ಸುಜಾತಾ ಭಟ್‌ ಅವರ ಮಗಳು ಅನನ್ಯಾ ಭಟ್‌ ನಾಪತ್ತೆ ಪ್ರಕರಣವು ಸುಳ್ಳೆಂದು ಸಾಬೀತಾಗಿದೆ. ಏಷ್ಯಾನೆಟ್‌ ಸುವರ್ಣನ್ಯೂಸ್‌ ತನಿಖೆಯಿಂದ ಸುಜಾತಾ ಹೇಳಿದ ಸುಳ್ಳುಗಳು ಬಯಲಾಗಿವೆ. ಅನನ್ಯಾ ಭಟ್‌ ಫೋಟೋ ವಿಚಾರದಲ್ಲೂ ಸುಳ್ಳು ಹೇಳಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರು (ಆ.19): ಧರ್ಮಸ್ಥಳ ಕೇಸ್‌ನಲ್ಲಿ ಸಾಕಷ್ಟು ಸದ್ದು ಮಾಡಿದ್ದ ಸುಜಾತಾ ಭಟ್‌ ಅವರ ಮಗಳು ಅನನ್ಯಾ ಭಟ್‌ ನಾಪತ್ತೆ ಪ್ರಕರಣ ಬಹುತೇಕ ಸುಳ್ಳು ಅನ್ನೋದು ಸಾಬೀತಾಗಿದೆ. ಸುಳ್ಳಿಗೆ ಒಂದು ಸುಳ್ಳು ಪೋಣಿಸಿ ಸುಜಾತಾ ಭಟ್‌ ಹಾಗೂ ಧರ್ಮಸ್ಥಳ ವಿರೋಧಿ ಗ್ಯಾಂಗ್‌ ಜನರ ಎದುರು ಬೆತ್ತಲಾಗಿದ್ದಾರೆ. ಸುಜಾತಾ ಭಟ್‌ ಹೇಳಿದ್ದ ಮಾತುಗಳ ಜಾಡು ಹಿಡಿದೇ ಹೋಗಿದ್ದ ಏಷ್ಯಾನೆಟ್‌ ಸುವರ್ಣನ್ಯೂಸ್‌ಗೆ ಸಿಕ್ಕಿದ್ದು ಆಕೆ ಹೇಳಿದ್ದ ಸುಳ್ಳಿನ ಕಂತೆಗಳು. ಈಗ ಮಗಳು ಅನನ್ಯಾ ಭಟ್‌ ಫೋಟೋ ವಿಚಾರದಲ್ಲೂ ಆಕೆ ಹೇಳಿದ್ದ ಮಹಾಸುಳ್ಳು ಬಯಲಾಗಿದೆ. ಇನ್ನು ರಂಗಪ್ರಸಾದ್‌ ಎನ್ನುವವರ ಸೊಸೆ ವಾಸಂತಿ ಅವರ ಫೋಟೋ ಸುಜಾತಾ ಭಟ್‌ಗೆ ಸಿಕ್ಕಿದ್ದು ಹೇಗೆ ಅನ್ನೋದರ ವಿವರ ಇಲ್ಲಿದೆ.

2005ರ ತನಕ ನಾನು ಕೋಲ್ಕತ್ತಾದ್ದಲ್ಲಿದ್ದೆ ಎಂದು ಸುಜಾತಾ ಭಟ್‌ ಹೇಳಿದ್ದಾರೆ. ಆದರೆ, ಅದಕ್ಕೆ ಯಾವುದೇ ದಾಖಲೆಗಳಿಲ್ಲ. 2005ರ ತನಕ ಈಕೆ ಪ್ರಭಾಕರ್ ಬಾಳಿಗ ಅನ್ನುವವರ ಜತೆ ಶಿವಮೊಗ್ಗದ ರಿಪ್ಪನ್‌ಪೇಟೆಯಲ್ಲಿ ಇದ್ದಿದ್ದಕ್ಕೆ ದಾಖಲೆಗಳಿವೆ. ಆದರೆ 2005ರ ನಂತರ ಈಕೆ ಬೆಂಗಳೂರಿಗೆ ಬಂದದ್ದು ಸತ್ಯ. ಇಲ್ಲಿ ರಂಗಪ್ರಸಾದ್ ಎಂಬುವವರ ಜತೆ ಲಿವಿಂಗ್ ಇನ್ ರಿಲೇಶನ್‌ಷಿಪ್‌ಗೆ ಬಿದ್ದಿದ್ದು ಸತ್ಯ ಎಂದು ದಾಖಲೆಗಳು ಹೇಳಿವೆ.

