ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಾಗೂ ನಾವು ಆಲಮಟ್ಟಿ ಡ್ಯಾಂನ್ನು 524.60ಮೀ ಏರಿಸಬೇಕು ಎಂದು ಸಂಕಲ್ಪ ಮಾಡಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ವಿಜಯಪುರ (ಸೆ.07): ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಾಗೂ ನಾವು ಆಲಮಟ್ಟಿ ಡ್ಯಾಂನ್ನು 524.60ಮೀ ಏರಿಸಬೇಕು ಎಂದು ಸಂಕಲ್ಪ ಮಾಡಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ, ನಾನು ಕೇಂದ್ರ ಸಚಿವರನ್ನು ಭೇಟಿಯಾಗಿ ಒತ್ತಾಯಿಸಿದ್ದೇವೆ. ಈಗಾಗಲೇ ಐದು ಬಾರಿ ಸಭೆ ಮಾಡಿದ್ದು, ಎರಡು ಬಾರಿ ಕೇಂದ್ರದಿಂದ ಸಭೆ ನಿಗದಿ ಮಾಡಿದ್ದರು. ಒಮ್ಮೆ ಆಂಧ್ರದವರು ಹಾಗೂ ಮತ್ತೊಮ್ಮೆ ಮಹಾರಾಷ್ಟ್ರದವರು ಮುಂದಕ್ಕೆ ಹಾಕಿಸಿದ್ದಾರೆ ಎಂಬ ಮಾಹಿತಿ ಇದೆ ಎಂದು ಹೇಳಿದರು.
ಆಲಮಟ್ಟಿ ಎತ್ತರ ಆಗದ ಕಾರಣ 100ಕ್ಕೂ ಅಧಿಕ ಟಿಎಂಸಿ ನೀರು ಸಮುದ್ರ ಸೇರುತ್ತಿದೆ. ಯುಕೆಪಿ ಮೂರನೇ ಹಂತದ ಯೋಜನೆ ಮಾಡುವ ಕುರಿತಾಗಿ ಸಿಎಂ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಈಗಾಗಲೇ ಸಚಿವರೆಲ್ಲ ಸೇರಿ ಚರ್ಚೆ ಮಾಡಿ, ರೈತರೊಂದಿಗೆ ಮಾತನಾಡಿದ್ದೇವೆ. ಪರಿಹಾರ ಹಾಗೂ ಭೂಸ್ವಾಧೀನ ವಿಚಾರವಾಗಿ 20 ಸಾವಿರ ರೈತರ ಪ್ರಕರಣಗಳು ಕೋರ್ಟ್‌ನಲ್ಲಿವೆ. ಇದರಲ್ಲಿ ಕೆಲವು ವಕೀಲರು ದಾರಿ ತಪ್ಪಿಸುತ್ತಿದ್ದಾರೆ. ಒಂದೇ ಬಾರಿಗೆ ಇದನ್ನು ಬಗೆಹರಿಸಬೇಕು ಎಂದು ನಾವು ತೀರ್ಮಾನ ಮಾಡಿದ್ದು, ಮೂರ್ನಾಲ್ಕು ದಿನಗಳಲ್ಲಿ ಒಂದು ಬೆಲೆ ನಿಗದಿ ಮಾಡಿ ಭೂಸ್ವಾಧೀನ ಮಾಡಲಿದ್ದೇವೆ ಎಂದರು.
ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ತಿಮ್ಮಾಪುರ ಸೇರಿದಂತೆ ಹಲವರು ಬೇರೆ ಬೇರೆ ಸಲಹೆಗಳನ್ನು ಕೊಟ್ಟಿದ್ದಾರೆ. ರೈತರು ಒಂದೇ ಬಾರಿ ಪರಿಹಾರ ಕೊಡುವ ಕೆಲಸಕ್ಕೆ ಒಪ್ಪಿಕೊಳ್ಳಬೇಕು. ಇದೇ ಅವಧಿಯಲ್ಲಿ ಇದನ್ನು ಪೂರ್ಣಗೊಳಿಸಬೇಕು ಎಂಬ ಗುರಿ ಇದೆ. ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ ರೈತರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಪಿಪಿಪಿ ಮೆಡಿಕಲ್ ಕಾಲೇಜು ವಿಚಾರದ ಬಗ್ಗೆ ಮಾತನಾಡಿದ ಅವರು, ಪ್ರತಿ ಜಿಲ್ಲೆಗೆ ಒಂದು ಮೆಡಿಕಲ್ ಕಾಲೇಜು ಇರಬೇಕೆಂಬ ಉದ್ದೇಶ ನಮ್ಮದು. ಒಂದು ಆಸ್ಪತ್ರೆ ಇರಬೇಕು ಎಂಬುದಾಗಿದೆ. ಪಿಪಿಪಿ ಮಾದರಿಯಲ್ಲಿ ಮಾಡಬಹುದು ಎಂದು ಕೇಂದ್ರ ಸರ್ಕಾರ ಮಾರ್ಗದರ್ಶನ ಕೊಟ್ಟಿದೆ. ಪಿಪಿಪಿ ಕಾಲೇಜು ಮಾಡಬೇಕು ಎಂದು ಹೇಳಿದ್ದರಿಂದ ಮಾಡಲು ನಾವು ಮುಂದಾಗುತ್ತಿದ್ದೇವೆ. ಪಿಪಿಪಿ ಇದ್ದರೂ ಸರ್ಕಾರಿ ಮೆಡಿಕಲ್ ಕಾಲೇಜು ರೀತಿಯಲ್ಲೇ ಇರಲಿದೆ. ಇದರಲ್ಲಿ ಯಾವುದೇ ಪ್ರಭಾವಿಗಳ ಪ್ರಭಾವ ನಡೆಯುವುದಿಲ್ಲ. ಬಡವರಿಗೆ, ಅರ್ಹರಿಗೆ ಸೀಟುಗಳು ಸಿಗಲಿವೆ. ಪಿಪಿಪಿ ಮಾದರಿ ಕಾಲೇಜಿಗೆ ನೀವು ಅರ್ಜಿ ಹಾಕಿದರೂ ನಿಮಗೂ ಅವಕಾಶ ಕೊಡಲಾಗುವುದು ಎಂದು ಸ್ಪಷ್ಟಪಡಿಸಿದರು.
