ದೊಡ್ಡಬಳ್ಳಾಪುರದಲ್ಲಿ, ಗಂಡನ ಮನೆಯವರ ವರದಕ್ಷಿಣೆ ಕಿರುಕುಳ ಮತ್ತು ಮಾನಸಿಕ ಹಿಂಸೆಯಿಂದ ಬೇಸತ್ತ ಉಪನ್ಯಾಸಕಿ ಪುಷ್ಪಾ ಎಂಬುವವರು ಡ್ಯಾಂಗೆ ಹಾರಿ ಆತ್ಮ8ಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ, ಅವರು ತಮ್ಮ ನೋವು ಮತ್ತು ಅನ್ಯಾಯವನ್ನು ವಿವರಿಸಿ ವಿಡಿಯೋ ಚಿತ್ರೀಕರಿಸಿದ್ದಾರೆ.

ದೊಡ್ಡಬಳ್ಳಾಪುರ: ಗಂಡನ ಮನೆಯವರ ಕಿರುಕುಳ ತಾಳಲಾರದೆ ಯುವ ಗೃಹಿಣಿ, ಉಪನ್ಯಾಸಕಿಯೊಬ್ಬರು ಆತ್ಮ*ಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಬಳಿಯ ವಿಶ್ವೇಶ್ವರಯ್ಯ ಪಿಕ್‌ಅಪ್ ಡ್ಯಾಂ ಬಳಿ ನಡೆದಿದೆ. ಮೃತ ಮಹಿಳೆಯನ್ನು 28 ವರ್ಷದ ಪುಷ್ಪಾ ಎಂದು ಗುರುತಿಸಲಾಗಿದೆ. ಘಾಟಿ ಬಳಿಯ ವಿಶ್ವೇಶ್ವರಯ್ಯ ಡ್ಯಾಂಗೆ ಹಾರಿ ಪುಷ್ಪಾ ಸಾವನ್ನಪ್ಪಿದ್ದಾರೆ. ಆತ್ಮ*ಹತ್ಯೆ ಮಾಡಿಕೊಳ್ಳುವ ಮುನ್ನ ಒಂದು ಸುದೀರ್ಘ ವಿಡಿಯೋ ಚಿತ್ರೀಕರಿಸಿದ್ದು, ಅದರಲ್ಲೇ ತಮ್ಮ ಜೀವನದಲ್ಲಿ ಅನುಭವಿಸಿದ ನೋವು, ಗಂಡನ ಮನೆಯವರ ಕಿರುಕುಳ ಮತ್ತು ಬದುಕಿನ ನೊಂದ ಘಟನೆಗಳ ಬಗ್ಗೆ ವಿವರಿಸಿದ್ದಾರೆ.

ಕಳೆದ ವರ್ಷ ವಿವಾಹವಾದ ಪುಷ್ಪಾ

ತಪಸೀಹಳ್ಳಿಯ ನಿವಾಸಿ ಪುಷ್ಪಾ ಕಳೆದ ವರ್ಷ ವೇಣು ಎಂಬ ಯುವಕನೊಂದಿಗೆ ವಿವಾಹವಾಗಿದ್ದರು. ಆದರೆ ಮದುವೆಯ ನಂತರದಿಂದಲೇ ಕುಟುಂಬದಲ್ಲಿ ಅಸಮಾಧಾನ, ಗಲಾಟೆ ಮತ್ತು ಹಿಂಸೆ ನೀಡಿದ್ದಾರೆಂದು ಉಪನ್ಯಾಸಕಿ ವಿಡಿಯೋದಲ್ಲಿ ಹೇಳಿದ್ದಾರೆ. ವರದಕ್ಷಿಣೆ ಹಾಗೂ ನಿವೇಶನಕ್ಕಾಗಿ ಪುಷ್ಪಾಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿತ್ತು ಎಂದು ಮೃತೆಯ ಕುಟುಂಬದವರು ಆರೋಪಿಸಿದ್ದು, ಪುಷ್ಪಾ ಕೂಡ ಇದನ್ನು ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ.

