ಸಂಜೆ ಮನೆಯ ಗಂಡಸರು ಬಂದಾಗ ಅವರಿಗೆ ಕೈ ಕಾಲು ತೊಳೆಯಲು ನೀರು ಕೊಟ್ಟು, ಅಡುಗೆ ಮಾಡಿ, ಊಟ ಬಡಿಸಿ, ಅವರು ಊಟ ಮಾಡಿ ಮಲಗಿದ ಬಳಿಕ ನಾವು ಹೆಂಗಸರು ಉಣ್ಣುವುದು ನಮ್ಮನೆಯ ಪದ್ಧತಿ.
ಪ್ರಿಯಾ ಕೆರ್ವಾಶೆ
ಹಗಲಿನಲ್ಲೇ ಸೂರ್ಯನ ಕಿರಣ ಸೋಂಕದಷ್ಟು ದಟ್ಟವಾಗಿ ಬೆಳೆದ ಕಾಡು, ಇನ್ನು ರಾತ್ರಿಯ ಕಥೆ ಹೇಗಿರಬಹುದು! ಹಾಗೊಂದು ಇರುಳಿನಲ್ಲಿ ನಡೆಯುವ ಸರಣಿ ಘಟನೆಗಳನ್ನಾಧರಿಸಿದ ಥ್ರಿಲ್ಲರ್, ಪ್ರೇಮ ಕಥಾನಕವೇ ಈ ಸಿನಿಮಾ. ಪ್ರೀತಿ ಉಳಿಸಿಕೊಳ್ಳಲು ಮನೆಬಿಟ್ಟು ಓಡಿಹೋಗುವ ಹುಡುಗಿ, ಅವಳನ್ನು ಸೇರಲು ಬರುವ ಹುಡುಗ, ಮಧ್ಯೆ ಘಟಿಸಿದ್ದೇನು ಅನ್ನುವುದೇ ಸಿನಿಮಾದ ಒನ್‌ಲೈನ್. ಪ್ರೇಮದ ತೀವ್ರತೆ, ಪರಿಸ್ಥಿತಿಯ ಕ್ರೌರ್ಯ, ನಂಬಿದವರನ್ನು ಕೈ ಬಿಡದ ಮಾದಪ್ಪ.. ಸಿನಿಮಾದ ಜೀವದ್ರವ್ಯಗಳು. ನಾಲ್ಕು ಆಯಾಮಗಳಲ್ಲಿ ಕಥೆಯ ಹರಿವಿದೆ.
ನಿರ್ದೇಶಕ ಪುನೀತ್ ರಂಗಸ್ವಾಮಿ ಸಣ್ಣ ಸಣ್ಣ ಇಮೇಜ್‌ಗಳಲ್ಲೇ ಹಲವು ವಿಚಾರ ಹೇಳುತ್ತಾರೆ. ಅದರಲ್ಲೊಂದು ಕಾಡು ದಾರಿಯಾಗಿ ಬರುವಾಗ ಪೊಲೀಸಪ್ಪನ ಬಳಿ ಹುಡುಗಿ ಹೇಳುವ ಮಾತು. ‘ಸಂಜೆ ಮನೆಯ ಗಂಡಸರು ಬಂದಾಗ ಅವರಿಗೆ ಕೈ ಕಾಲು ತೊಳೆಯಲು ನೀರು ಕೊಟ್ಟು, ಅಡುಗೆ ಮಾಡಿ, ಊಟ ಬಡಿಸಿ, ಅವರು ಊಟ ಮಾಡಿ ಮಲಗಿದ ಬಳಿಕ ನಾವು ಹೆಂಗಸರು ಉಣ್ಣುವುದು ನಮ್ಮನೆಯ ಪದ್ಧತಿ. ಆದರೆ ನನ್ನ ಹುಡುಗ ಹರೀಶ ಮೊದಲು ನನಗೆ ತಿನ್ನಿಸಿ ಆಮೇಲೆ ಅವನು ಊಟ ಮಾಡುತ್ತಾನೆ’.
ಇನ್ನೊಂದು, ನಟ್ಟ ನಡು ರಾತ್ರಿ ದಟ್ಟ ಕಾಡಿನ ಮಧ್ಯೆ ನಿಂತ ದಂತಚೋರ ವೀರ, ಮಿಂಚು ಹರಿದಾಗ ಮಿಂಚಿ ಮರೆಯಾಗುವ ಕಾಡಿನ ಅಗಾಧತೆ. ವೀರನ ಸಾಮ್ರಾಜ್ಯದ ವ್ಯಾಪ್ತಿಯ ಜೊತೆಗೆ ಆತನ ವ್ಯಕ್ತಿತ್ವವನ್ನೂ ಕಟ್ಟಿಕೊಡುವ ಪ್ರಯತ್ನವಿದು. ಇನ್ನೊಂದೆಡೆ ಪೊಲೀಸರ ಜಾಡು ತಪ್ಪಿಸಲು ಉಲ್ಟಾ ಚಪ್ಪಲಿ ತೊಡುವ ಖದೀಮರು. ಅಚ್ಚರಿ ಅಂದರೆ ಅವರ ಚಪ್ಪಲಿ ಗುರುತು ಉಲ್ಟಾ ಡೈರೆಕ್ಷನ್ ತೋರಿಸುತ್ತದೆ.
ಚಿತ್ರ: ಏಳುಮಲೆ
ತಾರಾಗಣ: ರಾಣಾ, ಪ್ರಿಯಾಂಕಾ ಆಚಾರ್, ಕಿಶೋರ್, ನಾಗಾಭರಣ
ನಿರ್ದೇಶನ: ಪುನೀತ್ ರಂಗಸ್ವಾಮಿ
ರೇಟಿಂಗ್ : 4
ರಾಣಾ, ಕಿಶೋರ್, ಪ್ರಿಯಾಂಕಾ, ನಾಗಾಭರಣ ಸೇರಿದಂತೆ ಪ್ರತಿಯೊಬ್ಬರೂ ಪಾತ್ರದಲ್ಲಿ ಜೀವಿಸಿದ್ದಾರೆ. ಕಥೆ, ನಿರೂಪಣೆ, ಹಾಡು, ಸಿನಿಮಾಟೋಗ್ರಫಿ ಚಿತ್ರವನ್ನು ತೀವ್ರವಾಗಿಸಿದೆ. ಕೊನೆಯ ಭಾಗದಲ್ಲಿ ಅಚ್ಚರಿ ಇದೆಯಾದರೂ ಅಲ್ಲೊಂದು ತೀವ್ರತೆ ಇದ್ದರೆ ಚೆನ್ನಿತ್ತು. ಒಟ್ಟಿನಲ್ಲಿ ಪ್ರೇಕ್ಷಕನನ್ನು ಹಿಡಿದಿಡುವ ಚಿತ್ರವಿದು.
