ಅನನ್ಯಾ ಭಟ್ ಎಂದು ಸುಜಾತಾ ಅವರು ತೋರಿಸಿರುವ ಫೋಟೋ ವಾಸಂತಿ ಎನ್ನುವವರದ್ದು ಎಂದು ಇದಾಗಲೇ ಬಹುತೇಕ ಖಚಿತವಾಗಿದೆ. ಹಾಗಿದ್ದರೆ ವಾಸಂತಿಯವರ ನಿಗೂಢ ಸಾವಿನ ಹಿಂದಿನ ಸತ್ಯವೇನು? ಇದೀಗ ಜಸ್ಟೀಸ್ ಫಾರ್ ವಾಸಂತಿ ಎನ್ನುವ ಕೂಗು ಕೇಳಿಬರುತ್ತಿದೆ!
ಬರ್ಬರವಾಗಿ ಹತ್ಯೆಯಾಗಿರೋ ಸೌಜನ್ಯಾ ಅವರಿಗೆ ನ್ಯಾಯ ಕೊಡಿಸುವ ನೆಪದಲ್ಲಿ, ಮೂಲ ಉದ್ದೇಶವನ್ನೇ ಮರೆತು ಇಡೀ ಪ್ರಕರಣ ಹಳ್ಳಹಿಡಿಯುವಂತೆ ಮಾಡಿರುವ ಹಿಂದಿನ ಕೈಗಳ ಬಗ್ಗೆ ಇದಾಗಲೇ ಜಗಜ್ಜಾಹೀರವಾಗಿದೆ. ಇವರಿಗೆ ಮುಗ್ಧ ಸೌಜನ್ಯಳ ಸಾವಿನ ಹಿಂದಿರುವವರಿಗೆ ಶಿಕ್ಷೆ ಕೊಡಿಸುವ ಉದ್ದೇಶವಿದೆಯೇ ಅಥವಾ ಹಿಂದೂಗಳ ಪುಣ್ಯಕ್ಷೇತ್ರ ಎನ್ನಿಸಿರುವ ಧರ್ಮಸ್ಥಳಕ್ಕೆ ಕಪ್ಪುಚುಕ್ಕೆ ಬಳಿಯುವ ಕುತಂತ್ರವಿದೆಯೇ ಎಂಬ ಬಗ್ಗೆ ಅನುಮಾನ ಹುಟ್ಟುಹಾಕುತ್ತಿದೆ. ಈ ತನಿಖೆ ನಡೆಯುತ್ತಿರುವಾಗಲೇ ಸುಜಾತಾ ಭಟ್ ಎನ್ನುವ ಮಹಿಳೆ ಬಂದು ಪ್ರಕರಣದ ದಿಕ್ಕನ್ನೇ ಬದಲಾಯಿಸಿ, ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳಿನ ಕಂತೆಗಳನ್ನೇ ಬಿಚ್ಚಿಡುತ್ತಿದ್ದಾರೆ. ಈಕೆಯ ಹಿಂದೆ ಇರುವುದು ಯಾರು ಎನ್ನುವ ಬಗ್ಗೆಯೂ ಇದಾಗಲೇ ಬಹುತೇಕ ಖಚಿತವಾಗಿದ್ದು, ಸಂಪೂರ್ಣ ತನಿಖೆಯಾದ ಮೇಲೆ ಅಡಗಿಕುಳಿತಿರುವವರು ಹೊರಕ್ಕೆ ಬರುವ ಸಾಧ್ಯತೆ ಇದೆ.
ಆದರೆ ಇದೀಗ ಸೌಜನ್ಯ ಸಾವಿನಷ್ಟೇ ನಿಗೂಢವಾಗಿ ಉಳಿದಿರುವುದು ವಾಸಂತಿ ಅವರ ಸಾವು. ಯಾರನ್ನು ತನ್ನ ಮಗಳು ಅನನ್ಯಾ ಭಟ್ ಎಂದು ಹೇಳಿಕೊಂಡು ಸುಜಾತಾ ಭಟ್ ಫೋಟೋ ತೋರಿಸಿ ಎಲ್ಲರನ್ನೂ ಮರಳು ಮಾಡುತ್ತಿದ್ದಾರೋ, ಅದು ವಾಸಂತಿಯವರ ಫೋಟೋ ಎನ್ನುವುದು ಇದಾಗಲೇ ತಿಳಿದಿದೆ. ಸುಜಾತಾ ಭಟ್ ಅವರು ಇಂದಿಗೂ ಅದು ತಮ್ಮ ಮಗಳು ಅನನ್ಯಾಳದ್ದೇ ಫೋಟೋ ಎಂದು ಮಾಧ್ಯಮಗಳ ಮುಂದೆ ಮತ್ತದೇ ಸುಳ್ಳಿನ ಕಂತೆಗಳನ್ನು ಬಿಚ್ಚಿಡುತ್ತಿದ್ದರೂ, ಆ ಫೋಟೋದ ಅಸಲಿಯತ್ತು ಅಧಿಕೃತವಾಗಿ ಹೊರಬೀಳಬೇಕಷ್ಟೇ. ಆದರೆ, ಇದರ ನಡುವೆಯೇ ಇದೀಗ ಪ್ರಕರಣ ವಾಸಂತಿ ಅವರ ನಿಗೂಢ ಸಾವಿನತ್ತ ಸಾಗಿದೆ. ಮದುವೆಯಾಗಿ ಒಂದೇ ತಿಂಗಳಿನಲ್ಲಿ ಆ*ತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಂದು ಕೇಸ್ ಅಲ್ಲಿಗೇ ಮುಗಿದಿತ್ತಾದರೂ, ಇದು ಸಾವಲ್ಲ, ಬದಲಿಗೆ ಕೊ*ಲೆ ಎನ್ನುವ ಶಂಕೆ ಇದೀಗ ಎಲ್ಲೆಡೆ ವ್ಯಕ್ತವಾಗುತ್ತಿದೆ.