ಗಂಡ ಮತ್ತು ಅತ್ತೆಯಿಂದ ಮಾನಸಿಕ ಹಿಂಸೆ

ಮದುವೆಯ ದಿನದಿಂದಲೂ ವೇಣು ತನ್ನ ಪತ್ನಿಯೊಂದಿಗೆ ಸಹಜ ದಾಂಪತ್ಯ ಜೀವನ ನಡೆಸಿರಲಿಲ್ಲ. ಮಗು ಬೇಕು ಎಂದರೆ ಮೈದುನನ ಜೊತೆ ಮಲಗು ಎಂದು ಹೇಳಿದ್ದು, ಅತ್ತೆ ಮತ್ತು ಇತರ ಮನೆಯವರು ಪುಷ್ಪಾಳಿಗೆ ಮಾನಹಾನಿ ಉಂಟು ಮಾಡುವ ರೀತಿಯಲ್ಲಿ ವರ್ತಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ರೀತಿಯ ಮಾನಸಿಕ ಹಿಂಸೆ ಮತ್ತು ನಿರಂತರ ಕಿರುಕುಳದಿಂದ ಬೇಸತ್ತ ಪುಷ್ಪಾ, ಕೊನೆಗೆ ಆತ್ಮ*ಹತ್ಯೆಗೆ ಶರಣಾಗಿದ್ದಾರೆ,

ವಿಡಿಯೋದಲ್ಲಿ ಬಿಚ್ಚಿಟ್ಟ ನೋವು

ಆತ್ಮಹತ್ಯೆಗೆ ಮುನ್ನ ಚಿತ್ರೀಕರಿಸಿದ ವಿಡಿಯೋದಲ್ಲಿ ಪುಷ್ಪಾ ತಾನು ಎದುರಿಸುತ್ತಿದ್ದ ಕಿರುಕುಳ ಮತ್ತು ಕುಟುಂಬದವರ ಅಸಹನೀಯ ವರ್ತನೆ ಕುರಿತು ಸ್ಪಷ್ಟವಾಗಿ ಬಿಚ್ಚಿಟ್ಟಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ತಂದಿದೆ.

ಪೊಲೀಸ್ ತನಿಖೆ ಮುಂದುವರಿಕೆ

ಈ ಘಟನೆಯ ಬಗ್ಗೆ ದೊಡ್ಡಬಳ್ಳಾಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಗಂಡ ವೇಣು, ಅತ್ತೆ ಮತ್ತು ಇತರ ಮನೆಯವರ ವಿರುದ್ಧ ಹಿಂಸೆ ಮತ್ತು ಪ್ರೇರಿತ ಆತ್ಮ*ಹತ್ಯೆ ಆರೋಪಗಳಡಿ ತನಿಖೆ ಆರಂಭಿಸಿದ್ದಾರೆ. ಮೃತ ಪುಷ್ಪಾ ಕುಟುಂಬದವರು ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.

ಗಂಡನ ಮನೆಯಲ್ಲಿ ವರದಕ್ಷಿಣೆ, ನಿವೇಶನ ಹಾಗೂ ದಾಂಪತ್ಯ ಹಕ್ಕುಗಳ ವಿಷಯದಲ್ಲಿ ನೀಡಲಾಗಿದ್ದ ಕಿರುಕುಳ ಮತ್ತು ಮಾನಸಿಕ ಹಿಂಸೆ ಇವುಗಳೇ ಯುವ ಗೃಹಿಣಿ ಪುಷ್ಪಾಳ ಅಮೂಲ್ಯ ಜೀವನವನ್ನು ಕಿತ್ತುಕೊಂಡಿವೆ. ಈ ಘಟನೆ ಮತ್ತೆ ಒಮ್ಮೆ ಗೃಹ ಹಿಂಸೆ ಮತ್ತು ವರದಕ್ಷಿಣೆ ಕಿರುಕುಳದ ಸಮಸ್ಯೆ ಕುರಿತು ಸಮಾಜದಲ್ಲಿ ಚರ್ಚೆ ಆರಂಭಿಸಲು ಕಾರಣವಾಗಿದೆ.

