ಆಕಾಶ್ ಹಾಗೂ ಅಂಕಿತಾ ತಮ್ಮ ತಾಯಿಯರ ಜಿದ್ದನ್ನು ಬ್ರೇಕ್ ಮಾಡಿ ಲವ್ವಲ್ಲಿ ಬೀಳುತ್ತಾರೆ. ಇದರ ಪರಿಣಾಮ ಏನಾಯಿತು ಅನ್ನೋದನ್ನು ಸಿನಿಮಾ ತಿಳಿಹಾಸ್ಯ, ಭಾವನೆಗಳ ಸ್ಪರ್ಶದೊಂದಿಗೆ ಜಂಬೂ ಸರ್ಕಸ್ ವಿಮರ್ಶೆ ವಿವರಿಸುತ್ತದೆ.
ಪ್ರಿಯಾ ಕೆರ್ವಾಶೆ
ಈ ಸಿನಿಮಾದ ಟೈಟಲ್ ಕೇಳಿದಾಕ್ಷಣ ಇದ್ಯಾವುದೋ ಸರ್ಕಸ್ ಕಥೆ ಇರಬಹುದಾ ಅನ್ನೋ ಪ್ರಶ್ನೆ ಬರುತ್ತದೆ. ಆದರೆ ಇದರಲ್ಲಿ ಲೈಫಿನ ಸರ್ಕಸ್ಸನ್ನು ತೋರಿಸಲಾಗಿದೆ. ಜೊತೆಗೆ ತಂಗಾಳಿಯಂಥಾ ಪ್ರೇಮಕಥೆ ಇದೆ, ವಿರಹದ ಬೇಗೆ ಇದೆ, ಒಂದು ಭಾವನೆಯಿಂದ ಇನ್ನೊಂದಕ್ಕೆ ದಾಟಿಸಲು ನಗುವಿನ ಹಾಯಿದೋಣಿ ಇದೆ. ಇದು ಎರಡು ಕುಟುಂಬಗಳ ಕಥೆ. ಮುರಳಿ ಮತ್ತು ಶಂಕರ್ ಚಡ್ಡಿದೋಸ್ತಿಗಳು. ಆದರೆ ಇವರಿಬ್ಬರ ಪತ್ನಿಯರು ಪರಸ್ಪರ ಹಾವು ಮುಂಗುಸಿಗಳಂತೆ ಕಚ್ಚಾಡುವವರು. ಜಿದ್ದಿಗೆ ಬಿದ್ದವರಂತೆ ತಮ್ಮ ಮಕ್ಕಳನ್ನು ವೈರಿಗಳಾಗಿ ಬೆಳೆಸುತ್ತಾರೆ.
ಮಕ್ಕಳಾದ ಆಕಾಶ್ ಹಾಗೂ ಅಂಕಿತಾ ತಮ್ಮ ತಾಯಿಯರ ಜಿದ್ದನ್ನು ಬ್ರೇಕ್ ಮಾಡಿ ಲವ್ವಲ್ಲಿ ಬೀಳುತ್ತಾರೆ. ಇದರ ಪರಿಣಾಮ ಏನಾಯಿತು ಅನ್ನೋದನ್ನು ಸಿನಿಮಾ ತಿಳಿಹಾಸ್ಯ, ಭಾವನೆಗಳ ಸ್ಪರ್ಶದೊಂದಿಗೆ ವಿವರಿಸುತ್ತದೆ. ಗಮನ ಸೆಳೆಯುವುದು ನಾಯಕ ಪ್ರವೀಣ್ ತೇಜ್ ನಟನೆ. ಕಾಲೇಜ್ ಹುಡುಗನ ಚುರುಕುತನ, ಹುಮ್ಮಸ್ಸಿನ ಜೊತೆಗೆ ಡ್ಯಾನ್ಸ್, ಫೈಟ್‌ಗಳನ್ನೂ ಸೊಗಸಾಗಿ ನಿರ್ವಹಿಸಿದ್ದಾರೆ. ನಾಯಕಿ ಅಂಜಲಿ ಅನೀಶ್ ನಟನೆ ಚೆನ್ನಾಗಿದೆ. ವಾಸುಕಿ ವೈಭವ್ ಹಿನ್ನೆಲೆ ಸಂಗೀತ, ಹಾಡುಗಳು ತನ್ಮಯಗೊಳಿಸುತ್ತದೆ.
ಚಿತ್ರ: ಜಂಬೂ ಸರ್ಕಸ್
ನಿರ್ದೇಶನ: ಎಂ ಡಿ ಶ್ರೀಧರ್
ತಾರಾಗಣ: ಪ್ರವೀಣ್ ತೇಜ್, ಅಂಜಲಿ ಅನೀಶ್, ಲಕ್ಷ್ಮೀ ಸಿದ್ಧಯ್ಯ, ಸ್ವಾತಿ ಗುರುದತ್
ಆರಂಭದಲ್ಲಿ ನಾಟಕೀಯತೆ ಹೆಚ್ಚಿದೆ. ನಾಯಕಿಯ ತಾಯಿ ವನಿತಾ ಸೇನೆಯ ಅನಿತಾ ಮಾತು, ಈ ಕಾಲದ ಮನೆ ಕೆಲಸದವರನ್ನು ಪ್ರತಿನಿಧಿಸುವ ಹೆಣ್ಣುಮಗಳು- ಇವರೆಲ್ಲ ನಾಟಕದಂತೆ ಡೈಲಾಗ್ ಹೊಡೆಯುತ್ತಾರೆ. ನಿರ್ದೇಶಕ ಎಂ ಡಿ ಶ್ರೀಧರ್ ಪ್ರಯೋಗಾತ್ಮಕ ನೆಲೆಯಲ್ಲಿ ಇದನ್ನು ತಂದಿರಬಹುದು. ಸಿನಿಮಾದ ಮೊದಲರ್ಧ ನಾಯಕ, ನಾಯಕಿಯ ಜಗಳ, ಕೋಪ, ತುಂಟಾಟಗಳಿಗೆ ಮೀಸಲಾಗಿದ್ದರೆ, ಎರಡನೇ ಭಾಗದಲ್ಲಿ ಕಥೆ ಎಮೋಶನಲ್ ಆಗಿ ಸಾಗುತ್ತದೆ. ಕಿತ್ತಾಡುವವರಿಗೆ ವಾಸ್ತವ ದರ್ಶನ ಮಾಡಿಸಿ ಪ್ರೇಕ್ಷಕರು ನಿರಾಳರಾಗಿ ಮನೆಗೆ ತೆರಳುವಂತೆ ಮಾಡುತ್ತದೆ.
