ರಾಹುಲ್ ಗಾಂಧಿ ಅವರ ಮತದಾರರ ಪಟ್ಟಿ ಅಕ್ರಮ ಆರೋಪದ ವಿರುದ್ಧ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದ ಸಹಕಾರ ಸಚಿವ ಕೆ.ಎನ್. ರಾಜಣ್ಣ ರಾಜೀನಾಮೆ ನೀಡಲಿದ್ದಾರೆ. ಚುನಾವಣಾ ಅಕ್ರಮಗಳನ್ನು ಒಪ್ಪಿಕೊಂಡ ರಾಜಣ್ಣ, ತಮ್ಮ ಸರ್ಕಾರದ ಅವಧಿಯಲ್ಲಿಯೇ ಲೋಪಗಳಾಗಿವೆ ಎಂದಿದ್ದು ಪಕ್ಷಕ್ಕೆ ಮುಜುಗರ ತಂದಿತ್ತು.

ಬೆಂಗಳೂರು (ಆ.11): ರಾಜ್ಯದಲ್ಲಿ ಯಾವುದೇ ಫೀಲ್ಟರ್ ಇಲ್ಲದೇ ಮಾತನಾಡುವ ಹಾಗೂ ಎಲ್ಲರ ವಿರುದ್ಧವಾಗಿಯೂ ನೇರವಾಗಿ ಮಾತನಾಡುವ ಸಿಎಂ ಸಿದ್ದರಾಮಯ್ಯ ಆಪ್ತ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ರಾಜೀನಾಮೆ ನೀಡಲಿದ್ದಾರೆ. ರಾಹುಲ್ ಗಾಂಧಿ ಅವರ ಹೋರಾಟಕ್ಕೆ ವಿರುದ್ಧವಾಗಿ ಮಾತನಾಡಿದ್ದೇ, ರಾಜಣ್ಣನ ರಾಜಕೀಯ ಜೀವನಕ್ಕೆ ಉರುಳಾಯ್ತಾ ಎಂಬ ಮಾತುಗಳು ಕೇಳಿಬರುತ್ತಿವೆ.

ರಾಹುಲ್ ಗಾಂಧಿ ಅವರು ವೋಟರ್ ಐಡಿ ಮತ್ತು ಮತದಾನ ವಿಚಾರದಲ್ಲಿ ಅಕ್ರಮ ನಡೆದಿದೆ ಎಂದು ಹೋರಾಟ ಮಾಡಿದ್ದರು. ಆದರೆ, ಸಹಕಾರ ಸಚಿವ ಕೆ.ಎನ್. ರಾಜಣ್ಣ ಇದನ್ನು ವಿರೋಧಿಸಿ, ಆಗ ನಮ್ಮ ಸರ್ಕಾರವೇ ಅಧಿಕಾರದಲ್ಲಿತ್ತು. ನಮಗೇ ಅವಮಾನ ಆಗಬೇಕು ಎಂದಿದ್ದರು. ಈ ಹಿನ್ನೆಲೆಯಲ್ಲಿ ವೋಟರ್ ಐಡಿ ವಿಷಯದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷದ ಶಿಸ್ತು ಉಲ್ಲಂಘಿಸಿದ ಆರೋಪ ಹಿನ್ನೆಲೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ವಿರುದ್ಧ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲಿಯೇ ಅಧಿವೇಶನದ ಮೊದಲ ದಿನವೇ ಕೆ.ಎನ್. ರಾಜಣ್ಣ ರಾಜೀನಾಮೆ ಸಲ್ಲಿಕೆ ಮಾಡಲಿದ್ದಾರೆ.

ಕೆ.ಎನ್. ರಾಜಣ್ಣ ಹೇಳಿದ್ದೇನು?

ಲೋಕಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದ್ಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ರಾಜಣ್ಣ ಅವರು, ವೋಟರ್ ಲಿಸ್ಟ್‌ನಲ್ಲಿ ಅಕ್ರಮಗಳು ನಡೆದಿರುವುದು ಸತ್ಯ. ಒಬ್ಬ ವ್ಯಕ್ತಿ ಮೂರು ಕಡೆಗಳಲ್ಲಿ ವೋಟರ್ ಲಿಸ್ಟ್‌ಗೆ ಸೇರಿದ್ದು, 10-15 ಜನರಿರುವ ಕಡೆ 60 ಜನರನ್ನು ಸೇರಿಸಿರುವುದು, ಅಡ್ರೆಸ್, ತಂದೆಯ ಹೆಸರು ಇಲ್ಲದಿರುವುದು ನಮ್ಮ ಕಣ್ಮುಂದೆಯೇ ನಡೆದಿದೆ. ಇದಕ್ಕೆ ನಾವೇ ಕಾರಣ, ಏಕೆಂದರೆ ಡ್ರಾಫ್ಟ್ ಎಲೆಕ್ಟೊರಲ್ ರೋಲ್ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಲಿಲ್ಲ ಎಂದು ಒಪ್ಪಿಕೊಂಡರು. ಮುಂದೆ ಚುನಾವಣೆಗಳಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ಮಾರ್ಗಸೂಚಿಗಳನ್ನು ಅನುಸರಿಸುವುದಾಗಿ ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ನಮ್ಮ ಕಣ್ಮುಂದೆನೇ ನಡೆದಿವೆಯಲ್ಲ, ನಮಗೇ ಅವಮಾನ ಆಗಬೇಕು. ನಾವು ನೋಡಿಕೊಳ್ಳಲಿಲ್ಲವಲ್ಲ ಅಂತ..ಮೊದಲೆಲ್ಲಾ ಡ್ರಾಪ್ ಎಲೆಕ್ಷನ್ ಕಮಿಷನ್ ಕರೆದು ರೊಲ್ ಮಾಡ್ತಿದ್ರು. ಆದರೆ ಅವರು ಮಾಡಬಾರದ್ದನ್ನ ಮಾಡಿ ವೋಟರ್ ಲಿಸ್ಟ್ ಬದಲಾವಣೆ ಮಾಡಿ ಪ್ರಧಾನ ಮಂತ್ರಿ ಆಗಿದ್ದಾರೆ. ಅದು ನೂರಕ್ಕೆ ನೂರು ಸತ್ಯ. ಅದರಲ್ಲಿ ಎರಡನೇ ಮಾತಿಲ್ಲ ಎಂದಿದ್ದರು.

ಸಚಿವ ಸ್ಥಾನಕ್ಕೆ ರಾಜೀನಾಮೆ:
ಇನ್ನು ಸಹಕಾರ ಸಚಿವರಾಗಿದ್ದ ರಾಜಣ್ಣ ಅವರು, ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಕೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ರಾಜೀನಾಮೆ ಸಲ್ಲಿಕೆ ಕೇವಲ ಸಚಿವ ಸ್ಥಾನಕ್ಕೆ ಮಾತ್ರ ಆಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟದ ಮುಖ್ಯಸ್ಥರಾದ ಮುಖ್ಯಮಂತ್ರಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಲಿದ್ದಾರೆ. ಇದರ ಜೊತೆಗೆ ಸಾಮಾನ್ಯ ಶಾಸಕರಾಗಿ ಅವರು ಮುಂದುವರೆಯಲಿದ್ದಾರೆ.

ಪಕ್ಷಕ್ಕೆ ವಿರುದ್ಧವಾಗಿ ಹೇಳಿಕೆ:

ಕಾಂಗ್ರೆಸ್‌ನಲ್ಲಿ ಸೆಪ್ಟಂಬರ್ ಕ್ರಾಂತಿ ಆಗಲಿದೆ ಎಂದು ಹೇಳಿ, ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದ ಕೆ.ಎನ್. ರಾಜಣ್ಣ ಹಿರಿಯ ನಾಯಕರಿಂದ ಅಂತರ ಕಾಯ್ದುಕೊಂಡೇ ಬಂದಿದ್ದರು. ತುಮಕೂರು ಮೂಲದವರಾದರೂ ಹಾಸನ ಜಿಲ್ಲಾ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದಕ್ಕೂ ಮುನ್ನ ಅವರು ತಮ್ಮ ವಿರುದ್ಧ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ. ಈ ಬಗ್ಗೆ ಹನಿಟ್ರ್ಯಾಪ್ ಮಾಡಿದವರ ಕೆಲವು ಸಾಕ್ಷಿಗಳು ತಮ್ಮ ಬಳಿಯಿದ್ದು, ಗೃಹಮಂತ್ರಿಗೆ ತನಿಖೆಗಾಗಿ ಕೊಡುವುದಾಗಿ ಹೇಳಿದ್ದರು. ಕೊನೆಗೆ, ತನ್ನ ಮಗನ ಮೇಲೆ ಕೊಲೆ ಪ್ರಯತ್ನ ನಡೆದಿದೆ ಎಂದು ದೂರು ನೀಡಿ, ಹನಿಟ್ರ್ಯಾಪ್ ಬಗ್ಗೆ ಯಾವುದೆ ದೂರು ನೀಡಿದೇ ಸುಮ್ಮನಾಗಿದ್ದರು.