ಸಿಎಂ ಸಿದ್ದರಾಮಯ್ಯ ಅವರು ಅಂತಾರಾಷ್ಟ್ರೀಯ ಮಿಲಾದ್ ಸಮ್ಮೇಳನದಲ್ಲಿ ಪ್ರವಾದಿ ಮೊಹಮ್ಮದ್ ಮತ್ತು ಬಸವಣ್ಣನವರ ಶಾಂತಿ ಸಂದೇಶವನ್ನು ಸಾರಿದರು. ಸಮಾನತೆ, ಬಡತನ ನಿರ್ಮೂಲನೆಗೆ ಇಬ್ಬರೂ ಹೋರಾಡಿದ್ದನ್ನು ಸಿದ್ದರಾಮಯ್ಯ ಸ್ಮರಿಸಿದರು. ಜೈ ಮುಸ್ಲಿಂ, ಜೈ ಹಿಂದು ಎಂಬ ಘೋಷಣೆಯೊಂದಿಗೆ ಭಾಷಣ ಮುಕ್ತಾಯಗೊಳಿಸಿದರು.
ಬೆಂಗಳೂರು (ಸೆ.5): ಇಸ್ಲಾಂ ಎಂದರೆ, ಶಾಂತಿ, ಮೊಹಮದ್ ಪ್ರವಾದಿ ಎಂದರೆ ಶಾಂತಿಯ ದೂತ. ಪ್ರವಾದಿ ಅವರು, ಬಸವಣ್ಣ ಅವರು ಶಾಂತಿ, ಸಮಾನತೆ, ಬಡತನ ಹೋಗಬೇಕು ಅಂತಾ ಹೇಳಿ ಹೋರಾಟ ಮಾಡಿದ್ದರು. ಅದೇ ರೀತಿ ಮಹಮ್ಮದ್ ಪ್ರವಾದಿ ಕರುಣೆ ನೆಲೆಸಬೇಕು ಅಂತ ಬಸವಣ್ಣ ರೀತಿ ಕೆಲಸ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಮಿಲಾದ್ ಸಮ್ಮೇಳನ 2025 ಕಾರ್ಯಕ್ರಮದಲ್ಲಿ ಅವರು ಶುಕ್ರವಾರ ಭಾಗವಹಿಸಿದ್ದರು. ಬೆಂಗಳೂರಿನ ಜಂಟಿ ಮಿಲಾದ್ ಸಮಿತಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಚಿವ ಜಮೀರ್ ಅಹಮದ್ ಖಾನ್, ಅಲ್ಪಸಂಖ್ಯಾತ ಧಾರ್ಮಿಕ ನಾಯಕರು, ಅಲ್ಪಸಂಖ್ಯಾತ ಮುಖಂಡರು ಸೇರಿದಂತೆ ಸಾವಿರಾರು ಜನ ಆಗಮಿಸಿದ್ದರು.
ಮೊಹಮ್ಮದ್ ಪೈಗಂಬರ್1500ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಕರ್ನಾಟಕ ಮಿಲಾದ್ ಸಮಿತಿ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಜಿ.ಎ.ಬಾವಾ ಕೂಡ ಕಾರ್ಯಕ್ರಮದಲ್ಲಿದ್ದರು.
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಎಲ್ಲರಿಗೂ ಅಂತರಾಷ್ಟ್ರೀಯ ಈದ್ ಮಿಲಾದ್ ಶುಭಾಶಯ ಕೋರುತ್ತೇನೆ. ದೇಶದ ವಿವಿಧ ಭಾಗಗಳಿಂದ ಬಂದ ಧರ್ಮಗುರುಗಳೇ, ರಾಜ್ಯದ ಎಲ್ಲ ನಾಗರಿಕರಿಗೆ ವಿಶೇಷವಾಗಿ ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್ ಶುಭಾಶಯ. ಜಮೀರ್ ಅಹ್ಮದ್ ಹೆಳಿದ್ದರು. ಬಹಳ ವಿಶೇಷವಾಗಿ ಹಬ್ಬ ಆಚರಣೆ ಮಾಡುತ್ತಿದ್ದೇವೆ, ನೀವು ಬರಲೇಬೇಕು ಅಂತ ಹೇಳಿದ್ದರು. ಅದಕ್ಕಾಗಿ ಈ ಕಾರ್ಯಕ್ರಮದ ಸಂಘಟಕರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.
ಪ್ರವಾದಿ ಹುಟ್ಟಿ 1500 ವರ್ಷ ಆಗಿದೆ
ಈ ಅಂತರರಾಷ್ಟ್ರೀಯ ಮಿಲಾದ್ ಕಾರ್ಯಕ್ರಮವನ್ನ ಅತ್ಯಂತ ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ. ಈದ್ ಅಂದರೆ ಹಬ್ಬ ,ಮಿಲಾದ್ ಅಂದ್ರೆ ಪ್ರವಾದಿ ಮೊಹಮ್ಮದ್ ಹುಟ್ಟಿದ ದಿನ. ಇವತ್ತು ಮೊಹಮ್ಮದ್ ಹುಟ್ಟು ಹಬ್ಬ ಆಚರಣೆ ಮಾಡ್ತಿದ್ದೀರಿ. ನಾನು ಕೂಡ ಭಾಗಿಯಾಗಿ ಅವರಿಗೆ ಗೌರವ ಸಲ್ಲಿಸುತ್ತೇನೆ. ಅವರು ಹುಟ್ಟಿ 1500 ವರ್ಷ ಆಗಿದೆ. ಈ ಪವಿತ್ರವಾದ ದಿನವನ್ನು ಆಚರಣೆ ಮಾಡುತ್ತಿದ್ದೀರಿ. ನೀವೆ ಎಲ್ಲರೂ ನೆನೆಸಿಕೊಳ್ಳಬೇಕು. ಸಮಾಜದಲ್ಲಿ ಅನೇಕ ಬದಲಾವಣೆಯನ್ನು ಪ್ರವಾದಿಗಳು ಮಾಡಿದ್ದಾರೆ ಎಂದು ಹೇಳಿದರು.
