ದೇಶದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದ್ದು 2027ರ ವೇಳೆಗೆ ಜಪಾನ್ ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ.
ಬೆಂಗಳೂರು (ಆ.25): ದೇಶದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದ್ದು 2027ರ ವೇಳೆಗೆ ಜಪಾನ್ ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ. ಅಯೋಧ್ಯಾ ಪ್ರಕಾಶನವು ಭಾನುವಾರ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ದಿ ಮೋದಿ ಎಫೆಕ್ಟ್-ರೀಇನ್ವೆಂಟಿಂಗ್ ಭಾರತ್’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನರೇಂದ್ರ ಮೋದಿ ಅವರ ಕಾರ್ಯವು ರಾಜಕಾರಣಗಳಿಗೂ ಮತ್ತು ರಾಷ್ಟ್ರಕಾರಣಿಗೂ ವ್ಯತ್ಯಾಸವನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಮುಂದಿನ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬ ಕಾರಣಕ್ಕಾಗಿ ಓಡಾಡುವವರು ರಾಜಕಾರಣಿಗಳು. ಆದರೆ, ದೇಶದ ಹಿತಕ್ಕಾಗಿ ಚಿಂತಿಸದೆ ಕೆಲಸ ಮಾಡುವವರು ರಾಷ್ಟ್ರಕಾರಣಿಗಳು. ನರೇಂದ್ರ ಮೋದಿ ಅವರು ಎರಡನೇ ವರ್ಗಕ್ಕೆ ಸೇರಿದವರು ಎಂದು ಶ್ಲಾಘಿಸಿದರು.
ಅಮೆರಿಕಾ ನಮ್ಮ ಮೇಲೆ ತೆರಿಗೆ ಸಮರಕ್ಕಿಳಿದಿರುವುದು ವಿಶ್ವದಲ್ಲೇ ಭಾರತ ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವುದೇ ಕಾರಣ. ವಿಶ್ವದಲ್ಲಿ ಬಳಕೆಯಾಗುವ ಶೇ. 40ರಷ್ಟು ಔಷಧ ಭಾರತದ್ದಾಗಿದೆ. ಅದಕ್ಕಾಗಿಯೇ ಆರೋಗ್ಯ ಉತ್ಪನ್ನಗಳ ಮೇಲೆ ಸರಿಸುಮಾರು ಶೇ. 200ರಷ್ಟು ತೆರಿಗೆ ಹೆಚ್ಚಳ ಮಾಡಲಾಗಿದೆ. ಇದಕ್ಕೂ ನರೇಂದ್ರ ಮೋದಿ ದಿಟ್ಟ ಉತ್ತರ ನೀಡಿದ್ದಾರೆ. ಹಾಗೆಯೇ, ದೇಶದ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಜಿಎಸ್‌ಟಿಯ 4 ಸ್ಲ್ಯಾಬ್‌ನ್ನು ಎರಡಕ್ಕಿಳಿಸಲಾಗುತ್ತಿದೆ. ಹಾಗೆಯೇ, ಈ ವರ್ಷದ ಡಿಸೆಂಬರ್‌ಗೆ ಮೊದಲ ಇಂಡಿಜೀನಿಯಸ್ ಸೆಮಿ ಕಂಡಕ್ಟರ್ ಚಿಪ್ಸ್ ಮಾರುಕಟ್ಟೆಗೆ ಲಭ್ಯವಾಗಲಿದೆ ಎಂದು ಹೇಳಿದರು.
ಗ್ಯಾರಂಟಿಗಿಂತ ಶಿಕ್ಷಣ-ಆರೋಗ್ಯ ಮುಖ್ಯ: ನಟ ಪ್ರಕಾಶ್ ಬೆಳವಾಡಿ ಮಾತನಾಡಿ, ಜನರಿಗೆ ಗ್ಯಾರಂಟಿಗಳಿಗಿಂತ ಶಿಕ್ಷಣ ಮತ್ತು ಆರೋಗ್ಯ ಮುಖ್ಯ. ಶಿಕ್ಷಣೆ ಮತ್ತು ಆರೋಗ್ಯ ಕ್ಷೇತ್ರಗಳು ಸುಧಾರಣೆಯಾಗದಿದ್ದರೆ ಅಭಿವೃದ್ಧಿ ಅಸಾಧ್ಯ. ಅದನ್ನು ಮನಗಂಡು ನರೇಂದ್ರ ಮೋದಿ ಅವರು ಆ ಎರಡು ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಇನ್ನು, ಜಿಎಸ್‌ಟಿ ಕುರಿತಂತೆ ಟೀಕಿಸುವ ವಿರೋಧ ಪಕ್ಷಗಳು ಜಿಎಸ್‌ಟಿ ಕೌನ್ಸಿಲ್‌ನ ಸಭೆಯಲ್ಲಿ ಕುಳಿತು ಚರ್ಚಿಸಿ ಬರುತ್ತಾರೆ. ಆನಂತರ ರಾಜಕೀಯ ಮಾಡಲಾಗುತ್ತಿದೆ ಎಂದರು.
ನಾರಾಯಣ ಹೆಲ್ತ್‌ನ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ, ಜನಸೇನಾ ಪಕ್ಷದ ಹಿರಿಯ ನಾಯಕಿ ಚೈತನ್ಯ ಆದಿಕೇಶವಲು, ಪುಸ್ತಕದ ಸಂಪಾದಕ ಡಾ. ಮಂಚಲ್ ಮಹೇಶ್ ಉಪಸ್ಥಿತರಿದ್ದರು. ಆರ್‌ಎಸ್‌ಎಸ್‌ನ ದಕ್ಷಿಣ ಪ್ರಾಂತದ ಪ್ರಮುಖರಾದ ಎನ್. ತಿಪ್ಪೇಸ್ವಾಮಿ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡಿದ್ದರು.
