ಸುಜಾತಾ ಭಟ್ ಅವರ ಸುಳ್ಳಿನ ಕಂತೆಯನ್ನು ಬಯಲು ಮಾಡುವ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ. ಅನನ್ಯಾ ಭಟ್ ಫೋಟೋ ಹಿಂದಿನ 'ಧೂತ' ಎಂಡಿ ಸಮೀರ್ ಪಾತ್ರ ಬಯಲು.
ಬೆಂಗಳೂರು (ಆ.19): ದಿನದಿಂದ ದಿನಕ್ಕೆ ಸುಜಾತಾ ಭಟ್ ಸುಳ್ಳುಗಳು ಜಗಜ್ಜಾಹೀರಾಗುತ್ತಿದೆ. ಸೋಶಿಯಲ್ ಮೀಡಿಯಾ, ನ್ಯೂಸ್ ರೂಮ್‌ಗಳಲ್ಲಿ ಸಾಕಷ್ಟು ಆಧುನಿಕ ವ್ಯವಸ್ಥೆಗಳು ಇದ್ದ ಸಮಯದಲ್ಲೇ ಸುಜಾತಾ ಭಟ್ ಇಷ್ಟು ರಾಜಾರೋಷವಾಗಿ ಸುಳ್ಳು ಹೇಳುತ್ತಿರುವುದನ್ನು ಕಂಡು ಜನರೇ ದಂಗಾಗಿ ಹೋಗಿದ್ದಾರೆ. 2007ರಲ್ಲಿ ಸಾವು ಕಂಡ ಕೊಡಗು ಮೂಲದ ವಾಸಂತಿ ಎನ್ನುವವರ ಕಾಲೇಜು ದಿನಗಳನ್ನ ಫೋಟೋವನ್ನು ನೀಡಿ ಇವಳೇ ತನ್ನ ಮಗಳು ಅನನ್ಯಾ ಭಟ್ ಎಂದು ಹೇಳಿದ್ದ ಸುಜಾತಾ ಭಟ್ ಸುಳ್ಳಿನ ಕಂತೆಯನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಎಕ್ಸ್‌ಕ್ಲೂಸಿವ್ ವರದಿಯಲ್ಲಿ ಬಿಚ್ಚಿಟ್ಟಿದೆ.
ಅಷ್ಟಕ್ಕೂ ಸುಜಾತಾ ಭಟ್‌ಗೆ ಈ ಐಡಿಯಾ ಕೊಟ್ಟಿದ್ಯಾರು ಅನ್ನೋದೇ ಎಲ್ಲರ ಪ್ರಶ್ನೆಯಾಗಿದೆ. ವಿಚಾರ ಏನೆಂದರೆ, ಸುಜಾತಾ ಭಟ್‌ಗೆ ಈ ಖತರ್ನಾಕ್ ಐಡಿಯಾ ಕೊಟ್ಟಿದ್ದೇ 'ಧೂತ' ಎಂಡಿ ಸಮೀರ್. ಯಾರದ್ದೋ ಹಳೇ ಫೋಟೋ ಬಿಡುಗಡೆ ಮಾಡಬೇಕು. ಸದ್ಯ ಪ್ರಶ್ನೆ ಕೇಳುತ್ತಿರುವ ಜನರ ಬಾಯಿ ಮುಚ್ಚಿಸಬೇಕು ಎನ್ನುವ ನಿಟ್ಟಿನಲ್ಲಿ ಎಂಡಿ ಸಮೀರ್ ಇಂಥದ್ದೊಂದು ಅಧ್ವಾನದ ಪ್ಲ್ಯಾನ್ ಮಾಡಿದ್ದ.
ಅನನ್ಯಾಳ ಹೆಸರಲ್ಲಿ ಯಾರ ಫೋಟೋ ಬಿಡುಗಡೆ ಮಾಡುವುದು ಎನ್ನುವ ಪ್ರಶ್ನೆ ಬಂದಾಗ ಎಂಡಿ ಸಮೀರ್ ಕೆಲವು ಷರತ್ತುಗಳನ್ನು ಕೂಡ ಹಾಕಿದ್ದ. ಎಲ್ಲಿಯೂ ಸಿಕ್ಕಿಹಾಕಿಕೊಳ್ಳದಂತೆ ಎಂಡಿ ಸಮೀರ್ ಪ್ಲ್ಯಾನ್ ಮಾಡಿದ್ದ ಎನ್ನಲಾಗಿದೆ.
ಸುಜಾತಾ ಸತ್ಯ ಬಯಲಾಗುತ್ತಿದ್ದಂತೆ ಎಲ್ಲೆಡೆ ಸಂಚಲನ ಸೃಷ್ಟಿಯಾಗಿತ್ತು. ಧರ್ಮಸ್ಥಳ ವಿರೋಧಿ ಗ್ಯಾಂಗ್‌ಗೆ ತೀವ್ರ ಮುಜುಗರಕ್ಕೆ ಒಳಗಾಗಿದ್ದರಿಂದ, ಅನನ್ಯಾ ಭಟ್‌ಳ ಫೋಟೋವನ್ನು ಬಿಡುಗಡೆ ಮಾಡುವ ಪ್ಲ್ಯಾನ್ ಮಾಡಿತ್ತು.
