ಅಜ್ಜಂಪುರ ತಾಲೂಕಿನ ಸೊಲ್ಲಾಪುರ ಗ್ರಾಮದ 24 ವರ್ಷದ ಶೃತಿ, ಮದುವೆಗೆ ಕೇವಲ ಒಂದು ದಿನ ಬಾಕಿ ಇರುವಾಗ ಅಕಾಲಿಕವಾಗಿ ಮೃತಪಟ್ಟಿದ್ದಾರೆ. ಲೋ ಬಿಪಿ ಮತ್ತು ಹೃದಯಾಘಾತದಿಂದ ಸಾವು ಸಂಭವಿಸಿರಬಹುದೆಂದು ಶಂಕಿಸಲಾಗಿದ್ದು, ಮದುವೆ ಮನೆಯಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. 

ಚಿಕ್ಕಮಗಳೂರು: ಜೀವನದ ಹೊಸ ಅಧ್ಯಾಯಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದ ಯುವತಿಯೊಬ್ಬಳ ಜೀವನ ಅಕಾಲಿಕವಾಗಿ ಅಂತ್ಯಗೊಂಡಿರುವ ಹೃದಯವಿದ್ರಾವಕ ಘಟನೆ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ. ಮದುವೆಗೆ ಕೇವಲ ಒಂದು ದಿನ ಬಾಕಿ ಇರುವಾಗ, ಸೊಲ್ಲಾಪುರ ಗ್ರಾಮದ 24 ವರ್ಷದ ಶೃತಿ ಅವರು ಅಕಸ್ಮಿಕವಾಗಿ ಮೃತಪಟ್ಟಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಶೃತಿ ಅವರಿಗೆ ಲೋ ಬ್ಲಡ್ ಪ್ರೆಶರ್ ಹಾಗೂ ಹೃದಯಾಘಾತ ಉಂಟಾಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಶುಕ್ರವಾರ ನಡೆಯಬೇಕುದ್ದ ಮದುವೆ

ಶೃತಿ ಅವರ ಮದುವೆ ತರೀಕೆರೆ ಪಟ್ಟಣದ ದಿಲೀಪ್ ಎಂಬ ಯುವಕನೊಂದಿಗೆ ನಾಳೆ (ಶುಕ್ರವಾರ) ನಡೆಯಬೇಕಿತ್ತು. ಮದುವೆ ಸಿದ್ಧತೆಗಳು ಜೋರಾಗಿ ನಡೆಯುತ್ತಿದ್ದಾಗಲೇ ಈ ದುರ್ಘಟನೆ ನಡೆದಿದ್ದು, ಮನೆಯವರಲ್ಲಿ ಹಾಗೂ ಸಂಬಂಧಿಕರ ವಲಯದಲ್ಲಿ ಆಘಾತದ ಅಲೆ ಹರಡಿದೆ.ಮದುವೆ ಸಂಭ್ರಮದ ಮನೆಯನ್ನು ಕ್ಷಣಾರ್ಧದಲ್ಲಿ ಶೋಕದ ವಾತಾವರಣ ಆವರಿಸಿದ್ದು, ಕಣ್ಣೀರಿನಲ್ಲಿ ಶೃತಿ ಅವರ ಅಂತ್ಯ ಸಂಸ್ಕಾರಗಳು ನೆರವೇರಲಿವೆ.

ವಿಧಿಯ ಕ್ರೂರ ಅಟ್ಟಹಾಸ

ಘಟನೆಯ ಕುರಿತು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗ್ರಾಮಸ್ಥರು ಹಾಗೂ ಬಂಧುಬಳಗದವರು ಈ ದುರ್ಘಟನೆಯನ್ನು ನಂಬಲಾಗದೆ ನೋವು ವ್ಯಕ್ತಪಡಿಸುತ್ತಿದ್ದು, “ಮದುವೆ ದಿನಕ್ಕೂ ಮುನ್ನವೇ ಇಂತಹ ದುರಂತ ಸಂಭವಿಸಿರುವುದು ವಿಧಿಯ ಕ್ರೂರ ಅಟ್ಟಹಾಸ ಎಂದು ಕಣ್ಣೀರಿನಿಂದ ಹೇಳಿಕೊಂಡಿದ್ದಾರೆ.