ಗರ್ಭಿಣಿ ಪತ್ನಿಯ ಆರೈಕೆಗಾಗಿ ಪತಿಯೊಬ್ಬರು ಕೋಟಿ ಮೊತ್ತದ ಉದ್ಯೋಗವನ್ನು ತ್ಯಜಿಸಿದ್ದಾರೆ. ಈ ನಿರ್ಧಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೆಚ್ಚುಗೆ ಮತ್ತು ಟೀಕೆಗಳೆರಡನ್ನೂ ಗಳಿಸಿದೆ. ಕೆಲವರು ಇದನ್ನು ಸ್ಪೂರ್ತಿದಾಯಕ ಎಂದರೆ, ಇನ್ನು ಕೆಲವರು ಬೇಜವಾಬ್ದಾರಿ ಎಂದು ಕರೆದಿದ್ದಾರೆ.
ಗರ್ಭಿಣಿಗೆ ವಿಶೇಷ ಆರೈಕೆ ನಿಜವಾಗಿಯೂ ಬೇಕು. ಕೆಲವು ಗರ್ಭಿಣಿಯರು ಗರ್ಭಾವಸ್ಥೆಯಲ್ಲೂ ಬಹಳ ಚಟುವಟಿಕೆಯಿಂದ ಇದ್ದು ತಮ್ಮೆಲ್ಲಾ ಕೆಲಸಗಳನ್ನು ಮಾಡುವುದಲ್ಲದೇ ಇತರರ ಸೇವೆಯನ್ನು ಮಾಡುತ್ತಾರೆ. ಆದರೆ ಎಲ್ಲರ ಮನಸ್ಥಿತಿ ದೈಹಿಕ ಸ್ಥಿತಿ, ಆರೋಗ್ಯಸ್ಥಿತಿ ಒಂದೇ ತರ ಇರುವುದಿಲ್ಲ, ಕೆಲವರಿಗೆ ಗರ್ಭಾವಸ್ಥೆಯುದ್ದಕ್ಕೂ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸುತ್ತಾರೆ. ಇನ್ನು ಕೆಲವರಿಗೆ ವಿಪರೀತವಾದ ಸೊಂಟ ನೋವುಗಳಿರುತ್ತವೆ. ಹಾಗೆಯೇ ಇದರ ಜೊತೆಗೆ ಮಾನಸಿಕ ಒತ್ತಡ ಹಾಗೂ ಭಯವೂ ಕೂಡ ತೀವ್ರವಾಗಿರುತ್ತದೆ. ಒಬ್ಬೊಬ್ಬರ ದೈಹಿಕ ಆರೋಗ್ಯ ಹಾಗೂ ಮನಸ್ಥಿತಿ ಒಂದೊಂದು ರೀತಿಯಾಗಿರುತ್ತದೆ. ಈ ಸಮಯದಲ್ಲಿ ಪತಿಯಾದವನ ಕಾಳಜಿಯೂ ತುಂಬಾ ಅಗತ್ಯವಾಗಿರುತ್ತದೆ.
ಹೀಗಾಗಿ ಆ ಸಮಯದಲ್ಲಿ ಕೆಲ ಪುರುಷರು ಎಲ್ಲರಲ್ಲ, ಪತ್ನಿಗೆ ವಿಶೇಷ ಆರೈಕೆ ಮಾಡುತ್ತಾರೆ. ಆದರೆ ಇಲ್ಲೊಬ್ಬರು ಪತ್ನಿಯ ಆರೈಕೆಗಾಗಿ ಒಂದು ಕೋಟಿ ಮೊತ್ತದ ಉದ್ಯೋಗವನ್ನೇ ತೊರೆದಿದ್ದು, ಇದು ಅನೇಕರ ಹುಬ್ಬೇರಿಸಿದೆ.
