ಒಂದು ಕಾಲದಲ್ಲಿ ಕಾಡಾಗಿದ್ದ ಪ್ರದೇಶಗಳೆಲ್ಲವೂ ಈಗ ನಾಡಾಗಿದೆ. ನಮ್ಮ ಸುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದ್ದು, ಮುಂದಿನ ಪೀಳಿಗೆಗಾಗಿ ಅರಣ್ಯ ಸಂರಕ್ಷಣೆ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಂಗಳೂರು (ಅ.03): ಒಂದು ಕಾಲದಲ್ಲಿ ಕಾಡಾಗಿದ್ದ ಪ್ರದೇಶಗಳೆಲ್ಲವೂ ಈಗ ನಾಡಾಗಿದೆ. ನಮ್ಮ ಸುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದ್ದು, ಮುಂದಿನ ಪೀಳಿಗೆಗಾಗಿ ಅರಣ್ಯ ಸಂರಕ್ಷಣೆ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ಅರಣ್ಯ ಇಲಾಖೆಯಿಂದ ಏರ್ಪಡಿಸಿದ್ದ ವನ್ಯಜೀವಿ ಸಪ್ತಾಹ ಮತ್ತು ವಿಧಾನಸೌಧದಿಂದ ಲಾಲ್‌ಬಾಗ್‌ವರೆಗೆ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಡಿ.ಕೆ. ಶಿವಕುಮಾರ್, ಕರ್ನಾಟಕ ಅರಣ್ಯ ಮತ್ತು ಪ್ರಕೃತಿ ಸಂಪತ್ತನ್ನು ಹೇರಳವಾಗಿ ಹೊಂದಿದೆ. ಹಿರಿಯರು ನಮ್ಮ ಪ್ರಕೃತಿಯನ್ನು ದೇವರೆಂದು ಪೂಜಿಸುತ್ತಿದ್ದರು. ಮುಂದಿನ ಪೀಳಿಗೆಗಾಗಿ ನಾವೆಲ್ಲ ಅರಣ್ಯ ಪ್ರದೇಶವನ್ನು ಸಂಪರ್ಕಿಸಬೇಕು. ಅದು ನಮ್ಮೆಲ್ಲ ಜವಾಬ್ದಾರಿಯಾಗಿದೆ ಎಂದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಶಾಲೆಗಳು ಒಂದೊಂದು ವಲಯಗಳನ್ನು ಆಯ್ಕೆ ಮಾಡಿ ವಿದ್ಯಾರ್ಥಿಗಳಿಂದ ಗಿಡಗಳನ್ನು ನೆಟ್ಟು, ಬೆಳೆಸುವಂತೆ ಸೂಚಿಸಲಾಗಿದೆ. ಕಳೆದೆರಡು ವರ್ಷಗಳಲ್ಲಿ 1 ಲಕ್ಷ ಸಸಿಗಳನ್ನು ನೆಟ್ಟು ಕಾಪಾಡಲಾಗಿದೆ. ಈ ಕಾರ್ಯಕ್ರಮ ಇಡೀ ರಾಜ್ಯಕ್ಕೆ ವಿಸ್ತರಿಸುವ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು. ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿದರು. ಅರಣ್ಯ ಮತ್ತು ವನ್ಯಜೀವಿ ರಾಯಭಾರಿ, ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ. ರೇ ಇತರರಿದ್ದರು.
ಗ್ಯಾರಂಟಿ ನಿಲ್ಲಿಸಲು ಆರ್ಥಿಕ ಸಮೀಕ್ಷೆ ಮಾಡುತ್ತಿಲ್ಲ
ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ರಾಜ್ಯ ಸರ್ಕಾರ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸುತ್ತಿದೆ ಎನ್ನುವುದು ಸುಳ್ಳು. ಗ್ಯಾರಂಟಿಗಳನ್ನು ಯಾರಿಂದಲೂ ನಿಲ್ಲಿಸಲಾಗದು ಎಂದು ಸ್ಪಷ್ಟಪಡಿಸಿದ್ದಾರೆ. ಜಾತಿ ಆಧಾರಿತ ಜನಗಣತಿ ಮಾಡುತ್ತಿರುವುದೇ ಗ್ಯಾರಂಟಿ ಕಡಿತಕ್ಕೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು. ಗ್ಯಾರಂಟಿ ಯೋಜನೆಗಳನ್ನು ಯಾರೂ ಸಹ ನಿಲ್ಲಿಸಲು ಆಗುವುದಿಲ್ಲ. ಮುಂದಿನ ದಿನಗಳಲ್ಲೂ ಗ್ಯಾರಂಟಿ ಯೋಜನೆಗಳು ನಿಲ್ಲದು. ಕರ್ನಾಟಕದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಗ್ಯಾರಂಟಿ ಯೋಜನೆಗಳು ನಿಲ್ಲಿಸಲು ಆಗುವುದಿಲ್ಲ. ಗ್ಯಾರಂಟಿ ಯೋಜನೆಗಳು ನಮ್ಮ ರಾಜ್ಯದ ಜನರಿಗೆ ಬದುಕನ್ನು ಕಟ್ಟಿಕೊಡುತ್ತಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಇಡೀ ಭಾರತ ದೇಶಕ್ಕೇ ಗ್ಯಾರಂಟಿಯಿದ್ದಂತೆ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದರು.
