ದಸರಾ ಉದ್ಘಾಟನೆಗೆ ಲೇಖಕಿ ಭಾನು ಮುಷ್ತಾಕ್‌ ಅವರನ್ನು ಆಹ್ವಾನಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಚಕ್ರವರ್ತಿ ಸೂಲಿಬೆಲೆ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಭಾನು ಅವರ ಹೇಳಿಕೆಗಳನ್ನು ಪ್ರಶ್ನಿಸಿದ್ದಾರೆ. 

ಬೆಂಗಳೂರು (ಆ.25): ದಸರಾ ಉದ್ಘಾಟನೆಗೆ ಬೂಕರ್‌ ಪ್ರಶಸ್ತಿ ವಿಜೇತೆ ಸಾಹಿತಿ ಭಾನು ಮುಷ್ತಾಕ್‌ ಅವರಿಗೆ ಆಹ್ವಾನ ನೀಡಿದ್ದಕ್ಕೆ ಸರ್ಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಮೈಸೂರು-ಕೊಡಗು ಮಾಜಿ ಸಂಸದ ಪ್ರತಾಪ್‌ ಸಿಂಹ ಈ ವಿಚಾರವಾಗಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದಕೊಂಡಿದ್ದಾರೆ. ಸಿಎಂ ಸಿದ್ಧರಾಮಯ್ಯ ಅವರು ಭಾನು ಮುಷ್ತಾಕ್‌ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನ ನೀಡುವ ಮೂಲಕ ಮಹಾರಾಜರ ಪರಂಪರೆಯನ್ನೇ ಹಾಳು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದರ ನಡುವೆ ಚಕ್ರವರ್ತಿ ಸೂಲಿಬೆಲೆ ಸೋಮವಾರ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, 'ಕನ್ನಡ ಭುವನೇಶ್ವರಿಯನ್ನು ಸಹಿಸಲಾಗದವರು ಚಾಮುಂಡಿ ತಾಯಿಯ ವೈಭವಕ್ಕೆ ತಲೆಬಾಗಲು ಒಪ್ಪಿದ್ದಾದರೂ ಏಕೆ?' ಎಂದು ಪ್ರಶ್ನೆ ಮಾಡಿದ್ದಾರೆ.

ಇದರಲ್ಲಿ 2023ರಲ್ಲಿ ಬೆಂಗಳೂರಿನಲ್ಲಿ ನಡೆದ ಜನ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಭುವನೇಶ್ವರಿಯ ವಿಚಾರವಾಗಿ ಭಾನು ಮುಷ್ತಾಕ್‌ ಆಡಿರುವ ಮಾತುಗಳಿವೆ. ಇದೇ ಮಾತುಗಳನ್ನು ಇರಿಸಿಕೊಂಡು, ಕನ್ನಡ ಭುವನೇಶ್ವರಿಯನ್ನು ಒಪ್ಪದವರಿಗೆ ಚಾಮುಂಡಿಯ ದಸರಾ ಉದ್ಘಾಟನೆಯ ಆಹ್ವಾನ ಏಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಭಾನು ಮುಷ್ತಾಕ್‌ ಅವರು ಅಡಿದ್ದ ಮಾತುಗಳು (ಈ ವಿಡಿಯೋದ ಸತ್ಯಾಸತ್ಯತೆಯನ್ನು ಏಷ್ಯಾನೆಟ್‌ ಸುವರ್ಣನ್ಯೂಸ್‌ ಪರಿಶೀಲಿಸಿಲ್ಲ)

