ಜಕ್ಕೂರು ಏರೋಡ್ರೋಂ ರನ್‌ವೇ ವಿಸ್ತರಣೆ ಮಾಡುವುದು ಮತ್ತು ಇಲ್ಲಿರುವ ಜಾಗವನ್ನು ಸಂಪೂರ್ಣವಾಗಿ ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಳ್ಳಲು ಏನು ಮಾಡಬೇಕೆನ್ನುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರು (ಸೆ.04): ಜಕ್ಕೂರು ಏರೋಡ್ರೋಂ ರನ್‌ವೇ ವಿಸ್ತರಣೆ ಮಾಡುವುದು ಮತ್ತು ಇಲ್ಲಿರುವ ಜಾಗವನ್ನು ಸಂಪೂರ್ಣವಾಗಿ ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಳ್ಳಲು ಏನು ಮಾಡಬೇಕೆನ್ನುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಜಕ್ಕೂರು ಏರೋಡ್ರೋಂ ಆವರಣದಲ್ಲಿ ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಹಾಗೂ ಏರೋಡ್ರೋಂ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಭೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಕ್ಕೂರು ಏರೋಡ್ರೋಂ ಸಮೀಪ ಮೇಲ್ಸೇತುವೆ ಇರುವುದರಿಂದ ರನ್ ವೇ ವಿಸ್ತರಣೆ ಸ್ವಲ್ಪ ಅಡಚಣೆ ಆಗುತ್ತಿದೆ.
ಪ್ರಸ್ತುತ ಇಲ್ಲಿ 200 ಎಕರೆಗಿಂತ ಹೆಚ್ಚಿನ ಸ್ಥಳವಿದ್ದು, ಜಕ್ಕೂರು ವೈಮಾನಿಕ ತರಬೇತಿ ಶಾಲೆ ನಡೆಯುತ್ತಿದೆ. ರನ್ ವೇ ವಿಸ್ತರಣೆಗೆ ಪಕ್ಕದಲ್ಲಿರುವ ಜಮೀನನ್ನು ಪಡೆಯಬೇಕು. ಇದಕ್ಕೆ ಮೂರು ಎಕರೆಗಿಂತ ಹೆಚ್ಚು ಜಮೀನಿನ ಅಗತ್ಯವಿದ್ದು, ಮಾಲೀಕರು ಜಮೀನನ್ನು ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಬೆಲೆ ಕೂಡ ದುಬಾರಿ ಆಗಿದೆ ಎಂದರು. ಪ್ರಸ್ತುತ ಲಭ್ಯವಿರುವ ಸ್ಥಳವನ್ನೇ ಹೇಗೆ ಉಪಯೋಗಿಸಬೇಕು ಎನ್ನುವ ಚಿಂತನೆ ನಡೆಯುತ್ತಿದೆ. ವೈಮಾನಿಕ ತರಬೇತಿ ಶಾಲೆ ನಡೆಸಬೇಕೆನ್ನುವ ನ್ಯಾಯಾಲಯದ ಆದೇಶವಿದ್ದು, ಸರ್ಕಾರ ಇನ್ನೇನು ಮಾಡಬಹುದು ಎಂದು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ಮುಷ್ತಾಕ್ ಅವರಿಂದಲೇ ದಸರಾ ಚಾಲನೆ: ‘ಟಿಪ್ಪು ಸುಲ್ತಾನ್ ಆಡಳಿತದ ಅವಧಿಯಲ್ಲಿಯೂ ಮೈಸೂರಿನಲ್ಲಿ ದಸರಾ ಆಚರಿಸಲಾಗಿದೆ. ಇದೊಂದು ನಾಡಹಬ್ಬವಾದ್ದರಿಂದ ಎಲ್ಲಾ ಧರ್ಮದವರೂ ಇದರಲ್ಲಿ ಪಾಲ್ಗೊಳ್ಳಬಹುದು. ಸಾಹಿತಿ ಬಾನು ಮುಷ್ತಾಕ್ ಅವರೇ ದಸರಾ ಉದ್ಘಾಟಿಸುತ್ತಿದ್ದಾರೆ. ಈ ವಿಷಯದಲ್ಲಿ ಬೇರೆ ನಿಲುವೇ ಇಲ್ಲ. ಇದು ನಾನೇ ಮಾಡಿದ ಆಯ್ಕೆ’ ಎಂದು ಸ್ಪಷ್ಟಪಡಿಸಿದ್ದಾರೆ. ‘ದಸರಾ ಆಚರಣೆ ಸಂಬಂಧ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನನಗೆ ಉದ್ಘಾಟಕರನ್ನು ಆಯ್ಕೆ ಮಾಡುವ ಅಧಿಕಾರ ಕೊಟ್ಟಿದ್ದರು. ಕನ್ನಡಕ್ಕೆ ಮೊದಲ ಬುಕರ್ ಪ್ರಶಸ್ತಿ ಬಂದಿದೆ. ಇದನ್ನು ಬಾನು ಮುಷ್ತಾಕ್ ತಂದುಕೊಟ್ಟಿದ್ದಾರೆ.
