ಸಾಮೂಹಿಕ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಮುಸಲ್ಮಾನರು ದೂರ ಇರುವುದು ಒಳ್ಳೆಯದು. ಪ್ರಚೋದನೆ ನೀಡುವವರನ್ನೂ ಪೊಲೀಸರಿಗೆ ಹಿಡಿದುಕೊಡುವಂತೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಮಂಡ್ಯ/ಮದ್ದೂರು (ಸೆ.10): ಸಾಮೂಹಿಕ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಮುಸಲ್ಮಾನರು ದೂರ ಇರುವುದು ಒಳ್ಳೆಯದು. ಪ್ರಚೋದನೆ ನೀಡುವವರನ್ನೂ ಪೊಲೀಸರಿಗೆ ಹಿಡಿದುಕೊಡುವಂತೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಗಣೇಶ ವಿಸರ್ಜನೆ ಸಂಬಂಧ ಶಾಂತಿಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮೆರವಣಿಗೆ ಸಾಗುವಾಗ ಘೋಷಣೆ ಕೂಗಿದರೆ ಆ ಕಡೆ ತಿರುಗಿಯೂ ನೋಡಬೇಡಿ. ಸಾಧ್ಯವಾದರೆ ದೂರದಿಂದ ಮೆರವಣಿಗೆ ನೋಡಿ ಸಂತೋಷ ಪಡಿ. ಒಳ್ಳೆಯದನ್ನು ಮಾಡುವ ಮನಸ್ಸಿದ್ದರೂ ಅಲ್ಲಿಗೆ ಹೋಗಬೇಡಿ. ಒಳ್ಳೆಯದನ್ನು ಮಾಡಲು ಹೋಗಿ ಅಲ್ಲಿ ಇನ್ನೊಂದು ಆಗಬಹುದು. ಹಾಗಾಗಿ ಗಣೇಶೋತ್ಸವದಿಂದ ದೂರ ಉಳಿಯುವಂತೆ ಮುಸ್ಲಿಂ ಮುಖಂಡರಿಗೆ ಹೇಳಿದರು.
ನಾಗಮಂಗಲದಲ್ಲಿ ಈ ಬಾರಿ ಗಣೇಶೋತ್ಸವ ಸಮಯದಲ್ಲಿ ಮುಸ್ಲಿಮರು ಅರ್ಧದಿನ ಅಂಗಡಿ ಮುಂಗಟ್ಟುಗಳನ್ನೇ ಮುಚ್ಚಿದ್ದರು. ಇದರಿಂದ ಗಣೇಶ ವಿಸರ್ಜನೆ ಶಾಂತಿಯುತವಾಗಿ ನಡೆಯಿತು. ಅದೇ ರೀತಿ ಮದ್ದೂರಿನಲ್ಲಿರುವ ಮುಸಲ್ಮಾನರೂ ಬುಧವಾರದ ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಸಹಕರಿಸಬೇಕು. ಯಾರಾದರೂ ಪ್ರಚೋದನೆ ನೀಡಲು ಮುಂದಾದರೆ, ಪ್ರಚೋದನೆ ನೀಡಲು ಬರುವವರನ್ನೂ ನೀವೇ ಪೊಲೀಸರಿಗೆ ಹಿಡಿದುಕೊಡುವಂತೆ ಸೂಚಿಸಿದರು. ನಿಮ್ಮಲ್ಲಿ ಸೌಹಾರ್ದತೆಯನ್ನು ಕಾಪಾಡಿಕೊಂಡು ಹೋಗಬಹುದೆಂಬ ಮನಸ್ಸಿದ್ದರೂ ನಿಮ್ಮ ಮಕ್ಕಳಲ್ಲಿ ಆ ಮನಸ್ಸು ಇಲ್ಲದಿರಬಹುದು. ಅವರಿಗೂ ತಿಳಿವಳಿಕೆ ಹೇಳಿ ಶಾಂತಿಯನ್ನು ಕದಡದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಿದರು.
