- Home
- Entertainment
- Sandalwood
- ನಿದ್ದೆ ಬಿಟ್ಟು ಸಿನಿಮಾ ಮಾಡಿದ್ದೀವಿ: ನೈಜ ಘಟನೆಯ ‘ಪಾಲ್ಗುಣಿ’ ಅನುಭವ ಹಂಚಿಕೊಂಡ ರೇಖಾ ಶ್ರೀ
ನಿದ್ದೆ ಬಿಟ್ಟು ಸಿನಿಮಾ ಮಾಡಿದ್ದೀವಿ: ನೈಜ ಘಟನೆಯ ‘ಪಾಲ್ಗುಣಿ’ ಅನುಭವ ಹಂಚಿಕೊಂಡ ರೇಖಾ ಶ್ರೀ
ಪಾಲ್ಗುಣಿ ನೈಜ ಘಟನೆ ಆಧರಿತ ಚಿತ್ರ. ಈ ಸಿನಿಮಾದಲ್ಲಿ ನಾನು ಮಂಡ್ಯದ ಹಳ್ಳಿಯೊಂದರ ಗೌಡರ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು ನಟಿ ರೇಖಾ ಶ್ರೀ.

ನಾನು ಮೂಲತಃ ಬಳ್ಳಾರಿಯವಳು. ‘ಪಾಲ್ಗುಣಿ’ ನನ್ನ ನಾಲ್ಕನೇ ಸಿನಿಮಾ. ಈ ಹಿಂದೆ ‘ವಿಶಾಲಿ’, ‘ಮಂಡ್ಯದ ಹುಡುಗ್ರು’, ‘ಗರ್ನಲ್’ ಸಿನಿಮಾಗಳಲ್ಲಿ ನಟಿಸಿದ್ದೆ. ‘ಪಾಲ್ಗುಣಿ’ ಸಿನಿಮಾಕ್ಕೆ ನನ್ನನ್ನು ಆಡಿಷನ್‌ಗೆ ಕರೆದಿದ್ದರು. 200ರಷ್ಟು ಹುಡುಗಿಯರ ನಡುವೆ ನನ್ನನ್ನು ಆಯ್ಕೆ ಮಾಡಿದರು.
ನಾನು ಓದಿದ್ದು ಬಿಬಿಎಂ. ಕಾಲೇಜು ಮುಗಿಸಿ ರಿಯಲ್ ಎಸ್ಟೇಟ್ ಆಫೀಸ್‌ನಲ್ಲಿ ಉದ್ಯೋಗಿಯಾಗಿದ್ದೆ. ಆ ಹೊತ್ತಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಬಂತು. ಈಗ ಸಿನಿಮಾಗೆ ಸಂಪೂರ್ಣ ಸಮಯ ಮೀಸಲಿಟ್ಟಿದ್ದೇನೆ. ಹೆಚ್ಚೆಚ್ಚು ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸಬೇಕು ಎಂಬ ಆಸೆ ಇದೆ.
ಪಾಲ್ಗುಣಿ ನೈಜ ಘಟನೆ ಆಧರಿತ ಚಿತ್ರ. ಈ ಸಿನಿಮಾದಲ್ಲಿ ನಾನು ಮಂಡ್ಯದ ಹಳ್ಳಿಯೊಂದರ ಗೌಡರ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಜಾತೀಯತೆ, ಸಾಮಾಜಿಕ ಪಿಡುಗಿನ ಬಗೆಗೆ ಬೆಳಕು ಚೆಲ್ಲುವ ಈ ಸಿನಿಮಾದಲ್ಲಿ ಪೋಷಕರಿಗೆ, ಪ್ರೇಮಿಗಳಿಗೆ ಕಣ್ತೆರೆಸುವಂಥಾ ಸಂದೇಶವಿದೆ.
ಈ ಚಿತ್ರಕ್ಕೆ ನಾನು ಶೂಟಿಂಗ್ ಮಾಡಿದ್ದು ಕೇವಲ ಎಂಟೇ ದಿನ. ಆದರೆ ರಾತ್ರಿ ಹಗಲು ಡಬಲ್ ಶಿಫ್ಟ್‌ನಲ್ಲಿ ಇಡೀ ತಂಡ ಕೆಲಸ ಮಾಡಿದ್ದೇವೆ. ನಮ್ಮ ನಿರ್ದೇಶಕರ ಸಿನಿಮಾ ವ್ಯಾಮೋಹ ದೊಡ್ಡದು. ಅವರು ಪ್ರಾಜೆಕ್ಟ್ ಕಂಪ್ಲೀಟ್ ಮಾಡುವ ತನಕ ನಿದ್ದೆ ಮಾಡುತ್ತಿರಲಿಲ್ಲ. ನಮಗೆ ಅವರ ಶ್ರದ್ಧೆಯ ಬಗ್ಗೆ ಗೌರವವಿತ್ತು. ಅವರ ಕೆಲಸಕ್ಕೆ ಕೈ ಜೋಡಿಸಿದೆವು.
ಸಿನಿಮಾ ಶೂಟಿಂಗ್ ಇದ್ದಾಗ ದಿನಕ್ಕೆ ಕೇವಲ 2 ಗಂಟೆ ನಿದ್ದೆ ಸಿಕ್ಕರೆ ಹೆಚ್ಚು. ನಡುನಡುವೆ ನಮ್ಮ ಸೀನ್ ಇಲ್ಲದಾಗ ಹೋಗಿ ನಿದ್ದೆ ಮಾಡುತ್ತಿದ್ದೆ. ಇದರಲ್ಲಿ ಯಾವ ಪಾತ್ರಕ್ಕೂ ಮೇಕಪ್ ಹಾಕಿಲ್ಲ. ನಾನೂ ಡಿ ಗ್ಲಾಮರ್ ಲುಕ್‌ನಲ್ಲೇ ಕಾಣಿಸಿಕೊಂಡಿದ್ದೇನೆ. ಕೆಲವೊಮ್ಮೆ ಅರ್ಧ ನಿದ್ದೆಯಲ್ಲಿ ಎದ್ದು ಬಂದು ಪಾತ್ರ ಮಾಡಿದಾಗ ಕಣ್ಣು ಕೆಂಪಾಗಿ, ಕೂದಲು, ಬಟ್ಟೆ ಎಲ್ಲಾ ಕೆದರಿದಂತಿದ್ದವು. ಆದರೆ ಪಾತ್ರದ ನೈಜತೆಗೆ ಹೆಚ್ಚು ಒತ್ತು ಕೊಡುತ್ತಿದ್ದ ನಿರ್ದೇಶಕರು ನಾವಿದ್ದ ಹಾಗೆ ಕ್ಯಾಮರ ಮುಂದೆ ನಿಲ್ಲಿಸಿ ನಟಿಸಲು ಹೇಳುತ್ತಿದ್ದರು.
ಹಲವು ಕಾರಣಗಳಿಗೆ ಪಾಲ್ಗುಣಿ ನೋಡಬೇಕಾದ ಸಿನಿಮಾ. ಹಳ್ಳಿಗಳಲ್ಲಿ ಇಂದಿಗೂ ಜೀವಂತ ಇರುವ ಕೆಲವು ಪಿಡುಗುಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಜನರು ಸಂಕುಚಿತ ಮನಸ್ಥಿತಿ ಬಿಟ್ಟು ಹೊರಬರಬೇಕಾದ ತುರ್ತಿನ ಬಗ್ಗೆ ತಿಳಿಸಿಕೊಡುತ್ತದೆ.