ಧರ್ಮಾಧಾರಿತ ಕಾರ್ಯಕ್ರಮಗಳಿಗೆ ಯಾರು ತೊಂದರೆ ಕೊಡಬಾರದು. ಮದ್ದೂರಿನಲ್ಲಿ ನಡೆದ ಘಟನೆಯಲ್ಲಿ ಯಾರೇ ತಪ್ಪು ಮಾಡಿದರೂ ಒದ್ದು ಒಳಗೆ ಹಾಕಬೇಕು ಕಠಿಣವಾದ ಶಿಕ್ಷೆ ಕೊಡಬೇಕು ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಶಿವಮೊಗ್ಗ (ಸೆ.11): ಧರ್ಮಾಧಾರಿತ ಕಾರ್ಯಕ್ರಮಗಳಿಗೆ ಯಾರು ತೊಂದರೆ ಕೊಡಬಾರದು. ಮದ್ದೂರಿನಲ್ಲಿ ನಡೆದ ಘಟನೆಯಲ್ಲಿ ಯಾರೇ ತಪ್ಪು ಮಾಡಿದರೂ ಒದ್ದು ಒಳಗೆ ಹಾಕಬೇಕು ಕಠಿಣವಾದ ಶಿಕ್ಷೆ ಕೊಡಬೇಕು ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮದ ವಿಚಾರದಲ್ಲಿ ಯಾರೇ ತಪ್ಪು ಮಾಡಿದರೂ ಬಿಡುವ ಪ್ರಶ್ನೆ ಇಲ್ಲ ವೋಟಿಗೋಸ್ಕರ ಯಾರು ಕೂಡ ರಾಜಕಾರಣ ಮಾಡಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಧರ್ಮದಲ್ಲೂ ದುಷ್ಟ ಶಕ್ತಿಗಳು ಇರುತ್ತಾರೆ, ಅವರಿಗೆ ಕಡಿವಾಣ ಹಾಕಬೇಕು ಎಂದರು.

ಸಾಗರದಲ್ಲಿ ಮಕ್ಕಳು ಉಗಳಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರ ಬಗ್ಗೆ ತನಿಖೆ ಮಾಡಬೇಕಾಗಿದೆ. ಸಾಗರದ ಘಟನೆಯ ಹಿಂದೆ ಯಾರಿದ್ದಾರೆ ಪ್ರಚೋದನೆ ಮಾಡಿದ್ಯಾರು ? ತನಿಖೆ ಮಾಡಲು ಎಸ್ಪಿ ಅವರಿಗೆ ಹೇಳಿದ್ದೇನೆ. ಭದ್ರಾವತಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವುದು ಕೂಡ ಖಂಡನೀಯ. ಪಾಕಿಸ್ತಾನ ಘೋಷಣೆ ಕೂಗಿದ ವ್ಯಕ್ತಿ ಯಾರಿದ್ದರೂ ಗುಂಡಿಟ್ಟು ಹೊಡೆಯಬೇಕು. ಮಂಗಳೂರು ಏರ್‌ಪೋರ್ಟಿಗೆ ಬಾಂಬ್‌ ಇಟ್ಟಿದ್ದೀನಿ ಎಂದು ಹಿಂದೂ ಒಬ್ಬ ಹೇಳಿದ್ದ. ಹಿಂದುಗಳು, ಮುಸ್ಲಿಮರು, ಕ್ರಿಶ್ಚಿಯನ್ನರು ಧಾರ್ಮಿಕ ಮೆರವಣಿಗೆ ವೇಳೆ ಯಾರು ತೊಂದರೆ ಕೊಡಬಾರದು ಎಂದು ಹೇಳಿದರು.

ಮುಸ್ಲಿಮನಾಗಿ ಹುಟ್ಟುವ ಸಂಗಮೇಶ್ವರ್‌ರ ವೈಯಕ್ತಿಕ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಹಿಂದೂವಾಗಿ ಹುಟ್ಟುತ್ತೇನೆ ಹಿಂದುವಾಗಿ ಸಾಯುತ್ತೇನೆ. ಬೇರೆ ಧರ್ಮದ ಬಗ್ಗೆ ನಾನು ಮಾತಾಡಲ್ಲ. ಹಾಗೆ ನೋಡಿದರೆ ದೇವೇಗೌಡರು ಕೂಡ ಹಿಂದೆ ಮುಸ್ಲಿಮರಾಗಿ ಹುಟ್ಟುವ ಹೇಳಿಕೆ ನೀಡಿದ್ದರು. ಈಗ ದೇವೇಗೌಡರನ್ನು ಬಿಜೆಪಿ ಅವರು ಸೇರ್ಪಡೆ ಮಾಡಿಕೊಂಡು ಅವರ ಮಗನನ್ನು ಮಂತ್ರಿ ಮಾಡಿದ್ದಾರೆ. ಮುಸ್ಲಿಮರ ವೋಟ್ ಬ್ಯಾಂಕ್ ಎಂದು ಬಿಜೆಪಿ ಆರೋಪಿಸುತ್ತಾರೆ. ನಾವೇನು ಯಾರಿಗಾದರೂ ಗಲಾಟೆ ಮಾಡಿ ಎನ್ನುತ್ತೇವಾ, ನಮ್ಮ ಮೇಲೆ ಯಾಕೆ ಹಾಕುತ್ತೀರಾ? ಎಂದು ಕುಟುಕಿದರು.

ನಿಜವಾದ ಧರ್ಮದ ರಕ್ಷಣೆ

ಧರ್ಮಸ್ಥಳ ಪ್ರಕರಣ ಸಂಬಂಧ ಸರ್ಕಾರ ಎಸ್‌ಐಟಿ ತನಿಖೆಗೆ ವಹಿಸಿದಾಗ ಸ್ವಾಗತ ಮಾಡಿದ ಬಿಜೆಪಿಯವರು, ಈಗ ಅದನ್ನು ವಿರೋಧಿಸಿ ಧರ್ಮಸ್ಥಳದಲ್ಲಿ ಯಾತ್ರೆ ಮಾಡಿದ್ದಾರೆ. ಎಸ್ಐಟಿ ತನಿಖೆ ನಡೆಸುತ್ತಿರುವುದರಿಂದ ನಿಜವಾದ ಧರ್ಮದ ರಕ್ಷಣೆಯಾಗಿದೆ. ರಾಜ್ಯ ಸರ್ಕಾರ ಧರ್ಮಸ್ಥಳದ ಪರವಾಗಿ ವೀರೇಂದ್ರ ಹೆಗಡೆ ಪರವಾಗಿ ಇದ್ದೇವೆ. ಧರ್ಮಸ್ಥಳಕ್ಕೆ ಯಾವುದೇ ತೊಂದರೆಯಾಗದಂತೆ ಎಸ್ಐಟಿ ಮತ್ತು ಸರ್ಕಾರ ಮಾಡುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.