ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೀಲಲಿಗೆಯಲ್ಲಿರುವ ವಿಶಾಲ್ ಟ್ರೈಬೊಟೆಕ್ ಪ್ರೈವೇಟ್ ಲಿಮಿಟೆಡ್ ಆಯಿಲ್ ಉತ್ಪಾದನಾ ಕಾರ್ಖಾನೆಯಲ್ಲಿ ಭಾನುವಾರ ಬೆಳಿಗ್ಗೆ ಬೆಂಕಿ ಅವಘಡ ಸಂಭವಿಸಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಆಯಿಲ್ ಬ್ಯಾರಲ್‌ಗಳು ಹಾಗೂ ಯಂತ್ರೋಪಕರಣಗಳು ಬೆಂಕಿಗೆ ಆಹುತಿಯಾಗಿವೆ.
ಇತ್ತೀಚೆಗೆ ಸಿಲಿಕಾನ್ ಸಿಟಿಯ ನಗರ್ತಪೇಟೆಯಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿ ಒಂದೇ ಕುಟುಂಬದ 4 ಮಂದಿ ಸೇರಿ 5 ಜನ ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಇದೀಗ ಬೆಂಗಳೂರು ಹೊರವಲಯದಲ್ಲಿ ಮತ್ತೊಂದು ಅಗ್ನಿ ದುರಂತ ಸಂಭವಿಸಿದೆ. ಆನೇಕಲ್ ತಾಲೂಕಿನ ಹೀಲಲಿಗೆಯಲ್ಲಿ ಬೆಳಿಗ್ಗೆ ಸುಮಾರು 7.00 ಗಂಟೆ ಸಮಯದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲಿ ಕಾರ್ಖಾನೆಯ ಆವರಣವೇ ಕೆನ್ನಾಲಿಗೆಯಲ್ಲಿ ಸಿಲುಕಿತು. ಹೀಲಲಿಗೆಯಲ್ಲಿರುವ ವಿಶಾಲ್ ಟ್ರೈಬೊಟೆಕ್ ಪ್ರೈವೇಟ್ ಲಿಮಿಟೆಡ್ ಆಯಿಲ್ ಉತ್ಪಾದನಾ ಕಾರ್ಖಾನೆಯಲ್ಲಿ ಈ ದುರಂತ ನಡೆದಿದೆ. ಕಾರ್ಖಾನೆಯೊಳಗೆ ಹೆಚ್ಚಿನ ಪ್ರಮಾಣದ ಆಯಿಲ್ ಬ್ಯಾರಲ್‌ಗಳನ್ನು ಶೇಖರಿಸಲಾಗಿತ್ತು. ಏಕಾಏಕಿ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲಿ ಬೆಂಕಿಯ ಜ್ವಾಲೆಗಳು ವ್ಯಾಪಕವಾಗಿ ಹರಡಿದವು. ಬೆಂಕಿಯ ತೀವ್ರತೆಗೆ ಕಾರ್ಖಾನೆಯ ಆವರಣವೇ ಕೆನ್ನಾಲಿಗೆಯಲ್ಲಿ ಸಿಲುಕಿದ್ದು, ನೂರಾರು ಮೀಟರ್ ದೂರದಿಂದಲೂ ದಟ್ಟ ಹೊಗೆ ಗೋಚರಿಸಿದವು.
ಅಗ್ನಿಯನ್ನು ನಿಯಂತ್ರಿಸಲು ಹಲವು ಟ್ಯಾಂಕರ್‌ಗಳಲ್ಲಿ ನೀರು ತಂದು ನಂದಿಸುವ ಕಾರ್ಯ ನಡೆಯಿತು. ಕಾರ್ಖಾನೆಯೊಳಗೆ ಸಂಗ್ರಹಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಆಯಿಲ್ ಬ್ಯಾರಲ್‌ಗಳು ಹಾಗೂ ಇತರೆ ಯಂತ್ರೋಪಕರಣಗಳು ಬೆಂಕಿಗೆ ಆಹುತಿಯಾಗಿವೆ.
ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ಅಗ್ನಿ ನಂದಿಸುವ ಕಾರ್ಯಾಚರಣೆ ಪ್ರಾರಂಭಿಸಿದರು. ಆನೇಕಲ್‌ನೊಂದಿಗೆ ಎಲೆಕ್ಟ್ರಾನಿಕ್ ಸಿಟಿ, ಹುಳಿಮಾವು ಹಾಗೂ ಜಯನಗರದಿಂದಲೂ ಹತ್ತಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನಗಳನ್ನು ಕರೆಸಿಕೊಳ್ಳಲಾಯಿತು. ಕಳೆದ ಐದು ಗಂಟೆಗಳಿಗೂ ಹೆಚ್ಚು ಕಾಲ ಸಿಬ್ಬಂದಿ ನಿರಂತರವಾಗಿ ಬೆಂಕಿ ನಿಯಂತ್ರಣಕ್ಕಾಗಿ ಹರಸಾಹಸ ನಡೆಸುತ್ತಿದ್ದಾರೆ.
ಅವಘಡದ ಕಾರಣ ಕುರಿತು ಪ್ರಾಥಮಿಕ ತನಿಖೆ ನಡೆಯುತ್ತಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಕಾರ್ಖಾನೆಯಲ್ಲಿ ಸಾಮಾನ್ಯವಾಗಿ ಸುಮಾರು 40ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ನಿರ್ವಹಿಸುತ್ತಾರೆ. ಆದರೆ ಇಂದು ಭಾನುವಾರ ರಜೆ ಇದ್ದ ಕಾರಣ ಅದೃಷ್ಟವಶಾತ್ ಕಾರ್ಮಿಕರು ಯಾರೂ ಹಾಜರಿರಲಿಲ್ಲ. ಇದರಿಂದ ಯಾವುದೇ ಜೀವಹಾನಿ ಸಂಭವಿಸದೆ ಭಾರೀ ಆರ್ಥಿಕ ನಷ್ಟ ಮಾತ್ರ ಸಂಭವಿಸಿದೆ.
ಕಾರ್ಖಾನೆಯೊಳಗೆ ಸಂಗ್ರಹಿಸಲಾಗಿದ್ದ ಆಯಿಲ್ ಬ್ಯಾರಲ್‌ಗಳು ಹಾಗೂ ಯಂತ್ರೋಪಕರಣಗಳು ಬೆಂಕಿಗೆ ಆಹುತಿಯಾದ ಕಾರಣ ಲಕ್ಷಾಂತರ ರೂಪಾಯಿಗಳ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಬೆಂಕಿ ಸಂಪೂರ್ಣ ನಂದುವ ತನಕ ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲೇ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿದ ವರದಿ ಆಗಿಲ್ಲ, ಆರ್ಥಿಕವಾಗಿ ನಷ್ಟ ಮಾತ್ರ ಭಾರೀ ಪ್ರಮಾಣದಲ್ಲಿ ಸಂಭವಿಸಿದೆ. ಸ್ಥಳೀಯರು ಕೂಡಾ ಅಗ್ನಿಶಾಮಕ ದಳಕ್ಕೆ ನೆರವಾಗಿ ಬೆಂಕಿ ನಿಯಂತ್ರಣಕ್ಕೆ ಸಹಕರಿಸಿದರು. ಈ ಘಟನೆ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬೆಂಕಿ ಅವಘಡಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ.
