ಆರ್‌ಎಸ್‌ಎಸ್‌ ವಿರುದ್ಧ ಹೇಳಿಕೆ ನೀಡುವ ರಾಜ್ಯ ಸರ್ಕಾರದ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಜೋಕರ್‌ ರೀತಿ ವರ್ತಿಸುತ್ತಿದ್ದಾರೆ ಎಂದು ಗಂಗಾವತಿ ಶಾಸಕ ಜರ್ನಾದನ ರೆಡ್ಡಿ ಅವರು ಟಾಂಗ್‌ ನೀಡಿದ್ದಾರೆ.

ಕೊಪ್ಪಳ (ಅ.16): ಆರ್‌ಎಸ್‌ಎಸ್‌ ವಿರುದ್ಧ ಹೇಳಿಕೆ ನೀಡುವ ರಾಜ್ಯ ಸರ್ಕಾರದ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಜೋಕರ್‌ ರೀತಿ ವರ್ತಿಸುತ್ತಿದ್ದಾರೆ ಎಂದು ಗಂಗಾವತಿ ಶಾಸಕ ಗಾಲಿ ಜರ್ನಾದನ ರೆಡ್ಡಿ ಅವರು ಟಾಂಗ್‌ ನೀಡಿದ್ದಾರೆ. ಕೊಪ್ಪಳ ತಾಲೂಕಿನ ಮೆತಗಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆರ್‌ಎಸ್‌ಎಸ್‌ ದೇಶ ಸುರಕ್ಷತೆ, ಸಂಸ್ಕಾರ ಹಾಗೂ ರಾಷ್ಟ್ರೀಯತೆ ಬೆಳಸುವ ಸಂಸ್ಥೆಯಾಗಿದ್ದು, ಪ್ರಿಯಾಂಕ್ ಖರ್ಗೆ ಅವರು ಅಸಂಬದ್ಧವಾಗಿ ಮಾತನಾಡಿದ್ದಾರೆ.

ಪ್ರಿಯಾಂಕ್‌ ಪತ್ರ ಅವರ ಅಜ್ಞಾನವನ್ನು ತೋರುತ್ತದೆ. ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸಲು ಈ ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು. ಅದಕ್ಕಾಗಿ ಈಗ ಜೋಕರ್‌ ತರಹ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು. ವಿಧಾನಸಭೆಯಲ್ಲಿ ಡಿ.ಕೆ.ಶಿವಕುಮಾರ್‌ ಸಂಘದ ಗೀತೆ ಹಾಡಿದ ನಂತರ ಕಾಂಗ್ರೆಸ್‌ನೊಳಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಿಯಾಂಕ್ ಖರ್ಗೆ ಇದೀಗ ಆರ್‌ಎಸ್‌ಎಸ್ ವಿರುದ್ಧ ಮಾತನಾಡಿದ್ದಾರೆ ಎಂದು ಆರೋಪಿಸಿದರು.

ಅನುದಾನ ಹಂಚಿಕೆಯಲ್ಲಿ ತಾರತಮ್ಯ ಸರಿಯಲ್ಲ

ಮುಖ್ಯಮಂತ್ರಿ ಸಿದ್ದರಾಮಯ್ಯ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ. ಮೆತಗಲ್‌ ಗ್ರಾಮದಲ್ಲಿ ಬುಧವಾರ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಸಿಎಂ ಕಾಂಗ್ರೆಸ್‌ ಶಾಸಕರಿಗೆ 50 ಕೋಟಿ ಬಿಜೆಪಿ, ಜೆಡಿಎಸ್‌ ಶಾಸಕರಿಗೆ ಕೇವಲ 25 ಕೋಟಿ ನೀಡಲು ನಿರ್ಧರಿಸಿದ್ದಾರೆ. ಮುಖ್ಯಮಂತ್ರಿಗಳು ಪಕ್ಷಾತೀತವಾಗಿ ಎಲ್ಲ ಶಾಸಕರಿಗೂ ಸಮಾನ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ಕೊಪ್ಪಳದಲ್ಲಿ ಸಿಎಂ ಭಾಗವಹಿಸಿದ್ದ ಸರ್ಕಾರಿ ಕಾರ್ಯಕ್ರಮ ಕಾಂಗ್ರೆಸ್‌ ಕಾರ್ಯಕ್ರಮದಂತೆ ಬಿಂಬಿತವಾಗಿದೆ. ಕೂಕನೂರು ಪಿಎಸ್‌ಐ ಅಮಾನತು ಪ್ರಕರಣ, ಯಾದಗಿರಿ ಎಎಸ್‌ಐ ಅಪಹರಣದಂತಹ ಘಟನೆಗಳಿಂದ ರಾಜ್ಯದಲ್ಲಿ ಕಾನೂನು -ಸುವ್ಯವಸ್ಥೆ ಹದಗೆಟ್ಟಿದೆ. ಜನರು ಸುರಕ್ಷಿತವಾಗಿಲ್ಲ, ದಲಿತರಿಗೆ ನ್ಯಾಯ ಸಿಗುತ್ತಿಲ್ಲ. ಆಡಳಿತ ವ್ಯವಸ್ಥೆ ಕುಸಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.