ಪ್ರಧಾನಿ ಮೋದಿ ಅವರ ರಾಜತಾಂತ್ರಿಕ ನೈಪುಣ್ಯತೆ ಮೆಚ್ಚಿ ಪತ್ರ ಬರೆದಿದ್ದ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ನಾಯಕರು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.
ಬೆಂಗಳೂರು (ಸೆ.07): ಪ್ರಧಾನಿ ಮೋದಿ ಅವರ ರಾಜತಾಂತ್ರಿಕ ನೈಪುಣ್ಯತೆ ಮೆಚ್ಚಿ ಪತ್ರ ಬರೆದಿದ್ದ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ನಾಯಕರು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. ಬಿ.ವೈ.ವಿಜಯೇಂದ್ರ, ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ, ಶಾಸಕ ಎಂ.ಕೃಷ್ಣಪ್ಪ, ಸುರೇಶ್ ಗೌಡ, ಸಿ.ಕೆ.ರಾಮಮೂರ್ತಿ, ಮಾಜಿ ಶಾಸಕ ನಂದೀಶ್ ರೆಡ್ಡಿ ಸೇರಿದಂತೆ ಕೆಲ ನಾಯಕರು ಶನಿವಾರ ಸಂಜೆ ಪದ್ಮನಾಭನಗರದ ನಿವಾಸಕ್ಕೆ ಭೇಟಿ ನೀಡಿ ದೇವೇಗೌಡ ಅವರನ್ನು ಭೇಟಿಯಾಗಿ ಹೂಗುಚ್ಛ ನೀಡಿ ಗೌರವಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಹಿರಿಯ ರಾಜಕಾರಣಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದೇವೆ. ಪ್ರಧಾನಿ ಮೋದಿ ಅವರು ಶಾಂಘೈ ಶೃಂಗಸಭೆಯಲ್ಲಿ ಪಾಲ್ಗೊಂಡ ಬಗ್ಗೆ ದೇವೇಗೌಡರು ಪತ್ರ ಬರೆದು ಅಭಿನಂದನೆ ತಿಳಿಸಿದ್ದರು. ಮೋದಿ ಅವರ ದಿಟ್ಟ ಹೆಜ್ಜೆಯನ್ನು ಶ್ಲಾಘಿಸಿದ್ದರು. ಇಂತಹ ಇಳಿಯ ವಯಸ್ಸಿನಲ್ಲೂ ದೇಶದ ಬಗ್ಗೆ ಅವರ ಕಾಳಜಿ, ಪ್ರಧಾನಿ ಮೇಲೆ ಇರಿಸಿರುವ ವಿಶ್ವಾಸ ನಮ್ಮೆಲ್ಲರಿಗೂ ಮಾದರಿ. ಹೀಗಾಗಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೇವೆ. ಸುಮಾರು ಅರ್ಧ ತಾಸು ಅವರು ದೇಶದ ರಾಜಕೀಯದ ಬಗ್ಗೆ ಮಾತನಾಡಿದರು. ತಾವು ಪ್ರಧಾನಿ ಆಗಿದ್ದಾಗ ನಡೆದ ಘಟನೆಗಳನ್ನು ಮೆಲುಕು ಹಾಕಿದರು ಎಂದರು.
ಎಚ್‌ಡಿಡಿ ನಮ್ಮ ಹೆಮ್ಮೆಯ ನಾಯಕ: ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ನಮ್ಮ ಹೆಮ್ಮೆಯ ನಾಯಕರೂ ಆದ ಮುತ್ಸದ್ದಿ ದೇವೇಗೌಡರು ಹಲವು ಸಂದರ್ಭಗಳಲ್ಲಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಬೆಂಬಲಿಸಿದ್ದಾರೆ. ದೇವೇಗೌಡರ ಕಾರ್ಯ ಶೈಲಿಗೆ ಅಭಿನಂದನೆ ತಿಳಿಸಿದ್ದೇವೆ. ನಾವು ನಮ್ಮ ಪಕ್ಷ ಬಲಪಡಿಸಲು, ಅವರು ಅವರ ಪಕ್ಷ ಬಲಪಡಿಸಲು ಕಾರ್ಯತಂತ್ರ ಮಾಡುತ್ತಿದ್ದಾರೆ. ನಮ್ಮ ನಡುವೆ ಉತ್ತಮ ಮೈತ್ರಿಯಿದೆ. ಸಮನ್ವಯತೆಯೂ ಚೆನ್ನಾಗಿದೆ. ಒಂದೇ ಉದ್ದೇಶಕ್ಕೆ ನಮ್ಮಿಬ್ಬರ ಹೋರಾಟ ಇರಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಟ್ರಂಪ್ ತೆರಿಗೆ ನೀತಿ ವಿಚಾರದಲ್ಲಿ ಬಿಕ್ಕಟ್ಟು ಎದುರಾದಾಗ ಮೋದಿ ಅವರು ಹಲವು ದೇಶಗಳ ಜತೆ ವ್ಯಾಪಾರ ವಹಿವಾಟು ಒಪ್ಪಂದ ಮಾಡಿಕೊಂಡು ದೇಶದ ಹಿತ ಕಾಪಾಡುವ ಕ್ರಮ ಕೈಗೊಂಡಿದ್ದರು. 48 ಗಂಟೆಗಳಲ್ಲೇ ತಮ್ಮ ನಾಯಕತ್ವದ ಸಾಮರ್ಥ್ಯ ಪ್ರದರ್ಶಿಸಿದ್ದರು. ಇದನ್ನು ಬೆಂಬಲಿಸಿ ದೇವೇಗೌಡರು ಪತ್ರ ಬರೆದಿದ್ದರು ಎಂದರು.
