ಕೆಲಸ ಹುಡುಕುವವರಿಗೆ ಗುಡ್ ನ್ಯೂಸ್, ಲಿಂಕ್ಡ್‌ಇನ್‌ನಲ್ಲಿ ಸ್ಯಾಲರಿ ನಿರೀಕ್ಷೆ, ನೋಟಿಸ್ ಪೀರಿಯೆಡ್‌ಗೆ ಅವಕಾಶ ನೀಡಲಾಗಿದೆ. ಓಪನ್ ಟು ವರ್ಕ್ ಆಯ್ಕೆ ಬಳಸುವವರು ತಮ್ಮ ವಾರ್ಷಿಕ ವೇತನ ನಿರೀಕ್ಷೆ, ನೋಟಿಸ್ ಪೀರಿಯೆಡ್ ದಿನಗಳ ಕುರಿತು ಉಲ್ಲೇಖಿಸಲು ಅವಕಾಶ ನೀಡಲಾಗಿದೆ.
ನವದೆಹಲಿ (ಅ.09) ಲಿಂಕ್ಡ್ಇನ್ ಪ್ಲಾಟ್‌ಫಾರ್ಮ್ ಕೇವಲ ಕೆಲಸ ಹುಡುಕುವ, ಕೆಲಸ ಗಿಟ್ಟಿಸಿಕೊಳ್ಳುವ, ಕೆಲಸ ಬದಲಿಸುವ ಪ್ಲಾಟ್‌ಫಾರ್ಮ್ ಆಗಿ ಉಳಿದುಕೊಂಡಿಲ್ಲ. ಲಿಂಕ್ಡ್‌ಇನ್ ಕೂಡ ಪ್ರಬಲ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಆಗಿ ಗುರುತಿಸಿಕೊಂಡಿದೆ. ಈಗಾಗಲೇ ಸಾಕಷ್ಟು ಬದಲಾವಣೆ, ಅಪ್‌ಗ್ರೇಡ್ ಮಾಡಿರುವ ಲಿಂಕ್ಡ್‌ಇನ್ ಇದೀಗ ಹೊಸ ಫೀಚರ್ ಸೇರಿಸಿದೆ. ಕೆಲಸ ಬದಲಿಸಲು ಇಚ್ಚಿಸುವ ಮಂದಿ, ಕೆಲಸ ಹುಡುಕುತ್ತಿರುವ ಮಂದಿ ತಮ್ಮ ವಾರ್ಷಿಕ ವೇತನದ ನಿರೀಕ್ಷೆ, ಪ್ರಸಕ್ತ ಕಂಪನಿಯಲ್ಲಿರುವ ನೋಟಿಸ್ ಪೀರಿಯೆಡ್ ಉಲ್ಲೇಖಿಸಲು ಅವಕಾಶ ನೀಡಿದೆ.
ಓಪನ್ ಟು ವರ್ಕ್ ಫೀಚರ್
ಓಪನ್ ಟು ವರ್ಕ್ ಫೀಚರ್ ಆನ್ ಮಾಡುವಾಗ ಬಳಕೆದಾರರು ಈಗ ತಾವು ಎಷ್ಟು ಬೇಗ ಉದ್ಯೋಗ ಸೇರಲು ಲಭ್ಯರಿರುತ್ತಾರೆ ಎಂಬುದನ್ನು ತಿಳಿಸಲು ತಮ್ಮ ನೋಟೀಸ್ ಪೀರಿಯಡ್ ಸಮಯ ನಮೂದಿಸಬಹುದು. ಇಷ್ಟೇ ಅಲ್ಲ ತಾವು ಎಷ್ಟು ವೇತನ ನಿರೀಕ್ಷೆ ಮಾಡುತ್ತಿರುವುದಾಗಿ ತಿಳಿಸಲು ನಿರೀಕ್ಷಿತ ವಾರ್ಷಿಕ ವೇತನವನ್ನು ಕೂಡ ನಮೂದಿಸಬಹುದು. ಈ ಆಯ್ಕೆಗಳು ವೃತ್ತಿಪರರಿಗೆ ಆರಂಭದಿಂದಲೇ ಸ್ಪಷ್ಟತೆಯನ್ನು ಒದಗಿಸಲು ಸಹಾಯ ಮಾಡುತ್ತವೆ. ಇದರಿಂದ ಸರಿಯಾಗಿ ಹೊಂದಿಕೆಯಾಗದ ಉದ್ಯೋಗಾವಕಾಶಗಳಿಗೆ ಅನಗತ್ಯ ಮಾತುಕತೆ ನಡೆಸುವುದು ತಪ್ಪಿಸಬಹುದು. ಈ ಆಯ್ಕೆಯಲ್ಲಿ ಸದಸ್ಯರ ‘ಓಪನ್ ಟು ವರ್ಕ್’ ಬ್ಯಾಡ್ಜ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಸ್ಯಾಲರಿ ನಿರೀಕ್ಷೆ, ನೋಟಿಸ್ ಪೀರಿಯೆಡ್ ಕೇವಲ ನೇಮಕಾತಿದಾರರಿಗೆ ಮಾತ್ರ ಕಾಣುತ್ತದೆ.