ಈಗಾಗಲೇ ಕೆರಗೋಡು, ನಾಗಮಂಗಲ, ಈಗ ಮದ್ದೂರಿನಲ್ಲಿ ಸಂಘರ್ಷಗಳು ನಡೆದಿವೆ. ಈ ಜಿಲ್ಲೆಯಲ್ಲಿ ಮತ್ತೊಮ್ಮೆ ಗಲಭೆ ಮರುಕಳಿಸಬಾರದು. ಜಿಲ್ಲಾಧಿಕಾರಿ, ಆರಕ್ಷಕ ಅಧೀಕ್ಷಕರು ಇದರ ಜವಾಬ್ದಾರಿ ತೆಗೆದುಕೊಳ್ಳಬೇಕು. ಹಿಂದೂ, ಮುಸ್ಲಿಂ ಸಮುದಾಯದವರು ಪರಸ್ಪರ ಸಹಕಾರ ಕೊಡಬೇಕು. ಪ್ರಚೋದನೆ ಮಾಡುವವರನ್ನ ದೂರವಿಡುವಂತೆ ಹೇಳಿದರು. ಯಾರೇ ತಪ್ಪು ಮಾಡಿದ್ದರೂ ಕಟ್ಟು ನಿಟ್ಟಿನ ಕ್ರಮ ಆಗಲಿದೆ. ವಿರೋಧ ಪಕ್ಷದವರು ಸತ್ಯ ಒಪ್ಪಿಕೊಂಡರೆ ಅವರಿಗೆ ಕೆಲಸವೇ ಇರುವುದಿಲ್ಲ. ಏನಾದರೂ ಎಳೆಯಬೇಕು ಎಂದು ವಿರೋಧ ಪಕ್ಷದವರು ನೋಡುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಪೊಲೀಸರ ಕಾರ್ಯವೈಖರಿಯನ್ನು ಹೊಗಳಿ, ವಿಪಕ್ಷದಲ್ಲಿದ್ದಾಗ ತೆಗಳುತ್ತಿದ್ದಾರೆ ಎಂದು ದೂಷಿಸಿದರು.
ಮದ್ದೂರು ಶಾಸಕ ಉದಯ್ ವಾರಕ್ಕೆ ಎರಡು ಮೂರು ದಿನ ಸ್ಥಳೀಯರಿಗೆ ಸಿಗುತ್ತಿದ್ದರು. ಈಗ ಮಗಳ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ. ಆದರೆ, ಉದಯ್ ಕಾಣೆಯಾಗಿದ್ದಾರೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಂಗ್ಯ ಮಾಡುತ್ತಿದ್ದಾರೆ. ನಾನು ಘಟನೆ ನಡೆದ ಸ್ಥಳಕ್ಕೆ ಹೋಗಿದ್ದೆ. ತಪ್ಪು ನಡೆದಿರುವುದು ನಿಜ. ಸ್ಥಳೀಯ ಪೊಲೀಸರು, ಜನಪ್ರತಿನಿಧಿಗಳು, ಮುಖಂಡರು ಎಚ್ಚರಿಕೆ ವಹಿಸಿದರೆ ಇಂತಹ ಘಟನೆಗಳು ನಡೆಯುವುದಿಲ್ಲ ಎಂದರು. ಮದ್ದೂರಿನಲ್ಲಿ ಎಂದೂ ಇಂತಹ ಘಟನೆ ನಡೆಯದಿದ್ದರಿಂದ ಮುನ್ನೆಚ್ಚರಿಕೆ ವಹಿಸುವಲ್ಲಿ ಪೊಲೀಸರು ಎಡವಿದ್ದಾರೆ. ಘಟನೆ ಬೆನ್ನಲ್ಲೇ ಯಾವುದೇ ಮುಲಾಜಿಗೆ ಒಳಗಾಗದೆ ಕ್ರಮ ತೆಗೆದುಕೊಳ್ಳಲಾಗಿದೆ.
ಹಿಂದೂ-ಮುಸ್ಲಿಮರು ಪರಸ್ಪರ ಸೌಹಾರ್ದತೆ ಜೀವನ ನಡೆಸಬೇಕು. ಮತ್ತೆಂದಿಗೂ ಎರಡೂ ಸಮುದಾಯಗಳ ನಡುವೆ ಕಲಹ ಏರ್ಪಡದಂತೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದರು. ಸಭೆಯಲ್ಲಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಮದ್ದೂರು ನಗರಸಭೆ ಅಧ್ಯಕ್ಷೆ ಕೋಕಿಲಾ, ಉಪಾಧ್ಯಕ್ಷ ಪ್ರಸನ್ನ ಇತರರಿದ್ದರು.