ಯಾರೀತ ರಂಗಪ್ರಸಾದ್‌: ಈ ರಂಗಪ್ರಸಾದ್‌ ಎನ್ನುವ ವ್ಯಕ್ತಿ ಬಿಇಎಲ್‌ನ ನಿವೃತ್ತ ಸಿಬ್ಬಂದಿ. ರಂಗಪ್ರಸಾದ್‌ ಹಾಗೂ ಅವರ ಪತ್ನಿ ಇಬ್ಬರೂ ಬಿಇಎಲ್‌ನಲ್ಲಿ ಕೆಲಸಕ್ಕೆ ಇದ್ದರು. ಪತ್ನಿ ಮೃತಪಟ್ಟ ಬಳಿಕ ರಂಗಪ್ರಸಾದ್‌ ಒಬ್ಬಂಟಿಯಾಗಿ ಇದ್ದರು. ಇವರಿಗೆ ಒಬ್ಬ ಮಗ ಹಾಗೂ ಮಗಳು. ಪತ್ನಿಯ ನಿಧನದ ಬಳಿಕ ಇಬ್ಬರೂ ಮಕ್ಕಳಿಗೆ ಮದುವೆ ಮಾಡಿದ್ದಾರೆ. ಈ ಹಂತದಲ್ಲಿ ಒಬ್ಬಂಟಿಯಾಗಿದ್ದ ರಂಗಪ್ರಸಾದ್‌ಗೆ ಸುಜಾತಾ ಅವರ ಪರಿಚಯವಾಗಿದೆ.

ರಂಗಪ್ರಸಾದ್‌ಗೆ ಇತ್ತು ಸಕ್ಕರೆ ಕಾಯಿಲೆ: ಇನ್ನು ರಂಗಪ್ರಸಾದ್‌ಗೆ ಸಕ್ಕರೆ ಕಾಯಿಲೆ ಇತ್ತು. ಒಂದು ಹಾಸ್ಪಿಟಲ್‌ಗೆ ಚಿಕಿತ್ಸೆಗಾಗಿ ರೆಗ್ಯಲರ್‌ ಹೋಗುತ್ತಿದ್ದರು.

ಅದೇ ಖಾಸಗಿ ಹಾಸ್ಪಿಟಲ್‌ನಲ್ಲಿ ಸುಜಾತಾ ಸಣ್ಣ ಕೆಲಸ ಮಾಡಿಕೊಂಡಿದ್ದರು. ಇಬ್ಬರೂ ಒಬ್ಬಂಟಿಯಾಗಿದ್ದ ಕಾರಣ, ಪರಿಚಯವಾದ ಕೆಲವೇ ದಿನಗಳಲ್ಲಿ ಸುಜಾತಾ ಲಗೇಜ್ ಸಮೇತ ರಂಗಪ್ರಸಾದ್ ಮನೆಗೆ ಸೇರಿಕೊಂಡು ಬಿಟ್ಟಿದ್ದರು.