‘ಓಪನ್ ಟು ವರ್ಕ್’ ಬ್ಯಾಡ್ಜ್ ಆನ್ ಮಾಡುವುದು ಮತ್ತು ನೇಮಕಾತಿದಾರರಿಗೆ ಸಂಕೇತಗಳನ್ನು ಕಳುಹಿಸುವುದು ಹೇಗೆ:
ಹಂತ 1: ನಿಮ್ಮ ಲಿಂಕ್ಡ್ ಇನ್ ಪ್ರೊಫೈಲ್‌ಗೆ ಭೇಟಿ ನೀಡಿ, “ಓಪನ್ ಟು” ಕ್ಲಿಕ್ ಮಾಡಿ ಮತ್ತು “ಫೈಂಡಿಂಗ್ ಎ ನ್ಯೂ ಜಾಬ್” ಆಯ್ಕೆಮಾಡಿ.
ಹಂತ 2: ನೀವು ಯಾವ ರೀತಿಯ ಕೆಲಸಕ್ಕೆ ಆಸಕ್ತಿ ಹೊಂದಿರುವಿರಿ ಎಂಬ ವಿವರಗಳನ್ನು ತಿಳಿಸಲು ನಿಮ್ಮ ಆದ್ಯತೆಯ ಹುದ್ದೆಗಳ ಶೀರ್ಷಿಕೆಗಳನ್ನು ನಮೂದಿಸಿ.
ಹಂತ 3: ನೀವು ಎಷ್ಟು ಬೇಗ ಉದ್ಯೋಗ ಸೇರಲು ಲಭ್ಯರಿರುವಿರಿ ಎಂಬುದನ್ನು ತೋರಿಸಲು ನೋಟೀಸ್ ಪೀರಿಯಡ್ ಅನ್ನು ನಮೂದಿಸಿ. (ನೇಮಕಾತಿದಾರರಿಗೆ ಮಾತ್ರ ಕಾಣಿಸುತ್ತದೆ)
ಹಂತ 4: ಆರಂಭದಲ್ಲಿಯೇ ನಿಮ್ಮ ಆದ್ಯತೆಯ ವೇತನವನ್ನು ಸೂಚಿಸಲು ನಿರೀಕ್ಷಿತ ವಾರ್ಷಿಕ ವೇತನದ ಸರಿಯಾದ ಶ್ರೇಣಿಯನ್ನು ಸೂಚಿಸಿ. (ನೇಮಕಾತಿದಾರರಿಗೆ ಮಾತ್ರ ಗೋಚರಿಸುತ್ತದೆ)
ಹಂತ 5: ನಿಮ್ಮ ‘ಓಪನ್ ಟು ವರ್ಕ್’ ಬ್ಯಾಡ್ಜ್ ಯಾರಿಗೆ ಕಾಣಿಸಬೇಕು ಎಂಬುದನ್ನು ನೀವೇ ನಿರ್ಧರಿಸಬಹುದು. ಒಂದೋ ನೇಮಕಾತಿದಾರರಿಗೆ ಮಾತ್ರ ಅಥವಾ ಎಲ್ಲಾ ಲಿಂಕ್ಡ್ ಇನ್ ಸದಸ್ಯರಿಗೆ ಕಾಣಿಸುವಂತೆ ಆಯ್ಕೆ ಮಾಡಬಹುದು. ‘ರಿಕ್ರೂಟರ್ಸ್ ಓನ್ಲಿ’ ಎಂಬ ಆಯ್ಕೆಯನ್ನು ಆರಿಸಿದರೆ ನಿಮ್ಮ ಸಂಪೂರ್ಣ ನೆಟ್ ವರ್ಕ್ ಗೆ ತಿಳಿಸದೆ ಕೇವಲ ನೇಮಕಾತಿದಾರರ ಗಮನಕ್ಕೆ ತಲುಪಿಸಲು ಸಹಾಯ ಆಗುತ್ತದೆ.