ಬಿಳಿಮಲೆ ಸರ್‌ ಅವರು, ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿಯ ಬಗ್ಗೆ ಮಾತನಾಡಿದ್ರು. ಕನ್ನಡ ಭಾಷೆಯ ಬಗ್ಗೆ ಒಬ್ಬ ಅಲ್ಪಸಂಖ್ಯಾತ ಮಹಿಳೆಯಾಗಿ ನನ್ನ ಗ್ರಹಿಕೆ ಏನು ಅನ್ನೋದರ ಬಗ್ಗೆ ನಿಮ್ಮ ಎದುರು ಇಡ್ತೇನೆ. ನಿಮಗೆ ಇಷ್ಟ ಆಗುತ್ತೋ? ಕಷ್ಟ ಆಗುತ್ತೋ ನನಗೆ ಗೊತ್ತಿಲ್ಲ. ಕನ್ನಡವನ್ನ ಭಾಷೆಯಾಗಿ ಬೆಳೆಯಲಿಕ್ಕೆ, ಕನ್ನಡವನ್ನ ಭಾಷೆಯಾಗಿ ಭಾನು ಮುಷ್ತಾಕ್‌ ಮಾತನಾಡಲಿಕ್ಕೆ, ಆಕೆಯ ಮನೆಯವರು ಮಾತನಾಡಲಿಕ್ಕೆ ನೀವು ಅವಕಾಶವನ್ನೇ ಕೊಡಲಿಲ್ಲ. ಕನ್ನಡವನ್ನ 'ಕನ್ನಡ ಭುವನೇಶ್ವರಿ' ಆಗಿ ಮಾಡಿಬಿಟ್ಟಿರಿ. ಕೆಂಪು ಮತ್ತು ಹಳದಿ ಅರಿಶಿನ ಕುಂಕುಮದ ಬಾವುಟವನ್ನ ಹಾಕಿ, ಅರಿಶಿನ-ಕುಂಕುಮದಲ್ಲಿ ಆಕೆಯನ್ನ ಲೇಪಿತಳನ್ನಾಗಿ ಮಾಡಿ, ಆಕೆಯನ್ನ ಕರೆದುಕೊಂಡು ಹೋಗಿ ಮಂದಹಾಸದ ಮೇಲೆ ಕೂರಿಸಿಬಿಟ್ಟಿರಿ. ನಾನು ಎಲ್ಲಿ ನಿಲ್ಲಬೇಕು? ನಾನು ಏನನ್ನು ನೋಡಬೇಕು? ನಾನು ಹೇಗೆ ಇದರಲ್ಲಿ ಒಳಗೊಳ್ಳಬೇಕು? ನನ್ನ ಹೊರಗಟ್ಟುವಿಕೆ ಇವತ್ತಿಂದ ಅಲ್ಲ, ಯಾವತ್ತಿನಿಂದಲೂ ಆರಂಭವಾಯ್ತು. ಇವತ್ತು ಪೂರ್ಣಗೊಳ್ತಾ ಇದೆ ಅಷ್ಟೇ.

ಈ ವಿಷಯಕ್ಕೆ ದಯಮಾಡಿ ನೀವುಗಳು ಆಲೋಚನೆ ಮಾಡಿ, ಯಾಕಂದ್ರೆ 'ಯತ್ರ ನಾರ್ಯಸ್ಥೋ ಪೂಜ್ಯಸ್ಥೆ ರಮಂತೆ ತತ್ರ ದೇವತಃ'ಮಹಿಳೆಯನ್ನ ಮಂದಹಾಸದ ಮೇಲೆ ಕೂರಿಸಿದ ತಕ್ಷಣ ದೇವತೆಗಳು ಸಂತುಷ್ಟರಾಗ್ತಾರೆ. ಇಲ್ಲೂ ಕೂಡ ಕನ್ನಡಮ್ಮನ ದೇವಸ್ಥಾನದ ಮಂದಹಾಸದ ಮೇಲೆ ಕೂರಿಸಿ, ಮಹಿಳೆಯನ್ನ ಹೇಗೆ ತುಳಿತಾ ಇದ್ದೀರೋ, ದೌರ್ಜನ್ಯ ಮಾಡ್ತಾ ಇದ್ದೀರೋ, ಹಿಂಸೆ ಮಾಡ್ತಾ ಇದ್ದೀರೋ ಅದೇ ರೀತಿ ಕನ್ನಡ ಭಾಷೆ ಮೇಲೆ ಕೂಡ ನೀವುಗಳು ದೌರ್ಜನ್ಯ ಮಾಡ್ತಾ ಇದ್ದೀರಿ. ನೀವು ನನಗೆ ಉತ್ತರದಾಯಿತ್ವ ಹೊಂದಿದ್ದೀರಿ. ನನಗೆ ಉತ್ತರ ಕೊಡಬೇಕಾದಂಥ ಒಂದು ಗೋಡೆಗೆ ಒತ್ತರಿಸ್ತಾ ಇದ್ದೀನಿ ನಾನು ನಿಮಗೆ, ಉತ್ತರ ಕೊಡಿ ನನಗೆ.ಕನ್ನಡವನ್ನ ಭುವನೇಶ್ವರಿಯನ್ನಾಗಿ ಮಾಡಿ ನಮಗೆ, ಕನ್ನಡದ ರಥವನ್ನ ಎಳೆದು, ಕನ್ನಡದ ಜಾತ್ರೆಯನ್ನ ಮಾಡಿ, ಕನ್ನಡದ ಪರಿಷೆಯನ್ನ ಮಾಡಿ ಏನು ಮಾಡಿದ್ರಿ. ನನ್ನನ್ನು ಹೊರಗಟ್ಟಲು ಇಷ್ಟು ಹುನ್ನಾರ ಬೇಕಿತ್ತಾ?