ಸುಜಾತಾ ಭಟ್ ಕುರಿತಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಹಿಂದಿನ ಎರಡು ಎಕ್ಸ್‌ಕ್ಲೂಸಿವ್ ವರದಿ ಬೆನ್ನಲ್ಲಿಯೇ ಜನ ಧರ್ಮಸ್ಥಳ ವಿರೋಧಿ ಗ್ಯಾಂಗ್‌ಅನ್ನು ಪ್ರಶ್ನೆ ಮಾಡಲು ಆರಂಭಿಸಿದರು. ಸುಜಾತಾಗೆ ಅನನ್ಯಾ ಭಟ್ ಎನ್ನುವ ಮಗಳು ಇದ್ದಳು ಎನ್ನುವುದಕ್ಕೆ ದಾಖಲೆ ಕೊಡುವುದು ಒತ್ತಟ್ಟಿಗಿರಲಿ. ಕೊನೆಪಕ್ಷ ಅನನ್ಯಾ ಭಟ್ದೊಂದು ಫೋಟೋ ಕೊಡಿ ಅಂತ ಕೇಳುವುದಕ್ಕೆ ಶುರುಮಾಡಿದರು. ಆಗ ನಡೆದ ಒಂದು ಸಭೆಯಲ್ಲಿ ಅನನ್ಯಾ ಭಟ್ ಫೋಟೋವನ್ನು ಬಿಡುಗಡೆ ಮಾಡುವ ಪ್ಲ್ಯಾನ್ ರೂಪುಗೊಂಡಿತ್ತು.
ಕೆಲ ಷರತ್ತು ಹಾಕಿದ್ದ ಎಂಡಿ ಸಮೀರ್: ಬದುಕಿರುವವರ ಫೋಟೋ ಆಗಿರಬಾರದು. ಮೃತಪಟ್ಟು ತುಂಬ ವರ್ಷ ಆಗಿರುವ ಹುಡುಗಿ ಫೋಟೋ ಬೇಕು. ಆ ಫೋಟೋ ಗುರುತಿಸಿ ಹೇಳಬಲ್ಲಂತವರು ಇರಬಾರದು. ಅಂಥವರ ಫೋಟೋ ಬೇಕು ಎಂದ ಸಮೀರ್ ಷರತ್ತು ವಿಧಿಸಿದ್ದ. ಇಂಟರ್ನೆಟ್‌ನಲ್ಲಿ ಹಲವು ಫೋಟೋ ಹುಡುಕಿದ ತಂಡ. ಆದರೆ, ಇಮೇಜ್ ಸರ್ಚ್‌ನಲ್ಲಿ ಸಿಕ್ಕಿ ಬೀಳುವ ಆತಂಕ ಇದ್ದ ಹಿನ್ನಲೆಯಲ್ಲಿ ಗ್ಯಾಂಗ್ ಈ ಪ್ಲ್ಯಾನ್‌ಅನ್ನು ಕೈಬಿಟ್ಟಿತ್ತು. ಹಲವು ಫೋಟೋಗಳನ್ನಿಟ್ಟುಕೊಂಡು ಚರ್ಚೆ ಮಾಡಿದ್ದ ಸಮೀರ್, ಈ ಯಾವ ಫೋಟೋಗಳು ಕೂಡ ಬೇಡ ಎಂದಿದ್ದ.
ಈ ಹಂತದಲ್ಲಿ ಸುಜಾತಾಳನ್ನೇ ಯಾವುದಾದರೂ ಫೋಟೋ ಇದ್ದರೆ ಕೊಡಿ ಎಂದು ಕೇಳಿದ್ದ. ತುಂಬ ಹಿಂದೆ ಮೃತಪಟ್ಟಿರುವ ಯುವತಿಯ ಫೋಟೋ ಆಗಿರಬೇಕು. 20-22 ವರ್ಷದ ಹುಡುಗಿ ಫೋಟೋ ಇದ್ದರೆ ನೀಡಿ ಎಂದಿದ್ದ.
ಎಂ.ಡಿ ಸಮೀರ್ ಪ್ಲ್ಯಾನ್ ಪಕ್ಕಾ ಇತ್ತು. ಹದಿನೆಂಟು ಇಪ್ಪತ್ತು ವರ್ಷಗಳ ಹಿಂದೆ ಸತ್ತುಹೋದ ಯುವತಿಯ ಫೋಟೋ ತಂದು ಇವಳೇ ಅನನ್ಯಾ ಭಟ್ ಅಂತಾ ಸುಜಾತಾಳ ಕೈಯಲ್ಲಿ ಹೇಳಿಸಿಬಿಡಬೇಕು. ಆಕೆಯ ಕುಟುಂಬಸ್ಥರು ಬಂದು ಇದು ನಮ್ಮವಳ ಫೋಟೋ ಅನ್ನದಿದ್ದರೆ ಸಾಕು. ಜನರಿಗಂತೂ ಏನೂ ಗೊತ್ತಾಗುವುದಿಲ್ಲ. ನಾವು ಏನು ಹೇಳಿದರೂ ನಂಬ್ತಾರೆ. ಅಂತಾ ಪ್ಲ್ಯಾನ್ ಮಾಡಿದ್ದು ಎಂಡಿ ಸಮೀರ್. ಆಗ ಸುಜಾತಾ ನನ್ನ ಹತ್ರ ಅಂಥ ಒಂದು ಫೋಟೋ ಇದೆ ಎಂದುಬಿಟ್ಟಿದ್ದಳು.
