ಚಾಮರಾಜನಗರದ ಅರಣ್ಯ ಪ್ರದೇಶಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ತೀವ್ರಗೊಂಡಿದ್ದು, ಹುಲಿಗಳ ದಾಳಿಗೆ ಜಾನುವಾರುಗಳು ಬಲಿಯಾಗುತ್ತಿವೆ. ಇದಕ್ಕೆ ಪ್ರತೀಕಾರವಾಗಿ ಹುಲಿಗಳನ್ನು ಕೊಲ್ಲುವುದನ್ನು ತಡೆಯಲು, ಅರಣ್ಯ ಇಲಾಖೆಯು ಜಾನುವಾರುಗಳಿಗೆ ಕಿವಿಯೋಲೆ ಹಾಕಲು ಮುಂದಾಗಿದೆ.
ವರದಿ: ಪುಟ್ಟರಾಜು. ಆರ್. ಸಿ ಏಷಿಯಾನೆಟ್ ಸುವರ್ಣ ನ್ಯೂಸ್
ಚಾಮರಾಜನಗರ: ಅರಣ್ಯ ಪ್ರದೇಶದಲ್ಲಿ ಮಾನವ ವನ್ಯಜೀವಿ ಸಂಘರ್ಷವನ್ನು ತಡೆಗಟ್ಟುವ ಉದ್ಧೇಶದಿಂದ ಜಾನುವಾರುಗಳಿಗೆ ಕಿವಿಯೋಲೆ ಹಾಕಲು ನಿರ್ಧರಿಸಲಾಗಿದ್ದು, ಇದಕ್ಕೆ ಪಶುಪಾಲನಾ ಇಲಾಖೆ ಜೊತೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡ ಕೈ ಜೋಡಿಸಿದ್ದಾರೆ. ಕಿವಿಯೋಲೆ ಹಾಕ್ತಿರೋದು ಯಾಕೆ ಅನ್ನೋ ಸ್ಟೋರಿ ಇಲ್ಲಿದೆ ನೋಡಿ.
ಕಾವೇರಿ ವನ್ಯಜೀವಿ ಧಾಮ
ಚಾಮರಾಜನಗರ ಜಿಲ್ಲೆಯಲ್ಲಿ ಮಲೆಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿ ಧಾಮಕ್ಕೆ ಹೊಂದಿಕೊಂಡಂತೆ ಬಿಆರ್ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಿದ್ದು, ಅರಣ್ಯ ಪ್ರದೇಶ ಸಮೃದ್ಧಿಯಿಂದ ಕೂಡಿವೆ. ಇಲ್ಲಿ ಆನೆ, ಕರಡಿ, ಹುಲಿ, ಚಿರತೆ, ಜಿಂಕೆ, ಸೀಳುನಾಯಿ, ಕಾಡೆಮ್ಮೆ ಸೇರಿದಂತೆ ಇನ್ನು ಅನೇಕ ಪ್ರಾಣ ಗಳಿವೆ. ಆದರೆ ಈ ಧಾಮದ ಅರಣ್ಯ ಪ್ರದೇಶ ಹಾಗೂ ಕಾಡಂಚಿನಲ್ಲಿ ಜನವಸತಿ ಪ್ರದೇಶಗಳಿದ್ದು, ಇಲ್ಲಿನ ಜನರು ಹಲವು ದಶಕದಿಂದಲೂ ವಾಸಿಸುತ್ತಿದ್ದಾರೆ. ಕೃಷಿಯ ಜತೆಗೆ ಹೈನುಗಾರಿಕೆಯನ್ನು ಅವಲಂಬಿಸಿದ್ದು, ದನಕರುಗಳನ್ನು ಸಾಕುತ್ತಿದ್ದಾರೆ. ಇದರಲ್ಲೂ ದೇಸಿ ತಳಿಯ ಹಸುಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಈ ಹಿಂದೆ ರೈತರು ಜಾನುವಾರುಗಳನ್ನು ಅರಣ್ಯ ಪ್ರದೇಶಕ್ಕೆ ಕರೆದೊಯ್ದು ದೊಡ್ಡಿ ಹಾಕಿಕೊಂಡು ತಿಂಗಳುಗಟ್ಟಲೇ ಮೇಯಿಸಲಾಗುತ್ತಿತ್ತು. ಆದರೆ ಮಲೆಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿ ಧಾಮ 1987ರಲ್ಲಿ ಅಸ್ಥಿತ್ವಕ್ಕೆ ಬಂದ ಬಳಿಕ ದನಕರುಗಳನ್ನು ಮೇಯಿಸಲು ಹಾಗೂ ಅರಣ್ಯ ಪ್ರದೇಶದೊಳಗೆ ದೊಡ್ಡಿ ಹಾಕುವುದಕ್ಕೆ ಅರಣ್ಯ ಇಲಾಖೆ ನಿರ್ಬಂಧ ವಿಧಿಸಿತು. ಇದರಿಂದ ಜಾನುವಾರುಗಳ ಮೇವಿಗೆ ತೊಂದರೆಯಾಗಿ ಪರಿಣಮಿಸಿತು.
ಕಾಡು ಪ್ರಾಣಿಗಳ ದಾಳಿಗೆ ಜಾನುವಾರು ಬಲಿ
ಆದಾಗ್ಯೂ ಕಾಡಂಚಿನ ಗ್ರಾಮಗಳಲ್ಲಿ ಪರ್ಯಾಯ ವ್ಯವಸ್ಥೆಯಿಲ್ಲದೇ ಕೆಲವರು ಜಾನುವಾರುಗಳನ್ನು ಮೇಯಲು ಅರಣ್ಯ ಪ್ರದೇಶದೊಳಗೆ ಬಿಡುತ್ತಿದ್ದಾರೆ. ಈ ವೇಳೆ ಕಾಡು ಪ್ರಾಣಿಗಳ ದಾಳಿಗೆ ಜಾನುವಾರುಗಳು ಬಲಿಯಾಗ ತೊಡಗಿದವು. ಆದರೆ ಅರಣ್ಯ ಪ್ರದೇಶದಲ್ಲಿ ದಾಳಿಗೆ ಒಳಗಾಗಿ ಮೃತಪಟ್ಟ ಜಾನುವಾರುಗಳಿಗೆ ಸರ್ಕಾರದಿಂದ ಯಾವುದೇ ಪರಿಹಾರ ಇಲ್ಲದ ಪರಿಣಾಮ ರೈತರು ಈ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸುತ್ತಿಲ್ಲ. ಇದಕ್ಕೆ ಸೇಡು ತೀರಿಸಿಕೊಳ್ಳುವ ಪ್ರತಿಕಾರವಾಗಿ ಹಾಗೂ ಮುಂದಿನ ದಿನಗಳಲ್ಲಿ ಜಾನುವಾರುಗಳು ದಾಳಿಗೆ ಒಳಗಾಗಬಾರದು ಎನ್ನುವ ದುರುದ್ಧೇಶದಿಂದ ಕೆಲವರು ಕಾಡು ಪ್ರಾಣಿ ಗಳನ್ನು ಕೊಲ್ಲುವುದಕ್ಕೆ ಮನಸ್ಸು ಮಾಡುತ್ತಿದ್ದಾರೆ. ಇದಕ್ಕೆ ಮಲೆಮಹದೇಶ್ವರ ವನ್ಯಜೀವಿ ಧಾಮದ ಮಿಣ್ಯಂ ಹಾಗೂ ಪಚ್ಚೆದೊಡ್ಡಿ ಅರಣ್ಯ ಪ್ರದೇಶದಲ್ಲಿ ಹಸುವನ್ನು ಕೊಂದ ಹುಲಿಗಳಿಗೆ ವಿಷ ಉಣಿಸಿ ಸಾಯಿಸಿರುವುದೇ ಸಾಕ್ಷಿಯಾಗಿದೆ ಎಂದು ಮಲೆ ಮಹದೇಶ್ವರ ವನ್ಯಧಾಮ. ಡಿಸಿಎಫ್ ಭಾಸ್ಕರ್ ತಿಳಿಸಿದ್ದಾರೆ.
