o Keep Rice Free From Insects : ಅಕ್ಕಿಯಲ್ಲಿ ಹುಳುವಾದ್ರೆ ಕಿರಿಕಿರಿ. ಊಟದ ಮಧ್ಯೆ ಅಪ್ಪಿತಪ್ಪಿ ಹುಳು ಸಿಕ್ರೆ ಊಟ ಸೇರೋದಿಲ್ಲ. ಈ ಹುಳು ತೆಗೆಯೋದು ಮಹಿಳೆಯರಿಗೆ ದೊಡ್ಡ ಚಾಲೆಂಜ್. ಅದು ಬರದಂತೆ ತಡೆಯೋದು ಹೇಗೆ ಗೊತ್ತಾ?
ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಬಳಸುವ ಅಡುಗೆ ಪದಾರ್ಥ ಅಂದ್ರೆ ಅಕ್ಕಿ (rice). ಆಹಾರದ ಪ್ರಮುಖ ಭಾಗ ಇದು. ದಿನಕ್ಕೆ ಮೂರೂ ಹೊತ್ತು ಅನ್ನ ತಿನ್ನುವವರಿದ್ದಾರೆ. ಚಪಾತಿ, ಪೂರಿಗಿಂತ ಅನ್ನಕ್ಕೆ ಇಲ್ಲಿ ಹೆಚ್ಚು ಪ್ರಾಶಸ್ತ್ಯ. ಅನ್ನ ಸಾಂಬಾರ್, ಪುಳಿಯೊಗರೆ, ಪಲಾವ್, ದೋಸೆ, ಪಾಯಸ ಹೀಗೆ ಅಕ್ಕಿಯಿಂದ ಮಾಡಿದ ಅನೇಕ ಆಹಾರಗಳನ್ನು ನಾವು ಪ್ರತಿನಿತ್ಯ ಸೇವನೆ ಮಾಡ್ತೇವೆ. ತರಕಾರಿ ತಂದಂತೆ ದಿನಕ್ಕಾಗುವಷ್ಟೆ ಅಕ್ಕಿ ತಂದಿಟ್ಟುಕೊಳ್ಳೋದು ಮೂರ್ಖತನ. ಪ್ರತಿಯೊಬ್ಬರ ಮನೆಯಲ್ಲೂ 25 ಕೆಜಿ ಅಕ್ಕಿ ಬ್ಯಾಗ್ ಒಂದಾದ್ರೂ ಇದ್ದೇ ಇರುತ್ತೆ. ದೊಡ್ಡ ಕುಟುಂಬ ಅಥವಾ ಹಳ್ಳಿಗಳಲ್ಲಿ ಅಕ್ಕಿಯ ಪ್ರಮಾಣ ಹೆಚ್ಚಿರುತ್ತೆ. ಅಕ್ಕಿ ಕವರ್ ಓಪನ್ ಮಾಡಿದ ಹತ್ತು – ಹದಿನೈದು ದಿನಗಳಲ್ಲೇ ಹುಳು ಕಾಣಿಸಿಕೊಳ್ಳಲು ಶುರುವಾಗುತ್ತೆ. ಕೆಲವೊಮ್ಮೆ ಬಾಯಿ ಕಟ್ಟಿದ ಅಕ್ಕಿ ಮೂಟೆಯಲ್ಲೂ ನೀವು ಹುಳುಗಳನ್ನು ಕಾಣ್ಬಹುದು. ಅಕ್ಕಿಯಲ್ಲಿ ಎರಡು ರೀತಿ ಹುಳು ಕಾಣಿಸಿಕೊಳ್ಳುತ್ತೆ. ಕಪ್ಪು ಹುಳುವನ್ನು ಅಕ್ಕಿಯಿಂದ ತೆಗೆಯೋದು ಸುಲಭ. ಆದ್ರೆ ಬಿಳಿ ಹುಳು ಅಕ್ಕಿಯನ್ನು ಹಾಳು ಮಾಡೋದಲ್ಲದೆ ಆರೋಗ್ಯಕ್ಕೂ ಹಾನಿಕರ. ಮನೆಯಲ್ಲಿರುವ ಅಕ್ಕಿಗೆ ಹುಳು ಹಿಡಿಯಬಾರದು ಅಂದ್ರೆ ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ.
ಅಕ್ಕಿಗೆ ಹುಳು (worm) ಬರದಂತೆ ಹೀಗೆ ಮಾಡಿ : ನೀವು ಅಡುಗೆ ಮನೆಯಲ್ಲಿಯೇ ಇರುವ ಪದಾರ್ಥಗಳನ್ನು ಬಳಸಿಕೊಂಡು ನೈಸರ್ಗಿಕವಾಗಿ ಅಕ್ಕಿ ಹುಳು ಔಷಧಿ (Rice worm medicine) ತಯಾರಿಸಬಹುದು.
