ಸಹಕಾರ ಸಚಿವ ಕೆ.ಎನ್. ರಾಜಣ್ಣ ರಾಜೀನಾಮೆ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೈಕಮಾಂಡ್ ವಿರುದ್ಧ ಯಾರೂ ಮಾತನಾಡಬಾರದು ಎಂದಿದ್ದಾರೆ. ರಾಜಣ್ಣ ರಾಜೀನಾಮೆ ಬಗ್ಗೆ ಮಾಹಿತಿ ಇಲ್ಲ, ಸಿಎಂ ಹೇಳಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಬದಲಾವಣೆ ಸಿಎಂ ನಿರ್ಧಾರ ಎಂದಿದ್ದಾರೆ.

ಬೆಂಗಳೂರು (ಆ.11): ಸಹಕಾರ ಸಚಿವ ಕೆ.ಎನ್. ರಾಜಣ್ಣ ರಾಜೀನಾಮೆ ನೀಡಿದ ಬೆನ್ನಲ್ಲಿಯೇ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಹೈಕಮಾಂಡ್ ವಿರುದ್ಧವಾಗಿ ಯಾರೂ ಮಾತನಾಡಬಾರದು ಎಂಬ ಸಂದೇಶವನ್ನು ತಮ್ಮ ಮಾತಿನ ಮೂಲಕ ಹೊರ ಹಾಕಿದ್ದಾರೆ. 

ವಿಧಾನಸೌಧದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜಣ್ಣ ರಾಜೀನಾಮೆ ವಿಚಾರ ನನಗೆ ಗೊತ್ತಿಲ್ಲ. ಹೈಕಮಾಂಡ್ ವಿರುದ್ಧ ಯಾರೂ ಮಾತನಾಡಬಾರದು. ಯಾರು ಮಾಹಿತಿ ಕೊಟ್ಟಿದ್ದಾರೆ? ಸಿಎಂ ಹೇಳಿದ್ದಾರಾ? ಮಾಧ್ಯಮದಲ್ಲಿ ಚರ್ಚೆ ಆಗ್ತಿದೆ ಅಷ್ಟೆ. ಸದ್ಯಕ್ಕೆ ಯಾವುದೇ ಖಚಿತ ಮಾಹಿತಿ ಇಲ್ಲ. ಮಹದೇವಪುರ ಅಂತಲ್ಲ, ಚುನಾವಣಾ ಆಯೋಗದ ವಿರುದ್ಧ ಆಗಿದೆ. ಎಲ್ಲೆಡೆ ಬೆಂಬಲ‌ ಸಿಗ್ತಿದೆ. ಆ ಹೋರಾಟವೇ ಬೇರೆ, ಇವರ ಹೇಳಿಗೆ ಹೇಗೆ ಕೊಟ್ಟಿದ್ದಾರೊ ಗೊತ್ತಿಲ್ಲ. ಇನ್ನು ಜಿಲ್ಲಾ ಉಸ್ತುವಾರಿ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿ, ಅದು ಸಿಎಂ ನಿರ್ಧಾರ. ಅವರೇ ಬದಲಿಸಬೇಕು ಅಂತ ಕೇಳಿಕೊಂಡಿದ್ದರು. ಯಾರನ್ನ ಬದಲಿಸಬೇಕು ಅನ್ನೋದು ಸಿಎಂ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು. 

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದೇನು? ಈ ಕುರಿತು ಮಾಯನಾಡಿದ ಬಿ.ವೈ. ವಿಜಯೇಂದ್ರ, 'ರಾಹುಲ್ ಗಾಂಧಿ ಚುನಾವಣೆ ಆಯೋಗದ ಮೇಲೆ ಗಂಭೀರ ಆರೋಪ ಮಾಡಿದ್ದರು. ಚುನಾವಣೆ ಆಯೋಗ ದುರುಪಯೋಗ ಮಾಡಿಕೊಂಡು ಬಿಜೆಪಿ ಅಧಿಕಾರಕ್ಕೆ ಬಂದಿದೆ, ಪ್ರಧಾನಿ ಮೋದಿ ಆಗಿದ್ದಾರೆ ಎಂದಿದ್ದರು. ನಾವು ಅದನ್ನ ಅಲ್ಲಗೆಳೆದಿದ್ದೆವು. ಸ್ವತಃ ರಾಜಣ್ಣ, ಸಿಎಂ ಸಿದ್ದರಾಮಯ್ಯ ಆಪ್ತರು. ಅವರು ರಾಹುಲ್‌ಗಾಂಧಿ ಮಾಡಿದ್ದ ಆರೋಪ ಸರಿಯಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಇದಾಗಿದೆ ಎಂದಿದ್ದರು. ಸತ್ಯವನ್ನ‌ ಕೇಳಲಾಗದ ರಾಹುಲ್ ಗಾಂಧಿ, ಎಸ್ಟಿ ಸಮುದಾಯದವರು ಆಗಿರುವ ರಾಜಣ್ಣನವರ ರಾಜೀನಾಮೆ ಪಡದಿದ್ದಾರೆ ಎಂದು ಆರೋಪ ಮಾಡಿದರು.

ಮುಂದುವರೆದು, ರಾಹುಲ್ ಗಾಂಧಿ ಸಂವಿಧಾನ ಹಿಡಿದು ದಲಿತರ ಪರ ಎಂದು ಮಾತನಾಡುತ್ತಿದ್ದರು. ಆದರೆ ಈಗ ಕಾಂಗ್ರೆಸ್‌ನ ನಿಜ ಬಣ್ಣ ಬಯಲಾಗಿದೆ. ಕಾಂಗ್ರೆಸ್ ದಲಿತರನ್ನ ಕೇವಲ ವೋಟ್ ಬ್ಯಾಂಕ್‌ಗೆ ಮಾತ್ರ ಬಳಸಿ ಕೊಂಡಿದೆ. ಈ ಸಮುದಾಯದ ಪರ ಕಾಳಜಿ ಕಾಂಗ್ರೆಸ್‌ಗೆ ಇಲ್ಲ ಎನ್ನುವುದನ್ನ ರಾಹುಲ್ ಗಾಂಧಿ ಸಾಭೀತು ಮಾಡಿದ್ದಾರೆ.