Kritika Reddy Murder Father Munireddy Details How Son-in-Law Killed Her with IV/Cannula ವೈದ್ಯೆ ಕೃತಿಕಾ ರೆಡ್ಡಿ ಅವರ ತಂದೆ ಮುನಿರೆಡ್ಡಿ, ತಮ್ಮ ಅಳಿಯ ಮಹೇಂದ್ರ ರೆಡ್ಡಿ ಇಂಜೆಕ್ಷನ್ ನೀಡಿ ಮಗಳನ್ನು ಕೊಂದಿರುವ ಇಂಚಿಂಚು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರು (ಅ.15): ತಮ್ಮ ಮಗಳು ವೈದ್ಯೆ ಕೃತಿಕಾ ರೆಡ್ಡಿಯನ್ನು ವೈದ್ಯನಾಗಿರುವ ಅಳಿಯ ಮಹೇಂದ್ರ ರೆಡ್ಡಿ ಕೊಂದಿದ್ದು ಹೇಗೆ ಎನ್ನುವ ವಿಚಾರವನ್ನು ಪಿನ್ ಟು ಪಿನ್ ಆಕೆಯ ಅಪ್ಪ ಮುನಿರೆಡ್ಡಿ ಹಂಚಿಕೊಂಡಿದ್ದಾರೆ. ಅಂದು ಆತ ಮಾಡಿದ್ದ ವರ್ತನೆಯ ಹಿಂದೆ ಕೊಲೆಯ ಉದ್ದೇಶವಿತ್ತು ಅನ್ನೋದು ನಮಗೆ ಗೊತ್ತಾಗಲಿಲ್ಲ. ಆತ ಯಾವ ಔಷಧಿಯನ್ನು ನೀಡುತ್ತಿದ್ದ ಅನ್ನೋದು ಗೊತ್ತಿರಲಿಲ್ಲ. ಎಲ್ಲವೂ ಸಹಜ ಸಾವು ಎನ್ನುವಂತೆ ಭಾಸವಾಗಿತ್ತು ಎಂದು ಕೃತಿಕಾ ರೆಡ್ಡಿ ತಂದೆ ಮುನಿರೆಡ್ಡಿ ಮಾಧ್ಯಮಗಳಿಗೆ ಹೇಳಿದ್ದಾರೆ.
ಏಪ್ರಿಲ್ 21ರ ರಾತ್ರಿ ಅವರ ಮನೆಯಲ್ಲಿಯೇ ಮಗಳಿಗೆ ಕ್ಯಾನುಲಾ (ಇಂಜೆಕ್ಷನ್‌ಗಳನ್ನು ದೇಹಕ್ಕೆ ನೀಡಲು ಕೈಗೆ ಹಾಕುವ ಸಿರಿಂಜ್ ಪಟ್ಟಿ) ಹಾಕಿಸಿ ಐವಿ ಹಾಕಿಸಿದ್ದರು. ಗಂಡನ ಮನೆಯಲ್ಲಿಯೇ ಇದನ್ನು ಮಾಡಲಾಗಿತ್ತು. ಆಕೆಯ ಕಾಲಿನಲ್ಲಿ ಕ್ಯಾನುಲಾ ಹಾಕಲಾಗಿತ್ತು. ಅದಾದ ನಂತರವೇ ಮನೆಗೆ ಕರೆದುಕೊಂಡು ಬಂದಿದ್ದರು. 22ನೇ ತಾರೀಕು ಬೆಳಗ್ಗೆ ನಮ್ಮ ಮನೆಯಲ್ಲಿ ಬಿಟ್ಟಿದ್ದರು. ಕೃತಿಕಾಳನ್ನ ನಮ್ಮ ಮನೆಯಲ್ಲಿ ಬಿಟ್ಟು ಆತ ಕೆಲಸಕ್ಕೆ ಹೋಗಿದ್ದ. ಅದಾದ ನಂತರ ಆತ ರಾತ್ರಿ ಕೆಲಸ ಮುಗಿಸಿ ಬಂದಿದ್ದ. 'ಕ್ಯಾನುಲಾ ಕಾಲಲ್ಲಿ ಹಾಗೆಯೇ ಇದೆ. ರಾತ್ರಿ ನಿನಗೆ ಇನ್ನೊಂದು ಡೋಸ್ ಹಾಕಬೇಕು' ಅಂತಾ ಹೇಳೀ ಇನ್ನೊಂದು ಡೋಸ್ ಹಾಕಿದ್ದ. ಆದರೆ, ಆತ ಏನು ಹಾಕಿದ್ದ ಅನ್ನೋದು ಗೊತ್ತಿಲ್ಲ ಎಂದು ಮುನಿರೆಡ್ಡಿ ಹೇಳಿದ್ದಾರೆ.
