ಎಸ್‌ಐಟಿ ರಚನೆಗೂ ಮೊದಲು ಆರೋಪ ಮಾಡಿದವರ ಪೂರ್ವಾಪರ ವಿಚಾರ ಮಾಡಬೇಕಿತ್ತು ಎಂದು ಬಿಜೆಪಿ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.
ಬೆಂಗಳೂರು (ಸೆ.03): ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಧಾರ್ಮಿಕ ನೇತಾರರು. ಅನೇಕರ ಬದುಕಿನಲ್ಲಿ ಆರ್ಥಿಕ ಬದಲಾವಣೆಗೆ ಕಾರಣರಾದವರು. ಎಸ್‌ಐಟಿ ರಚನೆಗೂ ಮೊದಲು ಆರೋಪ ಮಾಡಿದವರ ಪೂರ್ವಾಪರ ವಿಚಾರ ಮಾಡಬೇಕಿತ್ತು ಎಂದು ಬಿಜೆಪಿ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಯಾರು ಯಾರ ವಿರುದ್ಧ ಆರೋಪ ಮಾಡಿದರೂ ಎಸ್‌ಐಟಿ ರಚನೆ ಮಾಡುತ್ತೀರಾ? ನಿಮ್ಮ ಮೇಲೂ ಆರೋಪ ಮಾಡಿದ್ದರು. ಇದಕ್ಕೂ ಎಸ್‌ಐಟಿ ರಚನೆ ಮಾಡುವಿರಾ ಎಂದು ಖಾರವಾಗಿ ಪ್ರಶ್ನಿಸಿದರು.
ನಟಿ ರಮ್ಯಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದ ಬಳಸಿದ್ದಕ್ಕಾಗಿ 12 ಜನರ ವಿರುದ್ಧ ಪ್ರಕರಣ ದಾಖಲಾಗಿ ಬಂಧಿಸಲಾಯಿತು. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರುದ್ಧ ಆರೋಪ ಮಾಡಿದವರ ಪೈಕಿ ಎಷ್ಟು ಜನರನ್ನು ಬಂಧಿಸಿದಿರಿ? ನೀವು ಮಾಡಿದ ರಾಜಕಾರಣದ ವಿರುದ್ಧ ನಾವು ತಿರುಗಿಬಿದ್ದಿದ್ದೇವೆ. ಈ ಪ್ರಕರಣದಲ್ಲಿ ಚೆನ್ನೈ, ವಿದೇಶಗಳಿಂದಲೂ ಹಣ ಬಂದಿದೆ. ನೀವು ಪಕ್ಷ ರಾಜಕಾರಣ ಮಾಡಬಾರದು ಎಂದೇ ಎನ್‌ಐಎ ತನಿಖೆಗೆ ವಹಿಸಿ ಎಂಬ ಒತ್ತಾಯಿಸುತ್ತಿದ್ದೇವೆ ಎಂದು ಪ್ರತಿಪಾದಿಸಿದರು.
ಧರ್ಮಸ್ಥಳದ ವಿರುದ್ಧ ಷಡ್ಯಂತ್ರ: ಪುಟಕ್ಕಿಟ್ಟ ಚಿನ್ನ ಹೊಳೆಯುತ್ತದೆ. ಈ ಅಗ್ನಿ ಪರೀಕ್ಷೆಯಿಂದ ಧರ್ಮಸ್ಥಳ ಗೆದ್ದು ಬರುತ್ತೇ ಅಂತ ಹೇಳಿದ್ದೆ, ಬುರಡೆ ಗ್ಯಾಂಗಿನ ಷಡ್ಯಂತ್ರ ದಿನದಿಂದ ದಿನಕ್ಕೆ ಬಹಿರಂಗವಾಗುತ್ತಿದೆ. ಷಡ್ಯಂತ್ರ ವ್ಯಾಪಕವಾಗಿದೆ ಅನ್ನೋ ಅನುಮಾನ, ತನಿಖೆ ಪ್ರಾಮಾಣಿಕ, ಪಾರದರ್ಶಕವಾಗಿರಬೇಕೆಂದು ಹೇಳಿದರು. ಎಸ್.ಐಟಿ ಗೆ ಒಂದು ಲಿಮಿಟ್ ಇದೆ. ಆ ಲಿಮಿಟಿ ಮೀರಿ ಕಾಣದ ಕೈಗಳು ಅಡ್ಡ ಬರುತ್ತದೆ ಎಂದು ಹೇಳಿದ್ದೆ, ಎಸ್.ಐಟಿ ರಚನೆಯಾಗಿದ್ದೆ ಕಾಣದ ಕೈಗಳ ಒತ್ತಡದ ಕಾರಣಕ್ಕೆ, ನನಗಿದ್ದ ನಂಬಿಕೆ, ಕೋಟ್ಯಾಂತರ ಜನರಗಿದ್ದ ನಂಬಿಕೆ ಸರ್ಕಾರಕ್ಕೂ ಇರಬೇಕಾಗಿತ್ತು.
