ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸಮೀಪದ ಗುಪ್ತಶೆಟ್ಟಿಹಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ತಂದೆ-ಮಗನ ನಡುವೆ ಜಗಳ ನಡೆದು, ಮಗನೇ ತಂದೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಅಂತ್ಯಕ್ರಿಯೆ ವೇಳೆ ಸತ್ಯ ಬಯಲಾಗಿದ್ದು, ಪೊಲೀಸರು ಆರೋಪಿ ಮಗನನ್ನು ಬಂಧಿಸಿದ್ದಾರೆ.
ಚಿಕ್ಕಮಗಳೂರು (ಆ.18): ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸಮೀಪದ ಗುಪ್ತಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದ ದುರಂತ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಕ್ಷುಲ್ಲಕ ಕಾರಣದ ಜಗಳಕ್ಕೆ ತಂದೆಯ ಬೆನ್ನಿಗೆ ಚಾಕು ಇರಿದ ಪುತ್ರ, ಅಪ್ಪನ ಸಾವಿಗೆ ಕಾರಣನಾಗಿದ್ದಾನೆ. ಈ ಘಟನೆಯನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದರೂ, ಅಂತ್ಯಕ್ರಿಯೆ ಸಂದರ್ಭದಲ್ಲಿ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಹೌದು, ಅಪ್ಪನನ್ನು ಕೊಲೆ ಮಾಡಿ, ಯಾರಿಗೂ ಗೊತ್ತಿಲ್ಲದಂತೆ ಅಪಘಾತದ ಸಾವು ಎಂದು ಅಂತ್ಯಕ್ರಿಯೆ ಮಾಡುವ ವೇಳೆ ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ಆರೋಪಿ ಮಗ ಬಂಧಿಯಾಗಿದ್ದಾನೆ. ಮೃತ ವ್ಯಕ್ತಿಯನ್ನು ಮಂಜುನಾಥ್ ಎಂದು ಗುರುತಿಸಲಾಗಿದ್ದು, ಅವರ ಪುತ್ರ ರಂಜನ್ (21) ಕೊಲೆ ಆರೋಪಿಯಾಗಿದ್ದಾನೆ. ಈ ಘಟನೆ ಮೊನ್ನೆ ರಾತ್ರಿ ನಡೆದಿದೆ. ಮಂಜುನಾಥ್ ಮತ್ತು ಅವರ ಪತ್ನಿಯ ನಡುವೆ ಜಗಳ ನಡೆಯುತ್ತಿದ್ದಾಗ, ಮಧ್ಯ ಪ್ರವೇಶಿಸಿದ ರಂಜನ್, ತಂದೆಯ ಬೆನ್ನಿಗೆ ಚಾಕುವಿನಿಂದ ಇರಿದಿದ್ದಾನೆ.