ರಂಗಪ್ರಸಾದ್‌ ಅವರ ಮನೆ ಕೆಂಗೇರಿ ಉಪನಗರದಲ್ಲಿದೆ. ಇಲ್ಲಿ ಮಗ ಶ್ರೀವತ್ಸ ಹಾಗೂ ಸೊಸೆ ವಾಸಂತಿ ಜೊತೆ ವಾಸವಿದ್ದರು. ಹೌಸಿಂಗ್ ಬೋರ್ಡ್ ಸೈಟ್‌ನಲ್ಲಿದ್ದ ಸ್ವಂತ ಮನೆ ಇದಾಗಿತ್ತು. ಮೊದಲು ರಂಗಪ್ರಸಾದ್‌ಗೆ ಸಹಾಯಕಿಯಾಗಿ ಸುಜಾತಾ ಮನೆ ಸೇರಿದ್ದರು. ಈ ಹಂತದಲ್ಲಿ ಮನೆಯಲ್ಲಿ ಆಗುವ ಗಲಾಟೆಗಳು ಆಕೆಯ ಕಣ್ಣಿಗೆ ಬಿದ್ದಿದ್ದವು. ರಂಗಪ್ರಸಾದ್‌, ಮಗ-ಸೊಸೆ ಜೊತೆ ತಿಕ್ಕಾಟ ನಡೆಸುತ್ತಿದ್ದರೆ, ಮಗ ಶ್ರೀವತ್ಸ ಹಾಗೂ ಸೊಸೆ ವಾಸಂತಿ ನಡುವಿನ ಸಂಬಂಧವೂ ಅಷ್ಟು ಚೆನ್ನಾಗಿ ಇದ್ದಿರಲಿಲ್ಲ.

ನಿವೃತ್ತರಾಗಿ ಮನೆಯಲ್ಲಿದ್ದ, ಪತ್ನಿ ಕಳೆದುಕೊಂಡು, ಮಗಳಿಗೆ ಮದುವೆಯಾಗಿ, ಆಕೆಗೂ ಮಗುವಾಗಿ ರಂಗಪ್ರಸಾದ್‌ ಆಗಲೇ ತಾತನ ಪಟ್ಟವೇರಿದ್ದರು. ಈ ಹಂತದಲ್ಲಿ ಸುಜಾತಾ ಕೇರ್‌ಟೇಕರ್‌ ಆಗಿ ಸೇರಿದ್ದರು. ಮಗ-ಸೊಸೆ ಎದುರಲ್ಲೇ ರಂಗಪ್ರಸಾದ್‌, ಸುಜಾತಾ ಪರವಾಗಿ ಮಾತನಾಡಲು ಆರಂಭಿಸಿದ್ದರು.

ಅನುಮಾನಾಸ್ಪದವಾಗಿ ಸಾವು ಕಂಡಿದ್ದ ವಾಸಂತಿ!

ಗಂಡನ ತೊರೆದು ಕೊಡಗಿನಲ್ಲಿದ್ದ ತವರು ಮನೆ ಸೇರಿದ್ದ ಸೊಸೆ ವಾಸಂತಿ, ಅಲ್ಲಿಯೇ ಅನುಮಾನಾಸ್ಪದವಾಗಿ ಸಾವು ಕಂಡಿದ್ದರು. ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ವಾಸಂತಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದರು. ಪ್ರೀತಿಸಿಯೇ ಶ್ರೀವತ್ಸ ಅವರನ್ನು ವಿವಾಹವಾಗಿದ್ದ ವಾಸಂತಿ, 2007ರಲ್ಲಿ ಸಾವು ಕಂಡಿದ್ದರು. ಪತ್ನಿಯನ್ನು ಕಳೆದುಕೊಂಡ ರಂಗಪ್ರಸಾದ್ ಮಗ ಶ್ರೀವತ್ಸ ಕುಡಿತಕ್ಕೆ ಬಿದ್ದ . ವಿಪರೀತ ಕುಡಿತದಿಂದ ಆತನ ಆರೋಗ್ಯ ಕೂಡ ಹಳ್ಳ ಹಿಡಿಯಿತು. ಈ ಹಂತದಲ್ಲಿ ಇಡೀ ಮನೆಯ ಮೇಲೆ ಸುಜಾತಾ ಹಿಡಿತ ಸಾಧಿಸಿದಳು. ಮುಂದೆ ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬನ ಮೂಲಕ ಮನೆಯನ್ನೇ ಮಾರಿಸಿಬಿಟ್ಟಿದ್ದಳು.

ಬೀದಿಪಾಲಾದ ರಂಗಪ್ರಸಾದ್‌!

