ಅಪ್ಪ-ಮಗನ ಬಾಂಧವ್ಯ ಕತೆಯನ್ನು, ಇವತ್ತಿಗೆ ಪ್ರಸ್ತುತ ಎನಿಸುವಂತೆ ಕಟ್ಟಿಕೊಟ್ಟಿರುವುದು ಚಿತ್ರದ ಪಾಸಿಟೀವ್‌ ಅಂಶ. ಮುತ್ತಣ್ಣ ಪಾತ್ರಧಾರಿ ರಂಗಾಯಣ ರಘು ನಟನೆಯಲ್ಲಿ ಕೊರತೆ ಹುಡುಕಲು ಅವಕಾಶನೇ ಕೊಟ್ಟಿಲ್ಲ.

ಆರ್‌. ಕೇಶವಮೂರ್ತಿ

ಯಾವುದೇ ಆಡಂಬರ, ಮೇಕಿಂಗ್‌ ವೈಭವೀಕರಣ ಇಲ್ಲದೆ ತಣ್ಣಗೆ ಒಂದು ಕತೆ ಹೇಳುವುದು ಹೇಗೆ ಎನ್ನುವ ದಾರಿಯನ್ನು ನಿರ್ದೇಶಕ ಶ್ರೀಕಾಂತ್‌ ಹುಣಸೂರು ‘ಸನ್‌ ಆಫ್‌ ಮುತ್ತಣ್ಣ’ ಚಿತ್ರದ ಮೂಲಕ ಕಂಡುಕೊಂಡಿದ್ದಾರೆ. ಒಂಚೂರು ತಮಾಷೆ, ಆಗಾಗ ಕಾಡುವ ಭಾವನಾತ್ಮಕ ಸಂಭಾಷಣೆಗಳು ಮತ್ತು ದೃಶ್ಯಗಳ ಜೊತೆಗೆ ಪ್ರೇಕ್ಷಕ ಹೋಗುತ್ತಿದ್ದಾಗ ನಗಿಸುತ್ತಾ ರಿಲ್ಯಾಕ್ಸ್‌ ಮಾಡಿಸುವ ಗಿರೀಶ್‌ ಶಿವಣ್ಣ... ಇವೆಲ್ಲವೂ ಸೇರಿ ಒಂದು ಚಂದದ ಕತೆಯ ನೆರಳಿನಲ್ಲಿ ಸಂಬಂಧಗಳ ಮಹತ್ವ ಸಾರಲಾಗಿದೆ.

ಸೈಲೆಂಟ್‌ ಆಗಿ ಸಾಗೋ ಕತೆಯಲ್ಲಿ ಭಾವನಾತ್ಮಕ ತಿರುವುದೊಂದು ಎದುರಾಗಿ ಅಲ್ಲಿವರೆಗೂ ಅಪ್ಪ-ಮಗನನ್ನು ನೋಡಿ ಪ್ರೇಕ್ಷಕ ಅಂದಜಾಜಿಸಿದ್ದು ಸುಳ್ಳಾಗಿಸುತ್ತಾರೆ ನಿರ್ದೇಶಕರು. ಹೀಗೆ ನಿರೀಕ್ಷೆಯೇ ಇಲ್ಲದೆ ಎದುರಾಗುವ ಈ ತಿರುವಿನಲ್ಲಿ ರಸ್ತೆ ಸಂಬಂಧ ಮತ್ತು ರಕ್ತ ಸಂಬಂಧವನ್ನು ತೆರೆದಿಡುತ್ತದೆ ಸಿನಿಮಾ. ಇಡೀ ಚಿತ್ರದ ಕತೆ ಸಾಗುವುದೇ ಮೂರು- ನಾಲ್ಕು ಪಾತ್ರಗಳ ಮೂಲಕ.

ಚಿತ್ರ: ಸನ್‌ ಆಫ್‌ ಮುತ್ತಣ್ಣ
ನಿರ್ದೇಶನ: ಶ್ರೀಕಾಂತ್‌ ಹುಣಸೂರು
ತಾರಾಗಣ: ಪ್ರಣಂ ದೇವರಾಜ್‌, ರಂಗಾಯಣ ರಘು, ಖುಷಿ ರವಿ, ಸುಚೇಂದ್ರ ಪ್ರಸಾದ್‌, ಗಿರೀಶ್‌ ಶಿವಣ್ಣ
ರೇಟಿಂಗ್‌: 3

ಒಂದು ಸಣ್ಣ ಕತೆಯನ್ನು, ಇವತ್ತಿಗೆ ಪ್ರಸ್ತುತ ಎನಿಸುವಂತೆ ಕಟ್ಟಿಕೊಟ್ಟಿರುವುದು ಚಿತ್ರದ ಪಾಸಿಟೀವ್‌ ಅಂಶ. ಮುತ್ತಣ್ಣ ಪಾತ್ರಧಾರಿ ರಂಗಾಯಣ ರಘು ನಟನೆಯಲ್ಲಿ ಕೊರತೆ ಹುಡುಕಲು ಅವಕಾಶನೇ ಕೊಟ್ಟಿಲ್ಲ. ಪ್ರಣಂ ದೇವರಾಜ್‌ ಭಾವುಕ ಸನ್ನಿವೇಶಗಳು, ಡ್ಯಾನ್ಸ್‌ನಲ್ಲಿ ಮೆಚ್ಚುಗೆ ಆಗುತ್ತಾರೆ. ಸುಚೇಂದ್ರ ಪ್ರಸಾದ್‌ ಅವರದ್ದು ಎಂದಿನಂತೆ ಶುದ್ಧ ಮತ್ತು ಪ್ರಬುದ್ಧ ತಂದೆಯ ಪಾತ್ರ. ಕಿರಾಣಿ ಅಂಗಡಿ ಗಿರೀಶ್‌ ಶಿವಣ್ಣ ಹೆಚ್ಚು ಸ್ಕೋರ್‌ ಮಾಡುತ್ತಾರೆ. ಅಪ್ಪ-ಮಗನ ಕತೆಯ ಮೂಲಕ ಬದುಕಿನ ಹಲವು ವಾಸ್ತವ ಸಂಗತಿಗಳನ್ನು ‘ಸನ್‌ ಆಫ್‌ ಮುತ್ತಣ್ಣ’ ಒಳಗೊಂಡಿದೆ.