ಇಸ್ಲಾಂನಿಂದ ಮತಾಂತರಗೊಂಡು ಲಿಂಗದೀಕ್ಷೆ ಪಡೆದ ನಿಜಲಿಂಗ ಸ್ವಾಮೀಜಿ ತಮ್ಮ ಮೇಲಿನ ಆರೋಪಗಳಿಗೆ ಉತ್ತರಿಸಿದ್ದಾರೆ. ಫೋಟೋ ಮತ್ತು ವಿಡಿಯೋ ಲೀಕ್ ಆಗಿದ್ದು ಹೇಗೆ ಎಂಬುದರ ಬಗ್ಗೆಯೂ ನಿಜಲಿಂಗ ಸ್ವಾಮೀಜಿ (ಮೊಹಮ್ಮದ್ ನಿಸಾರ್) ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಇಸ್ಲಾಂನಿಂದ ಮತಾಂತರಗೊಂಡು ಲಿಂಗದೀಕ್ಷೆ ಪಡೆದುಕೊಂಡಿದ್ದ ನಿಜಲಿಂಗ ಸ್ವಾಮೀಜಿ (ಮೊಹಮ್ಮದ್ ನಿಸಾರ್) ತಮ್ಮ ಮೇಲಿರುವ ಬಂದಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಚೌಡಹಳ್ಳಿ ಗುರುಮಲ್ಲೇಶ್ವರ ಶಾಖಾ ಮಠಕ್ಕೆ ಮಠಾಧೀಶರಾಗಿದ್ದ ನಿಜಲಿಂಗ ಸ್ವಾಮೀಜಿ ತಮ್ಮ ಮೂಲಧರ್ಮ ಮರೆಮಾಡಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದರು. ಈ ಆರೋಪ ಬೆನ್ನಲ್ಲೇ ಸ್ವಾಮೀಜಿ ಮಠ ತೊರೆದಿದ್ದರು. ಮರುದಿನವೇ ಸ್ವಾಮೀಜಿಗೆ ಸಂಬಂಧಿಸಿದ ಕೆಲ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿ, ಸಂಚಲನ ಸೃಷ್ಟಿಸಿತ್ತು. ಗುರುಮಲ್ಲೇಶ್ವರ ಶಾಖಾ ಮಠದಿಂದ ಹೊರಬಂದಿದ್ದ ಸ್ವಾಮೀಜಿ ಇದೀಗ ಗದಗ ನಗರದಲ್ಲಿ ಕಾಣಿಸಿಕೊಂಡಿದ್ದು, ತಮ್ಮ ವಿರುದ್ಧ ಕೇಳಿ ಬಂದ ಆರೋಪ ಮತ್ತು ಪೂರ್ವಾಶ್ರಮದ ಕುರಿತು ಮಾತನಾಡಿದ್ದಾರೆ.
2021ರಲ್ಲಿ ಅಧಿಕೃತವಾಗಿ ಸನ್ಯಾಸಿ ದೀಕ್ಷೆ
ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡಿರುವ ನಿಜಲಿಂಗ ಸ್ವಾಮೀಜಿ (ಮೊಹಮ್ಮದ್ ನಿಸಾರ್), ನಾನು ಮಠದ ಪೀಠಾಧಿಪತಿಯಾಗಿರಲಿಲ್ಲ. ಬಸವತತ್ವ ಪ್ರಚಾರಕ್ಕಾಗಿ ಹೋಗಿದ್ದೆ. ಮುಸ್ಲಿಂ ಕುಟುಂಬದಲ್ಲಿ ಜನಿಸಿದ ನಾನು, ಬಸವ ಧರ್ಮದ ಬಗ್ಗೆ ಅಧ್ಯಯನ ಮಾಡಿದೆ. 2019ರಲ್ಲಿ ಅಂದ್ರೆ 9ನೇ ಕ್ಲಾಸ್‌ನಲ್ಲಿದ್ದಾಗ ಇಷ್ಟಲಿಂಗ ದೀಕ್ಷೆ ಪಡೆದುಕೊಂಡೆ. ಬಸವಪ್ರಭು ಸ್ವಾಮೀಜಿಗಳು ದೀಕ್ಷೆ ನಡೆಸಿದರು. 2020-21ರಲ್ಲಿ ವಿರಕ್ತ ಮೂಡಿತು. 2021ರಲ್ಲಿ ಅಧಿಕೃತವಾಗಿ ಸನ್ಯಾಸಿ ದೀಕ್ಷೆ ಪಡೆದುಕೊಂಡೆ. ಕಲಬುರಗಿ ಜಿಲ್ಲೆಯ ಮೂಲದವನಾಗಿದ್ದು, ಸನ್ಯಾಸಿಯಾಗಿರುವ ಕಾರಣ ಪೂರ್ವಾಶ್ರಮದ ಬಗ್ಗೆ ಹೆಚ್ಚು ಹೇಳಲಾರೆ ಎಂದರು.
