ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ಡಿಕೆಶಿ ಬಣದ ಶಾಸಕರು ಆ್ಯಕ್ಟೀವ್ ಆಗಿದ್ದು, ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಪರಮಾಪ್ತ, ಚನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆ (ಅ.23): ರಾಜ್ಯ ಕಾಂಗ್ರೆಸ್‌ನಲ್ಲಿ ಉತ್ತರಾಧಿಕಾರಿ ಪಾಲಿಟಿಕ್ಸ್ ಜೋರಾಗಿದೆ. ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ಡಿಕೆಶಿ ಬಣದ ಶಾಸಕರು ಆ್ಯಕ್ಟೀವ್ ಆಗಿದ್ದು, ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಪರಮಾಪ್ತ, ಚನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಇರುವ ಪಕ್ಷ, ಮೈಸೂರು ಅರಮನೆಯಲ್ಲ. ಮೈಸೂರು ರಾಜಮನೆತನದಲ್ಲಿ ವಂಶಪಾರಂಪರ್ಯ ರೂಟ್ ಇರ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಆ ರೀತಿ ವ್ಯವಸ್ಥೆ ಇಲ್ಲ, ಹೈಕಮಾಂಡ್ ತೀರ್ಮಾನ ಮಾಡ್ತದೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧರಾಗಿರಬೇಕು ಎಂದರು.
ಉತ್ತರಾಧಿಕಾರಿ ಯಾರು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತೆ. ಈಗ ಯಾರ್ಯಾರೋ ಹೇಳಿಕೆ ಕೊಟ್ಟು ಪಕ್ಷಕ್ಕೆ ಮುಜುಗುರವಾಗೋ ಹೇಳಿಕೆ ನೀಡಬಾರದು. ಯತೀಂದ್ರ ಸಿದ್ದರಾಮಯ್ಯ ಒಂದ್ಸಾರಿ ಎಂಎಲ್‌ಎ, ಎಂಎಲ್‌ಸಿ ಆದವರು. ಅಂತವರು ಈ ರೀತಿ ಹೇಳಿಕೆ ಕೊಟ್ರೆ ನಾವು ಅವರನ್ನ ಫಾಲೋ ಮಾಡಬೇಕಾಗುತ್ತೆ. ನಾನೊಂದು ಹೇಳಿಕೆ, ಇನ್ನೊಬ್ಬರೊಂದು ಹೇಳಿಕೆ ಕೊಡ್ತಾ ಹೋದ್ರೆ ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ. 2028ಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತಾ ಈಗಾಗಲೇ ಡಿಕೆಶಿಯವರು ಹೇಳಿದ್ದಾರೆ. ಬಾಲಿಶ ಹೇಳಿಕೆ ಕೊಡಬಾರದು ಎಂದು ಶಿವಗಂಗಾ ಬಸವರಾಜ ಟಾಂಗ್ ಕೊಟ್ಟರು.