23ನೇ ತಾರೀಕು ರಾತ್ರಿ. ಮಗಳು ಹಾಗೂ ನನ್ನ ಹೆಂಡ್ತಿ ರಾತ್ರಿ 8.30ರ ವೇಳೆಗೆ ಊಟ ಎಲ್ಲಾ ಮುಗಿಸಿದ್ದರು. ಮನೆಯ ನಾಯಿಗೂ ಊಟ ಹಾಕಿ ಮುಗಿಸಿದ್ದರು.ಈ ವೇಳೆಯೂ ಆಕೆ ಆರೋಗ್ಯವಾಗಿ ಚೆನ್ನಾಗಿ ಓಡಾಡಿಕೊಂಡಿದ್ದಳು. ಇನ್ನೊಂದು ಸ್ವಲ್ಪ ದಿನದಲ್ಲೇ ನಾವು ಕ್ಲಿನಿಕ್ ಓಪನ್ ಮಾಡುವ ಕಾರ್ಯಕ್ರಮಕ್ಕೆ ರೆಡಿ ಮಾಡಿಕೊಳ್ಳುತ್ತಿದ್ದೆವು. ರಾತ್ರಿ 9 ಗಂಟೆ ಸುಮಾರಿಗೆ ಆತ ಮನೆಗೆ ಬಂದಿದ್ದ. ಈ ವೇಳೆ 'ಏನಪ್ಪ, ಊಟ ಮಾಡ್ತೀಯಾ' ಎಂದು ಕೇಳಿದ್ದವು. ಅದಕ್ಕೆ, 'ಇಲ್ಲಮ್ಮ ಮನೆಯಲ್ಲಿ ಊಟ ಮಾಡಿಕೊಂಡು ಬಂದೆ' ಎಂದಿದ್ದ. ಆ ಬಳಿಕ ಸೀದಾ ರೂಮ್‌ನ ಒಳಗಡೆ ಹೋಗಿದ್ದ ಎಂದಿದ್ದಾರೆ.
ಬೆಳಗಿನ ಜಾವ ಕಿರುಚಿಕೊಂಡಿದ್ದ ಮಹೇಂದ್ರ ರೆಡ್ಡಿ
ರೂಮ್‌ಗೆ ಆತ ಹೋದ ಅರ್ಧಗಂಟೆಯ ಬಳಿಕ ಮನೆಯ ಮೇಲಿನ ಮಹಡಿಯಲ್ಲಿದ್ದ ರೂಮ್‌ಗೆ ಹೋಗಿದ್ದಳು. ಅಷ್ಟೇ ನಮಗೆ ಗೊತ್ತಿರೋದು. ಅದಾದ ನಂತರ ರೂಮ್‌ನಲ್ಲಿ ಏನಾಯಿತು ಅನ್ನೋ ಮಾಹಿತಿ ಇಲ್ಲ. ಅದಾದ ನಂತರ ಮತ್ತೆ ಐವಿ ಹಾಕಿದ್ನೋ? ಇಲ್ವೋ ಅನ್ನೋದೂ ಗೊತ್ತಿಲ್ಲ. ಆದ್ರೆ ಬೆಳಗಿನ ಜಾವ ಸುಮಾರು 7.30ರ ಹಾಗೆ, ಆತ ಮೇಲಿನ ರೂಮ್‌ನಿಂದಲೇ ಕಿರುಚಿಕೊಂಡಿದ್ದ. ನಾವು ಕೆಳಗಡೆ ಇರೋದು. ಮೊದಲಿಗೆ ನನ್ನ ಪತ್ನಿ ಹೋಗಿ ನೋಡಿದಾಗ ಮಗಳು ಪ್ರಜ್ಞೆ ತಪ್ಪಿದ್ದಳು. 'ನೋಡಮ್ಮ, ಕೃತಿಕಾ ಎದ್ದೇಳ್ತಾ ಇಲ್ಲ, ಎದ್ದೇಳ್ತಾ ಇಲ್ಲ' ಅಂದಿದ್ದ. ಆಮೇಲೆ ನನ್ನ ಕೂಡ ಕರೆದಳು. ನಾನೂ ಕೂಡ ಹೋಗಿ ನೋಡಿದೆ. ಆಕೆ ಯಾವುದೇ ರೆಸ್ಪಾನ್ಸ್ ಮಾಡಲಿಲ್ಲ. ಆಗ ಮಹೇಂದ್ರ ರೆಡ್ಡಿ, ನಾನು ಇವಳನ್ನ ಆಸ್ಪತ್ರೆಗೆ ಕರೆದುಕೊಂಡ ಹೋಗ್ಬೇಕು, ಅರ್ಜೆಂಟಾಗಿ ಅಂದ. ಮಗಳು ಜೀವ ಇರಬಹುದೇನೋ ಅಂದ್ಕೊಂಡು ಮನೆಯ ಹತ್ತಿರದಲ್ಲೇ ಇದ್ದ ಕಾವೇರಿ ಹಾಸ್ಪೆಟಲ್‌ಗೆ ಕಾರ್‌ನಲ್ಲಿ ಕರೆದುಕೊಂಡು ಹೋಗಿದ್ದೆವು. ಹೋದ ನಂತರ ಅವರು ಎಲ್ಲಾ ಪರೀಕ್ಷೆ ಮಾಡಿದ ಬಳಿಕ 'ಬ್ರಾಟ್ ಡೆಡ್' ಎಂದು ಹೇಳಿದರು. ಇವರು ಸತ್ತು ತುಂಬಾ ಹೊತ್ತು ಆಗಿದೆ. ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಹೇಳಿದರು ಎಂದು ಮುನಿರೆಡ್ಡಿ ಆ ದಿನದ ಆಘಾತವನ್ನು ಹಂಚಿಕೊಂಡಿದ್ದಾರೆ.
