ಗಣೇಶ ಮೂರ್ತಿ ಮೆರವಣಿಗೆ ಮೇಲೆ ಕಲ್ಲು ಹೊಡೆದವರ ಮೇಲೆ ಜೆಸಿಬಿ ಹತ್ತಿಸಿ. ನಿಮಗೆ ತಾಕತ್ತಿದ್ದರೆ ಆ ಕೆಲಸ ಮಾಡಿ, ಇಲ್ಲದಿದ್ದರೆ ಇಲ್ಲೂ ಯೋಗಿ ಆದಿತ್ಯನಾಥರಂತಹವರು ಬರುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಎಚ್ಚರಿಕೆ ನೀಡಿದ್ದಾರೆ.
ಮದ್ದೂರು (ಸೆ.11): ಗಣೇಶ ಮೂರ್ತಿ ಮೆರವಣಿಗೆ ಮೇಲೆ ಕಲ್ಲು ಹೊಡೆದವರ ಮೇಲೆ ಜೆಸಿಬಿ ಹತ್ತಿಸಿ. ನಿಮಗೆ ತಾಕತ್ತಿದ್ದರೆ ಆ ಕೆಲಸ ಮಾಡಿ, ಇಲ್ಲದಿದ್ದರೆ ಇಲ್ಲೂ ಯೋಗಿ ಆದಿತ್ಯನಾಥರಂತಹವರು ಬರುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಎಚ್ಚರಿಕೆ ನೀಡಿದ್ದಾರೆ. ಪಟ್ಟಣದಲ್ಲಿ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಧರ್ಮ, ದೇಶಕ್ಕಾಗಿ ನಮ್ಮ ಜನ ತಲೆಕೊಡುವುದಕ್ಕೂ ಹಿಂಜರಿಯೋಲ್ಲ. ಹಿಂದೂಗಳಾದ ನಾವು ಜಾತೀಯತೆ ಬಿಟ್ಟು ಒಂದಾಗಬೇಕು. ಜಾತಿ ಮೂಲಕ ನಮ್ಮನ್ನು ಹೊಡೆದು ಹಾಕುತ್ತಿದ್ದಾರೆ. ಇದರ ಬಗ್ಗೆ ಹಿಂದೂಗಳು ಜಾಗೃತರಾಗಬೇಕು ಎಂದು ಹೇಳಿದರು.
ತಲೆ ತೆಗೆಯುತ್ತೇವೆ: ನಾವು ಇನ್ನೂ ಸುಮ್ಮನಾಗಿದ್ದರೆ ನಮ್ಮ ಮಕ್ಕಳು, ಹೆಂಗಸರು ಉಳಿಯುವುದಿಲ್ಲ. ನಾವೆಲ್ಲಾ ಒಂದು, ನಾವೆಲ್ಲ ಹಿಂದೂ ಎಂಬ ಭಾವನೆ ಜನರಲ್ಲಿ ಮೂಡಬೇಕು. ಆಗ ಮಾತ್ರ ಹಿಂದೂಗಳು ಭಾರತದಲ್ಲಿ ಉಳಿಯಲು ಸಾಧ್ಯ. ನಮ್ಮ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಲಾಗಿದೆ. ಅಣ್ಣ ಅಂದ್ರೆ ನಾವು ಅಣ್ಣ ಎನ್ನುತ್ತೇವೆ. ನೀವು ಏನ್ಲಾ ಅಂದ್ರೆ ನಿಮ್ಮ ತಲೆ ತೆಗೆಯುತ್ತೇವೆ. ನಮ್ಮಲ್ಲಿ ಉರೀಗೌಡ, ನಂಜೇಗೌಡರು ಇದ್ದಾರೆ. ಇಲ್ಲಿ ಬಂದಿರುವವರು ಯಾರೂ ರಾಜಕಾರಣ ಮಾಡುವುದಕ್ಕೆ ಬಂದವರಲ್ಲ. ಹಿಂದೂ ಭಾವನೆಗಳಿಗೆ ಧಕ್ಕೆಯಾಗಿರುವುದಕ್ಕೆ ಬಂದಿದ್ದೇವೆ ಎಂದು ಖಡಕ್ಕಾಗಿ ಹೇಳಿದರು.
ಈಗಲೇ ಮುಸ್ಲಿಂ ಆಗಿ ಕಟ್ ಮಾಡಿಸಿಕೊಳ್ಳಲಿ: ಭದ್ರಾವತಿ ಶಾಸಕ ಸಂಗಮೇಶ್ವರ್ ಮುಂದಿನ ಜನ್ಮಕ್ಕೆ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದಿದ್ದಾರೆ. ಮುಂದಿನ ಜನ್ಮದವರೆಗೆ ಏಕೆ ಕಾಯಬೇಕು. ಈಗಲೇ ಮತಾಂತರ ಆಗಲಿ. ಮುಂದಿನ ಜನ್ಮದಲ್ಲಿ ಹಾವಾಗುವೆಯೋ, ಕಪ್ಪೆಯಾಗುವೆಯೋ ಗೊತ್ತಿಲ್ಲ. ಈಗಲೇ ಹೋಗಿ ಕಟ್ ಮಾಡಿಸಿಕೋ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಾರ್ಮಿಕವಾಗಿ ನುಡಿದರು.