ಹೌದು ಸಾಮಾಜಿಕ ಜಾಲತಾಣವಾದ ರೆಡಿಟ್‌ನಲ್ಲಿ r/IndianWorkplace ಎಂಬ ಹೆಸರಿನ ಖಾತೆ ಹೊಂದಿರುವವರೊಬ್ಬರು ತಾವು ತಮ್ಮ ಗರ್ಭಣಿ ಪತ್ನಿಯ ಆರೈಕೆಗಾಗಿ ಒಂದು ಕೋಟಿ ಮೊತ್ತದ ಉದ್ಯೋಗವನ್ನು ತೊರೆದಿದ್ದಾಗಿ ಹೇಳಿಕೊಂಡಿದ್ದು, ಈ ಪೋಸ್ಟ್ ಈಗ ಭಾರಿ ವೈರಲ್ ಆಗಿದ್ದು, ಅನೇಕರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ.
ಆತನ ಪೋಸ್ಟ್‌ನ ಸಾರಾಂಶ ಹೀಗಿದೆ ನೋಡಿ:
ನನ್ನ ಬಗ್ಗೆ ಹೇಳುವುದಾದರೆ ನಾನೋಬ್ಬ ಕಾಲೇಜು ಡ್ರಾಪ್‌ಔಟ್( ಕಾಲೇಜು ಶಿಕ್ಷಣವನ್ನು ಅರ್ಧದಲ್ಲೇ ಬಿಟ್ಟವ). ಆದರೆ 7 ವರ್ಷಗಳಲ್ಲಿ ಸ್ಟಾರ್ಟ್‌ಅಪ್‌ಗಳಲ್ಲಿ ಕೆಲಸ ಮಾಡುತ್ತಾ, ಹೆಚ್ಚಾಗಿ ಕಟ್ಟಡ ನಿರ್ಮಾಣ ಮತ್ತು GTM ತಂಡಗಳನ್ನು ಮುನ್ನಡೆಸುತ್ತಾ ನನ್ನ ಆದಾಯ 0 ದಿಂದ 7 ಕೋಟಿ+ ಗೆ ತಲುಪಿದೆ. ನನ್ನ ಕೊನೆಯ ಕೆಲಸವು ಸಾಕಷ್ಟು ಉತ್ತಮವಾಗಿತ್ತು. 1.2 ಕೋಟಿ ಸಂಬಳ, ವರ್ಕ್ ಫ್ರಮ್ ಹೋಮ್, ಬೆಂಗಳೂರಿನ ಜಯನಗರದಲ್ಲಿ ಉತ್ತಮ ಸ್ಥಳದಲ್ಲಿ ಮನೆ. ಆದರೆ 2 ತಿಂಗಳ ಹಿಂದೆ, ನನ್ನ ಹೆಂಡತಿ ಗರ್ಭಿಣಿಯಾದಳು. ನಾನು ಅವಳನ್ನು ಒಂದು ವರ್ಷ ಕೆಲಸ ತೊರೆದು ತಾಯ್ತನದ ಈ ಅವಧಿಯನ್ನು ಅನುಭವಿಸಲು ಹೇಳಿದೆ, ಆದರೆ ಅವಳು ಕೆಲಸದ ಅವಧಿ ಕಡಿಮೆ ಮಾಡುತ್ತಾ ಕೆಲಸ ಮಾಡುವುದನ್ನು ಮುಂದುವರಿಸಲು ನಿರ್ಧರಿಸಿದಳು. ಅವಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಳು.
