ರಾಜ್ಯ ಹಾಗೂ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ದ್ವೇಷದ ರಾಜಕೀಯಕ್ಕೆ ಅಂತ್ಯ ಹಾಡುವ ದಿನ ದೂರವಿಲ್ಲ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ.

ನೆಲಮಂಗಲ (ಆ.07): ರಾಜ್ಯ ಹಾಗೂ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ದ್ವೇಷದ ರಾಜಕೀಯಕ್ಕೆ ಅಂತ್ಯ ಹಾಡುವ ದಿನ ದೂರವಿಲ್ಲ. ಮುಂದಿನ ದಿನಗಳಲ್ಲಿ ನಡೆಯುವ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೆಸೆಯುವ ಕೆಲಸ ರಾಜ್ಯದ ಜನತೆ ಮಾಡಲಿದ್ದಾರೆ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಆಯೋಜಿಸಿದ್ದ ಜನರೊಂದಿಗೆ ಜನತಾದಳ ಹಾಗೂ ಸದಸ್ಯತ್ವ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ‌ ಜೆಡಿಎಸ್ ಅತ್ಯಂತ ಪ್ರಬಲ ಹಾಗೂ ಜನ ವಿಶ್ವಾಸಿ ಪಕ್ಷ. ಪಕ್ಷವನ್ನು ಮತ್ತಷ್ಟು ಸಂಘಟಿಸಿ ಬಲಪಡಿಸಲಾಗುತ್ತಿದೆ. ಭಾಷಣ ಮಾಡಿದ ಮಾತ್ರಕ್ಕೆ ಪಕ್ಷ ಸಂಘಟನೆ ಮಾಡಲು ಸಾಧ್ಯವಿಲ್ಲ. ಕಾರ್ಯಕರ್ತರನ್ನು ಸಂಘಟಿಸಿ ತಳಮಟ್ಟದಿಂದ ಪಕ್ಷವನ್ನು ಕಟ್ಟುವ ಕೆಲಸ ಮಾಡಬೇಕು ಎಂದರು.

ಬೈಕ್ ಜಾಥಾ: ಕಾರ್ಯಕ್ರಮಕ್ಕೂ ಮೊದಲು ನಿಖಿಲ್ ನಗರದ ವೀವರ್ ಕಾಲೋನಿಯಿಂದ ಎಂವಿಎಂ ಕನ್ವೆನ್ಷನ್ ಹಾಲ್‌ವರೆಗೂ ಪಕ್ಷದ ಸಾವಿರಾರು ಕಾರ್ಯಕರ್ತರ ಜೊತೆಗೂಡಿ ಬೈಕ್ ಜಾಥಾ ನಡೆಸಿದರು. ಪಕ್ಷದ ಕಾರ್ಯಕರ್ತರು ಹೆದ್ದಾರಿಯಲ್ಲಿ ಪಕ್ಷದ ಬಾವುಟ ಹಿಡಿದು ಜೈಕಾರ ಕೂಗಿದರು. ನಿಖಿಲ್‌ಗೆ ಮಾರ್ಗ ಮಧ್ಯದ ಬಸ್ ನಿಲ್ದಾಣ ಬಳಿ ಕ್ರೈನ್ ಮೂಲಕ ಬೃಹತ್ ಹೂಮಾಲೆ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದರು.

ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಬೇಕು: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ನಂಬಿದರೆ ಬದುಕಿಲ್ಲ. ಜನರಿಗೆ ತಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳು ಬೇಕು ಎಂದು ಹೇಳಿದರು. ಈ ವಿಚಾರವನ್ನು ಮುಂದಿಟ್ಟುಕೊಂಡು ನಿರೀಕ್ಷಿತ ಪಂಚಾಯಿತಿ, ತಾಪಂ, ಜಿಪಂ, ಚುನಾವಣೆಗಳಿಗೆ ಹೆಚ್ಚಿನ ಗೆಲುವಿಗಾಗಿ ಸಂಘಟನೆ ಮಾಡಿದರೆ ಅದು ಮುಂದಿನ ವಿಧಾನಸಭೆ ಚುನಾವಣೆಗೆ ಶಕ್ತಿಯಾಗಲಿದೆ. ಉತ್ತರ ಕನ್ನಡ ಜಿಲ್ಲೆಗೆ ಮತ್ತೆ ಮತ್ತೆ ಬರಲಿದ್ದೇನೆ. ಎಲ್ಲರೂ ಕೆಲಸ ಮಾಡುವ ಮೂಲಕ ನೂರಕ್ಕೆ ನೂರರಷ್ಟು ಗೆಲುವಿಗೆ ಕೈಜೋಡಿಸಬೇಕಿದೆ ಎಂದರು.

ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಾರರಿರುವ ಈ ಭಾಗದಲ್ಲಿ ಒಂದೇ ಒಂದು ಕೋಲ್ಡ್‌ ಸ್ಟೋರೇಜ್ ಇಲ್ಲ ಎಂದು ತಿಳಿಸಿದ್ದಾರೆ. ಸರ್ಕಾರ ಜನರ ಇಂಥ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಕಳೆದ ಬಾರಿ ಸೂರಜ ನಾಯ್ಕರ ಸೋಲನ್ನು ಸೋಲೆಂದು ಭಾವಿಸಬಾರದು. ಕ್ಷೇತ್ರದಲ್ಲಿ ಜನತಾದಳ ಗಟ್ಟಿಯಾಗಿದ್ದು ಗೆಲುವಿನ ಶಕ್ತಿಯಿದೆ. ಮುಂದಿನ ದಿನದಲ್ಲಿ ಹೆಚ್ಚಿನ ಸ್ಥಾನಮಾನಗಳನ್ನು ಗಳಿಸಬೇಕಿದೆ. ಕುಮಾರಸ್ವಾಮಿಯವರ ಇಚ್ಛೆಯೂ ಇದೇ ಆಗಿದೆ. ಇದಕ್ಕಾಗಿ ಬೂತ್ ಮಟ್ಟದಲ್ಲಿ ಕೆಲಸ ಮಾಡಿ ಎಂದರು.