳ ಹಿಂದೆ ಮೃತಪಟ್ಟಿದ್ದ ಅತ್ತೆ ದೇವಿರಮ್ಮ ಅವರ ಶವವನ್ನು ಮರಳಿ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಆಗಸ್ಟ್ 10 ರಂದು ದೇವಿರಮ್ಮ ನಿದ್ದೆ ಮಾಡುತ್ತಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಅಂದುಕೊಂಡಿದ್ದರು. ಹಾಗಾಗಿ, ಯಾವುದೇ ಅನುಮಾನವಿಲ್ಲದೆ ಅಂತ್ಯಸಂಸ್ಕಾರವನ್ನೂ ನೆರವೇರಿಸಿದ್ದರು. ಆದರೆ, ನಂತರ ಮನೆಯಲ್ಲಿದ್ದ ಹಣ, ಚಿನ್ನಾಭರಣ ನಾಪತ್ತೆಯಾಗಿದ್ದು ಗಮನಕ್ಕೆ ಬಂದಿದೆ.
ಇದರಿಂದ ಅನುಮಾನಗೊಂಡ ಕುಟುಂಬಸ್ಥರು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ, ಸೊಸೆ ಅಶ್ವಿನಿ ತನ್ನ ಪ್ರಿಯಕರ ಆಂಜನೇಯನೊಂದಿಗೆ ಸೇರಿ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಕಳ್ಳತನದ ಉದ್ದೇಶದಿಂದ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಿಂದ 218 ಗ್ರಾಂ ಚಿನ್ನಾಭರಣ (ಸುಮಾರು 20 ಲಕ್ಷ ರೂ. ಮೌಲ್ಯ) ಮತ್ತು 16 ಲಕ್ಷ ಮೌಲ್ಯದ ಟಿಟಿ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದ ಇನ್ನಷ್ಟು ವಿಚಾರಗಳು ಮರಣೋತ್ತರ ಪರೀಕ್ಷೆಯ ನಂತರ ಹೊರಬರಲಿವೆ.
ಅತ್ತೆಯ ಮೃತದೇಹವನ್ನು ಸಮಾಧಿಯಿಂದ ಹೊರಗೆ ತೆಗೆಯುವ ಪ್ರಕ್ರಿಯೆಯನ್ನು ಪೊಲೀಸರು ಆರಂಭಿಸಿದ್ದಾರೆ. ಇದಕ್ಕೆ ತಾಲೂಕು ದಂಡಾಧಿಕಾರಿಗಳ ಅನುಮತಿ ಹಾಗೂ ಹಾಜರಾತಿಯೂ ಇರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ, ಪ್ರಕರಣದ ಮತ್ತಷ್ಟು ತನಿಖೆ ಮಾಡುವುದಕ್ಕೆ ಮುಂದಾಗಿದ್ದಾರೆ. ಆದರೆ, ಕುಟುಂಬಕ್ಕೆ ಆಸರೆಯಾಗಿದ್ದ ಅತ್ತೆಯನ್ನೇ ಕೊಲೆ ಮಾಡಿದ ಸೊಸೆಗೆ ಕಠಿಣ ಶಿಕ್ಷೆ ಆಗಬೇಕೆಂದು ಎಲ್ಲರೂ ಆಗ್ರಹಿಸಿದ್ದಾರೆ.