'ಪ್ರವಾದಿಗಳು ಮರುಗಾಡಿನಲ್ಲಿ ವಾಸ ಮಾಡುತ್ತಿದ್ದರು. ಕುರಿ,ಮೇಕೆ ಒಂಟೆ ಸಾಗಾಣಿಕೆ ಮಾಡುತ್ತಿದ್ದರು. ಕೆಲವರು ವ್ಯಾಪಾರ ಮಾಡುವವರಿಗೆ ರಕ್ಷಣೆ ನೀಡುತ್ತಿದ್ದುರ. ಬಡವ ಶ್ರೀಮಂತರ ನಡುವೆ ತಾರತಮ್ಯ ತೊಡೆದುಹಾಕಿದ್ದರು, ಬಡವರು,ಶ್ರೀಮಂತರು ಒಟ್ಟಿಗೆ ಪ್ರಾರ್ಥನೆ ಮಾಡಬೇಕು. ಒಟ್ಟಿಗೆ ಕೂತು ಊಟ ಮಾಡೋದು, ಪರಸ್ಪರ ಅಪ್ಪಿಕೊಳ್ಳೋದು ಮಾಡಿ ಪರಿವರ್ತನೆ ಮಾಡಿದ್ದರು. ಇಸ್ಲಾಂ ಅಂದ್ರೆ ಶಾಂತಿ' ಎಂದು ಸಿಎಂ ಹೇಳುತ್ತಿದ್ದಂತೆ ಭಾಷಕ್ಕೆ ಚಪ್ಪಾಳೆ ತಟ್ಟಿ ಜನ ಸಂಭ್ರಮಿಸಿದರು.
ಪ್ರವಾದಿ ಮೊಹಮ್ಮದ್ ಅಂದರೆ ಶಾಂತಿಯ ದೂತ. ಪ್ರವಾದಿ ಅವರು, ಬಸವಣ್ಣ ಅವರು ಶಾಂತಿ,ಸಮಾನತೆ, ಬಡತನ ಹೋಗಬೇಕು ಅಂತ ಹೇಳಿ ಹೋರಾಟ ಮಾಡಿದರು. ಅದೇ ರೀತಿ ಮೊಹಮದ್ ಪ್ರವಾದಿ ಕರುಣೆ ನೆಲೆಸಬೇಕು ಅಂತ ಬಸವಣ್ಣ ರೀತಿ ಕೆಲಸ ಮಾಡಿದ್ದಾರೆ. ಪ್ರವಾದಿ ಅವರು ಸಹಿಷ್ಣುತೆ ಅಳವಡಿಸಿಕೊಳ್ಳಬೇಕು ಅಂತ ಹೇಳಿದ್ದಾರೆ. ಬೇರೆ ಧರ್ಮವನ್ನ ಸಹಿಸಿಕೊಂಡರೆ ಮಾತ್ರ ಮನುಷ್ಯ ಉಳಿಯುತ್ತದೆ. ಅದನ್ನ ಮೊಹಮ್ಮದ್ ಪ್ರವಾದಿ ಹೇಳಿದ್ದರು. ಪ್ರವಾದಿ ಅವರು ಹೇಳಿರುವ ಮಾರ್ಗವನ್ನು ಅಳವಡಿಸಿಕೊಂಡರೆ ಅವರಿಗೆ ನಾವು ಕೂಡುವ ಗೌರವ. ಪ್ರವಾದಿ ಮೊಹಮ್ಮದ್ ಅವರನ್ನ ನೆನೆಸಿಕೊಂಡು, ಅವರು ಹಾಕಿದ ಮಾರ್ಗದಲ್ಲಿ ಹೋಗೋಣ. ಅವರು ನಮ್ಮ ಜೊತೆ ಇರಲಿ. ಪ್ರೀತಿ,ಶಾಂತಿಯನ್ನ ನೆಲಸಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಸಿಎಂ ಹೇಳಿದರು.
ಜೈ ಮುಸ್ಲಿಂ ಜೈ ಹಿಂದು ಎಂದ ಸಿಎಂ
ಭಾಷಣದ ಮುಕ್ತಾಯದಲ್ಲಿ ಸಿಎಂ ಸಿದ್ದರಾಮಯ್ಯ ಎಂದಿನಂತೆ ಜೈಹಿಂದ್ ಜೈ ಕರ್ನಾಟಕದ ಜೊತೆಗೆ ಜೈ ಹಿಂದು ಮುಸ್ಲಿಂ ಎಂದು ಘೋಷಣೆ ಕೂಗಿದರು. ಸಿಎಂ ಘೋಷಣೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜನತೆ ಕೂಡ ಬೆಂಬಲ ಸೂಚಿಸಿದರು.
ಭಾಷಣದ ವೇಳೆ ನಜೀರ್ ಅಹ್ಮದ್ ಹೆಸರು ಮರೆತ ಸಿಎಂ
ತಮ್ಮ ಭಾಷಣದ ಆರಂಭದಲ್ಲಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ನಾಯಕ ನಜೀರ್ ಅಹ್ಮದ್ ಹೆಸರನ್ನೇ ಮರೆತರು. ಈ ವೇಳೆ ಅವ್ರ ಹೆಸರೇನು ಎಂದು ಸಿಎಂ ಕೇಳಿದ್ದರು. ಬಳಿಕ ನಜೀರ್ ಅಹ್ಮದ್ ಹೆಸರು ಹೇಳಿದ್ದಾರೆ.
