ರಾಜ್ಯ ಸರ್ಕಾರ ಹಾಗೂ ನಾವೆಲ್ಲ ಆಲಮಟ್ಟಿ ಜಲಾಶಯವನ್ನು 524.60 ಮೀ. ಏರಿಸಬೇಕು ಎಂದು ಸಂಕಲ್ಪ ಮಾಡಿದ್ದೇವೆ. ಆದರೆ, ಇದಕ್ಕೆ ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ ಅಡ್ಡಿಯಾಗಿವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಆಲಮಟ್ಟಿ / ಕೊಪ್ಪಳ (ಸೆ.07): ರಾಜ್ಯ ಸರ್ಕಾರ ಹಾಗೂ ನಾವೆಲ್ಲ ಆಲಮಟ್ಟಿ ಜಲಾಶಯವನ್ನು 524.60 ಮೀ. ಏರಿಸಬೇಕು ಎಂದು ಸಂಕಲ್ಪ ಮಾಡಿದ್ದೇವೆ. ಆದರೆ, ಇದಕ್ಕೆ ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ ಅಡ್ಡಿಯಾಗಿವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಆಲಮಟ್ಟಿ ಜಲಾಶಯವನ್ನು ಎತ್ತರಿಸುವ ಕುರಿತು ಎರಡು ಬಾರಿ ಕೇಂದ್ರ ಸರ್ಕಾರದಿಂದ ಸಭೆ ನಿಗದಿ ಮಾಡಲಾಗಿತ್ತು. ಆಗ ಒಮ್ಮೆ ಆಂಧ್ರ ಪ್ರದೇಶ, ಮತ್ತೊಮ್ಮೆ ಮಹಾರಾಷ್ಟ್ರ ಸರ್ಕಾರದ ಕಾರಣದಿಂದಾಗಿ ಸಭೆ ನಡೆಯದೆ ಮುಂದಕ್ಕೆ ಹೋಯಿತು. ಆಲಮಟ್ಟಿ ಡ್ಯಾಂ ಎತ್ತರ ಆಗದ ಕಾರಣ 100ಕ್ಕೂ ಅಧಿಕ ಟಿಎಂಸಿ ನೀರು ಸಮುದ್ರ ಪಾಲಾಗುತ್ತದೆ ಎಂದು ತಿಳಿಸಿದರು.

ಜಲಾಶಯದ ಕುರಿತು ಚರ್ಚಿಸಲು ಆಂಧ್ರಪ್ರದೇಶ ಸಿಎಂಗೆ ಸಮಯ ಕೇಳಿದ್ದೇನೆ. ಸಮಯ ನಿಗದಿಯಾದ ನಂತರ ನವಲಿ ಸಮನಾಂತರ ಜಲಾಶಯ ಮತ್ತು ಇತರೆ ವಿಷಯಗಳನ್ನು ಪ್ರಸ್ತಾಪಿಸಲಾಗುವುದು. ಶೀಘ್ರವೇ ತುಂಗಭದ್ರಾ ಗೇಟ್‌ಗಳ ದುರಸ್ತಿ ಮಾಡಲಾಗುವುದು. ಸಾರ್ವಜನಿಕರು ನಮಗೆ ಸಹಕಾರ ನೀಡಬೇಕು ಎಂದು ಡಿಕೆಶಿ ಮನವಿ ಮಾಡಿದರು. ಈ ವೇಳೆ ಸಚಿವ ಎಂ.ಬಿ.ಪಾಟೀಲ, ಸಂಸದ ರಾಜಶೇಖರ ಹಿಟ್ನಾಳ್, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಎಚ್.ಆರ್. ಗವಿಯಪ್ಪ, ಮಾಜಿ ಸಂಸದ ಕರಡಿ ಸಂಗಣ್ಣ ಇದ್ದರು.

500 ಎಂಜಿನಿಯರ್‌ಗಳ ನೇಮಕ: ನೂತನವಾಗಿ ರಚನೆಯಾಗಿರುವ ಐದು ನಗರ ಪಾಲಿಕೆಯ ಆಡಳಿತ ನಿರ್ವಹಣೆ, ಅಧಿಕಾರಿ ಸಿಬ್ಬಂದಿಯ ಮೂರು ತಿಂಗಳ ವೇತನಕ್ಕೆ 300 ಕೋಟಿ ರು. ಬಿಡುಗಡೆಯೊಂದಿಗೆ 500 ಎಂಜಿನಿಯರ್‌ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕೇಂದ್ರ ಕಚೇರಿಯಲ್ಲಿ ಬುಧವಾರ ಪೂಜೆ ಸಲ್ಲಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ನಾಮಫಲಕ ಅನಾವರಣ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಪಾಲಿಕೆಗಳ ಗಡಿ ಗುರುತಿಸುವ ಕಾರ್ಯ ಬುಧವಾರದಿಂದಲೇ ಆರಂಭಿಸಲಾಗಿದೆ. ಎಲ್ಲಾ ಪಾಲಿಕೆಗಳ ಗಡಿ ಭಾಗಗಳಲ್ಲಿ ಗಡಿ ಗೋಪುರಗಳನ್ನು ನಿರ್ಮಾಣ ಮಾಡಲಾಗುವುದು.

ಐದು ಪಾಲಿಕೆಗಳ ಆಡಳಿತಾತ್ಮಕ ವೆಚ್ಚ, ಸಂಬಳ ಹಾಗೂ ನಿವೃತ್ತಿ ವೇತನಕ್ಕೆ 300 ಕೋಟಿ ರು. ಮೊತ್ತವನ್ನು ಬಿಬಿಎಂಪಿಯಿಂದ ನೀಡಲಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಪ್ರತ್ಯೇಕವಾಗಿ ಅನುದಾನ ನೀಡಲಾಗುವುದು ಎಂದು ತಿಳಿಸಿದರು. ಐದು ನಗರ ಪಾಲಿಕೆಗೆ ನೇಮಿಸಿದ ಆಯುಕ್ತರು ಅಧಿಕಾರ ವಹಿಸಿಕೊಂಡಿದ್ದಾರೆ. ಐದು ನಗರ ಪಾಲಿಕೆಗೆ ಆಡಳಿತಾಧಿಕಾರಿಯಾಗಿ ಜಿಬಿಎ ಮುಖ್ಯ ಆಯುಕ್ತರಾಗಿರುವ ಎಂ.ಮಹೇಶ್ವರ್‌ ರಾವ್‌ ಅವರನ್ನು ನೇಮಕ ಮಾಡಲಾಗಿದೆ. ಐದು ಪಾಲಿಕೆಗೆ ಚುನಾವಣೆ ನಡೆದು ಮೇಯರ್‌ ಆಯ್ಕೆವರೆಗೆ ಮಹೇಶ್ವರ್ ರಾವ್‌ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು.