Breaking News ದೇವಸ್ಥಾನದಿಂದ ಮರಳುತ್ತಿದ್ದ ಭಕ್ತರ ಬಸ್ ಅಪಘಾತ, 18 ಮಂದಿ ಸಾವು, ಮೂವರು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಿಂತಿದ್ದ ವಾಹನಕ್ಕೆ ಬಸ್ ಡಿಕ್ಕಿಯಾಗಿದೆ. ಬಸ್ ಬಹುತೇಕ ನಜ್ಜು ಗುಜ್ಜಾಗಿದೆ.

ಫಲೋಡಿ (ನ.02) ದೇವಸ್ಥಾನಕ್ಕೆ ದರ್ಶನ ಮಾಡಿ ಮರಳಿ ಬರುತ್ತಿದ್ದ ಭಕ್ತರ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಟ್ರೈಲರ್ ವಾಹನಕ್ಕೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಬಸ್‌ನಲ್ಲಿದ್ದ ಭಕ್ತರ ಪೈಕಿ 18 ಮಂದಿ ಮೃತಪಟ್ಟಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ರಾಜಸ್ಥಾನದ ಪಲೋಡಿ ಜಿಲ್ಲೆಯ ಮಟೋದ ಬಳಿ ನಡೆದಿದೆ. ಜೋಧಪುರದಿಂದ ಮರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೋಲಾಯತ್ ದೇವಸ್ಥಾನಕ್ಕೆ ತೆರಳಿ ಮರಳುತ್ತಿದ್ದಾಗ ಘಟನೆ

ಬಿಕಾನೆರ್ ಬಳಿಯ ಕೋಲಾಯತ್ ದೇವಸ್ಥಾನಕ್ಕೆ ತೆರಳಿ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಕ್ತರು ಬಸ್ ಮೂಲಕ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ಮರಳುತ್ತಿದ್ದರು.ಟ್ರೈಲರ್ ವಾಹನ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿತ್ತು. ಈ ವೇಳೆ ವೇಗವಾಗಿ ಬರುತ್ತಿದ್ದ ಬಸ್ ನಿಯಂತ್ರಣ ತಪ್ಪಿ ನಿಂತಿದ್ದ ಟ್ರೈಲರ್ ವಾಹನಕ್ಕೆ ಡಿಕ್ಕಿಯಾಗಿದೆ. ಬಸ್‌ನಲ್ಲಿದ್ದ ಹಲವು ಪ್ರಯಾಣಿಕರು ಸ್ಥಳಕ್ಕೆ ಮೃತಪಟ್ಟಿದ್ದಾರೆ. ಸ್ಥಳೀಯರು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳ ಆಸ್ಪತ್ರೆ ದಾಖಲಿಸಿದ್ದಾರೆ. ಬಸ್‌ನಲ್ಲಿದ್ದ ಎಲ್ಲಾ ಭಕ್ತರು ಜೋಧಪುರದ ಸುರಸಾಗರ್ ವಲಯದ ನಿವಾಸಿಗಳು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ಮಟೋದ ಪೊಲೀಸ್ ಠಾಣೆಯ ಅಧಿಕಾರಿ ಅಮನ್‌ರಾಮ್ ಸ್ಥಳಕ್ಕೆ ದಾವಿಸಿದ್ದಾರೆ. ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರವಾಸಿಗರ ಬಸ್ ಅತೀವೇಗದಲ್ಲಿ ಸಾಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಕುರಿತು ಮಟೋದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಆಘಾತ ವ್ಯಕ್ತಪಡಿಸಿದ ಮುಖ್ಯಮಂತ್ರಿ

ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಬಸ್ ಅಪಘಾತಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಆಡಳಿತಕ್ಕೆ ಕರೆ ಮಾಡಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ. ಇದೇ ವೇಳೆ ಮಡಿದ ಕುಟುಬಸ್ಥರ ಜೊತೆ ಸರ್ಕಾರ ನಿಲ್ಲಲಿದೆ ಎಂದು ಶರ್ಮಾ ಹೇಳಿದ್ದಾರೆ.

ಬಸ್ ಹೊತ್ತಿ ಉರಿದ ದುರಂತ

ಬಸ್ ಹೊತ್ತಿ ಉರಿದು 28 ಮಂದಿ ಮೃತಪಟ್ಟ ಘಟನೆ ಬೆನ್ನಲ್ಲೇ ಮತ್ತೊಂದು ದುರಂತ ಸಂಭವಿಸಿದೆ. ಕಳೆದ ತಿಂಗಳು ಬಸ್ ಸ್ಲೀಪರ್ ಬಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದು ದುರಂತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ 28 ಮಂದಿ ಸಜೀವ ದಹನವಾಗಿದ್ದರು. ಜೈಸಲ್ಮೇರ್‌ನಲ್ಲಿ ಈ ಅವಘಡ ಸಂಭವಿಸಿತ್ತು.