ಬಾದಾಮಿ ಚುನಾವಣೆಯಲ್ಲಿ ಮತ ಖರೀದಿ ಆರೋಪದ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ತಮಗೆ ಈ ವಿಚಾರ ತಿಳಿದಿಲ್ಲ ಎಂದಿದ್ದಾರೆ. 'ಸತ್ತವರು, ಕೆಟ್ಟವರು ಮತ ಹಾಕಿದ್ದಾರೆ' ಎಂಬ ಹೇಳಿಕೆಯನ್ನು ತಿರುಚಲಾಗಿದೆ ಎಂದಿದ್ದಾರೆ.
ಮೈಸೂರು (ಆ.9): ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ತಾವು ಮತ ಖರೀದಿಸಿ ಗೆದ್ದಿದ್ದಾಗಿ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ನೀಡಿರುವ ಹೇಳಿಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. "ಈ ವಿಷಯ ನನಗೆ ಗೊತ್ತೇ ಇಲ್ಲ. ಇಬ್ರಾಹಿಂ ಈಗ ನಮ್ಮ ಪಕ್ಷದಲ್ಲಿಲ್ಲ. ಆ ಸಂದರ್ಭದಲ್ಲಿ ಅವರು ನನ್ನ ಪರವಾಗಿ ಕೆಲಸ ಮಾಡಿದ್ದರು ನಿಜ. ಆದರೆ, ಮತ ಖರೀದಿ ಮಾಡಿದ್ದರು ಎಂಬುದು ನನಗೆ ಸಂಪೂರ್ಣ ಹೊಸ ವಿಚಾರ. ನಾನು ಬಾದಾಮಿಗೆ ಹೋಗಿದ್ದೇ ಕೇವಲ ಎರಡು ದಿನಗಳು" ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ತಮಗೆ ಗೊತ್ತಿಲ್ಲದೆ ಮತ ಖರೀದಿ ಮಾಡಲಾಗಿದೆಯೇ ಎಂಬ ಪ್ರಶ್ನೆಗೆ, ಆ ವಿಚಾರ ತಮಗೆ ಗೊತ್ತಿಲ್ಲ ಎಂದಷ್ಟೇ ಹೇಳಿದ್ದಾರೆ.
ಇದೇ ವೇಳೆ, ತಾವು 'ಸತ್ತವರು, ಕೆಟ್ಟವರು ಮತ ಹಾಕಿ ನನ್ನ ಗೆಲ್ಲಿಸಿದರು' ಎಂದು ಹೇಳಿದ ಭಾಷಣದ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ, "ನಾನು ಆ ರೀತಿ ಮಾತನಾಡೇ ಇಲ್ಲ. ಒಂದು ವೇಳೆ ಸತ್ತವರು ಅಥವಾ ಕೆಟ್ಟವರು ಮತ ಹಾಕಿದ್ದರೆ ಅದಕ್ಕೆ ಚುನಾವಣಾ ಆಯೋಗವೇ ಜವಾಬ್ದಾರಿ ವಹಿಸಬೇಕಿತ್ತು. ಆಯೋಗವು ಇದರ ಬಗ್ಗೆ ಪರಿಶೀಲನೆ ಮಾಡಬೇಕಿತ್ತು" ಎಂದ ಸಿಎಂ ತಮ್ಮ ಹೇಳಿಕೆ ತಿರುಚಲಾಗಿದೆ ಎಂದಿದ್ದಾರೆ.
ಹಿಂದಿನ ಚುನಾವಣೆಯಲ್ಲಿ ಬಾದಾಮಿಯಲ್ಲಿ ಸಿದ್ದರಾಮಯ್ಯ ಸೋಲುವ ಹಂತದಲ್ಲಿದ್ದರು. ಆಗ ನಾನು ಮತ್ತು ಮಾಜಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಸೇರಿ ಸಾಲ ಮಾಡಿ 3000 ಮತಗಳನ್ನು ಖರೀದಿ ಮಾಡಿದ್ದೆವು ಎಂದು ಇಬ್ರಾಹಿಂ ಮೈಸೂರಿನಲ್ಲಿ ನೇರವಾಗಿ ಆರೋಪಿಸಿದ್ದಾರೆ. 'ಕೌಂಟಿಂಗ್ ದಿನ ಸಿದ್ದರಾಮಯ್ಯ ಸೋಲುವ ಭಯದಲ್ಲಿದ್ದರು. ಆಗ ನಾನು ಮ್ಯಾನೇಜ್ ಮಾಡಿದ್ದೇನೆ, 800-1000 ಚಿಕ್ಕ ಅಂತರದಲ್ಲಿ ಗೆಲ್ಲುತ್ತೀರಿ ಎಂದು ಹೇಳಿದ್ದೆ. ಆರು ತಿಂಗಳ ನಂತರ ಸಿದ್ದರಾಮಯ್ಯ ಆ ಸಾಲವನ್ನು ವಾಪಸ್ ಕೊಟ್ಟರು' ಎಂದು ತಿಳಿಸಿದ್ದರು.
ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಹೋರಾಟ
ಲೋಕಸಭಾ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ 'ಮತಗಳ್ಳತನ'ದ ವಿರುದ್ಧ ಕಾಂಗ್ರೆಸ್ ಹೋರಾಟ ಆರಂಭಿಸಿರುವ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ರಾಹುಲ್ ಗಾಂಧಿ ಹೇಳಿರುವ ಕೆಲವು ವಿಷಯಗಳು ನಿಜ. ನಾವು ಈ ಕುರಿತು ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದೇವೆ. ನಮ್ಮ ಕಾನೂನು ತಂಡದೊಂದಿಗೆ ಚರ್ಚೆ ನಡೆಸುತ್ತಿದ್ದೇನೆ. "ಮತಗಳ್ಳತನ ಆಗಿರುವುದು ನಮಗೆ ಗೊತ್ತಾಗಿದೆ. ಹಾಗಾಗಿ ನಾವು ಈ ಹೋರಾಟವನ್ನು ಆರಂಭಿಸಿದ್ದೇವೆ" ಎಂದು ತಿಳಿಸಿದರು.
ಬಿಜೆಪಿಯವರು ಈ ಆರೋಪಗಳನ್ನು ಸುಳ್ಳು ಎಂದು ಹೇಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, "ಒಂದೇ ಕೊಠಡಿಯಲ್ಲಿ 80 ಜನ ಹೇಗೆ ಇದ್ದರು ಎಂಬುದನ್ನು ಬಿಜೆಪಿ ಹೇಳಲಿ. ಅವರು ಹೋಟೆಲ್ ಉದ್ಯೋಗಿಗಳಾಗಿದ್ದರೂ ಒಂದೇ ರೂಂನಲ್ಲಿ ಇರಲು ಸಾಧ್ಯವೇ?" ಎಂದು ಪ್ರಶ್ನಿಸಿದರು. "ನಮ್ಮ ಸರ್ವೆ ಪ್ರಕಾರ ಲೋಕಸಭಾ ಚುನಾವಣೆಯಲ್ಲಿ 16 ಸೀಟುಗಳನ್ನು ಗೆಲ್ಲುವ ಅವಕಾಶವಿತ್ತು, ಆದರೆ ಹಾಗಾಗಿಲ್ಲ" ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
