ಭರ್ಜರಿ ಬ್ಯಾಚುಲರ್ಸ್ ಷೋನಲ್ಲಿ ಅತಿ ಹೆಚ್ಚು ಮುತ್ತುಕೊಟ್ಟಿರೋ ಜೋಡಿ ಎನ್ನಿಸಿಕೊಂಡಿರೋ ರಕ್ಷಕ್ ಬುಲೆಟ್ ಮತ್ತು ರಮೋಲಾ ಜೋಡಿ ಈ ಬಗ್ಗೆ ಮಾತನಾಡಿದೆ. 'ಮುತ್ತು ಕೊಡು ಇಲ್ಲಾ ಮೇಲಿಂದ ಬಿದ್ದು ಸಾಯಿ' ಅಂದಿದ್ದಕ್ಕೆ ಮುತ್ತುಕೊಟ್ಟಿರುವುದಾಗಿ ಹೇಳಿದ್ದಾರೆ. ಏನಿದು?
ಭರ್ಜರಿ ಬ್ಯಾಚುಲರ್ಸ್ ಷೋ (Bharjari Bachelors ) ಮುಗಿದಿದೆ. ಇತ್ತೀಚಿನ ದಿನಗಳಲ್ಲಿ ರಿಯಾಲಿಟಿ ಷೋಗಳಲ್ಲಿ ಕಾಮಿಡಿ ಎಂದರೆ ಡಬಲ್ ಮೀನಿಂಗ್ ಎನ್ನುವ ಸ್ಥಿತಿ ಇದೆ. ಕೆಲವು ಆ್ಯಂಕರ್ಗಳು ಡಬಲ್ ಮೀನಿಂಗ್ಗಳನ್ನೇ ಹಾಸ್ಯ ಎಂದುಕೊಂಡಂತಿರುತ್ತದೆ. ಅದಕ್ಕೆ ತೀರ್ಪುಗಾರರಾಗಿ ಬರುವವರೂ ಸಾಥ್ ನೀಡುತ್ತಲೇ ಆ ಡಬಲ್ ಮೀನಿಂಗ್ ಅನ್ನು ಮತ್ತಷ್ಟು ಅಶ್ಲೀಲ ಎಂಬಂತೆ ಬಿಂಬಿಸುತ್ತಿದ್ದಾರೆ. ಅದೂ ಸಾಲದು ಎನ್ನುವುದಕ್ಕೆ ಕೆಲವೊಂದು ಕಾರ್ಯಕ್ರಮಗಳಲ್ಲಿ ಕೂಡ ಹಾಸ್ಯದ ಹೆಸರಿನಲ್ಲಿ ರಿಯಾಲಿಟಿ ಷೋಗಳಲ್ಲಿ ಅಶ್ಲೀಲತೆಯೇ ತುಂಬಿ ಹೋಗಿದೆ. ಇಂದಿನ ಹಲವು ರಿಯಾಲಿಟಿ ಷೋಗಳಲ್ಲಿ ಅದರ ಮೂಲ ಉದ್ದೇಶ ಬಿಟ್ಟು ಅಸಭ್ಯ ಮಾತುಗಳು, ಜೋಕ್ಗಳು, ಅಬ್ಬರದ ಕೂಗಾಟ, ಕಿರುಚಾಟಗಳೇ ಹೆಚ್ಚಾಗಿವೆ ಎಂದು ಬೈದುಕೊಳ್ಳುತ್ತಲೇ ಅದನ್ನು ಆಸ್ವಾದಿಸುವ ದೊಡ್ಡ ವರ್ಗವೇ ಇದೆ. ಮಕ್ಕಳ ಕಾರ್ಯಕ್ರಮಗಳಲ್ಲಿಯೂ ಮಕ್ಕಳ ಬಾಯಲ್ಲಿಯೇ ಡಬಲ್ ಮೀನಿಂಗ್ ಹೇಳಿಸಿ ಅದನ್ನು ಹಾಸ್ಯ ಎಂದುಕೊಳ್ಳುವ ಕಾರ್ಯಕ್ರಮಗಳು ಎಷ್ಟಿಲ್ಲ ಹೇಳಿ? ತಾವೇನು ಹೇಳುತ್ತಿದ್ದೇವೆ ಎನ್ನುವುದು ತಿಳಿಯದ ಮಕ್ಕಳು, ತಾವು ಹೇಳಿದ್ದನ್ನು ಕೇಳಿ ಜನರು ನಗುವಾಗ ಖುಷಿ ಪಡುವ ಅಸಭ್ಯ ಸಂಸ್ಕೃತಿಯನ್ನೂ ಇಂದಿನ ರಿಯಾಲಿಟಿ ಷೋಗಳು ಹುಟ್ಟುಹಾಕುತ್ತಿವೆ!