ಹೈಕಮಾಂಡ್ ಸಹ ಈ ಎಲ್ಲಾ ಹೇಳಿಕೆ ಗಮನಿಸಬೇಕು. ಒಬ್ಬೊಬ್ಬ ಎಂಎಲ್‌ಎ ವೋಟ್ ಸಹ ಅಷ್ಟೇ ಮುಖ್ಯ ಆಗಿರುತ್ತೆ. ಸಿಎಂ ಪುತ್ರ, ಇನ್ನೊಬ್ಬರು ಹೇಳಿಕೆ ಕೊಟ್ರೆ ಸುಮ್ಮನೆ ಇರೋದು. ನಾ ಹೇಳಿಕೆ ಕೊಟ್ರೆ ನೋಟಿಸ್ ಕೊಡೋದು ಇದ್ಯಾವ ಧರ್ಮ? ಹೈಕಮಾಂಡ್ ಕೂಡಲೇ ಕ್ರಮ ಕೈಗೊಂಡರೆ ಉತ್ತಮ. ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಕ್ರಮಕ್ಕೆ ಪರೋಕ್ಷವಾಗಿ ಶಿವಗಂಗಾ ಬಸವರಾಜ ಆಗ್ರಹಿಸಿದರಲ್ಲದೇ ತುಂಬಾ ಸಲ ಆ ರೀತಿ ಹೇಳಿಕೆ ಕೊಟ್ಟಿದ್ದಾರೆ. ಪಕ್ಷಕ್ಕೆ ಮುಜುಗರ ಆಗೋ ರೀತಿ ಹೇಳಿಕೆ ಕೊಡಬಾರದು, ಪಕ್ಷ ಇದ್ರೆ ನಾವೆಲ್ಲ. ಪಕ್ಷ ಇಲ್ಲದಿದ್ರೆ ಉತ್ತರಾಧಿಕಾರಿನೂ ಇರಲ್ಲ, ದಕ್ಷಿಣಾಧಿಕಾರಿನೂ ಇರಲ್ಲ ಎಂದು ತಿಳಿಸಿದರು.
ಡಿಸೆಂಬರ್ ವೇಳೆ ಡಿಕೆಶಿ ಸಿಎಂ ಆಗ್ತಾರೆ
ಎಲ್ಲರೂ ನವೆಂಬರ್ ಕ್ರಾಂತಿ ಅಂಥಾ ಹೇಳ್ತಾರೆ, ನಾನು ಡಿಸೆಂಬರ್ ಎಂದಿದ್ದೇನೆ. ಡಿಸೆಂಬರ್ ನಂತರ ಆಗೇ ಆಗ್ತದೆ ಅದರ ಬಗ್ಗೆ ಮಾತನಾಡೋದು ಬೇಡ ಎಂದು ಡಿಸೆಂಬರ್ ವೇಳೆ ಡಿಕೆಶಿ ಸಿಎಂ ಆಗ್ತಾರೆ ಎಂದು ಪರೋಕ್ಷ ಹೇಳಿಕೆಯನ್ನು ಶಿವಗಂಗಾ ಬಸವರಾಜ ನೀಡಿದರು. ನಾನು ಈಗ ಮಾತನಾಡಲ್ಲ ಮುಂದಿನ ವಿಷಯ ಜನವರಿಯಲ್ಲಿ ಮಾತನಾಡ್ತೀನಿ. ಸಿದ್ದರಾಮಯ್ಯ ತೂಕದ ರಾಜಕಾರಣಿ, ಉತ್ತಮ ಆಡಳಿತಗಾರರು. ಸಿದ್ದರಾಮಯ್ಯ ಸಾಹೇಬ್ರು ಎಲ್ಲಾದರೂ ಹೇಳಿಕೆ ನೀಡಿದ್ದಾರಾ? ಮಾಧ್ಯಮಗಳು ಕೇಳಿದಾಗ ನಾನು ಮುಖ್ಯಮಂತ್ರಿ ಇದೀನಿ ಅಂದಿದ್ದಾರೆ. ನಾನು ಸಿಎಂ ಸ್ಥಾನದಿಂದ ಇಳಿಯಲ್ಲ ಅಂತಾ ಸಿದ್ದರಾಮಯ್ಯ ಎಲ್ಲಾದರೂ ಹೇಳಿದ್ದಾರಾ? 2033ಕ್ಕೆ ನಾನು ಸಿಎಂ ಸ್ಥಾನಕ್ಕೆ ಕ್ಲೇಮ್ ಮಾಡ್ತೀನಿ ಅಂತಾ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಎಲ್ಲಾ ಸೂಸುತ್ರವಾಗಿ ನಡೆಯುವಾಗ ಏಕೆ ಹೇಳಿಕೆ ನೀಡಬೇಕು ಎಂದು ಶಿವಗಂಗಾ ಬಸವರಾಜ ಪ್ರಶ್ನಿಸಿದರು.
