ಹಬ್ಬದ ನೆಪದಲ್ಲಿ ಖಾಸಗಿ ಬಸ್ ಟಿಕೆಟ್ ದರ ಸಿಕ್ಕಾಪಟ್ಟೆ ಏರಿಕೆ ಮಾಡುತ್ತಿರುವುದು ಗಮನಕ್ಕಿದೆ. ಕೆಎಸ್‌ಆರ್‌ಟಿಸಿಯಿಂದ ಹೆಚ್ಚುವರಿ 1500 ಬಸ್‌ ಸೇವೆ ಒದಗಿಸಲಾಗುತ್ತಿದೆ.

ಬೆಂಗಳೂರು (ಆ.24): ಗೌರಿ ಗಣೇಶ ಹಬ್ಬ ಮತ್ತು ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಸಾಲು ಸಾಲಾಗಿ ಊರುಗಳತ್ತ ಹೊರಟವರಿಂದ ಖಾಸಗಿ ಬಸ್‌ಗಳು ಸುಲಿಗೆ ಮಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ. ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ, ಹಬ್ಬದ ನೆಪದಲ್ಲಿ ಖಾಸಗಿ ಬಸ್ ಟಿಕೆಟ್ ದರ ಸಿಕ್ಕಾಪಟ್ಟೆ ಏರಿಕೆ ಮಾಡುತ್ತಿರುವುದು ಗಮನಕ್ಕಿದೆ. ಕೆಎಸ್‌ಆರ್‌ಟಿಸಿಯಿಂದ ಹೆಚ್ಚುವರಿ 1500 ಬಸ್‌ ಸೇವೆ ಒದಗಿಸಲಾಗುತ್ತಿದೆ. ಅದೇ ರೀತಿ ವಾಯುವ್ಯ, ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ಗಳು ಹೆಚ್ಚಿನ ಬಸ್‌ ಹಾಕುತ್ತಿವೆ.

ಖಾಸಗಿ ಬಸ್‌ಗಳು ಮೂರು,‌ ನಾಲ್ಕು ಪಟ್ಟು ಟಿಕೆಟ್ ದರ ಹೆಚ್ಚಳ ಮಾಡುತ್ತಿದ್ದು, ಪ್ರಯಾಣಿಕರಿಗೆ ತೊಂದರೆ ಆಗುತ್ತಿವೆ. ಹೀಗಾಗಿ ಕಳೆದ ಎರಡು ವರ್ಷದಿಂದ ನಾವೇ ಗರಿಷ್ಠ ಸಂಖ್ಯೆಯಲ್ಲಿ ಬಸ್‌ಗಳನ್ನು ಕಾರ್ಯಾಚರಣೆಗಿಳಿಸಿ ಜನರಿಗೆ ಅನುಕೂಲ ಮಾಡುತ್ತಿದ್ದೇವೆ ಎಂದು ಹೇಳಿದರು. ಲಗಾಮಿಲ್ಲದೆ ಮನಸೋ ಇಚ್ಛೆ ಟಿಕೆಟ್‌ ದರ ಏರಿಕೆಗೆ ಕಡಿವಾಣ ಹಾಕಬೇಕು. ಪ್ರತಿ ಹಬ್ಬಕ್ಕೂ ಮುನ್ನ ಖಾಸಗಿ ಬಸ್‌ಗಳಿಂದ ಮೂರ್ನಾಲ್ಕು ಪಟ್ಟು ಟಿಕೆಟ್ ದರ ಹೆಚ್ಚಳ ಮಾಡಲಾಗುತ್ತಿದೆ. ರಾಜ್ಯದಲ್ಲಿನ ಖಾಸಗಿ ಬಸ್‌ಗಳು ವಿಪರೀತ ಟಿಕೆಟ್ ದರ ಏರಿಸಿದರೆ ಪರ್ಮಿಟ್ ರದ್ದು ಎಚ್ಚರಿಕೆ ನೀಡಲಾಗಿದೆ.

