ಧರ್ಮಸ್ಥಳದ ಸಂಪೂರ್ಣ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಡಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಒತ್ತಾಯಿಸಿದರು.
ಬೆಂಗಳೂರು (ಆ.19): ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿದ್ದೇವೆ ಎಂದು ಹೇಳಿ ಇಡೀ ಸಮಾಜದ ದಾರಿ ತಪ್ಪಿಸಿದ, ಕ್ಷೇತ್ರಕ್ಕೆ ಅವಹೇಳನ ಮಾಡಿದ ಅನಾಮಿಕನನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಸಂಪೂರ್ಣ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಡಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಒತ್ತಾಯಿಸಿದರು. ನಗರದ ಟೌನ್‌ಹಾಲ್‌ನಲ್ಲಿ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಸೋಮವಾರ ಏರ್ಪಡಿಸಿದ್ದ ‘ಧರ್ಮಸ್ಥಳದ ಮೇಲಿನ ಷಡ್ಯಂತ್ರ ಸತ್ಯಮಿಥ್ಯಗಳ ಅನಾವರಣ’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸೌಜನ್ಯ ಅತ್ಯಾ*ಚಾರ, ಕೊಲೆ ಪ್ರಕರಣಕ್ಕೆ ನ್ಯಾಯ ಸಿಗಬೇಕಿದೆ. ಆದರೆ, ಸೌಜನ್ಯ ಹ*ತ್ಯೆ ನೆಪದಲ್ಲಿ ಧರ್ಮಶ್ರದ್ಧೆಯನ್ನು ಹಾಳು ಮಾಡುವ ಹುನ್ನಾರ ನಡೆಯುತ್ತಿದೆ. ಕೋಟ್ಯಂತರ ಭಕ್ತರ ಶ್ರದ್ಧೆಯನ್ನು ಭಂಗ ಮಾಡಿ ಮರ್ಮಾಘಾತ ಕೊಡಲು ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಅದಕ್ಕಾಗೇ ಈ ವಿಷಯವನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅನಾಮಿಕ ದೂರುದಾರನ ಹೇಳಿಕೆಯಂತೆ ಗುಂಡಿ ಅಗೆಯಲಾಗಿದೆ. ಈಗ ಆತನ ಮಂಪರು ಪರೀಕ್ಷೆ ಮಾಡಬೇಕು. ಈಗಲೂ ಅದಕ್ಕೆ ಮುಂದಾಗದಿದ್ದರೆ ಸರ್ಕಾರವೇ ತಪ್ಪು ಮಾಡುತ್ತಿದೆ ಎಂಬ ಭಾವನೆ ಬರಲಿದೆ.
ನಟಿಯೊಬ್ಬರ ಬಗ್ಗೆ ಅವಹೇಳನ ಮಾಡಿದ್ದಕ್ಕೆ ಕೆಲವರನ್ನು ಬಂಧಿಸಲಾಗಿದೆ. ಆದರೆ, ಧರ್ಮಸ್ಥಳ ಕೋಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆ ತಂದ ಧರ್ಮಸ್ಥಳ ಬಗ್ಗೆ ಅವಹೇಳನ, ಅಪಪ್ರಚಾರ ಮಾಡಿದವರ ಮೇಲೆ ಯಾಕೆ ಪ್ರಕರಣ ದಾಖಲಿಸಿಲ್ಲ ಎಂದು ಪ್ರಶ್ನಿಸಿದರು. ಸ್ವತಃ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಧರ್ಮಸ್ಥಳ ವಿಚಾರದಲ್ಲಿ ಷಡ್ಯಂತ್ರ ಆಗಿದೆ ಎಂದಿದ್ದಾರೆ. ಷಡ್ಯಂತ್ರ ಮಾಡಿದ್ದು ಯಾರೆಂದು ಮನವರಿಕೆ ಆಗಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಿ. ಪಾರದರ್ಶಕವಾಗಿ ವಿಚಾರಣೆ ಆಗಲು ಎಸ್‌ಐಟಿ ಮಾತ್ರವಲ್ಲ, ಯಾವುದೇ ತನಿಖೆ ಮಾಡಲಿ, ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಬೇಕಾದರೂ ತನಿಖೆಯಾಗಲಿ ಎಂದು ಆಗ್ರಹಿಸಿದರು.
