ಇತ್ತೀಚಿನ ಕೆಲವು ಘಟನೆಗಳಿಂದ ದುಷ್ಟ ಶಕ್ತಿಗಳು ಧರ್ಮಸ್ಥಳ ಕ್ಷೇತ್ರದ ಮೇಲೆ ಅಟ್ಯಾಕ್ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಬೆಂಗಳೂರು (ಆ.22): ಧರ್ಮಸ್ಥಳ ಇಂದಿನದಲ್ಲ, 800 ವರ್ಷಗಳ ಇತಿಹಾಸ ಇರುವ ಕ್ಷೇತ್ರ. ಇತ್ತೀಚಿನ ಕೆಲವು ಘಟನೆಗಳಿಂದ ದುಷ್ಟ ಶಕ್ತಿಗಳು ಕ್ಷೇತ್ರದ ಮೇಲೆ ಅಟ್ಯಾಕ್ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ಹುಂಡಿ ಹಣ ಕೇಳುವ ಅಧಿಕಾರ ಯಾರಿಗೂ ಇಲ್ಲ. ವೀರೇಂದ್ರ ಹೆಗಡೆ ಅವರು ಸ್ಪಾಪನೆ ಮಾಡಿರುವ ಕ್ಷೇತ್ರ ಅದು. ಧರ್ಮಸ್ಥಳ ಕ್ಷೇತ್ರಕ್ಕೆ ಹಾನಿ ಮಾಡುವುದನ್ನ ನಾವೂ ಸಹಿಸಲ್ಲ. ಹುಂಡಿ ಹಣವನ್ನ ಅದರ ಅಭಿವೃದ್ಧಿ ಬಳಸುತ್ತಿದ್ದಾರೆ. ಸಿಂಗದೂರು ದೇವಸ್ಥಾನವನ್ನ ಪಾಪಿಗಳು ಸರ್ಕಾರಕ್ಕೆ ಬರೆದುಕೊಟ್ರು. ಯಡಿಯೂರಪ್ಪ ಸರ್ಕಾರ ಸಿಂಗದೂರು ದೇವಸ್ಥಾನವನ್ನು ಸರ್ಕಾರಕ್ಕೆ ಬರೆದುಕೊಟ್ಟಾಗ ಯಾಕೆ ಮಾತನಾಡಲಿಲ್ಲ ಎಂದರು.

ಧರ್ಮಸ್ಥಳ ವೀರೇಂದ್ರ ಹೆಗಡೆ ಅವರು ಸುಮ್ಮನೆ ಕೂತಿಲ್ಲ. ಅವರು ಶಿಕ್ಷಣ ಸಂಸ್ಥೆಗಳನ್ನ ಮಾಡಿ ಜನರ ಜೊತೆ ಇದ್ದಾರೆ. ಧರ್ಮಸ್ಥಳಕ್ಕೆ ನಾವೂ ಹೋಗುತ್ತೇವೆ. ಕ್ಷೇತ್ರದ ಜನರ ಜೊತೆ ನಾವೂ ಧರ್ಮಸ್ಥಳಕ್ಕೆ ಹೋಗುತ್ತವೆ. ಬಿಜೆಪಿಯವರು ಧರ್ಮಸ್ಥಳ ಚಲೋ ಮಾಡಿದ್ದು ಡ್ರಾಮಾ. ಎಸ್ಐಟಿ ಸ್ವಾಗತ ಮಾಡಿ ನಂತರ ಈಗ ವಿರೋಧ ಮಾಡುವುದು ಸರಿಯಲ್ಲ. ಯಾರೋ ದುಷ್ಟ ಶಕ್ತಿಗಳು ಮಾಡಿದ್ದನ್ನ ಸರ್ಕಾರದ ಮೇಲೆ ಹಾಕೋದು ಸರಿಯಲ್ಲ. ಬಿಜೆಪಿಯಿಂದ ಧರ್ಮ ಸಂರಕ್ಷಣೆ ಅಭಿಯಾನ ಬರೀ ನಾಟಕ ಎಂದು ವ್ಯಂಗ್ಯವಾಡಿದರು.

