ಸಿಎಂ ಸಿದ್ದರಾಮಯ್ಯ ಅವರ ಸರ್ಕಾರಿ ಕಾರಿಗೆ ಸಂಚಾರ ನಿಯಮ ಉಲ್ಲಂಘನೆಗಾಗಿ ದಂಡ ವಿಧಿಸಲಾಗಿತ್ತು. ಸಾರ್ವಜನಿಕರ ಒತ್ತಡದ ನಂತರ, ರಿಯಾಯಿತಿ ದರದಲ್ಲಿ ದಂಡವನ್ನು ಪಾವತಿಸಲಾಗಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು (ಸೆ.5): ಟ್ರಾಫಿಕ್ ನಿಯಮ ಉಲ್ಲಂಘಿಸಿ ಬೆಂಗಳೂರಿನ ರಸ್ತೆಗಳಲ್ಲಿ ಸಂಚಾರ ಮಾಡಿದ್ದ ಸಿಎಂ ಸಿದ್ಧರಾಮಯ್ಯ ಕಾರ್‌ಗೆ ಬೆಂಗಳೂರು ಸಂಚಾರ ಪೊಲೀಸರು ಫೈನ್ ಹಾಕಿದ್ದರು. ಹಾಲಿ ಇರುವ ಶೇ. 50ರಷ್ಟು ಡಿಸ್ಕೌಂಟ್ ಆಫರ್‌ನಲ್ಲಿ ಸಿಎಂ ಸಿದ್ಧರಾಮಯ್ಯ ತಮ್ಮ ಸರ್ಕಾರಿ ಕಾರ್‌ನ ಮೇಲಿದ್ದ ದಂಡವನ್ನು ಕ್ಲಿಯರ್ ಮಾಡಿದ್ದಾರೆ. ಬರೋಬ್ಬರಿ 6 ಬಾರಿ ಸಿದ್ದರಾಮಯ್ಯ ಸೀಟ್ ಬೆಲ್ಟ್ ಹಾಕದೇ ಸಂಚಾರ ಮಾಡಿದ್ದರು. 50% ಆಫರ್ ಇದೆ ಬೇಗ ಕಟ್ಟಿ ಎಂದು ಜನರು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದ್ದರು. ಇದು ಸಿಎಂ ಗಮನಕ್ಕೆ ಬರುತ್ತಿದ್ದಂತೆ ಕಾರ್‌ನ ಮೇಲಿದ್ದ ದಂಡವನ್ನು ಅಧಿಕಾರಿಗಳು ಪಾವತಿ ಮಾಡಿದ್ದಾರೆ. ಸಿಎಂ ಬಳಸುತ್ತಿದ್ದ ಟಯೊಟ ಫಾರ್ಚುನರ್ ಕಾರ್‌ನ ಮೇಲಿದ್ದ ದಂಡವನ್ನುರಿಯಾಯಿತಿ ಆಧಾರದಲ್ಲಿ 2500 ರೂಪಾಯಿ ದಂಡ ಕಟ್ಟಿ ಕ್ಲಿಯರ್ ಮಾಡಿಸಿಕೊಂಡಿದ್ದಾರೆ.
ಸಿಎಂ ಕಾರ್ ಮೇಲಿನ ಫೈನ್ ಪತ್ತೆ ಮಾಡಿದ್ದ ನೆಟ್ಟಿಗರು
ಬೆಂಗಳೂರಿನಲ್ಲಿ ಸಂಚಾರ ದಂಡಕ್ಕೆ ಶೇ. 50ರಷ್ಟು ರಿಯಾಯಿತಿ ಘೋಷಣೆಯಾದ ನಂತರ, ಜನರು ತಮ್ಮ ವಾಹನಗಳ ಮೇಲಿನ ದಂಡ ಪಾವತಿಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ, ಕೆಲವು ನಾಗರಿಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರಿ ಕಾರಿನ ಮೇಲಿನ ಬಾಕಿ ಇರುವ ಟ್ರಾಫಿಕ್ ಉಲ್ಲಂಘನೆಗಳನ್ನು ಪತ್ತೆ ಹಚ್ಚಿ, ಸಾಮಾಜಿಕ ಜಾಲತಾಣಗಳಲ್ಲಿ ಅದರ ಬಗ್ಗೆ ಗಮನ ಸೆಳೆದಿದ್ದರು.
ಸಿಎಂ ಸಿದ್ದರಾಮಯ್ಯ ಅವರ ಅಧಿಕೃತ ಸರ್ಕಾರಿ ಕಾರು (KA 05 GA 2023) ಮೇಲೆ ಒಟ್ಟು 7 ಟ್ರಾಫಿಕ್ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ಒಟ್ಟಾರೆ 2,000 ರೂ. ದಂಡ ಬಾಕಿ ಇದೆ. ಇದರ ಜೊತೆಗೆ, ರಿಯಾಯಿತಿ ಅವಧಿಯು ಸೆಪ್ಟೆಂಬರ್ 12 ರವರೆಗೆ ಮಾತ್ರ ಇರುವುದರಿಂದ, ಈ ಅವಕಾಶವನ್ನು ಬಳಸಿಕೊಂಡು ದಂಡವನ್ನು ಪಾವತಿಸುವಂತೆ ಜನರು ಸಿಎಂಗೆ ತಿಳಿಸಿದ್ದರು.
ರಸ್ತೆ ಸುರಕ್ಷತೆಗೆ ರಾಯಭಾರಿ ಆಗಿ ಎಂದಿದ್ದ ಟ್ರೋಲಿಗರು
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ಸಿಎಂ ಕಾರು ಸೀಟ್‌ಬೆಲ್ಟ್ ಇಲ್ಲದೆ ಚಾಲನೆ ಮಾಡುವುದು ಮತ್ತು ಅತಿಯಾದ ವೇಗದಲ್ಲಿ ಸಂಚರಿಸಿದ ಕಾರಣಕ್ಕೆ ದಂಡ ವಿಧಿಸಿರುವುದು ಕಂಡುಬಂದಿದೆ. "ರಸ್ತೆ ಸುರಕ್ಷತೆಗೆ ರಾಯಭಾರಿಯಾಗಿ, ಸುರಕ್ಷತೆ ಮೊದಲು ಎಂಬುದು ನಮ್ಮ ಆದ್ಯತೆಯಾಗಬೇಕು" ಎಂದು 'ಆರ್‌ಸಿಬಿ ಬೆಂಗಳೂರು' ಎಂಬ ಎಕ್ಸ್ ಖಾತೆಯಲ್ಲಿ ಬರೆದಿದ್ದರು.
