Minister Priyank Kharge: ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಹೆಚ್ಚುತ್ತಿರುವ ಸಾಲದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
ಬೆಂಗಳೂರು: ಸಾಲವೂ ತಪ್ಪಲಿಲ್ಲ, ತುಪ್ಪವೂ ಸಿಗಲಿಲ್ಲ ಇದು ಮೋದಿ ಮ್ಯಾಜಿಕ್ ಎಂದು ಸಚಿವ ಪ್ರಿಯಾಂಕ್ ಖರ್ಗೆ (Minister Priyank Kharge) ಕೇಂದ್ರ ಸರ್ಕಾರದ (Central Government) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಲೇಖನವೊಂದರ ಫೋಟೋ ಹಂಚಿಕೊಂಡಿರುವ ಪ್ರಿಯಾಂಕ್ ಖರ್ಗೆ, ನರೇಂದ್ರ ಮೋದಿ ಸರ್ಕಾರ (PM Narendra Modi) ದೇಶಕ್ಕೆ ನೀಡಿದ ಕೊಡುಗೆ ಏನು? ಇಷ್ಟು ಸಾಲ (Loan) ಮಾಡಿದ್ದೇಕೆ? ಸಾಲದ ಹಣ ಎಲ್ಲಿ ಹೋಯ್ತು ಎಂದು ಸಾಲು ಸಾಲು ಪ್ರಶ್ನೆಗಳನ್ನು ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೆಲವು ಅಂಕಿ-ಅಂಶಗಳೊಂದಿಗೆ ಸುದೀರ್ಘವಾದ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಕಮೆಂಟ್ ಮಾಡಿರುವ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಪೋಸ್ಟ್‌ನಲ್ಲಿ ಏನಿದೆ?
ಸಾಲವೂ ತಪ್ಪಲಿಲ್ಲ, ತುಪ್ಪವೂ ಸಿಗಲಿಲ್ಲ. ಇದು ಮೋದಿ ಮ್ಯಾಜಿಕ್
- *1947ರಿಂದ 2014ರವರೆಗೆ ಭಾರತದ ಬಾಹ್ಯ ಸಾಲ - 54 ಲಕ್ಷ ಕೋಟಿ
- *2014ರಿಂದ 2025ರವರೆಗೆ 200.16 ಲಕ್ಷ ಕೋಟಿಗೆ ಏರಿದೆ
- *ಕೇವಲ 10 ವರ್ಷಗಳಲ್ಲಿ 130 ಲಕ್ಷ ಕೋಟಿ ಸಾಲ ಮಾಡಿದೆ ಬಿಜೆಪಿಯ ಕೇಂದ್ರ ಸರ್ಕಾರ
- **ಪಾವತಿಸುತ್ತಿರುವ ಬಡ್ಡಿ 12.76 ಲಕ್ಷ ಕೋಟಿ!
ಸ್ವಾತಂತ್ರ್ಯ ನಂತರ 67 ವರ್ಷಗಳಲ್ಲಿ ಶೂನ್ಯದಿಂದ ದೇಶವನ್ನು ಕಟ್ಟಲಾಗಿದೆ. ಬೃಹತ್ ಡ್ಯಾಮ್ ಗಳನ್ನು, ಬೃಹತ್ ಕೈಗಾರಿಕೆಗಳನ್ನು, ವಿಸ್ತಾರದ ರೈಲ್ವೆ ವ್ಯವಸ್ಥೆಯನ್ನು, ಏಮ್ಸ್ ನಂತಹ ಸುಸಜ್ಜಿತ ಆಸ್ಪತ್ರೆಗಳನ್ನು, ಶಿಕ್ಷಣ ಸಂಸ್ಥೆಗಳನ್ನು ಕಟ್ಟಲಾಗಿದೆ. ಬಾಹ್ಯಾಕಾಶ ಸಾಧನೆಗಳನ್ನು ಮಾಡಲಾಗಿದೆ. ಮೂರು ಯುದ್ಧಗಳನ್ನು ಎದುರಿಸಲಾಗಿದೆ. ಜಗತ್ತಿನ 4ನೇ ಶಕ್ತಿಶಾಲಿ ಸೈನ್ಯವನ್ನು ಕಟ್ಟಲಾಗಿದೆ. ರಸ್ತೆ, ನೀರು, ವಿದ್ಯುತ್ ನಂತಹ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ಅಣು ಪರೀಕ್ಷೆ ನಡೆಸಲಾಗಿದೆ. 67 ವರ್ಷಗಳಲ್ಲಿನ ಇಷ್ಟೆಲ್ಲಾ ಸಾಧನೆಗಳ ಹೊರತಾಗಿಯೂ ಭಾರತದ ಸಾಲ 54 ಲಕ್ಷ ಕೋಟಿ ಮಾತ್ರವಿತ್ತು.