ಮಗ ರಂಜನ್ ಬಂದು ಬೆನ್ನಿಗೆ ಜೋರಾಗಿಯೇ ಚಾಕು ಇರಿದ ನಂತರ ಗಂಭೀರ ಗಾಯಗೊಂಡ ಮಂಜುನಾಥ್ ಅವರ ಬೆನ್ನಲ್ಲಿ ತೀವ್ರ ರಕ್ತ ಸೋರಲಾರಂಭಿಸಿದೆ. ನೋವಿನಿಂದ ಬಳಲುತ್ತಿದ್ದರೂ ಆತನನ್ನು ಆಸ್ಪತ್ರೆಗೆ ದಾಖಲಿಸದೇ ಅರಿಶಿಣ ಮತ್ತು ಇತರೆ ಮನೆ ಮದ್ದುಗಳನ್ನು ಮಾಡಿ, ಗಾಯದೊಳಗೆ ತುಂಬಿ ಮನೆಯಲ್ಲೇ ತಾಯಿ ಮತ್ತು ಮಗ ಬ್ಯಾಂಡೇಜ್ ಮಾಡಿದ್ದಾರೆ. ಆದರೆ, ಚಾಕು ಇರಿದಿರುವುದು ಆಳವಾಗಿ ಹೋಗಿದ್ದು, ತೀವ್ರ ರಕ್ತಸ್ರಾವ ಉಂಟಾಗಿದೆ. ಆಗಲೂ ಆಸ್ಪತ್ರೆಗೆ ಸೇರಿಸದ ಕಾರಣ ಮಂಜುನಾಥ್ ಮನೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ತಂದೆ ಮೃತಪಟ್ಟ ಕೂಡಲೇ ಸತ್ಯವನ್ನು ಮುಚ್ಚಿ ಹಾಕಲು ರಂಜನ್ ತಂತ್ರ ರೂಪಿಸಿದ್ದಾನೆ. ತಂದೆ-ತಾಯಿ ಜಗಳದ ನಡುವೆ ಮನೆಯ ಗೋಡೆಯಲ್ಲಿದ್ದ ಕತ್ತಿ ತಾಗಿ ಗಾಯವಾಗಿದೆ. ಗಾಯದ ನಂತರ ರಕ್ತಸ್ರಾವ ಉಂಟಾಗಿದ್ದು, ನಾವು ಎಷ್ಟೇ ಬದುಕಿಸಲು ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಬಳಿ ಕಥೆ ಕಟ್ಟಿದ್ದಾನೆ. ಪುತ್ರನ ಮಾತು ನಂಬಿದ ಸಂಬಂಧಿಕರು, ಮಂಜುನಾಥ್ ಅವರದ್ದು, ಅಪಘಾತದ ಸಾವೆಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದರು.
ಆದರೆ, ಈ ಹಠಾತ್ ಸಾವು ಪೊಲೀಸರ ಗಮನಕ್ಕೆ ಬಂದಿದೆ. ಮಂಜುನಾಥ್ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಆಲ್ದೂರು ಸಬ್ ಇನ್‌ಸ್ಪೆಕ್ಟರ್ ರವಿ ಅವರ ತಂಡ, ಪ್ರಕರಣದ ಬೆನ್ನು ಹತ್ತಿತು. ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದಾಗ, ರಂಜನ್ ಪುನಃ ಕುಟುಂಬಸ್ಥರು ಹಾಗೂ ಗ್ರಾಮಸ್ಥರಿಗೆ ಹೇಳಿದ್ದ ಕಥೆಯನ್ನೇ ಹೇಳಿದ್ದಾನೆ. ಆದರೆ, ಈತ ಹೇಳಿದ್ದೆಲ್ಲವೂ ಸುಳ್ಳು ಎಂಬುದು ತಿಳಿದುಬಂದಿದೆ. ನಂತರ, ಪೊಲೀಸ್ ಸ್ಟೈಲ್‌ನಲ್ಲಿ ರಂಜನ್‌ನನ್ನು ಕೂಲಂಕಷವಾಗಿ ವಿಚಾರಣೆ ನಡೆಸಿದ ನಂತರ, ತಾನೇ ಅಪ್ಪನನ್ನು ಕೊಲೆ ಮಾಡಿರುವ ಸತ್ಯವನ್ನು ಒಪ್ಪಿಕೊಂಡಿದ್ದಾನೆ.
ಇದಾದ ನಂತರ ಅಪ್ಪನ ಅಂತ್ಯಕ್ರಿಯೆ ಮಾಡುವ ವೇಳೆ ಪೊಲೀಸರು ರಂಜನ್‌ನನ್ನು ವಶಕ್ಕೆ ಪಡೆದಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳವೊಂದು ಕೊಲೆಯಲ್ಲಿ ಅಂತ್ಯಗೊಂಡ ಈ ಘಟನೆಯು ಇಡೀ ಗ್ರಾಮದಲ್ಲಿ ಆಘಾತ ಮೂಡಿಸಿದೆ. ಆಲ್ದೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಮುಂದಿನ ತನಿಖೆ ಮುಂದುವರಿಸಿದ್ದಾರೆ.