ನಾನು ಮಠದ ಪೀಠಾಧಪತಿ ಅಲ್ಲ
ಅಲ್ಲಿಂದ ನನ್ನ ಸನ್ಯಾಸ ಜೀವನ ಆರಂಭವಾಯ್ತು. ನಾನು ಯಾವುದೇ ಮಠದ ಆಸಕ್ತಿ ಇರಲಿಲ್ಲ. ಹೀಗಿರುವಾಗ ನಮ್ಮ ಗುರುಗಳು ಗುರುಮಲ್ಲೇಶ್ವರ ಮಠಕ್ಕೆ ಹೋಗಿ ಅಲ್ಲಿ ಬಸವತತ್ವದ ಪ್ರಚಾರ ಮಾಡುವಂತೆ ಹೇಳಿದರು. ಕತ್ತಲೆಯಲ್ಲಿ ಬೆಳಕು ಚೆಲ್ಲುವ ಕೆಲಸ ನಮ್ಮದು. ನಾನು ಮಠದ ಪೀಠಾಧಪತಿಯೂ ಅಲ್ಲ. ಓರ್ವ ಅತಿಥಿಯಾಗಿ ಮಠದಲ್ಲಿದ್ದುಕೊಂಡು ಧರ್ಮ ಪ್ರಚಾರದ ಕೆಲಸ ಮಾಡಿಕೊಂಡಿದ್ದೆ. ಆಸ್ಟ್ರೇಲಿಯಾದಲ್ಲಿರುವ ಮಹದೇವಪ್ರಸಾದ್ ಎಂಬವರು ಮಠ ಕಟ್ಟಿಸಿಕೊಟ್ಟಿದ್ದಾರೆ. ಮಠಕ್ಕೆ ಯಾವುದೇ ಆಸ್ತಿಯೂ ಇಲ್ಲ. ಅಲ್ಲಿದ್ದುಕೊಂಡು ಧಾರ್ಮಿಕ ಕೆಲಸಗಳನ್ನು ಮಾಡಿಕೊಂಡು ಹೋಗಲಾಗುತ್ತಿತ್ತು.