ಆಗ ನಾನು ನನ್ನ ಕೆಲಸವನ್ನು ಬಿಟ್ಟು ಅವಳೊಂದಿಗೆ ಇರಲು ನಿರ್ಧರಿಸಿದೆ. ಮನೆಯ ಎಲ್ಲಾ ಕೆಲಸಗಳನ್ನು ನಿರ್ವಹಿಸಲು ಆರಂಭಿಸಿದೆ (ನಾನು ಈಗಾಗಲೇ ನನ್ನ ಪಾಲಿನ ಮನೆ ಕೆಲಸವನ್ನು ಮಾಡುತ್ತಿದ್ದೆ), ಗಾರ್ಡನಿಂಗ್ ಮಾಡುವುದು, ಅವಳನ್ನು ವಾಕ್‌ಗೆ ಕರೆದುಕೊಂಡು ಹೋಗುವುದು ಹೀಗೆ, ಹಾಗೆಯೇ ನಮ್ಮ ಪೋಷಕರನ್ನು ಸ್ವಲ್ಪ ಸಮಯ ನಮ್ಮೊಂದಿಗೆ ಇರಲು ಕರೆಸಿಕೊಳ್ಳುತ್ತೇನೆ. ನಾನು ಈ ಹಂತವನ್ನು ಸಂಪೂರ್ಣ ಆನಂದಿಸಲು ಬಯಸಿದ್ದೆ. ಹೀಗಾಗಿ ಇಂದು ನಾನು ನಿಜವಾಗಿಯೂ 1 ಕೋಟಿಗೂ ಅಧಿಕ ಮೊತ್ತದ ಕೆಲಸವನ್ನು ಬಿಡಲು ಶಕ್ತನಾಗಿದ್ದೇನೆ ಮತ್ತು ನನ್ನಗಿರುವ ಸಂಪರ್ಕಗಳು ಮತ್ತು ಅನುಭವದೊಂದಿಗೆ ನಾನು ಯಾವುದೇ ಸಮಯದಲ್ಲಿ ಮತ್ತೆ ಮಾರುಕಟ್ಟೆಗೆ ಮರಳಬಹುದು ಎಂದು ತಿಳಿದುಕೊಂಡಿರುವುದರಿಂದ ನಾನು ನಿಜವಾಗಿಯೂ ಧನ್ಯನಾಗಿದ್ದೇನೆ.
ಜೀವನದಲ್ಲಿ, ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿ ಕಾಣಿಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ನಾನು ಭಾವಿಸುತ್ತೇನೆ. ನಿಮ್ಮ ಸಂಗಾತಿಗೆ ನಿಮ್ಮ ಅವಶ್ಯಕತೆ ಇದ್ದಾಗ, ನಿಮ್ಮ ಮಕ್ಕಳಿಗೆ ನಿಮ್ಮ ಅವಶ್ಯಕತೆ ಇದ್ದಾಗ, ನಿಮ್ಮ ಹೆತ್ತವರಿಗೆ ನಿಮ್ಮ ಅವಶ್ಯಕತೆ ಇದ್ದಾಗ. ಉಳಿದೆಲ್ಲವೂ ಎರಡನೆಯದು. ಹೆಚ್ಚಿನ ಸಂಬಳದ ಕೆಲಸ ಪಡೆಯುವುದು ನಿಜಕ್ಕೂ ಸುಲಭವಾದ ಭಾಗ ಹಾಗೂ ಇದಕ್ಕಾಗಿ ಈ ವಿಶೇಷ ಕ್ಷಣಗಳನ್ನು ಕಳೆದುಕೊಳ್ಳಲು ಯೋಗ್ಯವಲ್ಲ ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸಿದೆ. ಎಂದು ಪತಿಯೊಬ್ಬ ರೆಡಿಟ್‌ನಲ್ಲಿ ಬರೆದುಕೊಂಡಿದ್ದು, ಹೊಸ ಚರ್ಚೆ ಹುಟ್ಟುಹಾಕಿದೆ.