ವಾಸಂತಿ ಅವರು ಪ್ರತಿಷ್ಠಿತ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದರು. ಚಿಕಿತ್ಸೆಗೆ ಬರುತ್ತಿದ್ದ ಶ್ರೀವತ್ಸ ಎನ್ನುವವರ ಜೊತೆ ಪ್ರೀತಿಯಾಗಿ ಮದುವೆಯಾಗಿತ್ತು. ಹಾಗೆ ನೋಡಿದರೆ, ಈಕೆಯ ಮಾವ ರಂಗಪ್ರಸಾದ್ ಅವರು ಚಿಕಿತ್ಸೆಗೆ ಹೋಗುತ್ತಿದ್ದ ಸಮಯದಲ್ಲಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸುಜಾತಾ ಭಟ್ ಅವರನ್ನು ಪ್ರೀತಿಸಿ ಲಿವ್ ಇನ್ನಲ್ಲಿ ಇದ್ದರು. ಇದರ ಅರ್ಥ ಅಪ್ಪ ಮತ್ತು ಮಗನ ಕೇಸ್ ಸುಮಾರು ಒಂದೇ ರೀತಿಯದ್ದಾಗಿದೆ. ಆದರೆ, ವಾಸಂತಿ ಅವರು ಮದುವೆಯಾದ ಒಂದೇ ತಿಂಗಳಿನಲ್ಲಿ ನಾಪತ್ತೆಯಾಗಿದ್ದರು. ಜುಲೈ 10, 2007ರಂದು ಅವರು ನಾಪತ್ತೆಯಾಗಿದ್ದರು. 24 ದಿನಗಳ ದಿನಗಳ ನಂತರ ಅವರ ಶವ ನದಿಯಲ್ಲಿ ತೇಲುತ್ತಾ ಇತ್ತು. ಶವ ಕೊಳೆತು ಹೋಗಿತ್ತು. ಆದರೆ, ಅದನ್ನು ಆ*ತ್ಮಹತ್ಯೆ ಎಂದು ಹೇಳಿ ಅಲ್ಲಿಗೇ ಕೇಸ್ ಕ್ಲೋಸ್ ಮಾಡಲಾಗಿತ್ತು.
ವಾಸಂತಿ ಅವರ ಒಂದು ಕೈಸುಟ್ಟು ಹೋಗಿತ್ತು. ಅವರ ಚೂಡಿದಾರ ಮತ್ತು ಅಯ್ಯಂಗಾರ ಶೈಲಿಯ ತಾಳಿಯಿಂದ ಈ ಕೊಳೆತ ಶವ ಅವರದ್ದೇ ಎಂದು ಪತ್ತೆ ಮಾಡಲಾಗಿತ್ತು. ಆದರೆ ಇದು ಆ*ತ್ಮಹತ್ಯೆ ಎಂದು ಹೇಳಿ ಮನೆಯವರು ಶವವನ್ನು ಹೂತು, ಕೇಸ್ ಅನ್ನು ಅಲ್ಲಿಗೇ ಕ್ಲೋಸ್ ಮಾಡಿದ್ದರು. ಅಲ್ಲಿಗೆ ವಾಸಂತಿಯ ಕಥೆ ಮುಗಿದಿತ್ತು. ಆದರೆ, ಇದೀಗ ಅವರ ಸಾವಿನ ಸುತ್ತಲೂ ಅನುಮಾನ ಹುತ್ತ ಹರಡಿಕೊಂಡಿದೆ. ಸುಜಾತಾ ಅವರು ಲಿವ್ ಇನ್ನಲ್ಲಿ ಇದ್ದ ರಂಗಪ್ರಸಾದ್ ಅವರ ಸೊಸೆಯಾಗಿರುವ ವಾಸಂತಿ ಅವರು ಸತ್ತಿದ್ದು ಹೇಗೆ ಎನ್ನುವ ಬಗ್ಗೆ ತನಿಖೆ ಮಾಡಬೇಕು, ಇದು ರೀ ಓಪನ್ ಆಗಬೇಕು ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಕೂಗು ಜೋರಾಗಿದೆ. ಇದರ ಹಿಂದಿರುವ ಕೈ ಯಾರದ್ದು ಎಂದು ತಿಳಿಯಲೇಬೇಕು ಎಂದು ಆಗ್ರಹ ವ್ಯಕ್ತವಾಗುತ್ತಿದೆ. ಮುಂದೇನಾಗುತ್ತದೆ ಎನ್ನುವುದು ಕಾದು ನೋಡಬೇಕಿದೆ. ಜಸ್ಟೀಸ್ ಫಾರ್ ವಾಸಂತಿ ಎನ್ನುತ್ತಿದ್ದಾರೆ ಹಲವರು.