• ಅರ್ಧ ಚಮಚ ಅರಿಶಿನ, ಅರ್ಧ ಚಮಚ ಉಪ್ಪು, 10 ರಿಂದ 12 ಸಂಪೂರ್ಣ ಲವಂಗ, 10 ರಿಂದ 12 ಕರಿಮೆಣಸು, ಟಿಶ್ಯೂ ಪೇಪರ್ ಅಥವಾ ಬಟ್ಟೆ,ದಾರ ಅಥವಾ ರಬ್ಬರ್ ಬ್ಯಾಂಡ್ ಇದಕ್ಕೆ ಅಗತ್ಯ.
• ಮೊದಲೇ ಅಕ್ಕಿಯಲ್ಲಿ ಹುಳು ಇದ್ರೆ ಅದನ್ನು ಕ್ಲೀನ್ ಮಾಡಿ. ಅಕ್ಕಿಯಲ್ಲಿ ಒಂದೇ ಒಂದು ಹುಳು ಇರದಂತೆ ನೋಡಿಕೊಳ್ಳಿ. ಅಕ್ಕಿಯಲ್ಲಿ ತೇವಾಂಶ ಇರಬಾರದು. ಅಕ್ಕಿ ಡ್ರೈ ಆಗಿರುವಂತೆ ನೋಡಿಕೊಳ್ಳಿ. ಹುಳು ತೆಗೆದ ಅಕ್ಕಿಯನ್ನು ಗಾಳಿಯಾಡದ ಪಾತ್ರೆಗೆ ಹಾಕಿ.
• ಟಿಶ್ಯೂ ಪೇಪರ್ ಅಥವಾ ಸಣ್ಣ ಹತ್ತಿ ಬಟ್ಟೆ ತೆಗೆದುಕೊಂಡು ಅದರ ಮಧ್ಯದಲ್ಲಿ ಅರ್ಧ ಟೀ ಚಮಚ ಅರಿಶಿನ ಮತ್ತು ಅರ್ಧ ಟೀ ಚಮಚ ಉಪ್ಪನ್ನು ಹಾಕಿ. ಅವುಗಳ ಮೇಲೆ 10 ರಿಂದ 12 ಸಂಪೂರ್ಣ ಲವಂಗ ಮತ್ತು 10 ರಿಂದ 12 ಕರಿಮೆಣಸನ್ನು ಹಾಕಿ. ಈಗ ಟಿಶ್ಯೂ ಪೇಪರ್ ಅಥವಾ ಬಟ್ಟೆಯನ್ನು ಎಲ್ಲಾ ಕಡೆಯಿಂದ ಎತ್ತಿ ಗಂಟು ಮಾಡಿ. ಅದರಲ್ಲಿರುವ ಪದಾರ್ಥ ಹೊರಗೆ ಬರದಂತೆ ನೀವು ದಾರದಿಂದ ಅದನ್ನು ಕಟ್ಟಬಹುದು.
• ಈ ಕಟ್ಟನ್ನು ನೀವು ಅಕ್ಕಿಯ ಪಾತ್ರೆ ತಳ ಭಾಗದಲ್ಲಿ ಅಥವಾ ಮಧ್ಯ ಭಾಗದಲ್ಲಿ ಇಡಬೇಕು. ಅಕ್ಕಿ ಹೆಚ್ಚಿನ ಪ್ರಮಾಣದಲ್ಲಿದ್ದರೆ ನೀವು ನಾಲ್ಕೈದು ಗಂಟು ಮಾಡಿ ಅಕ್ಕಿ ಪಾತ್ರೆಗೆ ಹಾಕಬಹುದು. ಇದಾದ್ಮೇಲೆ ಅಕ್ಕಿ ಪಾತ್ರೆಯ ಮುಚ್ಚಳವನ್ನು ಸರಿಯಾಗಿ ಮುಚ್ಚಬೇಕು.
ಇದು ಹೇಗೆ ಪ್ರಯೋಜನಕಾರಿ : ಸಾಮಾನ್ಯವಾಗಿ ಕೀಟಗಳು ಮತ್ತು ಹುಳುಗಳು ಕಟುವಾದ ವಾಸನೆ, ಕೆಲ ಮಸಾಲೆ ಪರಿಮಳವನ್ನು ಇಷ್ಟಪಡುವುದಿಲ್ಲ. ಲವಂಗ ಮತ್ತು ಕರಿಮೆಣಸಿನ ವಾಸನೆಯನ್ನು ಕೀಟಗಳು ಸಹಿಸುವುದಿಲ್ಲ. ವಾಸನೆ ತಡೆಯಲಾಗದೆ ಅವು ಓಡಿ ಹೋಗುತ್ತವೆ. ಇನ್ನು ಅರಿಶಿನ ಕರ್ಕ್ಯುಮಿನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ. ಇದು ಶಿಲೀಂಧ್ರ ವಿರೋಧಿ ಮತ್ತು ಉರಿಯೂತದ ಗುಣಗಳನ್ನೂ ಹೊಂದಿದೆ. ಇದು ಅಕ್ಕಿ ಹಾಳಾಗುವುದನ್ನು ತಡೆಯುತ್ತದೆ. ಉಪ್ಪು ತೇವಾಂಶವನ್ನು ತಡೆಯುತ್ತದೆ.