ಯಾರೇ ಹಿಂದುಗಳು ಸಾವಿನಪ್ಪಿದ್ರು. ಕೊಲೆಯಾದ್ರು ಅದನ್ನ ಹಿಂದುತ್ವ ಅಂತಾ ಮಾಡಲು ಹೊರಟಿದ್ದಾರೆ. ಕಲ್ಲಡ್ಕ ಪ್ರಭಾಕರ ಭಟ್ ರು ಈಗ ಎಲ್ಲಿ ಹೋಗಿದ್ದಾರೆ. ಅವರು ಹಿಂದುತ್ವ ವಿಚಾರ ಇಟ್ಟುಕೊಂಡು ಮತ್ತೊಮ್ಮೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ. ಧರ್ಮಸ್ಥಳ ವಿಚಾರದಲ್ಲಿ RSS ಹಾಗೂ ಬಿಜೆಪಿ ನಿಲುವು ಬಿನ್ನವಾಗಿರಬಹುದು. ಧರ್ಮಸ್ಥಳದ ಪರವಾಗಿ ಬರೀ ವಿಜಯೇಂದ್ರ, ಅಶೋಕ್, ಸಿಟಿ ರವಿ ಅಷ್ಟೇ ಮಾತನಾಡುತ್ತಿದ್ದಾರೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.

ಹೆಚ್ಚಿನ ಅನುದಾನ ತರಲು ಪ್ರಯತ್ನ: ಅತಿವೃಷ್ಟಿಯಿಂದ ಹಾನಿಯಾಗಿರುವ ಕುರಿತು ಸದಸನದಲ್ಲಿ ಚರ್ಚೆ ನಡೆಸಿ ಸರ್ಕಾರದ ಗಮನ ಸೆಳೆದು ಹೆಚ್ಚಿನ ಅನುದಾನವನ್ನು ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ ಮತ್ತು ಸೊರಬ ಕ್ಷೇತ್ರಕ್ಕೆ ನೀಡಲು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡುತ್ತೇನೆ ಎಂದು ಹೇಳಿದರು. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಪಟ್ಟಣದ ಬಿ.ಎಚ್.ರಸ್ತೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿ ಬಿದ್ದಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ಅತಿವೃಷ್ಟಿಯಿಂದ ತಾಲೂಕಿನಲ್ಲಿ ಪಿಡಬ್ಲ್ಯುಡಿ ಇಲಾಖೆಗೆ 75 ಕೋಟಿ ರು. ಜಿಲ್ಲಾ ಪಂಚಾಯ್ತಿಗೆ 33 ಕೋಟಿ ರು., ಸಣ್ಣ ನೀರಾವರಿ ಇಲಾಖೆಗೆ 170 ಕೋಟಿ ರು. ನಷ್ಟವಾಗಿದೆ. ಹೊಸನಗರ ತಾಲ್ಲೂಕಿನಲ್ಲಿ ಸುಮಾರು 33 ಕೋಟಿ ರು. ನಷ್ಟವಾಗಿದ್ದು, ನಷ್ಟದ ವರದಿಯನ್ನು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಗುತ್ತದೆ ಎಂದರು.

ಪಟ್ಟಣದ ಶಿವಪ್ಪನಾಯಕ ವೃತ್ತದಿಂದ ಸಿಗಂದೂರು ತುಮರಿ ಮೂಲಕ ಮರಕುಟಕ ಸೇರುವ ರಾಷ್ಟ್ರೀಯ ಹೆದ್ದಾರಿ 369ಇ ಸರ್ವೆ ಕಾರ್ಯ ಮುಗಿದಿದ್ದು ಕಾಮಗಾರಿ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ. ರಸ್ತೆ ನಿರ್ಮಾಣದ ಕುರಿತು ಸಣ್ಣಪುಟ್ಟ ಸಮಸ್ಯೆಗಳಿವೆ. ತುಮರಿ ಗ್ರಾಮದೊಳಗಿನಿಂದ ರಸ್ತೆ ಹೋಗಬೇಕು ಎಂದು ಕೆಲವರು ಹೇಳುತ್ತಿದ್ದರೆ, ಇನ್ನು ಕೆಲವರು ಬೈಪಾಸ್ ನಿರ್ಮಿಸಿ ಎನ್ನುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತೇವೆ. ರಾಷ್ಟ್ರೀಯ ಹೆದ್ದಾರಿ 206 ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಕಾಮಗಾರಿ ಮುಗಿಸಲು ಸೂಚಿಸಿದೆ ಎಂದು ತಿಳಿಸಿದರು.