ಅನನ್ಯಾ ಭಟ್ ಆದ ರಂಗಪ್ರಸಾದ್ ಸೊಸೆ!
ಈ ಹಂತದಲ್ಲಿಯೇ ರಂಗಪ್ರಸಾದ್ ಅವರ ಸೊಸೆ ವಾಸಂತಿ ಫೋಟೋವನ್ನು ಸುಜಾತಾ ನೀಡಿದ್ದರು. ರಂಗಪ್ರಸಾದ್ ಮಗ ಶ್ರೀವತ್ಸ ಪತ್ನಿ ಈ ವಾಸಂತಿ. ವಾಸಂತಿಯ ಫೋಟೋ ಹಳೆಯ ಫೈಲಲ್ಲಿದೆ ಎಂದು ಸುಜಾತಾ ಹೇಳಿದ್ದಳು. ವಾಸಂತಿ 2007ರಲ್ಲಿಯೇ ಮೃತಪಟ್ಟಿದ್ದಳು. ಆಕೆಯನ್ನು ಗುರುತಿಸಬಲ್ಲ ಏಕೈಕ ವ್ಯಕ್ತಿ ಆಕೆಯ ಗಂಡ ಶ್ರೀವತ್ಸ. ಆತ ಕೂಡ 2025ರಲ್ಲಿಯೇ ಸಾವು ಕಂಡಿದ್ದಾನೆ ಎಂದಿದ್ದಳು. ತನ್ನ ಸೊಸೆಯ ಫೋಟೋವನ್ನು ರಂಗಪ್ರಸಾದ್ ಗುರುತಿಸಬಹುದಿತ್ತು. ಅದರೆ, ಈ ವರ್ಷದ ಜನವರಿ 12ಕ್ಕೆ ಆತ ಕೂಡ ಸಾವು ಕಂಡಿದ್ದಾರೆ. ಇನ್ನು ರಂಗಪ್ರಸಾದ್‌ಗೆ ಇರುವ ಮಗಳಿಗೆ ವಾಸಂತಿಯ ಯಾವುದೇ ಸಂಪರ್ಕ ಇಲ್ಲ ಎಂದು ಸುಜಾತಾ ಭಟ್ ತಿಳಿಸಿದ್ದರು.
ಇನ್ನು ವಾಸಂತಿ ತವರು ಮನೆಯವರು ಗುರುತಿಸುವ ಅಪಾಯ ಕೂಡ ಇತ್ತು. ಅದಕ್ಕಾಗಿ ವಾಸಂತಿ ಕಾಲೇಜು ದಿನಗಳ ಫೋಟೋ ನೀಡುವ ತೀರ್ಮಾನ ಮಾಡಿದ್ದರು. ಮೃತಪಟ್ಟಾಗ ವಾಸಂತಿ ಇದ್ದಿದ್ದೇ ಬೇರೆ ರೀತಿ ಎನ್ನುವ ಅರಿವು ಕೂಡ ಅವರಲ್ಲಿತ್ತು.
ವಾಸಂತಿ ಹಣೆಗೆ ಬೊಟ್ಟು ಇಟ್ಟಿದ್ದ ಎಂಡಿ ಸಮೀರ್!
ವಾಸಂತಿ ಫೋಟೋ ನೋಡಿ ಎಂಡಿ ಸಮೀರ್ ಕೂಡ ಒಪ್ಪಿದ್ದ. ಸಿಕ್ಕಿಬೀಳುವ ಅಪಾಯ ಕಡಿಮೆ ಎಂದು ನಿರ್ಧಾರ ಮಾಡಿದ್ದ. ಇದರಿಂದಾಗಿ ‘ಅನನ್ಯಾ’ಳ ಹೆಸರಿನಲ್ಲಿ ‘ವಾಸಂತಿ’ ಫೋಟೋ ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದ. ಇನ್ನು ಫೋಟೋ ಬಿಡುಗಡೆಗೂ ಮುನ್ನ ಮತ್ತೊಂದು ಖತರ್ನಾಕ್ ಪ್ಲ್ಯಾನ್ ಕೂಡ ಮಾಡಿದ್ದ. ಬೋಳು ಹಣೆಯ ಫೋಟೋಗೆ ಸಮೀರ್ ಎಂ.ಡಿ ಬೊಟ್ಟು ಇಟ್ಟಿದ್ದ. ಪೆನ್ನಿನಿಂದ ತನ್ನ ಕೈಯಾರೇ ಸಮೀರ್ ಬೊಟ್ಟು ಇಟ್ಟಿದ್ದ ಎನ್ನಲಾಗಿದೆ.