ಇವರೆಲ್ಲಾ ಯಾವ ಮುಖ ಇಟ್ಟುಕೊಂಡು ಈ ರೀತಿ ಮಾತನಾಡುತ್ತಾರೆ. ಸ್ವಲ್ಪವೂ ನಾಚಿಕೆಯಾಗುವುದಿಲ್ಲವೇ. ಅದರ ಬದಲು ಇಡೀ ಕ್ಯಾಬಿನೇಟ್ ಸಚಿವರೆಲ್ಲರೂ ಮತಾಂತರ ಆಗಲಿ. ಆಗ ನಾವೂ ನಿಮ್ಮನ್ನು ನೇರವಾಗಿ ಎದುರಿಸುತ್ತೇವೆ ಎಂದು ಬುಧವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಗಣೇಶನ ಮೆರವಣಿಗೆ ಮಸೀದಿ ಹತ್ತಿರ ಬಂದಾಗ ಪೊಲೀಸರು ಲೈಟ್ ಆಫ್ ಮಾಡಿಸಿದ್ದಾರೆ. ಅದೇ ಅಸಹಿಷ್ಣುತೆ. ಹಿಂದೂ ದೇವಾಲಯದ ಬಳಿ ಈದ್‌ಮಿಲಾದ್ ಮೆರವಣಿಗೆ ಬರಬಾರದು ಎಂದು ಹೇಳಿದರೆ ಮುಸಲ್ಮಾನರು ಎಲ್ಲಿ ಹೋಗುತ್ತಾರೆ?. ಕರೆಂಟ್ ಆಫ್ ಮಾಡಿಸಿ ಕಲ್ಲು ಹೊಡೆಸಲು ಯಾರು ಕಾರಣ ಎಂದು ಪ್ರಶ್ನಿಸಿದರು.
ಮಸೀದಿಯಿಂದ ಕಲ್ಲು ಹೊಡೆಯಲು ಬಿಜೆಪಿ ಹೇಳಿತ್ತಾ? ಯಾವ ಮುಖ ಇಟ್ಟುಕೊಂಡು ಈ ರೀತಿ ಮಾತಾಡುತ್ತಾರೆ? ಇವರ ಈ ರೀತಿಯ ಹೇಳಿಕೆಗಳಿಂದಲೇ ಅವರು (ಮುಸಲ್ಮಾನರು) ಕೊಬ್ಬಿರುವುದು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಎಷ್ಟೇ ಬ್ರದರ್ಸ್ ಎಂದರೂ ಅವರ ದೃಷ್ಟಿಯಲ್ಲಿ ಕಾಫಿರರೇ. ನಿಮ್ಮ ಜೊತೆ ಇರುತ್ತೇವೆ ಎಂಬ ಮಾನಸಿಕತೆ ತೋರಿಸುವುದರಿಂದಲೇ ಅವರಿಗೆ ಧೈರ್ಯ ಬರುತ್ತಿದೆ. ತಾಕತ್ತು ಕಡಿಮೆ ಇದ್ದರೂ ಕಲ್ಲು ಹೊಡೆದಿದ್ದಾರೆ. ಸ್ವಲ್ಪ ತಾಕತ್ತು ಬಂದರೆ ಜೀವಂತ ಸುಡುತ್ತಾರೆ. ಇಲ್ಲಿ ಟೆಸ್ಟ್ ಡೋಸ್ ಮಾಡಿ ನೋಡಿ ನಂತರ ಬೇರೆ ಕಡೆ ವಿಸ್ತರಣೆ ಮಾಡುತ್ತಾರೆ ಎಂದು ಕಿಡಿಕಾರಿದರು.
ಉಪಮುಖ್ಯಮಂತ್ರಿಗಳೇ ನಿಮ್ಮ ಆಡಳಿತದಲ್ಲಿ ಯಾರು ನೆಮ್ಮದಿಯಾಗಿದ್ದಾರೆ? ನಾಚಿಕೆಯಾಗಲ್ವಾ ನಿಮಗೆ ಈ ರೀತಿ ಮಾತಾಡಲು. ಇದೇ ಇಸ್ಲಾಂ ಹೆಸರಿನಲ್ಲೇ ನಿಮ್ಮ ಶಾಸಕರ ಮನೆ ಸುಟ್ಟಿದ್ದು. ನಿಮ್ಮ ಓಲೈಕೆ ರಾಜಕೀಯಕ್ಕೆ ಸ್ವಲ್ಪ ಮಿತಿ ಇರಲಿ. ನಿಮ್ಮ ರಾಜಕೀಯಕ್ಕೆ ದೇಶವನ್ನು ಯಾಕೆ ಬಲಿ ತೆಗೆದುಕೊಳ್ಳುತ್ತೀರಿ ಎಂದು ಪ್ರಶ್ನಿಸಿದರು. ಈದ್‌ಮಿಲಾದ್ ಮೆರವಣಿಗೆ ವೇಳೆ ನಮಗೆ ಅನ್ನಿಸದೇ ಇರುವುದು ಇವರಿಗೆ ಗಣೇಶ ಮೆರವಣಿಗೆ ವೇಳೆ ಯಾಕೆ ಅನ್ನಿಸುತ್ತದೆ? ತಾಲಿಬಾನ್ ಮಾನಸಿಕತೆಯನ್ನು ಕರ್ನಾಟಕದಲ್ಲಿ ಯಾರು ಬೆಳೆಸುತ್ತಿದ್ದಾರೆ ಎಂಬುದು ತನಿಖೆ ಆಗಬೇಕು. ಇದು ಮುಖ್ಯಮಂತ್ರಿಗಳ ರಾಷ್ಟ್ರೀಯ ಕರ್ತವ್ಯ, ಸುಳ್ಳು ಹೇಳುವುದಲ್ಲ. ವಿಧಾನಸೌಧದಲ್ಲೇ ಪಾಕಿಸ್ತಾನ ಪರ ಘೋಷಣೆ ಕೂಗಿದ ಮೇಲೆ ಭದ್ರಾವತಿಯಲ್ಲಿ ಕೂಗಿದ್ದು ಏನು ಮಹಾ ಎಂದು ಕುಟುಕಿದರು.