ಈ ಪೋಸ್ಟ್ ಸ್ವಲ್ಪ ಹೊತ್ತಿನಲ್ಲೇ ಭಾರಿ ವೈರಲ್ ಆಗಿದ್ದು, ಹಲವರು ಹಲವು ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಎಲ್ಲರೂ ಬದುಕು ಒಂದೇ ರೀತಿ ಇರುವುದಿಲ್ಲ, ಅನೇಕ ಜನರು ಪತ್ನಿ ಆರೈಕೆಗಾಗಿ ತಮ್ಮ ಉದ್ಯೋಗ ತೊರೆಯಲು ಸಾಧ್ಯವಿಲ್ಲ, ನೀವು ಅದೃಷ್ಟವಂತರು, ನಿಮ್ಮ ಹೆಂಡತಿ ಅದೃಷ್ಟವಂತರು. ನಿಮಗಾಗಿ ಸಂತೋಷವಾಗಿದೆ ಎಂದು ಒಬ್ಬ ಬಳಕೆದಾರರೊಬ್ಬರು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ವೃತ್ತಿಜೀವನದಲ್ಲಿ ವಿರಾಮ ತೆಗೆದುಕೊಳ್ಳಲು ನನಗೂ ಅಂತಹ ಲಾಭದಾಯಕ ಕೆಲಸ ಸಿಗಬೇಕೆಂದು ನಾನು ಬಯಸುತ್ತೇನೆ, ನಿಮಗೆ ಶುಭವಾಗಲಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಕಾಲೇಜು ಪದವಿ ಇಲ್ಲದೆ ನಿನಗೆ ಕೆಲಸ ಹೇಗೆ ಸಿಕ್ಕಿತು? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ನನ್ನ ವಯಸ್ಸಾದ ತಂದೆಯನ್ನು ನೋಡುವುದಕ್ಕಾಗಿ ನಾನು ಯುರೋಪಿನಲ್ಲಿ ನನ್ನ ಕೆಲಸವನ್ನು ಬಿಟ್ಟಿದ್ದೇನೆ. ನೀವು ಮಾಡುತ್ತಿರುವುದು... ಕೇವಲ ಬೇಜವಾಬ್ದಾರಿ. ತುರ್ತು ಪರಿಸ್ಥಿತಿ ಇಲ್ಲದಿದ್ದರೂ ನೀವು ಕೆಲಸ ಬಿಡಲು ಬಯಸಿದ್ದರಿಂದ ಮತ್ತು ನಿಮ್ಮ ಹೆಂಡತಿ ಹಾಗೂ ಸಮಾಜದಿಂದ ಒಳ್ಳೆಯ ಗಂಡ ಆಗಲು ಬ್ರೌನಿ ಪಾಯಿಂಟ್‌ಗಳನ್ನು ಪಡೆಯಲು ಪ್ರಯತ್ನಿಸುತ್ತಿರುವುದರಿಂದ ನೀವು ಕೆಲಸ ಬಿಡುತ್ತಿದ್ದೀರಿ ಎಂದು ಮತ್ತೊಬ್ಬರು ಟೀಕಿಸಿದ್ದಾರೆ.
ಅದೇನೆ ಇರಲಿ ಬಹುತೇಕ ಮಧ್ಯಮ ವರ್ಗದ ಕುಟುಂಬಗಳಲ್ಲಿ ಗಂಡ ಹೆಂಡತಿ ಇಬ್ಬರು ದುಡಿದರಷ್ಟೇ ಮನೆ ನಿಭಾಯಿಸಲು ಸಾಧ್ಯ ಹೀಗಿರುವಾಗ ಗರ್ಭಿಣಿ ಪತ್ನಿಯ ಜೊತೆ ಗಂಡನೂ ಆಕೆಯ ಆರೈಕೆಗಾಗಿ ಕೆಲಸ ತೊರೆದರೆ ಊಟ ಮಾಡಲು ಗತಿ ಇಲ್ಲದಂತಾಗುತ್ತದೆ ಬಹಳಷ್ಟು ಸೇವಿಂಗ್ಸ್ ಜೊತೆ ಅಪ್ಪ ಅಜ್ಜನ ಆಸ್ತಿ ಇದ್ದರಷ್ಟೇ ಇಂತಹ ದುಸ್ಸಾಹಸ ಮಾಡುವುದಕ್ಕೆ ಸಾಧ್ಯ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ..