ಬುರಡೆ ಗ್ಯಾಂಗ್ ಬುರಡೆ ಬಿಡುತ್ತಾ ಇದೆ, ಧರ್ಮ ಸ್ಥಳದ ವಿಚಾರದಲ್ಲಿ ಅವರು ಹೇಳುತ್ತಿರುವುದು ಸುಳ್ಳು ಎಂದು ತಿಳಿಸಿದರು. ಮೊದಲು ಬುರಡೆ ಗ್ಯಾಂಗಿನ ಸತ್ಯಾಸತ್ಯತೆ ಪರಿಶೀಲನೆ ಮಾಡಬೇಕು. ಆಮೇಲೆ ತನಿಖೆ ನಡೆಸ ಬೇಕಾಗಿತ್ತು. ಆದರೆ, ಬುರಡೆ ಗ್ಯಾಂಗಿನ ತುತ್ತೂರಿಗೆ ತಲೆದೂಗುವ ಮೂಲಕ ಎಸ್.ಐಟಿ ರಚನೆ ಮಾಡಿದ್ದರು. ಸಮೀರ್, ಮಟ್ಟಣ್ಣ, ಮಹೇಶ್ ತಿಮರೋಡಿ ಪುಂಕಾನು ಪುಂಕವಾಗಿ ಬುರಡೆ ಬಿಡುತ್ತಿದ್ದರು. ಸರ್ಕಾರ ಯಾವುದೇ ಸಮಯದಲ್ಲಿ ಮಧ್ಯೆ ಪ್ರವೇಶ ಮಾಡಲಿಲ್ಲ, ಕ್ರಮ ತೆಗೆದುಕೊಂಡಿಲ್ಲ.
ಎಸ್.ಐ.ಟಿ.ತನಿಖೆ ಮುಂದುವರಿಯ ಬೇಕಾದರೆ ಹಾಲಿ ಸುಪ್ರೀಂ ಕೋರ್ಟ್ ಅಥಾವ ಹೈಕೊರ್ಟ್ ನ್ಯಾಯಾಧೀಶರು ಮಾನಿಟರ್ ಮಾಡಬೇಕು. ಅವರಿಗೆ ವರದಿ ಹೋಗಬೇಕು. ಇಲ್ಲ ಎನ್.ಐ.ಎ ತನಿಖೆ ಮಾಡಬೇಕು. ಇದು ನಮ್ಮ ನಿಲುವು ವಿ.ಆರ್. ವಿತ್ ಧರ್ಮಸ್ಥಳವೆಂದು ಹೇಳಿದರು. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಚಾಮುಂಡಿ ಬೆಟ್ಟದ ಕುರಿತು ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿರುವ ಸಿ.ಟಿ.ರವಿ, ಚಾಮುಂಡಿ ಬೆಟ್ಟನೇ ಹಿಂದುಗಳದಲ್ಲಾ ಎನ್ನುವುದು ಓಲೈಕೆ ಪರಮಾವಧಿ. ಚಾಮುಂಡಿ ತಾಯಿ ನೆಲೆಸಿರುವ ಕ್ಷೇತ್ರ ಹಿಂದುಗಳದಲ್ಲದೇ ಇನ್ಯಾರದ್ದಾಗುತ್ತದೆ ಎಂದು ಪ್ರಶ್ನಿಸಿದರು.