ಪ್ರಧಾನಿ ಮೋದಿಗೆ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆ
ಆದರೆ ಕೇವಲ 10 ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚು ಸಾಲ ಮಾಡಿದ ಮೋದಿ ಸರ್ಕಾರ ದೇಶಕ್ಕೆ ಕೊಟ್ಟಿದ್ದೇನು? ಈ ಸಾಲದ ಹಣ ಎಲ್ಲಿ ಹೋಯ್ತು? ಎಲ್ಲಿ ವಿನಿಯೋಗವಾಯ್ತು? ತೆರಿಗೆ ಹೆಸರಲ್ಲಿ ಜನರನ್ನು ಸುಲಿಗೆ ಮಾಡುತ್ತಿದ್ದರೂ ಇಷ್ಟು ಮೊತ್ತದ ಸಾಲ ಮಾಡಿದ್ದೇಕೆ? ಯಾರ ಜೇಬು ತುಂಬಿಸುವುದಕ್ಕೆ? ಬಿಜೆಪಿ ಈ ಬಗ್ಗೆ ಮಾತನಾಡುವುದೇ? ಪ್ರಧಾನಿ ಕೇವಲ ಒಂದೇ ಒಂದಾದರೂ ಪತ್ರಿಕಾಗೋಷ್ಠಿ ನಡೆಸಿ ಈ ಬೃಹತ್ ಸಾಲದ ಕಾರಣವನ್ನು ತಿಳಿಸುವರೇ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಮೆಟ್ರೋ ಉದ್ಘಾಟನೆಗೆ ಆರ್.ಅಶೋಕ್‌ಗೆ ಆಹ್ವಾನ ಇಲ್ಲ; ಇದು ಕುರ್ಚಿ ಕಿತ್ತುಕೊಳ್ಳುವ ಸಂದೇಶವೆಂದ ಪ್ರಿಯಾಂಕ್ ಖರ್ಗೆ!
ನೆಟ್ಟಿಗರು ಹೇಳಿದ್ದೇನು?
ಕೊಟ್ಟೊವರು ಅಮೆರಿಕ ತಾನೇ ನೋಡ್ಕೊಳೋಣ ಬಿಡಿ . ಯಾರ್ ಹೆಂಗ್ ಆದ್ರು ಹೋಗ್ಲಿ ನೀವ್ ಸಾಲ ಮಾಡೋಕೆ ಹೋಗಬೇಡಿ ಪ್ರಿಯಾಂಕ್ ಸಾರ್ ಎಂದು ಬಾಲಕೃಷ್ಣ ಎಂಬವರು ಕಮೆಂಟ್ ಮಾಡಿದ್ದಾರೆ. ಇದೇ ಪೋಸ್ಟ್‌ಗೆ ಕೃಷ್ಣ ಮನೋಹರ್ ಎಂಬವರು ಪ್ರತಿಕ್ರಿಯಿಸಿದ್ದು, ಇದರ ಬಗ್ಗೆ ಬಹಿರಂಗ ಚರ್ಚೆಗೆ ಪ್ರತಾಪ್ ಸಿಂಹ ಕರೆದರೆ ನೀವ್ಯಾಕೆ ಹೋಗುತ್ತಿಲ್ಲ. ಬೇಕಾದ್ರೆ ಸಂತೋಷ್ ಲಾಡ್ ಮತ್ತು ಪ್ರದೀಪ್ ಈಶ್ವರ್ ಅವರನ್ನು ಜೊತೆಗೆ ಕರೆದುಕೊಂಡು ಹೋಗಿ ಎಂದು ಸಲಹೆ ನೀಡಿದ್ದಾರೆ. ಇದೇ ರೀತಿ ತರೇಹವಾರಿ ಕಮೆಂಟ್‌ಗಳು ಬಂದಿವೆ.
ಇದನ್ನೂ ಓದಿ:ಮತದಾರರ ಪಟ್ಟಿ ಹಗರಣ: ಮಹದೇವಪುರದಲ್ಲಿ ಅಕ್ರಮವಾಗಿ 4% ಹೆಚ್ಚಳ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
