ಪೊಲೀಸ್ ಹೇಳುವಂತೆ ಈ ಪ್ರಕರಣದ ಅಪರಾಧಿ ಎಂಟು ಅಂಕಣದ ಒಳಗೆ ನಿಜಕ್ಕೂ ಇರುತ್ತಾನಾ ಅಥವಾ ಈ ಚೌಕಟ್ಟು ಮೀರಿದ ಇನ್ನೊಂದು ಸಾಧ್ಯತೆ ಇದೆಯಾ ಎನ್ನುವುದನ್ನು ಕುಂಟೆಬಿಲ್ಲೆ ಎಳೆಎಳೆಯಾಗಿ ವಿವರಿಸುತ್ತದೆ.
ಪ್ರಿಯಾ ಕೆರ್ವಾಶೆ
‘ಕುಂಟೆಬಿಲ್ಲೆಯಲ್ಲಿ 8 ಅಂಕಣಗಳು. ಕಳ್ಳ ಈ ಎಂಟರೊಳಗೇ ಯಾವುದಾದರೊಂದು ಅಂಕಣದೊಳಗೆ ಇರುತ್ತಾನೆ. ಊಹೆ ಮೀರಿ ದಿಕ್ಕುತಪ್ಪಿಸುತ್ತಾನೆ. ಪೊಲೀಸ್ ಕನ್‌ಫ್ಯೂಸ್ ಆಗಬಾರದು.’ ಇದು ಸರ್ಕಲ್ ಇನ್ಸ್‌ಪೆಕ್ಟರ್ ಅಶೋಕ್ ಹೇಳುವ ಮಾತು. ಆತನ ಮುಂದೆ ಒಬ್ಬ ಹೆಣ್ಣಿನ ಮೃತದೇಹ ಇದೆ, ಆಕೆ ಸತ್ತು ಮೂರ್ನಾಲ್ಕು ಗಂಟೆಯ ಬಳಿಕ ಆಕೆಯ ಮೇಲೆ ಅತ್ಯಾ*ಚಾರ ನಡೆದಿದೆ. ಆಕೆಯ ಮೇಲಿನ ದೌರ್ಜನ್ಯಕ್ಕೆ ಹೊಣೆ ಯಾರು ಎನ್ನುವುದು ಯಕ್ಷಪ್ರಶ್ನೆ.
ಪೊಲೀಸ್ ಹೇಳುವಂತೆ ಈ ಪ್ರಕರಣದ ಅಪರಾಧಿ ಎಂಟು ಅಂಕಣದ ಒಳಗೆ ನಿಜಕ್ಕೂ ಇರುತ್ತಾನಾ ಅಥವಾ ಈ ಚೌಕಟ್ಟು ಮೀರಿದ ಇನ್ನೊಂದು ಸಾಧ್ಯತೆ ಇದೆಯಾ ಎನ್ನುವುದನ್ನು ‘ಕುಂಟೆಬಿಲ್ಲೆ’ ಎಳೆಎಳೆಯಾಗಿ ವಿವರಿಸುತ್ತದೆ. ಇದೊಂದು ಕೊಲೆಯ ಬಗೆಗಿನ ತನಿಖಾ ಸ್ಟೋರಿಯಂತೆ ಅನಿಸಿದರೂ ಇದರಲ್ಲಿ ಪ್ರೇಮಕಥೆ ಇದೆ. ಅಮ್ಮ ಮಗನ ಸಂಬಂಧವನ್ನು ಒಂದು ಹಾಡಿನಲ್ಲಿ ಸುದೀರ್ಘವಾಗಿ ಹೇಳಿದ್ದಾರೆ. ಅನ್ಯಾಯದ ವಿರುದ್ಧ ರೊಚ್ಚಿಗೇಳುವ ನಾಯಕ ಕತ್ತಲೆ ಬೆಳಕಿನ ಹಿನ್ನೆಲೆಯಲ್ಲಿ ಸ್ಲೋಮೋಷನ್‌ನಲ್ಲಿ ಫೈಟ್ ಮಾಡುತ್ತಾನೆ. ಅಲ್ಲಿಗೆ ಆ್ಯಕ್ಷನ್ ಸೀಕ್ವೆನ್ಸ್ ಕೂಡ ಇದೆ.
ಚಿತ್ರ: ಕುಂಟೆಬಿಲ್ಲೆ
ನಿರ್ದೇಶನ: ಸಿದ್ದೇಗೌಡ ಜಿಬಿಎಸ್
ತಾರಾಗಣ: ಯದು ಬಾಲಾಜಿ, ಮೇಘಾಶ್ರೀ, ಸುಚೇಂದ್ರ ಪ್ರಸಾದ್
ಇದೆಲ್ಲದರ ಜೊತೆಗೆ ಜ್ವಲಂತವಾದ ಸಮಸ್ಯೆಯೊಂದರ ಬಗೆಗೆ ನಿರ್ದೇಶಕ ಸಿದ್ದೇಗೌಡ ಚರ್ಚಿಸಿದ್ದಾರೆ. ಜಗತ್ತು ಇಷ್ಟೆಲ್ಲ ಮುಂದುವರಿದಿದ್ದರೂ ಮನುಷ್ಯನ ಮೃಗೀಯ ವರ್ತನೆ ಯಾಕೆ ಸಂಸ್ಕರಣಗೊಂಡಿಲ್ಲ, ಜಾತಿಯ ವಿಷದ ಬೇರುಗಳು ಹೇಗೆ ಸಂಬಂಧಗಳ ಬಂಧವನ್ನೇ ಕಳಚಿ ಕರಾಳತೆ ತೋರಿಸುತ್ತದೆ ಎಂಬುದನ್ನು ಈ ಸಿನಿಮಾ ವಿವರಿಸುತ್ತದೆ. ಎಡಿಟಿಂಗ್, ಡೈಲಾಗ್, ತಾಂತ್ರಿಕ ಬೆಳವಣಿಗೆಯ ಸಾಧ್ಯತೆಗಳಿದ್ದವು. ಒಟ್ಟಿನಲ್ಲಿ ಹಳ್ಳಿಯ ಹಿನ್ನೆಲೆಯ ಕಥೆ ಅಲ್ಲಿನ ಪರಿಸರ, ಜನ ಜೀವನ, ಕಷ್ಟ ಸುಖಗಳನ್ನು ವಿವರಿಸುತ್ತಾ, ಇನ್ನೂ ಅಲ್ಲಿ ಜೀವಂತವಿರುವ ಕಂದಾಚಾರ, ಜೀತ ಪದ್ಧತಿ, ಜಾತಿ ರಾಜಕೀಯ ಇತ್ಯಾದಿಗಳ ಮೇಲೆ ಸಿನಿಮಾ ಬೆಳಕು ಚೆಲ್ಲುತ್ತದೆ.
