ಹಳ್ಳಿಗೊಬ್ಬಳು ಆಕಸ್ಮಿಕವಾಗಿ ಹುಡುಗಿ ಬರುವಲ್ಲಿಂದ ಕತೆ ಶುರುವಾಗುತ್ತದೆ. ಹಳ್ಳಿಯ ಚೆಲುವು, ಅಲ್ಲಿನ ನಾನಾ ರೀತಿಯ ಪಾತ್ರಗಳು, ಅಲ್ಲೊಂದು ತಟ್ಟಿ ಅಂಗಡಿ, ಮತ್ತೊಬ್ಬ ಆಟೋಡ್ರೈವರ್ ಇವರೆಲ್ಲರ ಜೊತೆ ಮುಖ್ಯಪಾತ್ರ ಅರಸಯ್ಯನ ಪ್ರೇಮಕತೆ ನಡೆಯುತ್ತಿರುತ್ತದೆ.
ರಾಜೇಶ್
ಅದೊಂದು ಹಳ್ಳಿ. ಅಲ್ಲೊಬ್ಬ ಇನ್ನೂ ಮದುವೆಯಾಗದ ತರುಣ. ದೇವಸ್ಥಾನದಲ್ಲಿ ಪೂಜೆ ಮಾಡುವುದು ಅವನ ಕೆಲಸ. ಜೊತೆಗೆ ತಂದೆಯ ಶಾಮಿಯಾನ ಅಂಗಡಿಯಲ್ಲಿ ನೆರವು. ಅವನಿಗೆ ಮದುವೆಗೆ ಹುಡುಗಿ ಹುಡುಕುವಲ್ಲಿಂದ, ಆ ಹಳ್ಳಿಗೊಬ್ಬಳು ಆಕಸ್ಮಿಕವಾಗಿ ಹುಡುಗಿ ಬರುವಲ್ಲಿಂದ ಕತೆ ಶುರುವಾಗುತ್ತದೆ. ಹಳ್ಳಿಯ ಚೆಲುವು, ಅಲ್ಲಿನ ನಾನಾ ರೀತಿಯ ಪಾತ್ರಗಳು, ಅಲ್ಲೊಂದು ತಟ್ಟಿ ಅಂಗಡಿ, ಮತ್ತೊಬ್ಬ ಆಟೋಡ್ರೈವರ್ ಇವರೆಲ್ಲರ ಜೊತೆ ಮುಖ್ಯಪಾತ್ರ ಅರಸಯ್ಯನ ಪ್ರೇಮಕತೆ ನಡೆಯುತ್ತಿರುತ್ತದೆ.
ಮೊದಲ ಭಾಗ ಪೂರ್ತಿ ಇದೇ ಪ್ರೇಮ ಕಥಾ ಪ್ರಸಂಗಗಳು. ಅವನ ಆಸಕ್ತಿ, ಅವಳ ನಿರಾಸಕ್ತಿ, ಅವನ ಒಳ್ಳೆಯತನ, ಅವಳ ಕರಗುವಿಕೆ ಇತ್ಯಾದಿ ಇತ್ಯಾದಿ ನಡೆಯುತ್ತಿರುವಾಗಲೇ ತಿರುವೊಂದು ಎದುರಾಗಿ ಮಧ್ಯಂತರ ಎದುರಾಗಿರುತ್ತದೆ. ದ್ವಿತೀಯಾರ್ಧದಲ್ಲಿ ಪ್ರೇಮಕತೆ ನಿಧಾನಕ್ಕೆ ಮತ್ತೊಂದು ಹಂತಕ್ಕೆ ಏರುತ್ತದೆ. ಅಲ್ಲಿ ಸಂಬಂಧದ ತಾಕಲಾಟಗಳು, ಸಮಾಜದ ಸಮಸ್ಯೆಗಳು, ಮನುಷ್ಯನ ದ್ರೋಹ ಚಿಂತನೆಗಳು ಎದುರಾಗಿ ಈ ಸಿನಿಮಾವನ್ನು ಚಿಂತನಾರ್ಹವನ್ನಾಗಿ ಮಾಡುತ್ತದೆ. ಮೊದಲಾರ್ಧ ತುಂಬಾ ಸರಳವಾಗಿದೆ, ಸಾವಧಾನದ ಬೆನ್ನೇರಿದೆ.
ಚಿತ್ರ: ಅರಸಯ್ಯನ ಪ್ರೇಮ ಪ್ರಸಂಗ
ನಿರ್ದೇಶನ: ಜೆವಿಆರ್ ದೀಪು
ತಾರಾಗಣ: ಮಹಾಂತೇಶ ಹಿರೇಮಠ, ರಶ್ಮಿತಾ ಆರ್ ಗೌಡ, ಪಿ.ಡಿ. ಸತೀಶ್, ರಘು ರಮಣಕೊಪ್ಪ
ರೇಟಿಂಗ್: 3
ಬಣ್ಣಬಣ್ಣದ ಜೋಕುಗಳು, ಅದದೇ ನೋವುಗಳು ಅಲ್ಲಲ್ಲಿ ಎದುರಾಗುತ್ತವೆ. ದ್ವಿತೀಯಾರ್ಧದಲ್ಲಿ ಸ್ವಲ್ಪ ಹೊರಳು ಹಾದಿಗಳು ಸಿಕ್ಕಿ ಪ್ರಯಾಣ ಆಕರ್ಷಕವಾಗುತ್ತದೆ. ಕಡೆಗೆ ವಿಶಾಲ ಹೈವೇ ದೊರೆತು ಎಲ್ಲವೂ ನಿರಾಳ. ಮಹಾಂತೇಶ ಹಿರೇಮಠ, ಪಿ.ಡಿ. ಸತೀಶ್, ರಶ್ಮಿತಾ ಸೊಗಸಾಗಿ ನಟಿಸಿದ್ದಾರೆ. ಲವಲವಿಕೆಯ ನಿರೂಪಣೆಯೂ ಗಮನ ಸೆಳೆಯುತ್ತದೆ. ಬಾಂಧವ್ಯಗಳ ಅಂತರಾಳ ಅರಿಯುವ ಪ್ರಯತ್ನಕ್ಕೆ ಮೆಚ್ಚುಗೆ ಸಲ್ಲುತ್ತದೆ.