ಹೆಸರಿನ ಜೊತೆ ಧರ್ಮವೂ ಬದಲಾಗಲು ಸಮಯ ಬೇಕಿದೆ
ದೀಕ್ಷೆ ತೆಗೆದುಕೊಂಡಾಗ ಎಲ್ಲಾ ದಿನಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು ಆಧಾರ್, ಪ್ಯಾನ್ ಸೇರಿದಂತೆ ಎಲ್ಲಾ ದಾಖಲೆಗಳಲ್ಲಿಯೂ ಪೂರ್ವಾಶ್ರಮದ ಹೆಸರಿದೆ. ಇದು ಕೇವಲ ಹೆಸರು ಬದಲಾವಣೆ ಅಲ್ಲ. ಧರ್ಮದ ಬದಲಾವಣೆಯೂ ಆಗಬೇಕಿತ್ತು. ಈ ಎಲ್ಲಾ ಬದಲಾವಣೆ ಸಮಯದ ಜೊತೆಯೂ ಹಣ ಬೇಕಾಗುತ್ತದೆ. ನಮ್ಮ ಬಳಿ ಹಣವಿಲ್ಲದ ಕಾರಣ ದಾಖಲೆಗಳಲ್ಲಿ ಇನ್ನೂ ಪೂರ್ವಾಶ್ರಮದ ಹೆಸರಿದೆ. ಅಧಿಕೃತವಾಗಿ ಹೆಸರು ಮತ್ತು ಧರ್ಮ ಬದಲಾಯಿಸಿಕೊಡುವಂತೆ ಬೆಳಗಾವಿ ವಕೀಲರಿಗೆ ಮನವಿ ಮಾಡಿಕೊಂಡಿದ್ದೇನೆ. ಇನ್ನೇನು 15-20 ದಿನಗಳಲ್ಲಿ ಎಲ್ಲಾ ದಾಖಲೆಗಳು ಬದಲಾಗಲಿವೆ. ಮೈಸೂರು ಭಾಗದಲ್ಲಿ ತುಂಬಾ ಜಾತೀಯತೆ ಇದೆ ಎಂಬ ಮಾಹಿತಿ ನನಗಿತ್ತು. ಹಾಗಾಗಿ ನನ್ನ ಮೂಲ ಹೇಳಲು ಆಗಲಿಲ್ಲ. ಅಲ್ಲಿ ಧಾರ್ಮಿಕ ಕೆಲಸ ಮಾಡಿದ ನಂತರ ಪೂರ್ವಾಶ್ರಮದ ಬಗ್ಗೆ ಹೇಳಲು ಯೋಚಿಸಿದ್ದೆ. ಅಷ್ಟರಲ್ಲಿ ಇದೆಲ್ಲಾ ಆಯ್ತು ಎಂದರು.
ದಾಖಲೆ, ಫೋಟೋ ಮತ್ತು ವಿಡಿಯೋ ಲೀಕ್ ಆಗಿದ್ದೇಗೆ?
ಮಠಕ್ಕೆ ಹೋದ ಮೇಲೆ ಅಲ್ಲಿಯ ವ್ಯಕ್ತಿಯೊಬ್ಬರು ಆಪ್ತರಾಗಿದ್ದರು. ಆ ವ್ಯಕ್ತಿಗೆ ನನ್ನ ಬಳಿಯಲ್ಲಿ ಎರಡು ಮೊಬೈಲ್ ಗಳಿರುವ ವಿಷಯ ಗೊತ್ತಿತ್ತು. ಒಮ್ಮೆ ತಮ್ಮದೇ ಸಿಮ್ ಹಾಕಿ ಮಾತನಾಡಲು ನನ್ನ ಬಳಿಯಲ್ಲಿದ್ದ ಒಂದು ಮೊಬೈಲ್ ಪಡೆದುಕೊಂಡಿದ್ದರು. ಎಲ್ಲರಂತೆ ನಮ್ಮ ಪೂರ್ವಾಶ್ರಮದ ದಾಖಲೆಗಳು ಸಾಫ್ಟ್ ಕಾಪಿ ಮೊಬೈಲ್‌ನಲ್ಲಿತ್ತು. ಅವುಗಳಲ್ಲೆವನ್ನು ಆತ ತೆಗೆದುಕೊಂಡು ಗ್ರಾಮದಲ್ಲಿ ತೋರಿಸಿದ್ದಾರೆ. ನಂತರ ಗ್ರಾಮಸ್ಥರು ನಮ್ಮನ್ನು ವಿರೋಧಿಸಿದಾಗ ಅಲ್ಲಿಂದ ಹೊರ ಬಂದಿದ್ದೇನೆ. ನಾವು ಧರ್ಮ ಪ್ರಚಾರಕರು. ನಮಗೆ ಯಾವುದೇ ಸ್ವಂತ ಮಠ ಅಂತಿರಲ್ಲ. ಕಲ್ಯಾಣ ಕರ್ನಾಟಕ ಭಾಗದ ಜನರು ನನ್ನನ್ನು ಒಪ್ಪಿಕೊಂಡಿದ್ದು, ಎಲ್ಲರಿಗೂ ನಾನು ಮುಸ್ಲಿಂ ಕುಟುಂಬದಲ್ಲಿ ಜನಿಸಿದವನು ಅಂತ ಗೊತ್ತಿದೆ. ಆದ್ರೆ ದಕ್ಷಿಣ ಕರ್ನಾಟಕದ ಜನತೆಗೆ ಈ ವಿಷಯ ಗೊತ್ತಿರಲ್ಲ. ಅಪೂರ್ಣ ಮಾಹಿತಿಯಿಂದಾಗಿ ಇಷ್ಟೆಲ್ಲಾ ಗೊಂದಲ ಉಂಟಾಗಿದೆ ಎಂದು ಸ್ಪಷ್ಟಪಡಿಸಿದರು.

ನೀವು ಸಲಿಂಗಿಯಾ? ಜೊತೆಯಲ್ಲಿದ್ದ ಆ ಯುವಕ ಯಾರು?
ಸನ್ಯಾಸಿಯಾಗುವ ಮುನ್ನ ನಾನು ಸಹ ಎಲ್ಲರಂತಿದ್ದೆ. ವೈರಲ್ ಆಗಿರುವ ಫೋಟೋ ಮತ್ತು ವಿಡಿಯೋಗಳು ಪೂರ್ವಾಶ್ರಮ ಘಟನೆ. ಸನ್ಯಾಸಿ ದೀಕ್ಷೆ ಪಡೆಯುವ ಮುನ್ನ ಹೈದರಾಬಾದ್‌ನಲ್ಲಿ ಕೆಲಸ ಮಾಡಿಕೊಂಡಿದ್ದೆ. ಆ ಸಮಯದಲ್ಲಿ ಮದ್ಯಪಾನ ಮಾಡುತ್ತಿದ್ದೆ. ಈಗ ಆ ಎಲ್ಲಾ ಕೆಟ್ಟ ಚಟಗಳಿಂದ ಹೊರಗೆ ಬಂದಿದ್ದೇನೆ. ವಿಡಿಯೋದಲ್ಲಿರುವ ಯುವಕ ಅಂದು ನನ್ನ ರೂಮ್‌ಮೇಟ್ ಆಗಿದ್ದರು. ವಿಡಿಯೋದಲ್ಲಿ ನನ್ನ ಮುಖ ನೋಡಿದ್ರೆ ಇದು ಹಳೆಯದು ಎಂದು ಗೊತ್ತಾಗುತ್ತದೆ. ನನ್ನೊಂದಿಗೆ ಕೋಣೆಯಲ್ಲಿದ್ದ ಯುವಕನೇ ಈ ವಿಡಿಯೋ ಮಾಡಿದ್ದ. ಆದರೆ ನಾನು ಎಲ್ಲವನ್ನು ಡಿಲೀಟ್ ಮಾಡಿದ್ದೆ. ಅದನ್ನೆಲ್ಲಾ ಹೇಗೆ ಪಡೆದುಕೊಂಡರೆಂಬ ವಿಷಯ ನನಗೆ ಗೊತ್ತಿಲ್ಲ. ಯುವಕ ಕೇವಲ ಶರ್ಟ್ ಮಾತ್ರ ಧರಿಸಿರಲಿಲ್ಲ. ಎಲ್ಲರೂ ರೂಮ್‌ಗಳಲ್ಲಿರುವಂತೆ ಆತ ಇದ್ದನು ಅಷ್ಟೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸೋದು ಬೇಡ ಎಂದರು.

