U19 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಪ್ರತಿನಿಧಿಸಿದ ಕ್ರಿಕೆಟಿಗ ಭೀಕರ ರಸ್ತೆ ಅಪಘಾತದಲ್ಲಿ ಸಾವು , ಘಟನೆಗೆ ಆಘಾತ ವ್ಯಕ್ತಪಡಿಸಿರುವ ಕ್ರಿಕೆಟ್ ಸಂಸ್ಥೆ ತೀವ್ರ ಸಂತಾಪ ಸೂಚಿಸಿದೆ. ಕಾರು ಅಪಘಾತದಲ್ಲಿ ಮೃತಪಟ್ಟ ಕ್ರಿಕೆಟಿಗನ ಕುಟುಂಬಕ್ಕೆ ಹಲವರು ಸಂತಾಪ ಸೂಚಿಸಿದ್ದಾರೆ. 

ತ್ರಿಪುರ (ನ.02) ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸಿ ಗಮನ ಸೆಳೆದಿದ್ದ ಆಲ್‌ರೌಂಡರ್, ಮಾಜಿ ರಣಜಿ ಕ್ರಿಕೆಟಿಗ ರಾಜೇಶ್ ಬಾನಿಕ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ತ್ರಿಪುರ ರಣಜಿ ತಂಡದ ಮೂಲಕ ದೇಶಿ ಕ್ರಿಕೆಟ್‌ನಲ್ಲಿ ಭಾರಿ ಸಂಚವನ ಸೃಷ್ಟಿಸಿದ್ದ ರಾಜೇಶ್ ಬಾನಿಕ್ ಬಳಿಕ ಆಯ್ಕೆ ಸಮಿತಿ ಸದಸ್ಯನಾಗಿ ಗಮನಸೆಳೆದಿದ್ದರು. ಇಗೀಗ ಕಾರು ಅಪಘಾತದಲ್ಲಿ ರಾಜೇಶ್ ಬಾನಿಕ್ ಮೃತಪಟ್ಟಿದ್ದಾರೆ. ಘಟನೆಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ತ್ರಿಪುರ ಕ್ರಿಕೆಟ್ ಸಂಸ್ಥೆ, ಕುಟುಂಬಕ್ಕೆ ಸಂತಾಪ ಸೂಚಿಸಿದೆ.

ಪಶ್ಚಿಮ ತ್ರಿಪುರಾದಲ್ಲಿ ನಡೆದ ಅಪಘಾತ

ಪಶ್ಚಿಮ ತ್ರಿಪುರಾದ ಆನಂದನಗರದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಟೀಂ ಇಂಡಿಯಾ ಪ್ರತಿನಿಧಿಸಿದ್ದ ಕ್ರಿಕೆಟಿಗ ರಾಜೇಶ್ ಬಾನಿಕ್ ಮೃತಪಟ್ಟಿದ್ದಾರೆ. 40 ವರ್ಷದ ರಾಜೇಶ್ ಬಾನಿಕ್ ತಂದೆ, ತಾಯಿ ಹಾಗೂ ಸಹೋದರನ ಅಗಲಿದ್ದಾರೆ. ತ್ರಿಪುರ ರಣಜಿ ತಂಡದ ಪ್ರಮುಖ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿದ್ದ ರಾಜೇಶ್ ಬಾನಿಕ್, ಸದ್ಯ ತ್ರಿಪುರ ಅಂಡರ್ 16 ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಘಟನೆ ಕುರಿತು ಕ್ರಿಕೆಟ್ ಸಂಸ್ಥೆ ಪ್ರತಿಕ್ರಿಯೆ

ತ್ರಿಪುರ ಕಂಡ ಉತ್ತಮ, ಪ್ರತಿಭಾನ್ವಿತ ಕ್ರಿಕೆಟಿಗ, ಆಯ್ಕೆ ಸಮಿತಿ ಸದಸ್ಯ ರಾಜೇಶ್ ಬಾನಿಕ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಅನ್ನೋ ಸುದ್ದಿ ನಿಜಕ್ಕೂ ಆಘಾತ ತಂದಿದೆ. ನಾವು ಅತ್ಯುತ್ತಮ ಅಲ್‌ರೌಂಡರ್ ಕ್ರಿಕೆಟಿಗನನ್ನು, ಓಬ್ಬ ಉತ್ತಮ ಆಯ್ಕೆಗಾರನನ್ನು, ಆಡಳಿತಗಾರನನ್ನು ಕಳೆದುಕೊಂಡಿದ್ದೇವೆ. ಈ ಘಟನೆಯಿಂದ ಆಘಾತವಾಗಿದೆ. ರಾಜೇಶ್ ಬಾನಿಕ್ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬ ಹಾಗೂ ಆಪ್ತರಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ತ್ರಿಪುರ ಕ್ರಿಕೆಟ್ ಸಂಸ್ಥೆ ಪ್ರಕಟಣೆಯಲ್ಲಿ ಹೇಳಿದೆ.

2002-03ನೇ ಆವೃತ್ತಿಯಲ್ಲಿ ರಣಜಿಗೆ ಪಾದರ್ಪಣೆ

2002-03ರ ರಣಜಿ ಟೂರ್ನಿಯಲ್ಲಿ ರಾಜೇಶ್ ಬಾನಿಕ್ ತ್ರಿಪುರ ರಣಜಿ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಬಲಗೈ ಬ್ಯಾಟ್ಸಮನ್ ಹಾಗೂ ಬಲೈಗೆ ಸ್ಪಿನ್ನರ್ ಆಗಿದ್ದ ರಾಜೇಶ್ ಬಾನಿಕ್, ತ್ರಿಪುರಾದ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. 42 ಪ್ರಥಮ ದರ್ಜೆ ಪಂದ್ಯ ಆಡಿರುವ ರಾಜೇಶ್ ಬಾನಿಕ್, 1,469 ರನ್ ಸಿಡಿಸಿದ್ದರು. 24 ಲಿಸ್ಟ್ ಎ ಗೇಮ್ ಆಡುವ ಮೂಲಕ 378 ರನ್ ಸಿಡಿಸಿದ್ದರು. ತ್ರಿಪುರ ಪರ 18 ಟಿ20 ಪಂದ್ಯಗಳನ್ನು ಆಡಿದ್ದಾರೆ.