ಗೋವುಗಳು ದೇವತೆಗಳ ಆವಾಸ ಸ್ಥಾನ: ಭಾರತೀಯ ಪರಂಪರೆಯಲ್ಲಿ ಸರ್ವ ದೇವತೆಗಳ ಆವಾಸ ಸ್ಥಾನ ಗೋವುಗಳು. ಭಾರತೀಯರಲ್ಲಿ ಸಣ್ಣ ಉಪಕಾರ ಮಾಡಿ ದರೂ ಕೃತಜ್ಞತೆಯಿಂದ ಸ್ಮರಿಸುವ ಜೊತೆಗೆ ದೈವಿಭಾವದಿಂದ ಗೌರವಿಸುವ ವಿಶೇಷ ಗುಣವಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.ತಾಲೂಕಿನ ಹರಿಹರದಹಳ್ಳಿ ಗ್ರಾಪಂ ವ್ಯಾಪ್ತಿಯ ಶಂಕರದೇವರ ಮಠದ ಭೂಮಿಯಲ್ಲಿ ವಿದ್ಯಾ ಕಾಫಿ ಹಾಗೂ ಸರಸ್ವತಿ ಮತ್ತು ಕೆ.ಎಂ.ಭಟ್ ಫೌಂಡೇಷನ್ ಟ್ರಸ್ಟ್ ನಿರ್ಮಿಸಿರುವ ಗೋ ಶಾಲೆಯನ್ನು ಶ್ರೀಕೃಷ್ಣ ಜಯಂತಿಯಂದು ಉದ್ಘಾಟಿಸಿ ಮಾತನಾಡಿದರು.
ಅನಾಧಿ ಕಾಲದಿಂದಲೂ ಗೋವಿಗೆ ವಿಶಿಷ್ಟ ಸ್ಥಾನಮಾನವನ್ನು ಭಾರತೀಯರು ಕೊಡುತ್ತಿದ್ದಾರೆ. ಗೋವುಗಳು ಕಣ್ಣಿನ ಎದುರಿ ರುವ ದೇವರೆಂದು ಭಾವಿಸುತ್ತೇನೆ. ಗೋವಿನಲ್ಲಿರುವ ಪ್ರತಿಯೊಂದು ಅಂಶ ಮತ್ತು ಅಂಗಾಂಗ ದೈವಿಸ್ವರೂಪವೆಂದು ಭಾರತೀಯ ಸನಾತನ ಧರ್ಮದಲ್ಲಿದೆ ಎಂದರು.ಗೋಪಾಲನ ಕೆಲಸಕ್ಕೆ ಗೋವು ಬಾಯ್ತುಂಬ ಹರಸಲಿದೆ ಎಂಬುದು ನಂಬಿಕೆ. ಇಂಥಹ ಗೋ ಸೇವಾ ಕಾರ್ಯದಲ್ಲಿ ವಿದ್ಯಾಕಾಫಿ ಮಾಲೀಕರು ನೂರಾರು ಗೋವುಗಳಿಗೆ ಆಶ್ರಯವಾಗಲು ಗೋಶಾಲೆ ನಿರ್ಮಿಸಿ ಸಮಾಜಕ್ಕೆ ನೀಡುವ ಮೂಲಕ ಕೆರೆ ನೀರನ್ನು ಕೆರೆಗೆ ಚೆಲ್ಲುವಂತೆ ಮಾಡಿದ್ದು ಇನ್ನಷ್ಟು ಸಮಾಜಮುಖಿ ಕಾರ್ಯವಾಗಲಿ ಎಂದು ಶ್ಲಾಘಿಸಿದರು.