ವಿಡಿಯೋದಲ್ಲಿ ಉಪನ್ಯಾಸಕಿ ಅತ್ತಿರುವುದು ಹೀಗೆ!

ನನಗೆ ಕೊಟ್ಟಿರೋ ಹಿಂಸೆ ಒಂದೊಂದಲ್ಲ, ನಾನ್ ನೋಡಿರೋ ನರಕ ಒಂದೊಂದಲ್ಲ. ಊಟಕ್ಕೆ ವಿಷ ಹಾಕೋಕೆ ಹೋಗಿದ್ರು, ಅದಕ್ಕೆ ನಾನು ಊಟಾನೂ ಮಾಡ್ಲಿಲ್ಲ. ನಾನು ಅಡುಗೆ ಮಾಡಿದ್ರೆ ಮಾತ್ರ ನಾನು ಊಟ ಮಾಡ್ತಿದ್ದೆ, ಇಲ್ಲದಿದ್ರೆ ತಿಂತಿರಲಿಲ್ಲ. ಅವರು ನನ್ನ ಸಾಯಿಸೋ ಪ್ರಯತ್ನ ಕೂಡ ಮಾಡಿದ್ರು.

ನನ್ನ ಕೊನೆ ಆಸೆ ಇರೋದು ಇಷ್ಟೇ. ನನ್ನ ಹೆಣನ ಗಂಡನ ಮನೆಲೆ ಹೂಳಬೇಕು. ಅವರ ಊರಲ್ಲೇ, ಅವರ ಮನೆಯಲ್ಲೇ ಹೂಳಬೇಕು ನನ್ನ ಹೆಣನಾ. ನನ್ನ ಸಾವಿಗೆ ನ್ಯಾಯ ಒದಗಿಸಬೇಕು. ನಾನು ಪಟ್ಟಿರೋ ನರಕ ಬೇರೆ ಯಾವ ಹೆಣ್ಣಿಗೂ ಆಗಬಾರದು. ನನಗೆ ಆಗಿರೋ ಅನ್ಯಾಯ ಬೇರೆ ಯಾವ ಹೆಣ್ಣಿಗೂ ಆಗಬಾರದು. ನನಗಾಗಿರೋ ಅನ್ಯಾಯಕ್ಕೆ ನ್ಯಾಯ ಒದಗಿಸಿಕೊಡಬೇಕು. ಇಷ್ಟೇ ನಾನು ಎಲ್ಲಾರತ್ರ ಕೇಳಿ ಕೊಳ್ಳೋದು. ನನ್ನ ಸಾವಿಗೆ ಕಾರಣ ನನ್ನತ್ತೆ ಭಾರತಿ, ನನ್ನ ಮಾವ ಗೋವಿಂದಪ್ಪ, ನನ್ನ ಮೈದುನ ನಾರಾಯಣಸ್ವಾಮಿ, ನನ್ನ ಗಂಡ ವೇಣು, ನನ್ನ ಗಂಡನ ಚಿಕ್ಕಪ್ಪ ಮುತ್ತೇಗೌಡ, ಚಿಕ್ಕಮ್ಮ ಪಲ್ಲವಿ ಇಷ್ಟುಜನ ಕಾರಣರು.

ನಿನ್ನ ಗಂಡಂಗೆ ಮದುವೆ ಮಾಡ್ತಿವಿ ಅಂತಾರೆ, ನನ್ ಗಂಡ 2ನೇ ಮದುವೆ ಆಗ್ತಿನಿ ಅಂತಾನೆ. ನನ್ನ ಮೈದುನನ ಪಕ್ಕ ಮಲಕ್ಕೋ ಅಂತಾರೆ. ಮಗು ಯಾರಿಂದ ಆದ್ರೆ ಏನು ಅಂತಾರೆ. ನಾನು ಏನ್​ ಮಾಡ್ಲಿ ದೇವ್ರೆ ಎಂದು ವಿಡಿಯೋದಲ್ಲಿ ಹೇಳಿಕೊಂಡು ಅತ್ತಿದ್ದಾರೆ.