ಇಡೀ ಮನೆಯ ಹಿಡಿತ ಸಾಧಿಸಿ, ರಿಯಲ್‌ ಎಸ್ಟೇಟ್‌ ಬ್ರೋಕರ್‌ ಮೂಲಕ ಸುಜಾತಾ ಮನೆಯನ್ನೇ ಮಾರಿದ್ದಳು. ಹಾಸಿಗೆ ಹಿಡಿದಿದ್ದ ಶ್ರೀವತ್ಸ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದರು. ಇನ್ನೊಂದೆಡೆ ಸುಜಾತಾಳನ್ನು ನಂಬಿ ರಂಗಪ್ರಸಾದ್ ಸಹ ಬೀದಿಪಾಲಾಗಿದ್ದರು. ಕುಡಿತದ ದಾಸನಾಗಿದ್ದ ಶ್ರೀವತ್ಸ 2015ರಲ್ಲಿ ಮೃತಪಟ್ಟರೆ, 20 ಲಕ್ಷ ರೂಪಾಯಿ ಸಮೇತ ಸುಜಾತಾ ಮನೆಯಿಂದ ಜಾಗ ಖಾಲಿ ಮಾಡಿದ್ದಳು. ಇಂದಿಗೂ ಸುಜಾತಾಗೆ ರಂಗಪ್ರಸಾದ್ ಮಗಳು ಹಿಡಿಶಾಪ ಹಾಕುತ್ತಲೇ ಇದ್ದಾರೆ.

ಸರಿ ಸುಮಾರು 12 ವರ್ಷ ರಂಗಪ್ರಸಾದ್ ಜತೆ ಸಹಜೀವನ ನಡೆಸಿದ ಸುಜಾತಾ ಅವರ ಮನೆ ಮಾರಿಸಿ ಹೊರಟುಬಿಟ್ಟರು. ಈಕೆಯ ಸಹವಾಸಕ್ಕೆ ಬಿದ್ದು ಮಗ-ಸೊಸೆಯನ್ನೂ ಕಳೆದುಕೊಂಡು, ಮಗಳು- ಅಳಿಯ- ಮೊಮ್ಮಕ್ಕಳಿಂದಲೂ ದೂರವಾಗಿ ಒಬ್ಬಂಟಿ ಜೀವನ ನಡೆಸಿದ ರಂಗಪ್ರಸಾದ್ ಇದೇ ವರ್ಷ ಜನವರಿ 12 ರಂದು ಕೊನೆಯುಸಿರೆಳೆದಿದ್ದಾರೆ.

ಸುಜಾತಾ ತೋರಿಸಿದ ಈ ಫೋಟೋ ಯಾರದ್ದು?

ತನ್ನ ಮಗಳು ಅನನ್ಯಾ ಫೋಟೋ ಎನ್ನುವ ಸುಜಾತಾ, ಪಾಸ್ಪೋರ್ಟ್ ಸೈಜ್ ಫೋಟೋವನ್ನೂ ತೋರಿಸಿದ್ದಾರೆ. ಸುಜಾತಾ & ಗ್ಯಾಂಗ್ ಊಹಿಸದ ರೀತಿಯಲ್ಲಿ ತನಿಖೆ ನಡೆಸಿದ ಏಷ್ಯಾನೆಟ್‌ ಸುವರ್ಣನ್ಯೂಸ್‌ಗೆ ಇದರ ಮಾಹಿತಿ ಸಿಕ್ಕಿದೆ. ಆಕೆ ತೋರಿಸಿದ್ದು ಮತ್ಯಾರ ಫೋಟೋ ಕೂಡ ಅಲ್ಲ. ರಂಗಪ್ರಸಾದ್‌ ಅವರ ಸೊಸೆ ವಾಸಂತಿ ಅವರ ಕಾಲೇಜು ದಿನದ ಫೋಟೋ. ಈ ಫೋಟೋಗೆ ನೀಲಿ ಬಣ್ಣದ ಪೆನ್ನಿನಲ್ಲಿ ಹಣೆಗೆ ಚುಕ್ಕಿ ಇಟ್ಟವನು ಧೂತ ಎಂಡಿ ಸಮೀರ್‌.