ಕೆಲ ದಿನಗಳ ಹಿಂದೆ ರಿಯಾಲಿಟಿ ಷೋಗಳಲ್ಲಿನ ಇದೇ ಡಬಲ್ ಮೀನಿಂಗ್ಗಳ (Doubble meaning) ಬಗ್ಗೆ ಅಸಮಾಧಾನ ಹೊರಹಾಕಿದ್ದರು ನಟ ರವಿಚಂದ್ರನ್. ಈಗಲೂ ತೀರ್ಪುಗಾರರಾಗಿರುವ ರವಿಚಂದ್ರನ್ ಅವರು ಇದೀಗ ಇಂಥ ಷೋಗಳಲ್ಲಿನ ಅಸಭ್ಯ, ಅಶ್ಲೀಲ ಮಾತುಗಳ ಬಗ್ಗೆ ಖೇದ ವ್ಯಕ್ತಪಡಿಸಿದ್ದರು. ಆದರೆ ಅವರ ಸಮ್ಮುಖದಲ್ಲಿಯೇ ನಟಿ ರಮೋಲಾ ಡಬಲ್ ಮೀನಿಂಗ್ ಮಾತನಾಡಿದ್ದು, ಅದಕ್ಕೆ ಆ್ಯಂಕರ್ ಉಪ್ಪು-ಖಾರ ಹಾಕಿದ್ದು, ಅದನ್ನು ನೋಡಿ ಖುದ್ದು ರವಿಚಂದ್ರನ್ ಅವರು ನಕ್ಕಿದ್ದು ವಿಡಿಯೋ ವೈರಲ್ ಆಗಿತ್ತು.
ಇದೀಗ ಈ ಷೋನಲ್ಲಿ ಅತ್ಯಂತ ಹೆಚ್ಚು ಮುತ್ತು ಕೊಟ್ಟಿರೋ ಜೋಡಿ ಎನ್ನಿಸಿಕೊಂಡಿರೋ ರಕ್ಷಕ್ ಬುಲೆಟ್ ಮತ್ತು ರಮೋಲಾ, ಈ ಬಗ್ಗೆ ಮಾತನಾಡಿದ್ದಾರೆ. ತಮಗೆ ಮುತ್ತು ಕೊಡಲು ಇಷ್ಟವಿಲ್ಲದಿದ್ದರೂ ಬಲವಂತದಿಂದ ಕೊಡಿಸಿದ್ರು ಎಂದು ರಕ್ಷಕ್ ಹೇಳಿಕೊಂಡಿದ್ದಾರೆ. ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ರಕ್ಷಕ್, 'ನನಗೆ ಮುತ್ತು ಕೊಡಲು ಇಷ್ಟವಿರಲಿಲ್ಲ. ನಾನು ಸುಮ್ಮನೇ ಇದ್ದೆ. ಬಲವಂತದಿಂದ ಕೊಡಿಸಿದ್ರು. ಮುತ್ತು ಕೊಡುವುದು ಎಂದರೆ ನನಗೆ ಸಿಕ್ಕಾಪಟ್ಟೆ ನಾಚಿಕೆ. ನನಗೆ ಆರಂಭದಲ್ಲಿ ರೊಮ್ಯಾಂಟಿಕ್ ಡಾನ್ಸ್ ಮಾಡಿಸಿದ್ರು. ಮೊದಲಿಗೆ ಇವರನ್ನು (ರಮೋಲಾ) ರನ್ನು ಟಚ್ ಮಾಡಲೂ ನಾಚಿಕೆ ಆಗ್ತಿತ್ತು. ಅಂಥದ್ದರಲ್ಲಿ ಮುತ್ತು ಕೊಟ್ಟಿದ್ದೇನೆ ಎಂದರೆ ಅರ್ಥಮಾಡಿಕೊಳ್ಳಿ. ರಮೋಲಾ (Ramola) ನನ್ನನ್ನು ಎಷ್ಟು ಚೇಂಜ್ ಮಾಡಿದ್ದಾರೆ' ಎಂದು