ಲಿಂಕ್ಡ್ ಇನ್ ಇಂಡಿಯಾದ ರುಚೀ ಆನಂದ್ ಹೊಸ ಫೀಚರ್ ಕುರಿತು ವಿವರಣೆ ನೀಡಿದ್ದಾರೆ. ವೃತ್ತಿಪರರು ಕಳುಹಿಸುವ ಸಂಕೇತಗಳು ಟ್ರಾಫಿಕ್ ಲೈಟ್ ಗಳಂತೆಯೇ ಕೆಂಪು, ಹಳದಿ ಅಥವಾ ಹಸಿರು ರೀತಿ ಇರಬಹುದು, ತಮ್ಮ ವೃತ್ತಿಜೀವನವನ್ನು ಮುಂದಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ವ್ಯತ್ಯಾಸ ಮಾಡಲಿದೆ ಎಂದಿದ್ದಾರೆ.
ರೆಡ್ ಸಿಗ್ನಲ್: ನಿಲ್ಲಿಸಿ ಮತ್ತು ಎಚ್ಚರವಾಗಿರಿ: ನೇಮಕಾತಿದಾರರು ಏನೋ ಸರಿಯಿಲ್ಲ ಎಂದುಕೊಳ್ಳುತ್ತಾರೆ. ಯಾಕೆಂದರೆ ಪ್ರೊಫೈಲ್ ನಲ್ಲಿ ಉದ್ಯೋಗಗಳ ಮಧ್ಯೆ ಅಸಮರ್ಪಕ ಗ್ಯಾಪ್‌ಗಳು ಅಥವಾ ಸರಿಯಾದ ಕಾರಣವಿಲ್ಲದೆ ಉದ್ಯೋಗ ತೊರೆದಿರುವುದು, ಆರಂಭಿಕವಾಗಿ ಸಂಪರ್ಕಿಸಿ ಬಳಿಕ ಗೋಸ್ಟಿಂಗ್ ಮಾಡುವುದು ಅಥವಾ ಬಹು ಆಫರ್ ಗಳಿರುವುದರಿಂದ ತೊಡಗಿಸಿಕೊಳ್ಳಬೇಕಿಲ್ಲ ಎಂದು ಭಾವಿಸುವುದು - ಇವೆಲ್ಲವೂ ತಪ್ಪು ಸಂದೇಶವನ್ನು ರವಾನಿಸುತ್ತವೆ. ಲೇಆಫ್ ಗಳ ಕುರಿತು, ವೃತ್ತಿಜೀವನದ ಬದಲಾವಣೆಗಳ ಕುರಿತು ಅಥವಾ ಬ್ರೇಕ್ ಗಳ ಕುರಿತು ನಿಮ್ಮ ಪ್ರೊಫೈಲ್ ನಲ್ಲಿ ಸಂಕ್ಷಿಪ್ತ ವಿವರಣೆಯನ್ನು ಸೇರಿಸುವುದರಿಂದ ನಿಮ್ಮ ಮಾಹಿತಿ ಅಧಿಕೃತವಾಗಿದೆ ಎಂದು ಸೂಚಿಸಲು ಸಹಾಯವಾಗುತ್ತದೆ.