ಆದರೆ, ಇದಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಲು ಸದ್ಯದ ಕಾನೂನಿನಲ್ಲಿ ಅವಕಾಶ ಇಲ್ಲ. ಆಲ್‌ ಇಂಡಿಯಾ ಪರ್ಮಿಟ್‌ ಅನ್ನು ಬಸ್‌ ಸಂಸ್ಥೆಗಳು ಪಡೆದಿರುತ್ತವೆ. ಇದು ಕೇಂದ್ರ ಸರ್ಕಾರದ ಅಡಿ ಬರುತ್ತದೆ. ಅವರೆ ದರ ನಿಯಂತ್ರಣ ಮಾಡಬೇಕಾಗುತ್ತದೆ ಎಂದರು. ಸೋಮವಾರ ಒಂದು ದಿನ ರಜೆ ತೆಗೆದುಕೊಂಡರೆ ಮಂಗಳವಾರ ಗೌರಿ ಹಬ್ಬ, ಬುಧವಾರ ಗಣೇಶ ಹಬ್ಬ ಸೇರಿ ಒಟ್ಟು ಐದು ದಿನಗಳ ರಜೆ ಸಿಗಲಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಉದ್ಯೋಗಿಗಳು ಈಗಾಗಲೇ ತಮ್ಮ ಕಚೇರಿಗಳಿಗೆ ರಜೆ ಹಾಕಿದ್ದಾರೆ. ಇದನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಮಾಲೀಕರು, ಟಿಕೆಟ್​ ದರ ದುಪ್ಪಟ್ಟು ಮಾಡಿದ್ದು, ಆಕ್ರೋಶ ವ್ಯಕ್ತವಾಗಿದೆ.

ಸಾಮಾಜಿಕ ಕಳಕಳಿಗೆ ಆದ್ಯತೆ ನೀಡಬೇಕು: ಮಾಧ್ಯಮಗಳು ಸಾಮಾಜಿಕ ಕಳಕಳಿ ಹೊಂದಿ ಸಮಾಜವನ್ನು ಸರಿ ದಾರಿಗೆ ಕೊಂಡೊಯ್ಯಲು ನೈಜ ವರದಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಇಂದು ಮಾಧ್ಯಮ ಕ್ಷೇತ್ರ ನಾಗಾಲೋಟದಲ್ಲಿ ಬೆಳೆಯುತ್ತಿದ್ದು, ತಂತ್ರಜ್ಞಾನಕ್ಕೆ ಹೊರಳಿಕೊಳ್ಳುತ್ತಿದೆ. ಆದರೆ, ಇದರ ನಡುವೆ ಮಾನವೀಯ ಕಳಕಳಿಯುಳ್ಳ ಜನ ಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವ ಸುದ್ದಿಗಳ ಕಡೆಗೆ ಗಮನ ಹರಿಸಬೇಕಿದೆ. ಸಮಾಜದ ಅಭಿವೃದ್ಧಿ ಕಾರ್ಯಕ್ರಮದ ಬಗ್ಗೆ ಗಮನ ಹರಿಸಬೇಕು.

ಮಾಧ್ಯಮಗಳು ಇಲ್ಲದಿದ್ದರೆ ಸರ್ಕಾರಗಳು, ಜನಪ್ರತಿನಿಧಿಗಳು ಮಾಡುವ ಯಾವುದೇ ಕೆಲಸ ಜನರನ್ನು ತಲುಪುವುದಿಲ್ಲ. ಮಾಧ್ಯಮಗಳಲ್ಲಿ ಪತ್ರಕರ್ತರ ಕೆಲಸ ಶ್ಲಾಘನೀಯವಾದದ್ದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪತ್ರಿಕೋದ್ಯಮದಲ್ಲಿ ಹತ್ತಾರು ವರ್ಷಗಳಿಂದ ಕಾರ್ಯನಿರ್ವಹಿಸಿ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿ ಪತ್ರಿಕೆಗಳು, ಚಾನಲ್‌ಗಳ ಜವಾಬ್ದಾರಿ ನಿರ್ವಹಿಸಿ ಸನ್ಮಾನ ಪಡೆದ ಎಲ್ಲ ಸಂಪಾದಕರಿಗೆ ಅಭಿನಂದನೆಗಳನ್ನು ತಿಳಿಸಿದರು.