Scroll to load tweet…

ಇನ್ನು ಭಾನು ಮುಷ್ತಾಕ್‌ ಅವರ ಮಾತುಗಳನ್ನು ಹಂಚಿಕೊಂಡ ಚಕ್ರವರ್ತಿ ಸೂಲಿಬೆಲೆ ಅವರ ಪೋಸ್ಟ್‌ಗೂ ಪರ ವಿರೋಧದ ಕಾಮೆಂಟ್‌ಗಳು ಬಂದಿವೆ. 'ಹೊರಗಿಡೋದಕ್ಕೆ ಏನಿದೆ. ಹೊರಗಿನಿಂದ ಬಂದು.., ನಮ್ಮವರನ್ನೇ ನಮ್ಮಿಂದ ಹೊರಗಿಟ್ಟರು. ಮೂಲತಃ ನಿಮ್ಮ ಪೂರ್ವಜರು ಇದೇ ಅರಿಷಿಣ-ಕುಂಕುಮದೊಳಗೆ ಮಿಂದೆದ್ದವರು. ನೀವಾಗಿಯೇ ಇಲ್ಲಿನ ಸಂಸ್ಕೃತಿಯನ್ನು ವಿರೋಧಿಸುತ್ತಿರುವವರು. ನಾವು ಹೊರಗಿನವರಿಗೂ ಇಲ್ಲಿಯ ಜಾಗಕೊಟ್ಟು, ಒಂದಲಲ್ಲ, ಎರಡು ದೇಶಕ್ಕೆ ಜಾಗ ಬಿಟ್ಟುಕೊಟ್ಡಿದ್ದೇವೆ.ಇನ್ನೂ ಸಾಲದೆ..?! ಭಾನು ಅವರೆ.!????' ಎಂದು ಬಸವರಾಜ್‌ ಬಡಿಗೇರ್‌ ಎನ್ನುವವರು ಬರೆದಿದ್ದಾರೆ.

'ಬೆಂಗಳೂರು ಪೊಲೀಸ್‌ ಯಾಕೆ ಇದರ ಮೇಲೆ ಕ್ರಮ ತೆಗೆದುಕೊಳ್ಳಬಾರದು, ಆಕೆ ಹೇಳುತ್ತಿರುವುದು ಆಕೆಗೆ ಆದ ನೋವಿನ ಕಥೆ, ಈತ ಅದನ್ನು ಭುವನೇಶ್ವರಿ ಅನ್ನು ಸಹಿಸುವುದಿಲ್ಲ ಅಂತ ಒಬ್ಬ ಗಣ್ಯ ವ್ಯಕ್ತಿಯ ಮೇಲೆ ಹೀಗೆ ಸುಳ್ಳು ಸುಳ್ಳಾಗಿ ರಾಜಾರೋಷವಾಗಿ ಸಾರ್ವಜನಿಕ ಆಗಿ ಮಾತಾಡಬಹುದ !!?? ಇವರು ಅರೆಸ್ಟ್ ಆಗಲ್ಲ ಅನ್ನೋ ನಂಬಿಕೆ ಅಲ್ಲಿ ಇವರ ರಾಜಕೀಯ ಜನರು ಕಳುಹಿಸುವ ವೀಡಿಯೊಗಳನ್ನು ಹಾಕೋದು. ಇವನು ಅರೆಸ್ಟ್ ಆದರೆ ಈಗ ಧರ್ಮಸ್ಥಳ ಇದು ಎರಡು ಸೇರಿಸಿ, ರಾಜಕೀಯ ಲಾಭ ತೆಗೆದುಕೊಳ್ಳಬಹುದು ಅನ್ನೋ ತರಹ ಇದೆ ಈ ಪೋಸ್ಟ್, ಅರೆಸ್ಟ್ ಮಾಡಲಿಲ್ಲ ಅಂದರೆ , ಅದಕ್ಕೆ ನೂರೆಂಟು ಕಥೆ ತಮ್ಮ ಹಿಂಬಾಲಕರು ಬೊಬ್ಬೆ ಹೊಡೆದುಕೊಳ್ಳುತ್ತಾರೆ ಅಂತ !!!' ರಾಜೇಂದ್ರ ಕೌಶಿಕ್‌ ಎನ್ನುವವರು ಪೋಸ್ಟ್‌ ಮಾಡಿದ್ದಾರೆ.

'ಇವರಿಗೆ ಹಿಂದೂ ದೇವತೆಗಳು ಬೇಡ!! ಹಿಂದೂ ಅರಶಿನ ಕುಂಕುಮ ಬೇಡ! ಯಪ್ಪಾ ಯಪ್ಪಾ! ಇದು ಭೂಕರ್ ಕೊಟ್ಟು ನಮ್ಮನ್ನು ಬಕರ ಮಾಡುವ ಕಾರ್ಯಕ್ರಮ ಮೊದಲೇ ಆಗಿದೆ!! ಚುಕ್ಕೆಗಳನ್ನು ಜೋಡಿಸಿ ಇದು ಯಾವಾಗಲೋ ಪ್ಲಾನ್ ಆಗಿದೆ! ಮೊದಲು ಪ್ರಶಸ್ತಿ ಆಮೇಲೆ ಉದ್ಗಾಟನೆ!! ಟೂಲ್ ಕಿಟ್ ಅಷ್ಟೇ!!' ಎಂದು ಮತ್ತೊಬ್ಬರು ಬರೆದಿದ್ದಾರೆ.