ಆದ್ದರಿಂದ ಬಾನು ಮುಷ್ತಾಕ್ ಅವರಿಗೆ ದಸರಾ ಉದ್ಘಾಟನೆಗೆ ಅವಕಾಶ ಕೊಡಬೇಕು ಎಂದು ಹೇಳಿದ್ದೆ. ನಿಸಾರ್ ಅಹಮದ್ ಅವರಿಗೆ ಈ ಹಿಂದೆ ಅವಕಾಶ ನೀಡಲಾಗಿತ್ತು. ಇದೊಂದು ಸಾಂಸ್ಕೃತಿಕ ಹಬ್ಬ. ನಾಡಹಬ್ಬವನ್ನು ಇಂಥದ್ದೇ ಧರ್ಮದವರು ಉದ್ಘಾಟಿಸಬೇಕು ಎಂಬುದಿಲ್ಲ. ನಾಡಹಬ್ಬ ಎಂದರೆ ಅದು ಎಲ್ಲರಿಗೂ ಹಬ್ಬ. ಹಿಂದು, ಮುಸ್ಲಿಂ, ಕೈಸ್ತ, ಬೌದ್ಧರು...ಎಲ್ಲರೂ ಸೇರಿ ಆಚರಿಸುವ ಹಬ್ಬವಿದು’ ಎಂದರು.
‘ಮಹಾರಾಜರು ಇಲ್ಲದಿರುವಾಗ ದಸರಾವನ್ನು ಟಿಪ್ಪು ಆಚರಿಸಿದ್ದ ಉದಾಹರಣೆ ಇದೆ. ಬಳಿಕ, ಮಿರ್ಜಾ ಇಸ್ಮಾಯಿಲ್ ಅವರು ದಿವಾನರಾಗಿರಲಿಲ್ಲವೇ? ಅವರು ದಸರಾದಲ್ಲಿ ಪಾಲ್ಗೊಂಡಿರಲಿಲ್ಲವೇ? ಆದ್ದರಿಂದ ಇದೊಂದು ಧರ್ಮಾತೀತ, ಜಾತ್ಯತೀತ ಹಬ್ಬ. ಈ ಹಬ್ಬಕ್ಕೆ ಬುಕರ್ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಯಾರೋ ಧರ್ಮಾಂಧರು ಮಾತನಾಡುತ್ತಾರೆ ಎಂದು ನಮ್ಮ ನಿಲುವನ್ನು ಬದಲಿಸಲು ಸಾಧ್ಯವಿಲ್ಲ. ಅವರಿಗೆ ಇತಿಹಾಸವೇ ಗೊತ್ತಿಲ್ಲ ಬಿಡಿ’ ಎಂದರು.
‘ಬಿಜೆಪಿಯವರು ರಾಜಕೀಯವಾಗಿ ಮಾತನಾಡುತ್ತಾರೆ. ಜನ ಸಾಹಿತ್ಯವನ್ನು ಮುಷ್ತಾಕ್ ಅವರು ಕನ್ನಡ ಭಾಷೆಯಲ್ಲಿ ಬರೆದಿಲ್ಲವೇ? ಕನ್ನಡದ ಬಗ್ಗೆ ಅವರಿಗೆ ಪ್ರೀತಿ, ಗೌರವ ಇಲ್ಲದಿದ್ದರೆ ಬರೆಯಲು ಸಾಧ್ಯವೇ? ಬಿಜೆಪಿಯವರು ಏನೋ ಕುಂಟು ನೆಪ ಹುಡುಕುತ್ತಿದ್ದಾರೆ. ಇದು ನಾಡಹಬ್ಬ, ಈ ವಿಷಯದಲ್ಲಿ ನಾನು ಸ್ಪಷ್ಟವಾಗಿದ್ದೇನೆ. ಎಲ್ಲಾ ಧರ್ಮದವರೂ ಸೇರಿ ಈ ಹಬ್ಬ ಆಚರಿಸುವಂಥದ್ದು. ಆದ್ದರಿಂದ ಈ ಆಯ್ಕೆ ಕೂಡ ಸೂಕ್ತವಾಗಿದೆ. ದನದ ಮಾಂಸ, ಹಂದಿ ಮಾಂಸ ಎಂದೆಲ್ಲಾ ಮಾತನಾಡುವವರು ಡೋಂಗಿಗಳು. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಕಿಲ್ಲ’ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