ಮಾನವ- ವನ್ಯಜೀವಿ ಸಂಘರ್ಷ ತಡೆ
ಇನ್ನೂ ಕಾಡು ಪ್ರಾಣಿಗಳ ದಾಳಿಗೆ ಒಳಗಾದ ಜಾನುವಾರುಗಳ ಬಗ್ಗೆ ಮಾಹಿತಿ ಸಿಗುತ್ತಿಲ್ಲ. ಈ ಕಾರಣದಿಂದ ಕಿವಿಯೋಲೆ ಹಾಕಿಸಲು ನಿರ್ಧರಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಜಾನುವಾರುಗಳ ನಿಖರ ಅಂಕಿ ಅಂಶ ಸಿಗಲಿದ್ದು, ಜತೆಗೆ ಮಾಲೀಕರ ಯಾರೆಂಬುದು ಗೊತ್ತಾಗಲಿದೆ. ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ದೊರಕಿಸಿ ಕೊಡಲು ಸುಲಭವಾಗಲಿದೆ. ಕಾಡು ಪ್ರಾಣಿ ಗಳನ್ನು ಕೊಲ್ಲುವ ಮನಸ್ಸು ಮಾಡುವುದಿಲ್ಲ. ಇದರಿಂದ ಮಾನವ- ವನ್ಯಜೀವಿ ಸಂಘರ್ಷವನ್ನು ತಡೆಗಟ್ಟಬಹುದಾಗಿದೆ. ಜಾನುವಾರುಗಳಿಗೆ ಕಿವಿಯೋಲೆ ಹಾಕಿದರೆ ತಮಿಳುನಾಡಿನ ದನಗಳಿಗೆ ಕಡಿವಾಣ ಬಿದ್ದಂತಾಗುತ್ತದೆ.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟ ವನ್ಯಧಾಮದಲ್ಲಿ ಇತ್ತೀಚೆಗೆ ದುಷ್ಕೃರ್ಮಿಗಳು ಬರ್ಬರವಾಗಿ ಹುಲಿ ಹತ್ಯೆ ಮಾಡುವ ಮೂಲಕ ಅಮಾನವೀಯ ಕೃತ್ಯ ಎಸಗಿದ್ದರು. ಕಳೆದ ಮೂರು ತಿಂಗಳ ಅಂತರದಲ್ಲಿ ಇದೇ ವನ್ಯಧಾಮದಲ್ಲಿ 6 ಹುಲಿಗಳು ಮನುಷ್ಯನ ಸೇಡಿಗೆ ಬಲಿಯಾಗಿತ್ತು.
ಒಟ್ನಲ್ಲಿ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಸಂಭವಿಸಿರುವ ಹುಲಿ ಹತ್ಯೆಗಳಿಂದ ಎಚ್ಚೆತ್ತ ಅರಣ್ಯಾಧಿಕಾರಿಗಳು ಹುಲಿ ಸಾವು ತಡೆಗೆ ಜಾನುವಾರುಗಳಿಗೆ ಕಿವಿಯೋಲೆ ಹಾಕಿ ಒಂದು ವೇಳೆ ಮೃತಪಟ್ಟ ಹಸುಗಳಿಗೆ ಪರಿಹಾರ ಕೊಡುವ ಮೂಲಕ ಹುಲಿ ಹತ್ಯೆ ನಿಲ್ಲಿಸುವ ಮಾಸ್ಟರ್ ಪ್ಲಾನ್ ಮಾಡಿದ್ದಾರೆ..
