ಇವರನ್ನು ಹೇಗೆ ದೇಶದ ವಿರೋಧ ಪಕ್ಷದ ನಾಯಕ ಮಾಡಿದ್ದಾರೆ ಎನ್ನುವುದು ದೇವರಿಗೆ ಗೊತ್ತು. ರಾಹುಲ್‌ ಗಾಂಧಿ ಸಣ್ಣ ಹುಚ್ಚ ಹುಡುಗ ಎಂದು ಸಂಸದ ರಮೇಶ ಜಿಗಜಿಣಗಿ ಕಿಡಿ ಕಾರಿದರು.

ವಿಜಯಪುರ (ಆ.11): ರಾಹುಲ್‌ ಗಾಂಧಿ ಎಂತಹ ಲೀಡರ್? ಆತನ ತಂದೆ, ಅಜ್ಜಿ ಒಳ್ಳೆಯ ಲೀಡರ್‌ ಆಗಿದ್ದರು. ರಾಹುಲ್‌ ಗಾಂಧಿ ತಲೆ ಇಲ್ಲದ ಲೀಡರ್ ಎಂದು ಸಂಸದ ರಮೇಶ ಜಿಗಜಿಣಗಿ ಲೋಕಸಭೆ ವಿರೋಧ ಪಕ್ಷದ ನಾಯಕನ ವಿರುದ್ಧ ಕಿಡಿ ಕಾರಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇವರನ್ನು ಹೇಗೆ ದೇಶದ ವಿರೋಧ ಪಕ್ಷದ ನಾಯಕ ಮಾಡಿದ್ದಾರೆ ಎನ್ನುವುದು ದೇವರಿಗೆ ಗೊತ್ತು. ರಾಹುಲ್‌ ಗಾಂಧಿ ಸಣ್ಣ ಹುಚ್ಚ ಹುಡುಗ’ ಎಂದರು.

75 ವರ್ಷ ದೇಶದ ಆಡಳಿದ ಮನೆತನದವನು, ಇವನಿಗೆ ಡ್ರೆಸ್ ಕೋಡ್ ಸಹ ತಲೆಯಲ್ಲಿ ಇಲ್ಲ. ಸೊಂಟ(ಹೊಕ್ಕಳು) ಕಾಣುವ ಹಾಗೆ ಡ್ರೆಸ್ ಹಾಕಿಕೊಂಡು ಬರ್ತಾನೆ ಎಂದು ಲೇವಡಿ ಮಾಡಿದರು. ಧರ್ಮಸ್ಥಳದಲ್ಲಿ ಎಸ್‌ಐಟಿ ತನಿಖೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ಅದೇನೂ ರಾಜಕಾರಣ‌ ಇದೆ ನನಗೆ ಗೊತ್ತಿಲ್ಲ. ನಾನು ಮಾಧ್ಯಮದಲ್ಲಿ ನೋಡಿದ್ದೇನೆ, ಧರ್ಮಾಧಿಕಾರಿಯವರ ಹೆಸರಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಅನಿಸುತ್ತಿದೆ ಎಂದರು.

ರೈಲು ಮಾರ್ಗದ ಸಮೀಕ್ಷೆಗೆ ಆದೇಶ: ಆಲಮಟ್ಟಿ ಹಾಗೂ ಆಲಮಟ್ಟಿ ಡ್ಯಾಂ ಸೈಟ್ ಸಂಪರ್ಕ ಕಲ್ಪಿಸಲು ಅಡ್ಡಿಯಾಗಿರುವ ಆಲಮಟ್ಟಿ ರೈಲು ನಿಲ್ದಾಣದ ಬಳಿ ಅಂಡರ್‌ ಪಾಸ್‌ ನಿರ್ಮಿಸುವುದಾಗಿ ಭರವಸೆ ನೀಡಿದರು. ಆಲಮಟ್ಟಿಗೆ ಭೇಟಿ ನೀಡಿದ ಅವರು ರೈಲ್ವೆಯ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು. ಅಂಡರ್ ಪಾಸ್ ನಿರ್ಮಾಣದ ಕುರಿತು ನೈರುತ್ಯ ರೇಲ್ವೆ ಜನರಲ್ ಮ್ಯಾನೇಜರ್ ಜೊತೆ ಚರ್ಚಿಸುವುದಾಗಿ ತಿಳಿಸಿದರು. ಅಂಡರ್ ಪಾಸ್ ನಿರ್ಮಾಣಕ್ಕೆ ತಾಂತ್ರಿಕ ತೊಂದರೆ ಬಗ್ಗೆ ಅಧಿಕಾರಿಗಳು ಹೇಳಿದ್ದು, ಅದನ್ನು ಬಗೆಹರಿಸಿ ನಿರ್ಮಿಸಲು ಸೂಚಿಸಿದ್ದೇನೆ.

ಇಲಾಖೆಯ ಜನರಲ್ ಮ್ಯಾನೇಜರ್ ಜೊತೆ ಮಾತನಾಡುವೆ. ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಆಲಮಟ್ಟಿ-ಯಾದಗಿರಿ ರೈಲು ಮಾರ್ಗ ಸಮೀಕ್ಷೆಗೆ ಆದೇಶಿಸಲಾಗಿದೆ ಎಂದರು. ಅರಳದಿನ್ನಿಯ ಸ್ಮಶಾನ ದಾರಿಯ ಸಮಸ್ಯೆ ಬಗೆಹರಿಸುವಿಕೆ, ಬೇನಾಳ ರೈಲು ನಿಲ್ದಾಣದ ದುರಸ್ತಿ, ವಂದಾಲ ಬಳಿ ರೈಲ್ವೆ ಓವರ್ ಬ್ರಿಜ್ ನಿರ್ಮಾಣ ಮಾಡಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಆಲಮಟ್ಟಿ, ಬೇನಾಳ, ವಂದಾಲ ಗ್ರಾಮಸ್ಥರು ವಿವಿಧ ಬೇಡಿಕೆಗಳ ಮನವಿಯನ್ನು ಸಂಸದರು ಹಾಗೂ ರೈಲ್ವೆ ಅಧಿಕಾರಿಗಳಿಗೆ ಸಲ್ಲಿಸಿದರು. ಆಲಮಟ್ಟಿಯಲ್ಲಿ ಹುಬ್ಬಳ್ಳಿ-ನಿಜಾಮುದ್ದೀನ್ ಎಕ್ಸಪ್ರೆಸ್ ರೈಲು ಹಾಗೂ ಯಶವಂತಪುರ-ಬಾರಮೇರ್ ರೈಲುಗಳನ್ನು ನಿಲ್ಲಿಸಬೇಕು, ಬೇನಾಳ ರೈಲು ನಿಲ್ದಾಣದ ಫ್ಲಾಟ್ ಫಾರ್ಮ್ ನವೀಕರಣಗೊಳಿಸಬೇಕು, ವಂದಾಲ ಬಳಿ ರೈಲ್ವೆ ಓವರ್ ಬ್ರಿಜ್ ನಿರ್ಮಿಸುವಂತೆ ಮನವಿ ಸಲ್ಲಿಸಿದರು.