ಐದು ಪಾಲಿಕೆಗಳ ಚುನಾವಣೆ ಎದುರಿಸಲು ಕಾಂಗ್ರೆಸ್ ಸಿದ್ಧವಾಗುತ್ತಿದ್ದು, ಅದಕ್ಕಾಗಿ ಪಕ್ಷದ ಪ್ರತಿಯೊಬ್ಬರಿಗೂ ಜವಾಬ್ದಾರಿ ನೀಡಲಾಗಿದೆ. ಇದು ಯುದ್ಧ ಇದ್ದ ಹಾಗೆ ಅದಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಬೆಂಗಳೂರು (ಸೆ.17): ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆ ಎದುರಿಸಲು ಕಾಂಗ್ರೆಸ್ ಸಿದ್ಧವಾಗುತ್ತಿದ್ದು, ಅದಕ್ಕಾಗಿ ಪಕ್ಷದ ಪ್ರತಿಯೊಬ್ಬರಿಗೂ ಜವಾಬ್ದಾರಿ ನೀಡಲಾಗಿದೆ. ಇದು ಯುದ್ಧ ಇದ್ದ ಹಾಗೆ ಅದಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 5 ನೂತನ ಪಾಲಿಕೆಗಳ ಚುನಾವಣೆ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಿಗೆ 2026ರ ಜನವರಿಯಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಐದು ಪಾಲಿಕೆಗೂ ಒಬ್ಬೊಬ್ಬ ಮೇಯರ್ ಇರಲಿದ್ದಾರೆ. ಎಲ್ಲ ಹೊಸ ತಂಡ ಪಾಲಿಕೆಗೆ ಆಯ್ಕೆಯಾಗುವ ನಿರೀಕ್ಷೆಯಿದೆ ಎಂದರು.
5 ನಗರ ಪಾಲಿಕೆಗಳ ಚುನಾವಣೆ ಎದುರಿಸಲು ಪಕ್ಷ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಚುನಾವಣೆಗೆ ಬೂತ್ ಮಟ್ಟದ ಅಧಿಕಾರಿಗಳ ನೇಮಕದ ಬಗ್ಗೆ ಚರ್ಚೆ ಮಾಡಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಬಗ್ಗೆಯೂ ಮಾತುಕತೆ ಮಾಡಲಾಗಿದೆ. ವಾರ್ಡ್‌ಗಳ ಪುನರ್ ವಿಂಗಡಣೆಗಳ ಬಗ್ಗೆಯೂ ಕೆಲಸ ಸಲಹೆಗಳನ್ನು ನೀಡಿದ್ದಾರೆ. ಅದೆಲ್ಲವನ್ನೂ ಕೆಪಿಸಿಸಿ ಅಧ್ಯಕ್ಷರು ಪಡೆದುಕೊಂಡಿದ್ದು, ಮುಂದಿನ ಕಾರ್ಯತಂತ್ರ ರೂಪಿಸುತ್ತಾರೆ. ಚುನಾವಣೆ ಯುದ್ಧದ ರೀತಿ. ಅದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
8 ಸಾವಿರ ಕೋಟಿ ಸಾಲ ಇಟ್ಟಿದ್ದ ಬಿಜೆಪಿ
ನಗರದ ರಸ್ತೆಗಳಲ್ಲಿನ ರಸ್ತೆ ಗುಂಡಿಗಳ ಕುರಿತು ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ರಸ್ತೆ ಗುಂಡಿಗಳ ಬಗ್ಗೆ ದೂರುಗಳಿದ್ದು, ಅದನ್ನು ಹಂತ ಹಂತವಾಗಿ ಮುಚ್ಚಲಾಗುತ್ತಿದೆ. ಆದರೆ, ಬಿಜೆಪಿ ಆಡಳಿತದ ಅವಧಿಯಲ್ಲಿ ಪ್ರತಿ ತಿಂಗಳು ಹೈಕೋರ್ಟ್ ರಸ್ತೆ ಗುಂಡಿ ವಿಚಾರದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿತ್ತು. ನಾವು ಹೈಕೋರ್ಟ್‌ನಿಂದ ಹೇಳಿಸಿಕೊಂಡು ರಸ್ತೆ ಗುಂಡಿ ಮುಚ್ಚುತ್ತಿಲ್ಲ. ಎಲ್ಲೆಲ್ಲಿ ಗುಂಡಿಗಳಿವೆಯೋ ಅವನ್ನು ಮುಚ್ಚಲಾಗುತ್ತಿದೆ. ಇನ್ನು, ಬಿಜೆಪಿ ಸರ್ಕಾರ ಬಿಬಿಎಂಪಿಯಲ್ಲಿ 8 ಸಾವಿರ ಕೋಟಿ ರು. ಸಾಲವನ್ನು ಬಿಟ್ಟು ಹೋಗಿತ್ತು. ಸಾವಿರಾರು ಕೋಟಿ ರು. ಬಾಕಿ ಬಿಲ್ ಪಾವತಿಸದೇ ಉಳಿಸಲಾಗಿತ್ತು. ಅವೆಲ್ಲವನ್ನೂ ನಾವು ತೀರಿಸುತ್ತಿದ್ದೇವೆ ಎಂದರು.