ಹೇಳಿದರು. ಅದಕ್ಕೆ ರಮೋಲಾ, ಇವನು ಮಾಡೋದನ್ನು ನೋಡಿ ರವಿ ಸರ್, ಎದ್ದುಬಂದು ಕುತ್ತಿಗೆ ಹಿಡಿದು ಮುತ್ತು ಕೊಡಿಸ್ತಿದ್ರು ಎಂದರು. ರವಿ ಸರ್ ಅವರಿಂದಲೇ ಇವನು ಮುತ್ತುಕೊಟ್ಟಿದ್ದು. ಮುತ್ತುಕೊಡು, ಇಲ್ಲಾಂದ್ರೆ ಅಲ್ಲಿಂದಲೇ ಹಾರಿಬಿದ್ದು ಸತ್ತುಬಿಡು ಎಂದ್ರು ಎಂದು ರಮೋಲಾ ನೆನಪಿಸಿಕೊಂಡಿದ್ದಾರೆ. ಅವರು ಹಾಗೆ ಹೇಳಿದ ಮೇಲೆ ಮುತ್ತುಕೊಟ್ಟ. ಒಂದು ಸಲ ಕೊಟ್ಟ ಮೇಲೆ ರೂಢಿಯಾಯ್ತು ಎಂದಿದ್ದಾರೆ. ಆಮೇಲೆ ಷೋನಲ್ಲಿ ಛಾನ್ಸ್ ಸಿಕ್ಕಿದಾಗಲೆಲ್ಲಾ ಕೊಟ್ಟರು ಎಂದಿದ್ದಾರೆ.
ಈ ಹಿಂದೆ ಕೂಡ ಈ ಜೋಡಿ ಮಾತನಾಡಿದ್ದ ವಿಷಯದ ಬಗ್ಗೆ ವೇದಿಕೆಯಲ್ಲಿ ಡಬಲ್ ಮೀನಿಂಗ್ ವಾತಾವರಣ ಸೃಷ್ಟಿಯಾಗಿ, ಸಾಕಷ್ಟು ಟೀಕೆಗೆ ಒಳಗಾಗಿತ್ತು. ರಮೋಲಾ ಅವರು, ಬುಲೆಟ್ ರಕ್ಷಕ್ ಕುರಿತು ಈ ಡಾನ್ಸ್ ಹೇಳಿಕೊಡುವುದು ನನಗೆ ತುಂಬಾ ಕಷ್ಟವಾಯಿತು. ಏಕೆಂದರೆ ಬುಲೆಟ್ಗೆ ಇದಿಲ್ಲ ಎಂದಿದ್ದರು. ಆಗ ಅಲ್ಲಿದ್ದವರು ಎಲ್ಲಾ ಗೊಳ್ಳೆಂದು ನಕ್ಕರೆ, ರಕ್ಷಕ್ (Bullet Rakshk) ಮುಖ ಮಾತ್ರ ಸಪ್ಪಗಾಗಿತ್ತು. ನಂತರ ಆ್ಯಂಕರ್ ನಿರಂಜನ್ ಏನದು ಎಂದು ಕೇಳಿದಾಗ, ನಿಮಗೆ ಇದೆಯಲ್ಲ, ಇದು ರಕ್ಷಕ್ಗೆ ಇಲ್ಲ ಎನ್ನುತ್ತಲೇ ನೀವು ಸಮಯ ಸಿಕ್ಕಾಗ ಹಗ್ ಮಾಡಿಕೊಳ್ಳುತ್ತೀರಲ್ಲ, ರಕ್ಷಕ್ ಹಾಗೆ ಮಾಡಿಕೊಳ್ಳುವುದಿಲ್ಲ. ನಾನೇ ಅವರ ಕೈಹಿಡಿಯಬೇಕು ಎಂದೆಲ್ಲಾ ಆ್ಯಕ್ಷನ್ ಮಾಡಿ ತೋರಿಸಿದಾಗ, ನಿರಂಜನ್ ಅವರು ಇವರ್ಯಾಕೋ ಏನೇನೋ ಹೇಳ್ತಿದ್ದಾರೆ ಎಂದರು. ಅದಕ್ಕೆ ರವಿಚಂದ್ರನ್ ಅವರೂ ನಕ್ಕಿದ್ದರು.