ಹಳದಿ ಸಿಗ್ನಲ್: ಸ್ಪಷ್ಟತೆಯೊಂದಿಗೆ ಮುಂದುವರಿಯಿರಿ: ಕೇವಲ ಕೆಲಸಕ್ಕೆ ಸೇರುವ ಸಮಯಾವಧಿ ಸೇರಿಸುವುದರಿಂದ ಮತ್ತು ವೇತನದ ಕುರಿತು ಸ್ಪಷ್ಟತೆ ನೀಡುವುದರಿಂದ ಸಾಕಾಗುವುದಿಲ್ಲ, ಕೌಶಲ್ಯಗಳ ಕುರಿತೂ ಸ್ಪಷ್ಟವಾಗಿ ತಿಳಿಸಬೇಕು. ಜಾಗತಿಕವಾಗಿ ಶೇ.42ರಷ್ಟು ನೇಮಕಾತಿದಾರರು ಪ್ರತೀ ವಾರ ಲಿಂಕ್ಡ್ ಇನ್ ನಲ್ಲಿ ಸ್ಕಿಲ್ ಫಿಲ್ಟರ್ ಗಳನ್ನು ಬಳಸಿಕೊಂಡು ಅಭ್ಯರ್ಥಿಗಳನ್ನು ಹುಡುಕುತ್ತಾರೆ. ಆದರೆ ಕೆಲವು ಪ್ರೊಫೈಲ್ ಗಳು ಅರ್ಹತೆ ಇದ್ದರೂ ಕೇವಲ ಕೌಶಲ್ಯ ವಿಭಾಗವನ್ನು ಖಾಲಿ ಬಿಟ್ಟಿರುವ ಕಾರಣ ಅವಕಾಶ ತಪ್ಪಿಹೋಗುತ್ತವೆ. ಐದು ಅಥವಾ ಹೆಚ್ಚಿನ ಕೌಶಲ್ಯಗಳನ್ನು ಪಟ್ಟಿಮಾಡಿದರೆ ಲಿಂಕ್ಡ್ ಇನ್ ಪ್ರೊಫೈಲ್ ಗಳನ್ನು ರಿಕ್ರೂಟರ್ ಗಳು 5.6 ಪಟ್ಟು ಹೆಚ್ಚು ವೀಕ್ಷಿಸುವ ಸಾಧ್ಯತೆಯಿದೆ.
ಗ್ರೀನ್ ಸಿಗ್ನಲ್: ವಿಶ್ವಾಸದಿಂದ ಮುಂದಕ್ಕೆ ಸಾಗಿ: ಗುರಿ ಸ್ಪಷ್ಟತೆ ಇದ್ದಾಗ ನೇಮಕಾತಿದಾರರು ನಿಮ್ಮ ಕುರಿತು ಉತ್ಸಾಹ ತೋರಬಹುದು. ಯಾವ ಹುದ್ದೆಗಳನ್ನು ಬಯಸುತ್ತಾರೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ, ಪ್ರಮುಖ ವಿವರಗಳೊಂದಿಗೆ ಪ್ರೊಫೈಲ್ ಗಳನ್ನು ಅಪ್ ಡೇಟ್ ಮಾಡಿದ ಮತ್ತು “ಓಪನ್ ಟು ವರ್ಕ್” ಆನ್ ಮಾಡಿದ ಅಭ್ಯರ್ಥಿಗಳು ಕರೆಗಳನ್ನು ಸ್ವೀಕರಿಸುವ ಸಾಧ್ಯತೆ ಹೆಚ್ಚು. ವಾಸ್ತವವಾಗಿ, “ಓಪನ್ ಟು ವರ್ಕ್” ಫೀಚರ್ ಅನ್ನು ಆನ್ ಮಾಡುವುದರಿಂದ ವೃತ್ತಿಪರರಿಗೆ ನೇಮಕಾತಿದಾರರು ಸಂದೇಶ ಕಳುಹಿಸುವ ಸಾಧ್ಯತೆಯನ್ನು ದ್ವಿಗುಣಗೊಳಿಸುತ್ತದೆ.
